ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯ ಪಶ್ಚಿಮ ಬಂಗಾಳದ ಬಿಜೆಪಿ ಕಚೇರಿಯಲ್ಲಿಯೇ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪವನ್ನು ಬಿಜೆಪಿಯವರೇ ಆದ ಶಂತನು ಸಿನ್ಹಾ ಮಾಡಿದ್ದಾರೆ. ಆದರೆ, ಇದುವರೆಗೆ ಬಿಜೆಪಿಯ ಯಾವ ನಾಯಕರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಅಮಿತ್ ಮಾಳವೀಯ… ಈ ಹೆಸರು ಕೇಳಿದ ತಕ್ಷಣ ನೆನಪಾಗುವುದು ಫೇಕ್ ನ್ಯೂಸ್ ಫ್ಯಾಕ್ಟರಿ. ಹೌದು, ಸುಳ್ಳು ಸುದ್ದಿ ಹರಿಯ ಬಿಡುವುದರಲ್ಲಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಎತ್ತಿದ ಕೈ. ಪ್ರತಿಪಕ್ಷದ ನಾಯಕರ ವಿರುದ್ಧ ತಿರುಚಿದ ವಿಡಿಯೊ, ಫೋಟೊ, ಸುದ್ದಿ ಹರಡಿ ಹಲವು ಬಾರಿ ಕೇಸು ಹಾಕಿಸಿಕೊಂಡವರು ಈ ಶೂರ. ಕಳೆದ ವರ್ಷ ರಾಹುಲ್ ಗಾಂಧಿಯವರ ವಿರುದ್ಧ ಮಾನಹಾನಿಕರ ಅನಿಮೇಟೆಡ್ ವಿಡಿಯೊ ಹರಿಬಿಟ್ಟ ಕಾರಣಕ್ಕೆ ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ ಪ್ರಕರಣದಲ್ಲಿ ಅಮಿತ್ ಮಾಳವೀಯಗೆ ಕೋರ್ಟ್ ಜಾಮೀನು ನೀಡಿದೆ.
ಬಿಜೆಪಿಗೂ ಸುಳ್ಳಿಗೂ ಎಷ್ಟು ನಂಟಿದೆಯೋ ಅಷ್ಟೇ ನಂಟು ಲೈಂಗಿಕ ದೌರ್ಜನ್ಯದ ಆರೋಪಿಗಳ ಜೊತೆಗೂ ಇದೆ. ಬಿಜೆಪಿಯ ಹಲವು ನಾಯಕರು ಲೈಂಗಿಕ ದೌರ್ಜನ್ಯದ ಆರೋಪಿಗಳು. ಹಲವರು ಈಗಾಗಲೇ ಅಪರಾಧಿಗಳಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಅಂತಹ ಹಲವು ಪ್ರಕರಣಗಳು ನಮ್ಮ ಮುಂದಿವೆ.
ಈಗ ಬಂದಿರುವ ಹೊಸ ಸುದ್ದಿ ಏನೆಂದರೆ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಪಶ್ಚಿಮ ಬಂಗಾಳದ ಬಿಜೆಪಿ ಕಚೇರಿಯಲ್ಲಿಯೇ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪವನ್ನು ಬಿಜೆಪಿಯವರೇ ಆದ ಶಂತನು ಸಿನ್ಹಾ ಮಾಡಿದ್ದಾರೆ.
“ಆಯಕಟ್ಟಿನ ಸ್ಥಾನ ಪಡೆಯುವ ಉದ್ದೇಶದಿಂದ, ನಾಯಕರನ್ನು ಮೆಚ್ಚಿಸಲು ಹೆಣ್ಣುಮಕ್ಕಳನ್ನು ಪೂರೈಸಲಾಗುತ್ತಿದೆ. ಇದನ್ನು ನಿಲ್ಲಿಸಬೇಕು” ಎಂದು ಸಿನ್ಹಾ ಮಾಧ್ಯಮವೊಂದಕ್ಕೂ ಹೇಳಿದ್ದರು. ಆದರೆ, ಬಿಜೆಪಿಯ ಯಾರೊಬ್ಬರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿ ಹೈ ಕಮಾಂಡ್ ಮಾಳವೀಯ ವಿರುದ್ಧ ಬಂದಿರುವ ಆರೋಪದ ಬಗ್ಗೆ ಇದುವರೆಗೆ ಚಕಾರ ಎತ್ತಿಲ್ಲ. ತನಿಖೆ ನಡೆಸುವ ಬಗ್ಗೆ ಭರವಸೆ ನೀಡಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಮೌನವಾಗಿದೆ.

ಮಾಳವೀಯ ವಿರುದ್ಧ ಇಷ್ಟು ಗಂಭೀರ ಆರೋಪ ಬಂದಿರುವಾಗ ಆತನನ್ನು ತಕ್ಷಣ ಪಕ್ಷದ ಎಲ್ಲ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸಂದೇಶ್ ಖಾಲಿ ಅತ್ಯಾಚಾರ ಪ್ರಕರಣದ ಬಗ್ಗೆ ಭಾರೀ ಪ್ರತಿಭಟನೆ ನಡೆಸಿದ್ದ ಬಿಜೆಪಿ, ಮಮತಾ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿತ್ತು. ಈಗ ಮಾಳವೀಯ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.
ಈ ಮಧ್ಯೆ ಶಂತನು ಸಿನ್ಹಾ ಆರೆಸ್ಸೆಸ್ ನವರಲ್ಲ, ಅವರು ಆರೆಸ್ಸೆಸ್‌ನಲ್ಲಿ ಯಾವುದೇ ಜವಾಬ್ದಾರಿ ಹೊಂದಿಲ್ಲ ಎಂದು ಸಂಘ ಪರಿವಾರ ಹೇಳಿದೆ. ಇದು ಅಚ್ಚರಿಯೇನಲ್ಲ. ಯಾಕೆಂದರೆ ಬಿಜೆಪಿಯ ಬೆಂಬಲಿಗರು, ಕಾರ್ಯಕರ್ತರು ಕೊಲೆ, ಅತ್ಯಾಚಾರ ಸೇರಿದಂತೆ ಅಪರಾಧ ಪ್ರಕರಣಗಳಲ್ಲಿ ಸಿಲುಕಿದಾಗ ಆತನಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ, ಆತ ನಮ್ಮ ಕಾರ್ಯಕರ್ತನಲ್ಲ ಎಂದು ಹೇಳುವುದು ಮಾಮೂಲಿ. ಈಗ ಶಾಂತನೂ ಸಿನ್ಹಾ ಅವರ ಬಗ್ಗೆಯೂ ಆರೆಸ್ಸೆಸ್ ಹೀಗೆ ಹೇಳಿ ಕೈ ತೊಳೆದುಕೊಂಡಿದೆ.
ಆದರೆ ಶಂತನು ಸಿನ್ಹಾ ಅವರು ಬಂಗಾಳದ ಬಿಜೆಪಿ ಮುಖಂಡ ರಾಹುಲ್ ಸಿನ್ಹಾ ಅವರ ಸೋದರ! ಅಷ್ಟೇ ಅಲ್ಲ ಆರ್‌ಎಸ್‌ಎಸ್‌ಗೆ ನೇರವಾಗಿ ಸಂಬಂಧ ಇರುವ “ಹಿಂದೂ ರಾಷ್ಟ್ರೀಯ ಸಮಿತಿ“ಯ ಅಧ್ಯಕ್ಷರಾಗಿ 2015ರಿಂದ ಕೆಲಸ ಮಾಡುತ್ತಿದ್ದಾರೆ. 2022ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರ ಹೇಳಿಕೆಗೆ ಗಾಂಭೀರ್ಯ, ತೂಕ ಇದೆ. ಹಾಗೆಯೇ ಈ ಪ್ರಕರಣದಲ್ಲಿ ಬಿಜೆಪಿಯ ನಾಯಕರ ಮೌನ ಕೂಡ ಅಚ್ಚರಿಯನ್ನು ಮೂಡಿಸುವುದಿಲ್ಲ.
ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ 24 ಗಂಟೆಯೊಳಗೆ ಬಿಜೆಪಿ ಸೋಷಿಯಲ್ ಮೀಡಿಯಾ ಮುಖ್ಯಸ್ಥರ ಮೇಲೆ ಮಹಿಳೆಯದ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಬಿಜೆಪಿ ಐ ಟಿ ಸೆಲ್ ಗೆ ಈ ಆರೋಪವೇನೂ ಹೊಸದಲ್ಲ. ಕಳೆದ ವರ್ಷ ವಾರಾಣಸಿಯ ಬಿಜೆಪಿ ಐಟಿ ಸೆಲ್‌ನ ಸಂಚಾಲಕ ಕುನಾಲ್ ಪಾಂಡೆ, ಅದರ ಕಾರ್ಯಕಾರಿ ಸಮಿತಿ ಸದಸ್ಯ ಅಭಿಷೇಕ್ ಚೌಹಾಣ್ ಮತ್ತು ಸಹ–ಸಂಚಾಲಕ ಸಕ್ಷಮ್ ಪಟೇಲ್ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬರನ್ನು ಸಾಮೂಹಿಕ ಅತ್ಯಾಚಾರಗೈದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಈ ಯುವಕರು ಸಚಿವೆಯಾಗಿದ್ದ ಸ್ಮೃತಿ ಇರಾನಿ ಸೇರಿದಂತೆ ಹಲವು ಸಚಿವರೊಂದಿಗೆ ಆಪ್ತರಾಗಿದ್ದರು.

ಐಟಿ ಸೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಧ್ರುವ ಸಕ್ಸೇನಾ ಐಎಸ್‌ಐ ಗೆ ಗುಪ್ತಮಾಹಿತಿ ರವಾನೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾನೆ. ಇದೆಲ್ಲ ನೋಡುತ್ತಿದ್ದರೆ ಬಿಜೆಪಿಯ ಸೋಷಿಯಲ್ ಮೀಡಿಯಾ ವಿಭಾಗದ ತುಂಬ ಸ್ತ್ರೀ ಶೋಷಕರು, ಅತ್ಯಾಚಾರಿಗಳು, ದೇಶದ್ರೋಹಿಗಳು, ಸುಳ್ಳರೇ ತುಂಬಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.
ಕಳೆದ ಹತ್ತು ವರ್ಷಗಳಿಂದ ವಿಪಕ್ಷಗಳ ವಿರುದ್ಧ ಸುಳ್ಳುಸುದ್ದಿ ಹರಡೋದು, ವಿಕೃತವಾಗಿ ಟ್ರೋಲ್ ಮಾಡೋದಕ್ಕೆಂದೇ ಬಿಜೆಪಿ ಐಟಿ ಸೆಲ್‌ಗೆ ಸಾವಿರಾರು ಕೋಟಿ ರೂಪಾಯಿ ವ್ಯಯ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಬಿಂಬಿಸಲು ಐಟಿ ಸೆಲ್‌ನಲ್ಲಿ ನೂರಾರು ಸಿಬ್ಬಂದಿ ಇದ್ದಾರೆ. ಹೀಗಾಗಿ ಅಲ್ಲಿ ದುಷ್ಟರು, ದುರುಳರೇ ತುಂಬಿರುವುದು ಸಹಜ. ಸತ್ಯ, ನ್ಯಾಯ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧ ಇರುವವರನ್ನೇ ಪೋಷಿಸಿದ ಪರಿಣಾಮ ತಮ್ಮ ಪಕ್ಷದ ಕಚೇರಿಗಳಲ್ಲಿಯೇ ಸಿಬ್ಬಂದಿ ಮೇಲೆ ಲೈಂಗಿಕ ಕಿರುಕುಳ ಆರೋಪ ಬರುತ್ತದೆ.
ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಸನ ಸಂಸದನಾಗಿದ್ದ ಪ್ರಜ್ವಲ್ ರೇವಣ್ಣ ತನ್ನ ಪಕ್ಷದ ಕಾರ್ಯಕರ್ತರನ್ನು ಯಾವ ರೀತಿ ತನ್ನ ವಿಕೃತ ಕಾಮಕ್ಕೆ ಬಳಸಿಕೊಂಡ ಎಂಬುದಕ್ಕೆ ಆತನೇ ಸಾಕಷ್ಟು ಪುರಾವೆ ಇಟ್ಟುಕೊಂಡು ಸಿಕ್ಕಿ ಬಿದ್ದಿದ್ದಾನೆ. ಈ ವಿಚಾರ ಗೊತ್ತಿದ್ದರೂ ಪ್ರಧಾನಿ ಮೋದಿ ಆತನಿಗೆ ಟಿಕೆಟ್ ಕೊಡದಂತೆ ತಡೆಯುವ ಬದಲು ಆತನ ಪರ ಪ್ರಚಾರವನ್ನೂ ನಡೆಸಿದ್ದರು. ಇನ್ನು ಪುಂಡರನ್ನೇ ತುಂಬಿಕೊಂಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಮಾತನಾಡಲು ಸಾಧ್ಯವೇ? ರಾಜಕಾರಣದಲ್ಲಿ ಇಂತಹ ಕೀಚಕರೇ ತುಂಬಿರುವಾಗ ಹೆಣ್ಣುಮಕ್ಕಳ ಘನತೆಯ ಬದುಕು ಮರೀಚಿಕೆಯೇ ಸರಿ.
ಮೋದಿಯವರ “ಬೇಟಿ ಬಚಾವೊ ಬೇಟಿ ಫಡಾವೋ“ ಅವಧಿಯಲ್ಲಿ ಅವರ ಪರಿವಾರದಿಂದಲೇ ನಡೆದ ಲೈಂಗಿಕ ದೌರ್ಜನ್ಯಕ್ಕೆ ಮಿತಿ ಇದೆಯೇ? ಜಮ್ಮುವಿನ ಕಥುವಾದಲ್ಲಿ ಬಾಲಕಿಯೊಬ್ಬಳನ್ನು ದೇವಸ್ಥಾನದಲ್ಲೇ ಸತತವಾಗಿ ಅತ್ಯಾಚಾರ ಮಾಡಿ ಕೊಲ್ಲಲಾಯಿತು. ಇದನ್ನು ಮಾಡಿದವರ ಪರವಾಗಿ ಇಡೀ ಬಿಜೆಪಿಯ ಯಂತ್ರಾಂಗವೇ ತೊಡೆ ತಟ್ಟಿ ನಿಂತಿತ್ತು. ಆ ಪ್ರಕರಣದಲ್ಲಿ ಅತ್ಯಾಚಾರಿಗಳ ವಿರುದ್ಧ ಯಾರೂ ವಾದಿಸಬಾರದು ಎಂದು ಬಿಜೆಪಿಯ ವಕೀಲರ ವೃಂದ ಗಲಭೆ ನಡೆಸಿತ್ತು. ಗುಜರಾತಿನ ಗೋದ್ರಾ ಹತ್ಯಾಕಾಂಡದ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಅವರ ಇಡೀ ಕುಟುಂಬವನ್ನು ನಾಶ ಮಾಡಿ, ಆಕೆಯ ಮೇಲೆ ಅತ್ಯಾಚಾರವೆಸಗಿದವರಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಆ ಅತ್ಯಾಚಾರಿಗಳನ್ನು 2022ರಲ್ಲಿ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಸನ್ನಡತೆಯ ಕೋಟಾದಡಿ ಗುಜರಾತಿನ ಬಿಜೆಪಿ ಸರ್ಕಾರವು ಅವಧಿಪೂರ್ವವಾಗಿ ಬಿಡುಗಡೆ ಮಾಡಿತ್ತು. ನಂತರ ಸುಪ್ರೀಂಕೋರ್ಟು ಛೀಮಾರಿ ಹಾಕಿ ಮತ್ತೆ ಅವರನ್ನು ಜೈಲಿಗೆ ತಳ್ಳಿತು.

ಉತ್ತರ ಪ್ರದೇಶದ ಹಾತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನೇ ನೋಡಿ, ಅತ್ಯಾಚಾರ ಮತ್ತು ಕೊಲೆಯಲ್ಲಿ ಭಾಗಿಯಾದವರ ಪರವಾಗಿ ಬಿಜೆಪಿಯ ಮಾಜಿ ಶಾಸಕ ರಾಜವೀರ ಸಿಂಗ್ ಪೆಹಲ್ವಾನ್ ಒಂದು ದೊಡ್ಡ ರ್‍ಯಾಲಿಯನ್ನು ಸಂಘಟಿಸಿದ್ದ. ಆ ರ್‍ಯಾಲಿಯಲ್ಲಿ ಅತ್ಯಾಚಾರದ ಆರೋಪಿಗಳ ಕುಟುಂಬದವರು, ಆರೆಸ್ಸೆಸ್, ಕರ್ನಿ ಸೇನಾ ಮತ್ತು ಭಜರಂಗದಳದ ಸದಸ್ಯರು ಪಾಲ್ಗೊಂಡಿದ್ದರು. ಬಿಜೆಪಿಯ ಶಾಸಕ ಸುರೇಂದ್ರನಾಥ ಸಿಂಗ್ ಈ ವಿದ್ಯಮಾನದಲ್ಲಿ ಹತ್ಯೆಯಾದ ಯುವತಿಯ ವಿರುದ್ಧವೇ ಮಾತನಾಡಿದ್ದ. ಯೋಗಿ ಸರ್ಕಾರ ಈ ವಿಚಾರದಲ್ಲಿ ಎಷ್ಟು ಅಮಾನವೀಯವಾಗಿ ನಡೆದುಕೊಂಡಿತ್ತು ಎಂದರೆ ಅತ್ಯಾಚಾರದಿಂದ ಸತ್ತ ಬಾಲಕಿಯ ಶವವನ್ನು ಪೋಷಕರಿಗೆ ನೀಡದೇ ಪೊಲೀಸರೇ ಸುಟ್ಟು ಹಾಕಿದ್ದರು. ಆ ಗ್ರಾಮಕ್ಕೆ ಬರದಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮತ್ತು ಕಾಂಗ್ರೆಸ್ ನಾಯಕರಿಗೆ ದಿಗ್ಬಂಧನ ಹಾಕಿದ್ದನ್ನು ನಾವೆಲ್ಲ ನೋಡಿದ್ದೇವೆ.
ಬಿಜೆಪಿಯ ಸಂಸದ ಬ್ರಿಜ್ ಭೂಷಣ್ ಸಿಂಗ್ ಕುಸ್ತಿ ಫೆಡರೇಷನ್ ಅಧ್ಯಕ್ಷನಾಗಿ ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದರ ಬಗ್ಗೆ ದೊಡ್ಡ ವಿವಾದವಾಯಿತು. ಒಲಿಂಪಿಕ್ ಮತ್ತು ಏಷ್ಯನ್ ಗೇಮ್ಸ್ ಪದಕ ವಿಜೇತರಾದ ವಿನೇಶಾ ಪೋಗಟ್, ಸಾಕ್ಷಿ ಮಲಿಕ್ ಲೈಂಗಿಕ ಕಿರುಕುಳದ ಆರೋಪ ಮಾಡಿ, ತಿಂಗಳ ಕಾಲ ದೆಹಲಿಯ ಬೀದಿಯಲ್ಲಿ ಪ್ರತಿಭಟನೆ ನಡೆಸಿದರೂ ಮೋದಿ ತುಟಿ ಬಿಚ್ಚಿಲ್ಲ. ಬ್ರಿಜ್ ಭೂಷಣ್ ಸಿಂಗ್‌ನ ವಿರುದ್ಧ ನಿಲುವು ತೆಗೆದುಕೊಳ್ಳಲೇ ಇಲ್ಲ. ಉದ್ದಕ್ಕೂ ಆತನನ್ನೇ ಬೆಂಬಲಿಸಲಾಯಿತು. ಆತನನ್ನು ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸದಷ್ಟು ವೀಕ್ ಪಿಎಂ ಆಗಿದ್ದರು ಮೋದಿ. ಯಾಕೆಂದರೆ ಆತ ಉತ್ತರಪ್ರದೇಶದ ಪ್ರಬಲ ಸಮುದಾಯದವನು. ಅಷ್ಟೇ ಅಲ್ಲ ಹಣಬಲ, ಜನ ಬಲ ಇದ್ದವನು.

ಉತ್ತರಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣ ನೋಡಿ, 17 ವರ್ಷದ ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿದ್ದ ಪ್ರಕರಣದಲ್ಲಿ ಶಿಕ್ಷೆಯಾಗಿದ್ದು ಬಿಜೆಪಿಯ ಎಂಎಲ್‌ಎ ಕುಲದೀಪ್ ಸಿಂಗ್ ಸೆಂಗಾರ್ ಎಂಬ ವ್ಯಕ್ತಿಗೆ. ಅದೇ ರೀತಿ ದುದ್ದಿ ಕ್ಷೇತ್ರದ ಬಿಜೆಪಿ ಎಂಎಲ್‌ಎ ರಾಮದುಲಾರ್ ಗೌರ್ ಎಂಬಾತನೂ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದಾನೆ.
2019ರಲ್ಲಿ ಬಿಜೆಪಿಯ ಮಾಜಿ ಸಚಿವ ಕೇಂದ್ರ ಸಚಿವ ಚಿನ್ಮಯಾನಂದನನ್ನು ಕಾನೂನು ವಿದ್ಯಾರ್ಥಿನಿಯ ಅತ್ಯಾಚಾರದ ಆರೋಪದಲ್ಲಿ ಬಂಧಿಸಲಾಗಿತ್ತು. ತಾನೇ ನಡೆಸುತ್ತಿರುವ ಕಾಲೇಜಿನ ವಿದ್ಯಾರ್ಥಿಯನ್ನು ಗನ್ ತೋರಿಸಿ ಬೆದರಿಸಿ ಒಂದು ವರ್ಷಗಳ ಕಾಲ ಅತ್ಯಾಚಾರ ನಡೆಸಿದ್ದ. ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಎಂಬ ಆರೋಪ ಮಾಡಿದ್ದಳು ಆಕೆ. ತನಗೆ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೋರಿದ್ದಳು. ಆದರೆ 2021ರಲ್ಲಿ ಆತನನ್ನು ಖುಲಾಸೆ ಮಾಡಲಾಯಿತು.
ಕರ್ನಾಟಕದಲ್ಲಿ ಬಿಜೆಪಿಯ ವರಿಷ್ಠ ನಾಯಕ ಬಿ ಎಸ್ ಯಡಿಯೂರಪ್ಪ ಮೇಲೂ ಇತ್ತೀಚೆಗೆ ಪೋಕ್ಸೊ ಪ್ರಕರಣ ದಾಖಲಾಗಿದೆ. ಬಿಜೆಪಿಯ ಬಹಳಷ್ಟು ಮುಖಂಡರು, ಕಾರ್ಯಕರ್ತರು ಅತ್ಯಾಚಾರ, ಅಶ್ಲೀಲ ವಿಡಿಯೊ ಚಿತ್ರೀಕರಣ, ಬ್ಲ್ಯಾಕ್‌ಮೇಲ್ ಪ್ರಕರಣಗಳಲ್ಲಿ ಸಿಲುಕಿದ್ದಾರೆ. ಬೇರೆಲ್ಲ ಪಕ್ಷಗಳಿಗಿಂತ ಹೆಚ್ಚು ರಾಷ್ಟ್ರೀಯವಾದಿಗಳು, ಹೆಣ್ಣುಮಕ್ಕಳನ್ನು ಮಾತೆ ಎಂದು ಗೌರವಿಸುವವರು, ಸಂಸ್ಕೃತಿ ರಕ್ಷಕರು ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲೇ ಅತಿಹೆಚ್ಚು ಸ್ತ್ರೀಪೀಡಕರು ಅತ್ಯಾಚಾರಿಗಳು ಇದ್ದಾರೆ ಎಂಬುದು ಅಚ್ಚರಿಯ ವಿಷಯವಲ್ಲ.
ಬಿಜೆಪಿಯವರು ತಮ್ಮ ಸುತ್ತಮುತ್ತ ಅತ್ಯಾಚಾರ, ಕೊಲೆ, ಗಲಭೆಯಂತಹ ಘಟನೆಗಳು ನಡೆದಾಗ ಅದರಲ್ಲಿ ತಮ್ಮ ಕೋಮಿನವರು ಇದ್ದರೆ ದೀರ್ಘ ಮೌನಕ್ಕೆ ಜಾರುತ್ತಾರೆ. ಒಂದು ವೇಳೆ ಆರೋಪಿಗಳು ಮುಸ್ಲಿಮರಾಗಿದ್ದು ಅಥವಾ ತೊಂದರೆಗೊಳಗಾದವರು ಹಿಂದೂ ಆಗಿದ್ದರೆ ದೆಹಲಿಯಿಂದ ಹಳ್ಳಿಯವರೆಗೂ ಪ್ರತಿಭಟನೆಗಳು ನಡೆಯುತ್ತವೆ. ಇದಕ್ಕೆ ತಾಜಾ ಉದಾಹರಣೆ ಹುಬ್ಬಳ್ಳಿಯ ನೇಹಾ ಮತ್ತು ಅಂಜಲಿ ಕೊಲೆ ಪ್ರಕರಣ. ನೇಹಾಳನ್ನು ಕೊಂದವ ಮುಸ್ಲಿಂ ಆದ ಕಾರಣ ಆ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸಹಿತ ಘಟಾನುಘಟಿ ನಾಯಕರು ಭೇಟಿ ನೀಡಿ ರಾಜಕೀಯ ಲಾಭ ಪಡೆಯಲು ಯತ್ನಿಸಿದರು. ಅದೇ ಹುಬ್ಬಳ್ಳಿಯಲ್ಲಿ ಅಂಜಲಿ ಎಂಬ ಯುವತಿಯನ್ನು ಕೊಂದವ ಹಿಂದೂ ಆದ ಕಾರಣ ಯಾರೊಬ್ಬರೂ ಸಾಂತ್ವನ ಹೇಳಲು ಹೋಗಲಿಲ್ಲ. ಕೊಡಗಿನಲ್ಲಿ ಕೊಲೆಯಾದ ಮೀನಾ ಮನೆಗೂ ಯಾವ ಬಿಜೆಪಿ ನಾಯಕರೂ ನ್ಯಾಯ ಕೊಡಿಸಲು ಧಾವಿಸಲಿಲ್ಲ.

ಬಿಜೆಪಿಯ ಹುಟ್ಟಿನಲ್ಲೇ ಹೆಣ್ಣನ್ನು ತುಚ್ಛವಾಗಿ, ಭೋಗದ ವಸ್ತುವಾಗಿ ನೋಡುವ ಪರಿಪಾಠವಿದೆ. ಆರೆಸ್ಸೆಸ್ಸಿನ ಸಂಸ್ಥಾಪಕ ಗೋಲ್ವಲ್ಕರ್ ಮನುಸ್ಮೃತಿಯನ್ನು ದೇಶದ ಸಂವಿಧಾನವನ್ನಾಗಿ ಸ್ವೀಕರಿಸಬೇಕು ಎಂದು ಆರ್ಗನೈಸರ್ ಪತ್ರಿಕೆಯಲ್ಲಿ ವಾದಿಸಿದ್ದರು. ಮನುಸ್ಮೃತಿ ಏನು ಹೇಳುತ್ತದೆ? ಹೆಣ್ಣು ಎರಡನೇ ದರ್ಜೆಯ ಪ್ರಜೆ. ಗಂಡಿನ ಅಡಿಯಾಳಾಗಿರಬೇಕು ಎಂದು ಬಯಸುತ್ತದೆ. ಅದೇ ಮನುಸ್ಮೃತಿಯನ್ನು ಬಿಜೆಪಿ ಶ್ರೇಷ್ಠ ಚಿಂತನೆ ಎನ್ನುತ್ತಿದೆ. ಹೀಗಿರುವಾಗ ಅತ್ಯಾಚಾರಿಗಳು, ಸ್ತ್ರೀ ಪೀಡಕರು ಬಿಜೆಪಿಯಲ್ಲಿ ತುಂಬಿರುವುದರಲ್ಲಿ ಅಚ್ಚರಿಯಿಲ್ಲ.
ಸಿಕ್ಕ ಸಿಕ್ಕ ವಿಪಕ್ಷಗಳ ನಾಯಕರ ಮೇಲೆ ಸುಳ್ಳು ಸೃಷ್ಟಿಸಿ ಹರಿಯಬಿಡುತ್ತಿದ್ದ ಅಮಿತ್ ಮಾಳವೀಯ ತನ್ನ ಮೇಲೆ ಆರೋಪ ಮಾಡಿದ ಶಂತನು ಸಿನ್ಹಾ ಮೇಲೆ ಹತ್ತು ಕೋಟಿ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ. ಈಗ ಸಿನ್ಹಾ ಅವರು ತಾವು ಮಾಡಿರುವ ಆರೋಪಕ್ಕೆ ಪೂರಕ ಪುರಾವೆ ನೀಡಲೇಬೇಕಿದೆ.
ಕಳೆದ ಎರಡು ಅವಧಿಗಳಲ್ಲಿ ಮೋದಿಯವರು ಹೆಣ್ಣುಮಕ್ಕಳ ಶೋಷಣೆಯ ವಿರುದ್ಧ ತುಟಿ ಬಿಚ್ಚಲಿಲ್ಲ. ಈ ಸಲವಾದರೂ ಹೆಣ್ಣುಮಕ್ಕಳ ಪರವಾಗಿ ನಿಲ್ಲುವರೇ? ತಮ್ಮ ಪಕ್ಷದಲ್ಲಿರುವ ಅತ್ಯಾಚಾರಿಗಳು, ಸ್ತ್ರೀಪೀಡಕರನ್ನು ಹೊರ ದಬ್ಬುವರೇ ಕಾದು ನೋಡಬೇಕಿದೆ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.