ತಮ್ಮ ಮಗನಿಗೆ ಬಿಜೆಪಿ ಟಿಕೆಟ್ ಸಿಗದ ಕಾರಣ, ಕೇಸರಿ ಪಡೆ ವಿರುದ್ಧ ಬಂಡಾಯ ಎದಿದ್ದರು ಈಶ್ವರಪ್ಪ ಶಿವಮೊಗ್ಗದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆಂಬ ಬೆದರಿಕೆ ಹಾಕಿದ್ದರು. ಈ ನಡುವೆ, ಬುಧವಾರ ದೆಹಲಿಗೆ ಬರುವಂತೆ ಈಶ್ವರಪ್ಪಗೆ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಲಾವ್ ನೀಡಿದ್ದರು. ಅಮಿತ್ ಶಾ ಭೇಟಿಗಾಗಿ ದೆಹಲಿಗೆ ಹೋಗಿದ್ದ ಈಶ್ವರಪ್ಪಗೆ ಭೇಟಿಗೆ ಸಮಯ ನೀಡಲಾಗಿಲ್ಲ. ಬರಿಗೈಯಲ್ಲಿ ಶಿವಮೊಗ್ಗಗೆ ಮರಳಿರುವ ಈಶ್ವರಪ್ಪ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ.
“ಇನ್ನು ಯಾವುದೇ ಮಾತುಕತೆ ಬೇಡ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇನೆ. ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ” ಎಂದು ಈಶ್ವರಪ್ಪ ಹೇಳಿದ್ದಾರೆ.
“ಒಂದು ಕುಟುಂಬ ರಾಜ್ಯ ಬಿಜೆಪಿಯ ಅಧಿಕಾರವನ್ನು ಹಿಡಿದುಕೊಂಡಿದೆ. ಹಿಂದು ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ತರುತ್ತಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು. ಆಗ ಮಾತ್ರ ಶಿವಮೊಗ್ಗದಲ್ಲಿ ಸ್ಪರ್ಧಿಸದಿರುವ ನಿರ್ಧಾರವನ್ನು ಹಿಂಪಡೆಯಲು ಒಪ್ಪುತ್ತೇನೆ” ಎಂದು ಅವರು ಷರತ್ತು ವಿಧಿಸಿದ್ದಾರೆ.
ಈ ಹಿಂದೆ ಅಮಿತ್ ಶಾ ಬುಲಾವ್ ಬರುವುದಕ್ಕೂ ಮುನ್ನ ಕೂಡ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಬದಲಾಯಿಸದಿದ್ದರೆ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರವನ್ನು ಬದಲಾಯಿಸುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದರು.
“ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ಗೆ ಕುಟುಂಬ ಸಂಸ್ಕೃತಿ ಇದೆ ಎಂದು ಹೇಳುತ್ತಿದ್ದರು. ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಒಂದೇ ಕುಟುಂಬದ ಕೈಯಲ್ಲಿದೆ. ಆ ಕುಟುಂಬದಿಂದ ಪಕ್ಷವನ್ನು ಮುಕ್ತಗೊಳಿಸಬೇಕು. ಪಕ್ಷದ ಕಾರ್ಯಕರ್ತರು ನೊಂದಿದ್ದಾರೆ. ಕಾರ್ಯಕರ್ತರ ನೋವು ನೀಗಿಸಲು ಸ್ಪರ್ಧಿಸಿಯೇ ಸ್ಪರ್ಧಿಸುತ್ತೇನೆ,’’ ಎಂದು ಹೇಳಿದ್ದಾರೆ.
“ಹಿಂದುತ್ವ ಸಿದ್ಧಾಂತ ಹಾಗೂ ಸಂಘಟನೆಗಾಗಿ ಹೋರಾಡಿದವರ ಶ್ರಮವನ್ನು ಗೌರವಿಸಬೇಕು. ನಾನು ಪಕ್ಷದಲ್ಲಿನ ಅವ್ಯವಸ್ಥೆ ಸರಿಪಡಿಸಲು ಸ್ಪರ್ಧಿಸುತ್ತಿದ್ದೇನೆ. ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ” ಎಂದು ಹೇಳಿದ್ದಾರೆ.
ಕರ್ನಾಟಕದ 28 ಲೋಕಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಮತದಾನ ನಡೆಯಲಿದೆ. ಶಿವಮೊಗ್ಗದಲ್ಲಿ ಮೇ 7ರಂದು ಚುನಾವಣೆ ನಡೆಯಲಿದೆ.