ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಭಾನುವಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈವರೆಗೂ ಬಿಜೆಪಿ ನೂತನ ಮುಖ್ಯಮಂತ್ರಿ ಆಯ್ಕೆಯನ್ನು ಮಾಡಿಲ್ಲ. ಈ ರಾಜಕೀಯ ಬಿಕ್ಕಟ್ಟಿನ ನಡುವೆ ಬಿಜೆಪಿ ನಾಯಕ, ಮಣಿಪುರ ಉಸ್ತುವಾರಿ ಸಂಬಿತ್ ಪಾತ್ರಾ ಬುಧವಾರ ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ರಾಜಭವನದಲ್ಲಿ ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.
ಇಬ್ಬರು ಕೂಡಾ ಕೆಲವು ಸಮಯಗಳ ಕಾಲ ಚರ್ಚೆ ನಡೆಸಿದ್ದಾರೆ. ಆದರೆ ಇಬ್ಬರ ನಡುವೆ ಏನು ಮಾತುಕತೆ ನಡೆದಿದೆ ಎಂಬುದು ಬಹಿರಂಗವಾಗಿಲ್ಲ. ರಾಜ್ಯಪಾಲರನ್ನು ಭೇಟಿಯಾದ ಬಳಿಕ ಪಾತ್ರಾ ಹೊಟೇಲ್‌ಗೆ ತೆರಳಿದ್ದು, ಅಲ್ಲಿ ಶಾಸಕರ ಜೊತೆ ಸಭೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇನ್ನು ಮಂಗಳವಾರ ಪಾತ್ರಾ ನೇತೃತ್ವದ ನಿಯೋಗವು ರಾಜಭವನದಲ್ಲಿ ಬಲ್ಲಾ ಅವರನ್ನು ಭೇಟಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರದ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು?
ಈವರೆಗೆ ಯಾರೂ ಕೂಡಾ ಸರ್ಕಾರ ರಚಿಸದಿರುವ ಕಾರಣದಿಂದಾಗಿ ಬಿಜೆಪಿ ಮಣಿಪುರದಲ್ಲಿ ಆಡಳಿತವನ್ನು ಕಳೆದುಕೊಳ್ಳಬಹುದು. ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್ ವಕೀಲ ಅರುನಬ್ ಚೌಧರಿ, “ಮಣಿಪುರವು ವಿಧಾನಸಭೆಯಾಗಿದ್ದು, ಅಲ್ಲಿ ರಾಷ್ಟ್ರಪತಿ ಆಡಳಿತವಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅಲ್ಲಿ ವಿಧಾನಸಭೆ ಅಧಿವೇಶನ ನಡೆಯುವುದು ಕಡ್ಡಾಯವಾಗಿದೆ. ಆದ್ದರಿಂದಾಗಿ ಈ ರಾಜಕೀಯ ಬಿಕ್ಕಟ್ಟು ಅತೀ ದೊಡ್ಡ ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಲಿದೆ” ಎಂದು ಅಭಿಪ್ರಾಯಿಸಿದ್ದಾರೆ.
ಮಣಿಪುರದಲ್ಲಿ 2023ರ ಮೇ ತಿಂಗಳಿನಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಸುಮಾರು 250ಕ್ಕೂ ಅಧಿಕ ಮಂದಿ ಈ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಈವರೆಗೂ ಕೂಡಾ ಮಣಿಪುರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. 2023ರಿಂದ ಹಿಂಸಾಚಾರ ನಡೆಯುತ್ತಿದ್ದರೂ ಕೂಡಾ ಬಿಜೆಪಿ ಸರ್ಕಾರ ಹತೋಟಿಗೆ ತರುವಲ್ಲಿ ವಿಫಲವಾಗಿದೆ ಎಂದು ವಿಪಕ್ಷಗಳು ಆರೋಪಿಸಿದೆ. ಅದರಲ್ಲೂ ಈವರೆಗೂ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡದಿರುವುದು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಏಟು ನೀಡಿದೆ.
