ಬಿಜೆಪಿ ಐಟಿ ಸೆಲ್‌ನ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯ ಅವರು ‘ಬಂಗಾಳಿ’ ಎಂಬ ಭಾಷೆಯೇ ಇಲ್ಲ ಎಂದು ಹೇಳಿದ್ದು ಇದರ ವಿರುದ್ದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯ ಲೋಧಿ ಕಾಲೋನಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಮಿತ್ ದತ್ ಅವರು ಪಶ್ಚಿಮ ಬಂಗಾಳ ಸರ್ಕಾರದ ಬಂಗಾ ಭವನದ ಉಸ್ತುವಾರಿ ಅಧಿಕಾರಿಗೆ ಬರೆದ ಪತ್ರವನ್ನು ಉಲ್ಲೇಖಿಸಿ ಮಮತಾ ಬ್ಯಾನರ್ಜಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಭಾರತ ಸರ್ಕಾರದ ಗೃಹ ಸಚಿವಾಲಯದ ನೇರ ನಿಯಂತ್ರಣದಲ್ಲಿರುವ ದೆಹಲಿ ಪೊಲೀಸರು ಬಂಗಾಳಿಯನ್ನು ‘ಬಾಂಗ್ಲಾದೇಶಿ’ ಭಾಷೆ ಎಂದು ಹೇಗೆ ವಿವರಿಸುತ್ತಿದ್ದಾರೆಂದು ಈಗ ನೋಡಿ! ಬಂಗಾಳಿ, ನಮ್ಮ ಮಾತೃಭಾಷೆ, ರವೀಂದ್ರನಾಥ ಟ್ಯಾಗೋರ್ ಮತ್ತು ಸ್ವಾಮಿ ವಿವೇಕಾನಂದರ ಭಾಷೆ, ನಮ್ಮ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ (ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರ ಭಾಷೆ) ಬರೆಯಲ್ಪಟ್ಟ ಭಾಷೆ, ಕೋಟ್ಯಂತರ ಭಾರತೀಯರು ಮಾತನಾಡುವ ಮತ್ತು ಬರೆಯುವ ಭಾಷೆ, ಭಾರತದ ಸಂವಿಧಾನದಿಂದ ಪವಿತ್ರ ಮತ್ತು ಗುರುತಿಸಲ್ಪಟ್ಟ ಭಾಷೆಯನ್ನು ಈಗ ಬಾಂಗ್ಲಾದೇಶಿ ಭಾಷೆ ಎಂದು ವಿವರಿಸಲಾಗಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಅಮಿತ್ ಮಾಳವೀಯ ಎಂಬ ಸ್ತ್ರೀಪೀಡಕನೂ, ಬಿಜೆಪಿಯ ಬೇಟಿ ಬಚಾವೋ ಎಂಬ ಘೋಷಣೆಯೂ…
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಐಟಿ ಸೆಲ್‌ನ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯ, “ದೆಹಲಿ ಪೊಲೀಸರು ನುಸುಳುಕೋರರು ಬಳಸುವ ಭಾಷೆಯನ್ನು ‘ಬಾಂಗ್ಲಾದೇಶಿ’ ಎಂದು ಉಲ್ಲೇಖಿಸಿದ್ದಕ್ಕೆ ಬ್ಯಾನರ್ಜಿ ಅವರು ನೀಡಿದ ಪ್ರತಿಕ್ರಿಯೆ ತಪ್ಪಾಗಿದೆ. ಅದು ಅಪಾಯಕಾರಿಯಾಗಿ ಉದ್ರೇಕಕಾರಿಯಾಗಿದೆ. ದೆಹಲಿ ಪೊಲೀಸರ ಪತ್ರದಲ್ಲಿ ಎಲ್ಲಿಯೂ ಬಾಂಗ್ಲಾ ಅಥವಾ ಬಂಗಾಳಿ ಭಾಷೆಯನ್ನು ‘ಬಾಂಗ್ಲಾದೇಶಿ’ ಭಾಷೆ ಎಂದು ವಿವರಿಸಲಾಗಿಲ್ಲ. ಬ್ಯಾನರ್ಜಿ ಭಾಷಾ ಸಂಘರ್ಷವನ್ನು ಪ್ರಚೋದಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಹಾಗೆಯೇ, “ದೆಹಲಿ ಪೊಲೀಸರು ಒಳನುಸುಳುಕೋರರನ್ನು ಗುರುತಿಸುವ ಸಂದರ್ಭದಲ್ಲಿ ಭಾಷೆಯನ್ನು ಬಾಂಗ್ಲಾದೇಶಿ ಎಂದು ಉಲ್ಲೇಖಿಸುವುದು ಸಂಪೂರ್ಣವಾಗಿ ಸರಿ. ಭಾರತದಲ್ಲಿ ಮಾತನಾಡುವ ಬಾಂಗ್ಲಾ ಭಾಷೆಗಿಂತ ಸ್ಪಷ್ಟವಾಗಿ ಭಿನ್ನವಾಗಿರುವ ಉಪಭಾಷೆಗಳು, ವಾಕ್ಯರಚನೆ ಮತ್ತು ಮಾತಿನ ಮಾದರಿಗಳನ್ನು ವಿವರಿಸಲು ಈ ಪದವನ್ನು ಬಳಸಲಾಗುತ್ತಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
See now how Delhi police under the direct control of Ministry of Home, Government of India is describing Bengali as " Bangladeshi" language!
— Mamata Banerjee (@MamataOfficial) August 3, 2025
Bengali, our mother tongue, the language of Rabindranath Tagore and Swami Vivekananda, the language in which our National Anthem and the… pic.twitter.com/2ACUyehSx8
ತಮ್ಮ ವಾದವನ್ನು ಮತ್ತಷ್ಟು ಸಮರ್ಥಿಸಿಕೊಂಡ ಮಾಳವೀಯ, “ಬಾಂಗ್ಲಾದೇಶದ ಅಧಿಕೃತ ಭಾಷೆ ಧ್ವನಿವಿಜ್ಞಾನದಲ್ಲಿ ಭಿನ್ನವಾಗಿದೆ. ಆದರೆ ಭಾರತೀಯ ಬಂಗಾಳಿಗಳಿಗೆ ಬಹುತೇಕ ಗ್ರಹಿಸಲಾಗದ ಉಪಭಾಷೆಗಳನ್ನು ಸಹ ಒಳಗೊಂಡಿದೆ” ಎಂದು ಹೇಳಿಕೊಂಡಿದ್ದಾರೆ.
ಇದಾದ ಕೆಲವೇ ಗಂಟೆಗಳಲ್ಲಿ ಟಿಎಂಸಿ ಮಾಳವೀಯ ವಿರುದ್ದ ವಾಗ್ದಾಳಿ ನಡೆಸಿದೆ. “ವಾಸ್ತವವಾಗಿ, ಬಂಗಾಳಿ ಎಂಬ ಭಾಷೆಯೇ ಇಲ್ಲ ಎಂಬುದನ್ನು ಬಿಜೆಪಿ ಸಮರ್ಥಿಸಿರುವುದು ಬಂಗಾಳಿ ಗುರುತಿನ ಕಡೆಗೆ ಆಡಳಿತದಲ್ಲಿ ಬೇರೂರಿರುವ ದ್ವೇಷವನ್ನು ಪ್ರತಿಬಿಂಬಿಸುತ್ತದೆ. ಸಾಂವಿಧಾನಿಕವಾಗಿ ಗುರುತಿಸಲ್ಪಟ್ಟ ಭಾಷೆಯ ಅಸ್ತಿತ್ವವನ್ನು ನಿರಾಕರಿಸುವುದು ಭಾಷಾ ಭೇದಕ್ಕಿಂತ ಕಡಿಮೆಯಲ್ಲ” ಎಂದು ಹೇಳಿದೆ.
ಈ ನಡುವೆ ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಈ ವಿವಾದದ ಬಗ್ಗೆ ಬ್ಯಾನರ್ಜಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಸ್ಟಾಲಿನ್, “ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ದೆಹಲಿ ಪೊಲೀಸರು ಬಂಗಾಳಿಯನ್ನು ‘ಬಾಂಗ್ಲಾದೇಶಿ ಭಾಷೆ’ ಎಂದು ಬಣ್ಣಿಸಿದ್ದಾರೆ. ಇದು ಭಾರತದ ರಾಷ್ಟ್ರಗೀತೆಯಲ್ಲಿರುವ ಭಾಷೆಗೆ ನೇರ ಅವಮಾನ” ಎಂದು ದೂರಿದ್ದಾರೆ.
“ಇದು ಆಕಸ್ಮಿಕವಾಗಿ ನಡೆಯುವ ತಪ್ಪಲ್ಲ. ಇದು ವೈವಿಧ್ಯತೆಯನ್ನು ನಿರಂತರವಾಗಿ ದುರ್ಬಲಗೊಳಿಸುವ ಕರಾಳ ಮನಸ್ಥಿತಿ. ಹಿಂದಿಯೇತರ ಭಾಷೆಗಳ ಮೇಲಿನ ಈ ದಾಳಿಯ ಸಂದರ್ಭದಲ್ಲಿ, ಮಮತಾ ದೀದಿ ಪಶ್ಚಿಮ ಬಂಗಾಳದ ಭಾಷೆ ಮತ್ತು ಜನರಿಗೆ ಗುರಾಣಿಯಾಗಿ ನಿಂತಿದ್ದಾರೆ” ಎಂದು ಸ್ಟಾಲಿನ್ ಪೋಸ್ಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಹಿಂದಿ ಭಾಷೆಯನ್ನು ಹೇರಿಕೆ ಮಾಡುತ್ತಿದೆ, ಇತರೆ ಭಾಷೆಗಳನ್ನು ಕಡೆಗಣಿಸುತ್ತಿದೆ ಎಂಬ ಆರೋಪಗಳ ನಡುವೆ ಈ ಬೆಳವಣಿಗೆ ನಡೆದಿದೆ.
