ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆಂದು ಘೋಷಿಸಿ, ಪ್ರಚಾರ ಆರಂಭಿಸಿರುವ ಈಶ್ವರಪ್ಪಗೆ ಅಮಿತ್ ಶಾ ಕರೆ ಮಾಡಿದ್ದು, ದೆಹಲಿಗೆ ಬರುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕದಲ್ಲೇ ಇರುವ ಅಮಿತ್ ಶಾ ಫೋನ್ ಕರೆಯ ಮೂಲಕ ಈಶ್ವರಪ್ಪ ಜೊತೆ ಮಾತನಾಡಿದ್ದಾರೆ. ಬುಧವಾರ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಸ್ವತಃ ಈಶ್ವರಪ್ಪ ಅವರೇ ತಮ್ಮ ಆಪ್ತರಿಗೆ ಮಾಹಿತಿ ನೀಡಿದ್ದಾರೆ.
ಬುಧವಾರ ದೆಹಲಿಗೆ ಹೋಗುವುದಾಗಿ ಹೇಳಿರುವ ಈಶ್ವರಪ್ಪ, ತಮ್ಮ ಸ್ಪರ್ಧೆಯ ನಿಲುವಿಗೂ ಬದ್ಧರಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಹಾವೇರಿಯಲ್ಲಿ ತಮ್ಮ ಮಗನಿಗೆ ಬಿಜೆಪಿ ಟಿಕೆಟ್ ನೀಡುವಂತೆ ಈಶ್ವರಪ್ಪ ಬೇಡಿಕೆ ಇಟ್ಟಿದ್ದರು. ಆದರೆ, ಬಿಜೆಪಿ ಟಿಕೆಟ್ ನೀಡಿಲ್ಲ. ತಮ್ಮ ಮಗನಿಗೆ ಟಿಕೆಟ್ ನೀಡದೇ ಇರುವುದಕ್ಕೆ ಯಡಿಯೂರಪ್ಪ ಕಾರಣ ಎಂದು ಆರೋಪಿಸಿರುವ ಈಶ್ವರಪ್ಪ, ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ, ಸಂಸದ ರಾಘವೇಂದ್ರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
“ಪ್ರಧಾನಿ ಮೋದಿ ಹೇಳಿದರೂ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಹಿಂದೆ ಸರಿಯುವುದಿಲ್ಲ. ನನ್ನ ಸ್ಪರ್ಧೆ ಕುರಿತು ಪ್ರಧಾನಿ ಮೋದಿ ಕಾಲಿಗೆ ಬಿದ್ದು ಮನವರಿಕೆ ಮಾಡುತ್ತೇನೆ” ಎಂದು ಕೂಡ ಈಶ್ವರಪ್ಪ ಹೇಳಿದ್ದಾರೆ.