ಕೇಂದ್ರದ ತ್ರಿಭಾಷಾ ನೀತಿ ಮತ್ತು ಹಿಂದಿ ಹೇರಿಕೆ ವಿಚಾರದಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಬಿಜೆಪಿ ನಡುವೆ ವಾಕ್ಸಮರ ಏರ್ಪಟ್ಟಿದೆ. “ಭಾಷಾ ಯುದ್ಧಕ್ಕೆ ತಮಿಳುನಾಡು ಸಿದ್ಧ” ಎಂದು ಉದಯನಿಧಿ ಸ್ಟ್ಯಾಲಿನ್ ಘೋಷಿಸಿದ್ದಾರೆ. ಹಾಗೆಯೇ “ಹಿಂದಿಯನ್ನು ಒಪ್ಪಿಕೊಳ್ಳುವ ರಾಜ್ಯಗಳು ತಮ್ಮ ಮಾತೃಭಾಷೆಯನ್ನು ಕಳೆದುಕೊಳ್ಳಲಿದೆ” ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಇತ್ತೀಚೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸದಿದ್ದರೆ ಸಮಗ್ರ ಶಿಕ್ಷ ಮಿಷನ್‌ಗೆ 2,400 ರೂಪಾಯಿ ನಿಧಿಯನ್ನು ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಕೇಂದ್ರ ಸಚಿವರ ಈ ಬೆದರಿಕೆಗೂ ತಮಿಳುನಾಡು ನಾಯಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿದ್ದೀರಾ? ದಾವಣಗೆರೆ | ʼಹಿಂದಿ ಹೇರಿಕೆʼ ಎಂಬುದು ಕೇವಲ ರಾಜಕೀಯ ದೊಂಬರಾಟವೇ?; ಕನ್ನಡಪರ ಹೋರಾಟಗಾರರ ಆಕ್ರೋಶ
“ನಾವು ನಮ್ಮ ಹಣವನ್ನು ಕೇಳುತ್ತಿದ್ದೇವೆ. ನಮಗೆ ನೀಡಬೇಕಾದ ಬಾಕಿ ಹಣವನ್ನು ಕೇಳುತ್ತಿದ್ದೇವೆ. ಅದು ನಮ್ಮ ಹಕ್ಕಿನ ಹಣ. ಧರ್ಮೇಂದ್ರ ಪ್ರಧಾನ್ ಅವರು ತ್ರಿಭಾಷಾ ನೀತಿಯನ್ನು ಒಪ್ಪಿಕೊಂಡರೆ ಮಾತ್ರ ನಿಧಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ನಾವು ನಿಮ್ಮ ತಂದೆಯ ಹಣವನ್ನು ಕೇಳುತ್ತಿಲ್ಲ. ನಾವು ಭಿಕ್ಷೆ ಬೇಡುತ್ತಿಲ್ಲ” ಎಂದು ತಿರುಗೇಟು ನೀಡಿದ್ದಾರೆ.
ತಮಿಳುನಾಡಿನಲ್ಲಿ ದ್ವಿಭಾಷಾ ನೀತಿಯ ಜಾರಿಯಲ್ಲಿದೆ. ಶಿಕ್ಷಕರು ತಮಿಳು ಮತ್ತು ಇಂಗ್ಲೀಷ್ ಭಾಷೆಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. ಹಾಗೆಯೇ 1930 ಮತ್ತು 1960ರಲ್ಲಿ ತಮಿಳುನಾಡು ಹಿಂದಿ ವಿರೋಧಿ ಆಂದೋಳನಕ್ಕೆ ಸಾಕ್ಷಿಯಾಗಿದೆ. ಇಂದಿಗೂ ಸ್ಥಳೀಯ ಭಾಷೆಗಳು ನಾಶವಾಗುತ್ತಿರುವ ನಡುವೆ ತಮಿಳುನಾಡು ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ತೀವ್ರವಾಗಿ ಖಂಡಿಸುತ್ತಾ ಬಂದಿದೆ.
ಇನ್ನು ತಮಿಳುನಾಡು ಮಾತ್ರವಲ್ಲ. ಹಲವು ದಕ್ಷಿಣ ಭಾರತದ ರಾಜ್ಯಗಳು ಹಿಂದಿ ಹೇರಿಕೆಯನ್ನು ವಿರೋಧಿಸಿದೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ, ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸಲಾಗುತ್ತಿದೆ. ಈ ನಡುವೆ ಈವರೆಗೆ ರಾಜ್ಯಕ್ಕೆ ನೀಡಬೇಕಾದ ನಿಧಿಯನ್ನು ಬಾಕಿಯಿರಿಸಿರುವ ಕೇಂದ್ರ ಸರ್ಕಾರ ಈ ಅವೈಜ್ಞಾನಿಕ ಶಿಕ್ಷಣ ನೀತಿ ಜಾರಿ ಮಾಡಿದರಷ್ಟೇ ನಿಧಿ ಬಿಡುಗಡೆ ಮಾಡಲಾಗುವುದು ಎಂಬ ‘ಬ್ಲ್ಯಾಕ್‌ಮೇಲ್’ ಮಾಡುತ್ತಿರುವುದು ಖಂಡನೀಯ.
