ಕಳೆದ ವಿಧಾನಸಭಾ ಚುನಾವಣೆಗಳ ಹೊತ್ತಿನಲ್ಲಿ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ‘ನಂದಿನಿ’ಯನ್ನು ನುಂಗಲು ಹೊರಟಿದ್ದ ಗುಜರಾತ್ ಮೂಲದ ‘ಅಮುಲ್’ ಆಕ್ರಮಣದ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದರು. ಬೇರೆ ದಾರಿಯಿಲ್ಲದೆ ಅಮುಲ್ ಆಗ ಹಿಂದೆ ಸರಿದಿತ್ತು. ಆದರೀಗ ‘ನಂದಿನಿ’ ಮೇಲೆ ಮತ್ತೆ ಅಮುಲ್ ದರ ಸಮರ ಸಾರಿದೆ. ಈ ಮೂಲಕ ಕರ್ನಾಟಕದ ಮಾರುಕಟ್ಟೆಯನ್ನು ಸೆಳೆಯುವ ತಂತ್ರ ಹೆಣೆದಿದೆ.
ಕನ್ನಡಿಗರ ಹೆಮ್ಮೆಯ ಹಾಲಿನ ಬ್ರ್ಯಾಂಡ್ ‘ನಂದಿನಿ‘ ಮೇಲೆ ಗುಜರಾತ್‌ನ ‘ಅಮುಲ್’ ಆಕ್ರಮಣಕಾರಿ ದರ ಸಮರ ಸಾರಿದೆ. ಮೊಸರಿನ ದರಗಳನ್ನು ತಗ್ಗಿಸಿ ‘ನಂದಿನಿ’ಗೆ ನೇರ ಸವಾಲೆಸೆದಿದೆ.
ಕಳೆದ ವಿಧಾನಸಭಾ ಚುನಾವಣೆಗಳ ಹೊತ್ತಿನಲ್ಲಿ ‘ನಂದಿನಿ’ಯನ್ನು ನುಂಗಲು ಹೊರಟಿದ್ದ ಅಮುಲ್ ಆಕ್ರಮಣದ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದರು. ಈ ಸಂಗತಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಬೇರೆ ದಾರಿಯಿಲ್ಲದೆ ಅಮುಲ್ ಹಿಂದೆ ಸರಿಯಬೇಕಾಗಿ ಬಂದಿತ್ತು.
ಇದೀಗ ‘ನಂದಿನಿ’ ಹಾಲಿನ ದರಗಳನ್ನು ಲೀಟರಿಗೆ ಸುಮಾರು ಐದು ರೂಪಾಯಿಗಳಷ್ಟು ಹೆಚ್ಚಿಸುವ ನಿಚ್ಚಳ ಇಂಗಿತವನ್ನು ರಾಜ್ಯ ಸರ್ಕಾರ ನೀಡಿದೆ. ದರಗಳು ಸದ್ಯದಲ್ಲೇ ಏರಲಿವೆ ಕೂಡ. ಈ ಹಿನ್ನೆಲೆಯಲ್ಲಿ ನಂದಿನ ಮೊಸರಿನ ದರವೂ ಏರಲಿದೆ. ಹಾಲಿ ‘ನಂದಿನಿ’ ಮೊಸರಿನ ಪ್ರತಿ ಅರ್ಧ ಲೀಟರಿಗೆ 26 ರೂ. ದರವಿದ್ದರೆ, ಅಮುಲ್ 25 ರೂ.ಗೆ ಲಭ್ಯವಿದೆ.
‘ನಂದಿನಿ’ ಹಾಲಿನ ದರ ಏರಿಸಿದ ನಂತರ ಈ ಅಂತರ ಇನ್ನು ಹಲವು ರೂಪಾಯಿಗಳಷ್ಟು ಹಿಗ್ಗುವುದು ನಿಶ್ಚಿತ. ಹೀಗಾಗಿ ದರ ಸಮರ ಸ್ಪರ್ಧೆಯಲ್ಲಿ ಅಮುಲ್ ನಂದಿನಿಯನ್ನು ಹಿಂದಿಕ್ಕುವುದು ಗೋಡೆ ಮೇಲಿನ ಬರೆಹದಷ್ಟೇ ಸ್ಪಷ್ಟ. ಯಾಕೆಂದರೆ ನಂದಿನಿ ಉತ್ಪನ್ನಗಳ ದರಗಳು ಮತ್ತಷ್ಟು ಹೆಚ್ಚಲಿವೆಯೇ ವಿನಾ ತಗ್ಗುವುದಿಲ್ಲ.
ಅಮುಲ್ ದರ ಸಮರಕ್ಕೆ ಪ್ರತಿಯಾಗಿ ಮೊಸರಿನ ದರಗಳನ್ನ ಸಧ್ಯಕ್ಕೆ ತಗ್ಗಿಸುವ ಯಾವುದೇ ಆಲೋಚನೆ ಇಲ್ಲವೆಂದು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿಯು ‘ಈ ದಿನ.ಕಾಂ‘ಗೆ ತಿಳಿಸಿದೆ.
‘ನಂದಿನಿ’ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಆಗಿ ಹೊರಹೊಮ್ಮಿರುವುದು ನಿಜ. ಆದರೆ ಅಮುಲ್ ವಿರುದ್ಧದ ದರ ಸಮರದಲ್ಲಿ ಅಂತರ ಹಲವಾರು ರೂಪಾಯಿಗಳಷ್ಟು ಹೆಚ್ಚು ಹಿಗ್ಗಿದರೆ ಬೆಲೆ ಏರಿಕೆ ಗಗನ ಮುಟ್ಟಿರುವ ಈ ದಿನಗಳಲ್ಲಿ ಗ್ರಾಹಕರು ಕಾಲಕ್ರಮೇಣ ಕಡಿಮೆ ದರದ ಅಮುಲ್‌ನತ್ತ ಸರಿದರೆ ಅಚ್ಚರಿಯಿಲ್ಲ. ಮೊಸರಿನ ದರ ಸಮರದ ಗಾಳ ಎಸೆದಿರುವ ಅಮುಲ್, ಇತರೆ ಉತ್ಪನ್ನಗಳತ್ತ ಕರ್ನಾಟಕದ ಮಾರುಕಟ್ಟೆಯನ್ನು ಸೆಳೆಯುವ ತಂತ್ರ ಹೆಣೆದಿದೆ.
ಈ ದರ ಸಮರವನ್ನು ಕಡೆಗಣಿಸಿ ಕೇವಲ ಕನ್ನಡಿಗರ ಹೆಮ್ಮೆಯನ್ನೇ ನೆಚ್ಚಿ ಕುಳಿತರೆ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ, ತನ್ನ ಮಾರುಕಟ್ಟೆಯ ಗಣನೀಯ ಪಾಲನ್ನು ಗುಜರಾತಿ ಮೂಲದ ಕಂಪನಿಗೆ ಒಪ್ಪಿಸಿ ಕೈ ಚೆಲ್ಲಬೇಕಾಗುತ್ತದೆ. ಈ ದರ ಸಮರವನ್ನು ಎದುರಿಸುವ ಪ್ರತಿತಂತ್ರವನ್ನು ಮಹಾಮಂಡಳ ಹೆಣೆಯದಿದ್ದರೆ ಉಳಿಗಾಲ ಇರದು.
ಸುಮಾರು 25 ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದಿದ್ದ ಕನ್ನಡ ದಿನಪತ್ರಿಕೆಗಳ ನಡುವೆ ನಡೆದಿದ್ದ ದರ ಸಮರದ ಉದಾಹರಣೆಯನ್ನೇ ನೋಡೋಣ. 1999ರ ಅಂತ್ಯದಲ್ಲಿ ಆರಂಭವಾದ ಹೊಸ ಕನ್ನಡ ದಿನಪತ್ರಿಕೆಯೊಂದು ಒಂದು ರುಪಾಯಿ ದರ ನಿಗದಿ ಮಾಡಿತ್ತು. ಆಕ್ರಮಣಕಾರಿ ಮಾರುಕಟ್ಟೆ ತಂತ್ರವನ್ನು ಬಳಸಿತು. ಪತ್ರಿಕೆಗಳು ತಲುಪಲಾರದ ಹಳ್ಳಿಗಳನ್ನು ತಲುಪಿತು. ಇತರೆ ಪತ್ರಿಕೆಗಳಿಗಿಂತ ಮೊದಲೇ ಓದುಗರ ಕೈ ಸೇರುತ್ತಿತ್ತು. ಆರಂಭದಲ್ಲಿ ಈ ದರ ಸಮರವನ್ನು ಇತರೆ ಕನ್ನಡ ಪತ್ರಿಕೆಗಳು ನಿರ್ಲಕ್ಷಿಸಿದ್ದವು. ಆದರೆ ಹೊಸ ಕನ್ನಡ ದಿನಪತ್ರಿಕೆ ಇತರೆ ಎಲ್ಲ ಪತ್ರಿಕೆಗಳ ಪ್ರಸಾರ ಸಂಖ್ಯೆಯನ್ನು ದಾಟಿ ‘ನಂಬರ್ ಒನ್’ ಎನಿಸಿಕೊಂಡು ಜಾಹೀರಾತು ಆದಾಯವನ್ನು ಬಾಚತೊಡಗಿತು. ಆಗ ಎಚ್ಚೆತ್ತ ಇತರೆ ಪತ್ರಿಕೆಗಳು ತಮ್ಮ ದರಗಳನ್ನೂ ತಗ್ಗಿಸಿದವು. ಆದರೆ ಆ ಹೊತ್ತಿಗೆ ತೀರಾ ತಡವಾಗಿ ಹೋಗಿತ್ತು.
ದರ ಸಮರದಲ್ಲಿ ಜಿಯೋ ಕೂಡ ಇದಕ್ಕೆ ಹೊರತಾಗಿಲ್ಲ. ಆರಂಭದಲ್ಲಿ ಮೂರು ತಿಂಗಳ ಉಚಿತವಾಗಿ ಇಂಟರ್‌ನೆಟ್ ಕೊಟ್ಟಾಗ ಕೋಟಿ ಕೋಟಿ ಗ್ರಾಹಕರು ಜಿಯೋದತ್ತ ವಾಲಿದರು. ಉಳಿದ ಕಂಪನಿಗಳ ಗ್ರಾಹಕರು ಒಮ್ಮೆಲೇ ಕುಸಿದರು. ನಂತರ ಜಿಯೋ ಹಂತ ಹಂತವಾಗಿ ಪ್ರತಿ ಜಿಬಿ ಇಂಟರ್‌ನೆಟ್ ದರ ಏರಿಸಿದ ಪರಿಣಾಮ 50 ರೂ.ದಿಂದ ಆರಂಭವಾಗಿ ಈಗ 250 ರೂ.ವರೆಗೂ ಬಂದು ತಲುಪಿದೆ. ಮಾರುಕಟ್ಟೆ ದರದ ಸ್ಪರ್ಧೆಯಲ್ಲಿ ಗ್ರಾಹಕರನ್ನು ಜಿಯೋ ಸಂಸ್ಥೆ “ಉಗಳಾಕು ಬಾರದ, ನುಂಗಾಕು ಬಾರದ ಸ್ಥಿತಿ” ತಂದಿಟ್ಟಿದೆ.
ರಾಜ್ಯದ ಮಾರುಕಟ್ಟೆಯಲ್ಲಿ ನಂದಿನಿ ಅರ್ಧ ಲೀಟರ್ (500 ಗ್ರಾಮ್) ಮೊಸರಿಗೆ 26 ರೂ. ಮತ್ತು ಒಂದು ಲೀಟರ್ ಮೊಸರಿಗೆ 52 ರೂ. ಇದೆ. ಆದರೆ, ಅಮುಲ್ 25 ರೂ.ಗೆ ಅರ್ಧ ಲೀಟರ್ ಮತ್ತು 50 ರೂ.ಗೆ ಒಂದು ಲೀಟರ್ ಮೊಸರನ್ನು ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಅಮುಲ್‌ಗೆ ನಂದಿನಿ ತೀವ್ರ ಪೈಪೋಟಿ ನೀಡಿದ್ದಕ್ಕೆ ವಿರುದ್ಧವಾಗಿ ಕರ್ನಾಟಕದಲ್ಲಿ ನಂದಿನಿಗೂ ಪೈಪೋಟಿ ನೀಡಲು ಅಮುಲ್ ಮುಂದಾಗಿದೆ. ನಂದಿನಿಗಿಂತ ದರ ಕಡಿಮೆ ಮಾಡಿ ರಾಜ್ಯದಲ್ಲಿ ಮೊಸರು ಬಿಡುಗಡೆ ಮಾಡಿರುವ ಬಗ್ಗೆ ಅಮುಲ್, ರಾಜ್ಯದ ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹೀರಾತು ನೀಡತೊಡಗಿದೆ.
ಈ ಹಿಂದೆ ನಡೆದಿದ್ದ ಅಮುಲ್-ನಂದಿನಿ ‘ಮಾರುಕಟ್ಟೆ ಕದನ’ದ ಸಂದರ್ಭದಲ್ಲಿ ತನ್ನ ಉತ್ಪನ್ನಗಳನ್ನು ಆನ್ಲೈನ್ ಮಾರುಕಟ್ಟೆಗೆ ಸೀಮಿತಗೊಳಿಸುವುದಾಗಿ ಹೇಳಿದ್ದ ಅಮುಲ್, ಇದೀಗ ಅಮುಲ್ ಮೊಸರನ್ನು ಆನ್ ಲೈನ್ ವೇದಿಕೆ ಸೇರಿದಂತೆ ಅಮುಲ್ ಮಳಿಗೆ, ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್ ಹಾಗೂ ಚಿಲ್ಲರೆ ವ್ಯಾಪಾರ ಅಂಗಡಿಗಳಲ್ಲೂ ಲಭ್ಯವಿದೆ ಎಂದು ಅಮುಲ್ ತನ್ನ ಜಾಹೀರಾತಿನಲ್ಲಿ ಘೋಷಿಸಿದೆ.

ಪ್ರತಿ ಲೀಟರ್ ಹಾಲಿಗೆ 5 ರೂ. ದರ ಏರಿಸುವ ಪ್ರಸ್ತಾವನೆ ಇದೆ: ಬಿ. ಶಿವಸ್ವಾಮಿ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರು ಈ ವಿಚಾರವಾಗಿ 'ಈದಿನ.ಕಾಂ' ಜೊತೆ ಮಾತನಾಡಿ, "ಅಮುಲ್ ಮೊಸರು ಮಾರುಕಟ್ಟೆಗೆ ಬರದಂತೆ ತಡೆಯಲು ಆಗುವುದಿಲ್ಲ. ಇದು ಸ್ಪರ್ಧಾತ್ಮಕ ಜಗತ್ತು. ಎಲ್ಲರೂ ಮಾರುಕಟ್ಟೆಯೊಳಗೆ ಬರಬಹುದು. ನಾವೂ ಕೂಡ ಉತ್ತರ ಭಾರತದ ಮಾರುಕಟ್ಟೆಗೆ ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ. ಮಹಾರಾಷ್ಟ್ರದ ಮುಂಬೈ, ನಾಗಪುರ, ಪುಣೆ, ಸೋಲಾಪುರ, ಗೋವಾ, ಹೈದರಾಬಾದ್, ಚೆನ್ನೈ ಹಾಗೂ ಕೇರಳ ರಾಜ್ಯದಲ್ಲಿ ನಂದಿನಿ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಈಗ, ದೆಹಲಿಗೆ ಪ್ರವೇಶಿಸುವ ಮೂಲಕ ಉತ್ತರ ಭಾರತದ ಮಾರುಕಟ್ಟೆಯನ್ನು ಮುಟ್ಟಿದ್ದೇವೆ" ಎಂದು ಹೇಳಿದರು. "ನಾವು ದೆಹಲಿಯಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಿದ್ದರಿಂದ ಅಮುಲ್ ಈಗ ಕರ್ನಾಟಕದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಣೆ ಮಾಡುತ್ತಿದೆ ಅಷ್ಟೇ. ಈಗಾಗಲೇ ಅಮುಲ್ ದೇಶ ಮತ್ತು ವಿದೇಶಗಳಲ್ಲಿ ಹೆಸರು ಮಾಡಿ, ವಿಶ್ವದ ಅತಿದೊಡ್ಡ ರೈತ ಮಾಲೀಕತ್ವದ ಡೈರಿ ಸಹಕಾರಿಯಾಗಿದೆ. ನಾವು ಅಮುಲ್ ಜೊತೆ ಸ್ಪರ್ಧೆ ಮಾಡುವುದು ಕಷ್ಟ. ರಾಜ್ಯದಲ್ಲಿ ನಾವೀಗ ಮೊಸರಿನ ದರವನ್ನು ಕಡಿಮೆ ಮಾಡುವ ಯೋಚನೆಯಲ್ಲಿ ಇಲ್ಲ. ಬೇಸಿಗೆ ಆರಂಭವಾಗಿದ್ದರಿಂದ ಹಾಲಿನ ಉತ್ಪಾನೆಯೂ ಕಡಿಮೆಯಾಗಿದೆ. 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದ ಜಾಗದಲ್ಲಿ ಈಗ 80 ಲಕ್ಷ ಲೀಟರ್ ಹಾಲು ನಿತ್ಯ ಉತ್ಪಾದನೆಯಾಗುತ್ತಿದೆ" ಎಂದು ಹೇಳಿದರು. "ಹಾಲಿನ ವಿಚಾರದಲ್ಲಿ ಅಮುಲ್ ದರಕ್ಕಿಂತ ನಂದಿನಿ ಕಡಿಮೆ ಇದೆ. ಆದರೆ ಮೊಸರಿನ ವಿಚಾರದಲ್ಲಿ ಅಮುಲ್ ದರ ಕಡಿಮೆ ಮಾಡಿ ಮಾರುಕಟ್ಟೆಗೆ ಬರುತ್ತಿದೆ. ಅದು ಅವರ ಮಾರುಕಟ್ಟೆ ತಂತ್ರ. ಅಮುಲ್ ದರ ಕಡಿಮೆ ಇದ್ದ ಮಾತ್ರಕ್ಕೆ ನಂದಿನಿಗೆ ಹೊಡೆತ ಬೀಳುತ್ತದೆ ಎನ್ನಲಾಗದು. ರಾಜ್ಯದಲ್ಲಿ ಕನ್ನಡಿಗರಿಗೆ ನಂದಿನಿ ಮೇಲೆ ವಿಶೇಷ ಗೌರವವಿದೆ. ರೈತರ ಅನುಕೂಲಕ್ಕಾಗಿ ಪ್ರತಿ ಲೀಟರ್ ಹಾಲಿಗೆ 5 ರೂ. ದರ ಏರಿಸಬೇಕು ಎಂಬ ಪ್ರಸ್ತಾವನೆ ಇದೆ. ಇದು ಜಾರಿಯಾದಲ್ಲಿ ಸಹಜವಾಗಿಯೇ ಹಾಲಿನ ಉತ್ಪನ್ನಗಳ ದರವೂ ಹೆಚ್ಚಾಗುತ್ತದೆ. 26 ರೂ. ಮೊಸರಿನ ದರ 28 ರೂ ಅಥವಾ 29 ರೂ. ಆಗಬಹುದು. ಆಗ ಜನರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ನೋಡಬೇಕು. ಮುಂದೆ ಹಾಲಿನ ದರ ಇಳಿಕೆಯಾದರೆ ಮೊಸರಿನ ದರವೂ ಇಳಿಕೆಯಾಗಲಿದೆ. ಅಂತಿಮವಾಗಿ ಸರ್ಕಾರವೇ ಇದಕ್ಕೆ ಪರಿಹಾರ ಹುಡುಕಬೇಕಾಗುತ್ತದೆ" ಎಂದು ತಿಳಿಸಿದರು.
2023ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಉಂಟಾಗಿದ್ದ ಅಮುಲ್ ವಿವಾದ ಹಿನ್ನೆಲೆಯಲ್ಲಿ ಟ್ವೀಟ್‌ವೊಂದನ್ನು ಮಾಡಿ, “ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಮೊಸರು ಮಾರಾಟದ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲು ಹಿಂದೆಯೂ ಪ್ರಯತ್ನಿಸಿತ್ತು. ಅದಕ್ಕೆ ನಾವು ಅವಕಾಶ ಕೊಡಲಿಲ್ಲ. ಈಗ ಬಿಜೆಪಿ ಸರ್ಕಾರ ಕೆಂಪುಕಂಬಳಿ ಹಾಸಿ ಸ್ವಾಗತಿಸಿದೆ” ಎಂದು ಟೀಕಿಸಿದ್ದರು.

“ಇಲ್ಲಿನ ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಈಗಲಾದರೂ ಎಚ್ಚೆತ್ತು ತಕ್ಷಣ ರಾಜ್ಯದಲ್ಲಿ ಅಮುಲ್ʼನ ಪ್ಯಾಕೆಟ್ ಹಾಲಿನ ಮಾರಾಟಕ್ಕೆ ತಡೆ ಒಡ್ಡಬೇಕು. ಕೇಂದ್ರದ ಒತ್ತಾಸೆಯಿಂದ ಅಮುಲ್ ಕದ್ದುಮುಚ್ಚಿ ಹಿಂಬಾಗಿಲ ಮೂಲಕ ಬರುತ್ತಿದೆ. ಕೆಎಂಎಫ್ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್ ವಿರುದ್ಧ ಕನ್ನಡಿಗರು ಸಿಡಿದೇಳಬೇಕು” ಎಂದು ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದ್ದರು.
ದೆಹಲಿಯಲ್ಲಿ ಮಾರುಕಟ್ಟೆ ವಿಸ್ತರಿಸುತ್ತಿರುವ ನಂದಿನಿ
ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ 2024 ನವೆಂಬರ್ 11ರಂದು ನಂದಿನಿ ಹಾಲು ಮಾರಾಟಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈಗ ಹಂತ ಹಂತವಾಗಿ ದೆಹಲಿಯಲ್ಲಿ ನಂದಿನಿ ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ. ಸದ್ಯ ದೆಹಲಿಯಲ್ಲಿ ಅಮುಲ್, ಮದರ್ ಡೈರಿ, ಮಧುಸೂದನ್ ಹಾಗೂ ನಮಸ್ತೆ ಇಂಡಿಯಾ ಹಾಲು/ಮೊಸರು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಅಧಿಪತ್ಯವನ್ನು ಸ್ಥಾಪಿಸಿವೆ.
ದೆಹಲಿಯಲ್ಲಿ ಅಮುಲ್ 35 ಲಕ್ಷ ಲೀಟರ್, ಮದರ್‌ಡೈರಿ 30 ಲಕ್ಷ ಲೀಟರ್ ಹಾಲು, ಮೊಸರು ಮಾರಾಟ ಮಾಡುತ್ತಿವೆ. ಇವುಗಳೊಂದಿಗೆ ನಮಸ್ತೆ ಇಂಡಿಯಾ, ಮಧುಸೂದನ್ ಕಂಪನಿಗಳು ತಲಾ 1.50 ಲಕ್ಷ ಲೀಟರ್ ಹಾಲು, ಮೊಸರನ್ನು ಮಾರುಕಟ್ಟೆಗೆ ಪೂರೈಸುತ್ತಿವೆ. ಹತ್ತಾರು ವರ್ಷಗಳಿಂದ ಬೇರು ಬಿಟ್ಟಿರುವ ಈ ಕಂಪನಿಗಳಿಗೆ ಕೆಎಂಎಫ್ ಪೈಪೋಟಿ ನೀಡಲು ಮುಂದಾಗಿದ್ದು, ದೆಹಲಿಯಲ್ಲಿ ಪ್ರತಿನಿತ್ಯ 10 ಸಾವಿರದಿಂದ 11 ಸಾವಿರ ಲೀಟರ್ ನಂದಿನ ಹಾಲು ಮಾರಾಟವಾಗುತ್ತಿದೆ. ನಿಧಾನವಾಗಿ ದೆಹಲಿ ಮಾರುಕಟ್ಟೆಯಲ್ಲಿ ಅಮುಲ್ ಸೇರಿದಂತೆ ಉಳಿದ ಕಂಪನಿಗಳಿಗೆ ನಂದಿನಿ ಸ್ಪರ್ಧೆಯೊಡ್ಡಲು ಆರಂಭಿಸಿದೆ.
ಕರ್ನಾಟದಲ್ಲಿರುವಂತೆಯೇ ದೆಹಲಿಯಲ್ಲೂ ಹಸಿರು, ಕಿತ್ತಳೆ, ನೀಲಿ ಹಾಗೂ ನೇರಳೆ ಬಣ್ಣದ ಪ್ಯಾಕೆಟ್‌ಗಳಲ್ಲಿ ವಿವಿಧ ಶ್ರೇಣಿಯ ಹಾಲನ್ನು ನಂದಿನಿ ಮಾರಾಟ ಮಾಡುತ್ತಿದೆ. ಹಾಲಿನ ಮಾರಾಟದಲ್ಲೂ ಏರಿಕೆ ಕಂಡಿದ್ದು, ಕಡಿಮೆ ಅವಧಿಯಲ್ಲೇ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ನಂದಿನಿ ಆಕರ್ಷಿಸುತ್ತಿದೆ. “ದೆಹಲಿಗೆ ಆರಂಭಿಕ ಹಂತದಲ್ಲಿ 2.5 ಲಕ್ಷ ಲೀಟರ್ ಹಾಲು ಪೂರೈಸಲು ಯೋಜನೆ ರೂಪಿಸಲಾಗಿದ್ದು, ಆರು ತಿಂಗಳೊಳಗೆ 5 ಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿ ಇದೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈಗ ಮೊಸರು, ತುಪ್ಪ ಸೇರಿದಂತೆ ನಂದಿನಿಯ ಬೇರೆ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದೆಹಲಿ ಮಾರುಕಟ್ಟೆಗೆ ಪರಿಚಯಿಸಲು ಕರ್ನಾಟಕ ಮಿಲ್ಕ್ ಫೆಡರೇಷನ್ (ಕೆಎಂಎಫ್) ಸಿದ್ಧತೆ ನಡೆಸಿದೆ. ಈ ಸಂಬಂಧ ಮಾರುಕಟ್ಟೆ ಸಮೀಕ್ಷೆಯನ್ನೂ ನಡೆಸುತ್ತಿದೆ. ಇದು ಸಹಜವಾಗಿಯೇ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಅಮುಲ್ ಅನ್ನು ಚಿಂತೆಗೆ ಹಚ್ಚಿದೆ. ಹೀಗಾಗಿ ಕೆಎಂಎಫ್ ಜೊತೆ ಅಮುಲ್ ನೇರವಾಗಿ ದರ ಸಮರಕ್ಕೆ ಇಳಿದಿದೆ.

ಹಾಲಿನ ವಿಚಾರದಲ್ಲೂ ಕೂಡ ಅಮುಲ್ ದರ ಇಳಿಕೆ ಮಾಡಿದೆ. ಕಳೆದ ಜನವರಿಯಲ್ಲಿ ದೇಶಾದ್ಯಂತ ಪ್ರತಿ ಲೀಟರ್ ಹಾಲಿನ ಬೆಲೆಯನ್ನು ಒಂದು ರೂಪಾಯಿಯಷ್ಟು ತಗ್ಗಿಸಿದೆ. ಅಮುಲ್ ಗೋಲ್ಡ್ ಹಾಲಿನ ದರ ಲೀಟರ್‌ಗೆ 68 ರೂ.ದಿಂದ 67 ರೂ.ಗೆ ಇಳಿಕೆಯಾಯಾಗಿದೆ. ಅಮುಲ್ ತಾಜಾ ಹಾಲಿನ ಬೆಲೆ ಲೀಟರ್‌ಗೆ 56 ರೂ.ರಿಂದ 55 ರೂ. ಇಳಿದಿದೆ.
ದಿಲ್ಲಿಯಲ್ಲಿ ಸಾಮಾನ್ಯವಾಗಿ ಹಸುವಿನ ಹಾಲು ಹೆಚ್ಚಾಗಿ ಮಾರಾಟವಾಗುತ್ತಿದೆ. ಹೀಗಾಗಿ ನಂದಿನಿ ಹಸುವಿನ ಹಾಲಿನ ಮೂಲಕ ಗ್ರಾಹಕರನ್ನು ಸೆಳೆದಿದೆ. ನಾಲ್ಕು ಪ್ರಮಾಣದ ಹಸಿರು-ಬಿಳಿ ಬಣ್ಣದ ಸ್ಯಾಚೆಟ್‌ಗಳಲ್ಲಿ ಕೌ ಮಿಲ್ಕ್ ಹೆಸರಿನಲ್ಲೇ ಹಸುವಿನ ಹಾಲನ್ನು ದಿಲ್ಲಿಗೆ ಪೂರೈಸುತ್ತಿದೆ. 10 ರೂ.ಗೆ 160 ಎಂಎಲ್, 28 ರೂ.ಗೆ 500 ಎಂಎಲ್, 56 ರೂ.ಗೆ ಒಂದು ಲೀಟರ್, 336 ರೂ.ಗೆ 6 ಲೀಟರ್ ಹಸುವಿನ ಹಾಲು ದಿಲ್ಲಿ ಜನರಿಗೆ ಸಿಗುತ್ತಿದೆ. ರಾಜ್ಯದಲ್ಲಿ ಒಂದು ಕೋಟಿ ಹಾಲು ಉತ್ಪಾದನೆಯಾಗುತ್ತಿರುವುದರಿಂದ ಅರ್ಧ ಲೀ ಹಾಲಿನ ಪ್ಯಾಕೆಟ್‌ನಲ್ಲಿ 50 ಮೀ.ಲೀ ಹಾಲು ಹೆಚ್ಚು ಮಾಡಲಾಗಿದೆ. ರೈತರಿಗೆ ಸಹಾಯ ಮಾಡಲು ನಂದಿನಿ ಹಾಲಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಹೆಚ್ಚಾಗಿರುವ ಪ್ರಮಾಣಕ್ಕೆ 2 ರೂ. ಹೆಚ್ಚಿಸಲಾಗಿದೆ.
2023 ರಲ್ಲಿ ಅಮುಲ್ ವಹಿವಾಟು ಶೇ.8 ರಷ್ಟು ಏರಿಕೆಯಾಗಿ 59,445 ಕೋಟಿ ರೂ. ಆಗಿದೆ. ಅಮುಲ್ ಒಕ್ಕೂಟ ಕಳೆದ ಆರ್ಥಿಕ ವರ್ಷದಲ್ಲಿ ಸರಾಸರಿ ದಿನಕ್ಕೆ 310 ಲಕ್ಷ ಲೀಟರ್ ಹಾಲು ಮಾರಾಟ ಮಾಡಿದೆ. ಇದು ವಾರ್ಷಿಕವಾಗಿ ಒಟ್ಟು ಸುಮಾರು 500 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ. ಗುಜರಾತ್‌ನ 18,600 ಹಳ್ಳಿಗಳಲ್ಲಿ 36 ಲಕ್ಷ ರೈತರನ್ನು ಹೊಂದಿರುವ ವಿಶ್ವದ ಅತಿದೊಡ್ಡ ರೈತ-ಮಾಲೀಕತ್ವದ ಡೈರಿ ಸಹಕಾರಿಯಾಗಿದೆ. ಅದರ 18 ಸದಸ್ಯ ಒಕ್ಕೂಟಗಳು ದಿನಕ್ಕೆ 300 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತವೆ.
ಕೆಎಂಎಫ್ ವತಿಯಿಂದ ಪ್ರತಿದಿನ ಈಗ 80 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ ಸುಮಾರು 16,000 ಸೊಸೈಟಿಗಳಿದ್ದು, 15 ಹಾಲು ಒಕ್ಕೂಟಗಳಿವೆ. ಕೆಲವೆಡೆ ಎರಡು ಮೂರು ಜಿಲ್ಲೆ ಸೇರಿ ಒಕ್ಕೂಟ ಮಾಡಿಕೊಂಡಿದ್ದಾರೆ. 15 ಮದರ್ ಡೈರಿಗಳಿವೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ನಂದಿನಿ ಹಾಲಿನ ಬೆಲೆ ಕಡಿಮೆ ಇದೆ.
2023ರ ವಿಧಾನಸಭೆ ಚುನಾವಣೆ ಮುನ್ನ ಕೆಎಂಎಫ್ ಅನ್ನು ಅಮುಲ್ ಜತೆ ವಿಲೀನ ಮಾಡುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯದಲ್ಲಿ ಪ್ರಸ್ತಾಪಿಸಿದ್ದರು. ಅಮಿತ್ ಶಾ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಮಿತ್ ಶಾ ಹೇಳಿಕೆಯಿಂದ ಹಾಲು ಉತ್ಪಾದಕ ಸಹಕಾರಿ ಸಂಘಗಳಲ್ಲಿ ಆತಂಕ ಶುರುವಾಗಿತ್ತು. ಕೆಎಂಎಫ್ ಹಾಗೂ ಅಮುಲ್ ವಿಲೀನ ಮಾಡುವ ಹುನ್ನಾರ ನಡೆಯುತ್ತಿದೆ ಅನ್ನೋ ಊಹಾಪೋಹ ಕೇಳಿ ಬಂದಿತ್ತು. ಗುಜರಾತಿನ ಅಮುಲ್ ದಾಳಿ ಹಿಂದೆ ರಾಜ್ಯದ ಸಹಕಾರ ವ್ಯವಸ್ಥೆ, ಸಣ್ಣ ರೈತರ ಬದುಕನ್ನು ನಾಶಗೊಳಿಸುವ ಹುನ್ನಾರ ಅಡಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು.
ಅಮುಲ್ ಆನ್‌ಲೈನ್‌ನಲ್ಲಿ ವ್ಯಾಪಾರಕ್ಕೆ ಇಳಿದಿರುವ ಕ್ರಮವು ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿತ್ತು. ಅಮುಲ್ ಹಾಲು, ಮೊಸರನ್ನು ರಾಜ್ಯದಲ್ಲಿ ಪರಿಚಯಿಸುವ ಸಲುವಾಗಿಯೇ, ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆಯೇ ಎಂಬ ಅನುಮಾನವೂ ಮೂಡಿದ್ದರಿಂದ ಅಮುಲ್ ಹಾಲು ಮತ್ತು ಮೊಸರಿನ ಮಾರಾಟಕ್ಕೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈಗ ಮತ್ತೆ ಅಮುಲ್ ರಾಜ್ಯದಲ್ಲಿ ದರ ಸಮರದ ಮೂಲಕ ತನ್ನ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.