ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತದಲ್ಲಿ ಎಲ್ಲ ಧರ್ಮೀಯರು ಭಾವೈಕ್ಯತೆಯಿಂದ ಬದುಕುತ್ತಿದ್ದಾರೆ. ಆದರೆ, ರಾಜಕೀಯ ಕೆಲ ದುಷ್ಟ ಶಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಈ ಬಾಂಧವ್ಯವನ್ನು ಕೊನೆಗಾನಿಸಲು, ಹಾಳು ಮಾಡಲು ಯತ್ನಿಸುತ್ತಿವೆ. ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಾಗಿನಿಂದ ಕೋಮುಗಲಭೆಗಳು, ಘರ್ಷಣೆ, ಹಿಂಸೆ, ಕೋಮುದ್ವೇಷಗಳು ಮಿತಿಮೀರುತ್ತಿವೆ. ಬಿಜೆಪಿ, ಆರ್‌ಎಸ್‌ಎಸ್ ಸೇರಿದಂತೆ ಹಿಂದುತ್ವ ಕೋಮುವಾದಿ ಗುಂಪುಗಳು ಮುಗ್ಧ ಜನರಲ್ಲಿ ಕೋಮುದ್ವೇಷದ ವಿಷ ಬಿತ್ತುತ್ತಿವೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಬಿಜೆಪಿಗರು ಕೋಮು ದ್ವೇಷ ಭಾಷಣವನ್ನೇ ಗುರಾಣಿಯಾಗಿ ಹಿಡಿದಿದ್ದಾರೆ. ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಅವರು ಕೋಮುದ್ವೇಷವನ್ನೇ ಜೀವಾಳವಾಗಿಸಿಕೊಂಡಿದ್ದಾರೆ.
ಯತ್ನಾಳ ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಕೋಮು ದ್ವೇಷ ಹರಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಹಿಂದುತ್ವ ಹೇಸರೆಳಿಕೊಂಡು ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡುತ್ತಲೇ, ರಾಜಕೀಯವಾಗಿ ಮುನ್ನೆಲೆಯಲ್ಲಿದ್ದಾರೆ. ಅಷ್ಟೇ ಅಲ್ಲದೇ, ವ್ಯಕ್ತಿ ನಿಂದನೆ ಮಾಡುವ ಯತ್ನಾಳ ಅವರು ಕಳೆದ ಕೆಲವು ದಿನಗಳ ಹಿಂದೆ ಸಚಿವ ದಿನೇಶ್ ಗುಂಡೂರಾವ್ ಅವರ ಬಗ್ಗೆ ಟೀಕೆ ಮಾಡುವಾಗ ಅವರ ಪತ್ನಿಯನ್ನು ಗುರಿಯಾಗಿಸಿಕೊಂಡು ‘ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ’ ಎಂಬ ಹೇಳಿಕೆ ನೀಡಿದ್ದರು. ಈ ಬಗ್ಗೆ ನೊಂದ ಸಚಿವರ ಪತ್ನಿ ಟಬು ರಾವ್ ಅವರು ಯತ್ನಾಳ ವಿರುದ್ಧ ಮಾನನಷ್ಟ ಮೊಕದಮ್ಮೆ ಪ್ರಕರಣ ದಾಖಲು ಮಾಡಿದ್ದರು.
ಟಬು ಅವರು ಸಲ್ಲಿಸಿದ್ದ ಖಾಸಗಿ ದೂರನ್ನು ಆಗಸ್ಟ್ 29ರಂದು ಮಾನ್ಯ ಮಾಡಿದ್ದ ನ್ಯಾಯಾಲಯ, ಅಕ್ಟೋಬರ್ 16 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಶಾಸಕ ಯತ್ನಾಳ್‌ಗೆ ಸಮನ್ಸ್ ಜಾರಿಗೊಳಿಸಿತ್ತು. ಆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನೂ ಕೋರ್ಟ್ ವಜಾಗೊಳಿಸಿತ್ತು. ಮಾತ್ರವಲ್ಲ, “ನಿರ್ದಿಷ್ಟ ಸಮುದಾಯವನ್ನು ಈ ರೀತಿ ವ್ಯಾಖ್ಯಾನಿಸಲಾಗದು. ಇಂತಹ ಹೇಳಿಕೆ ನೀಡುವುದರಿಂದ ನಿಮಗೇನು ಸಿಗುತ್ತದೆ” ಎಂದು ಯತ್ನಾಳ್ ಅವರ ವಕೀಲರನ್ನು ಖಾರವಾಗಿ ಪ್ರಶ್ನಿಸಿತ್ತು. ಜೊತೆಗೆ, ವಿಚಾರಣೆಗೆ ಹಾಜರಾಗದ ಯತ್ನಾಳ್ ವಿರುದ್ಧ ಬೆಂಗಳೂರಿನ 42ನೇ ACMM ನ್ಯಾಯಾಲಯವು ಅಕ್ಟೋಬರ್ 16ರಂದು ಜಾಮೀನು ರಹಿತ ವಾರಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ. ಹೀಗಾಗಿ, ಯಾವ ಕ್ಷಣದಲ್ಲಾದರೂ ಶಾಸಕ ಯತ್ನಾಳ್‌ರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಟಬು ಅವರ ದಾಖಲಿಸಿರುವ ಪ್ರಕರಣದಲ್ಲಿ ಮಾತ್ರವೇ ಯತ್ನಾಳ್ ಇಂತಹ ಕೀಳುಮಟ್ಟದ ಅಥವಾ ಕೋಮು ದ್ವೇಷದ ಹೇಳಿಕೆ ನೀಡಿಲ್ಲ. ಇಂತಹ ಹಲವಾರು ಪ್ರಕರಣಗಳಿವೆ. ತಮ್ಮ ಕೋಮು ದ್ವೇಷ ಭಾಷಣದ ಛಾಳಿಯನ್ನೂ ಇಂದಿಗೂ ಮುಂದುವರೆಸಿದ್ದಾರೆ. ಈ ಹಿಂದೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಾತೀಯತೆ ಬಗ್ಗೆ ಮಾತನಾಡಿದ್ದರು. ಅದನ್ನು ತಮಗೆ ಬೇಕಾದಂತೆ ತಿರುಚಿ ಟೀಕೆ ಮಾಡಿದ್ದ ಯತ್ನಾಳ್, “ತಾನು ಯಾವ ಜಾತಿಯಲ್ಲಿ ಹುಟ್ಟಿದ್ದೇನೆ ಎಂಬುದು ರಾಹುಲ್ ಗಾಂಧಿಗೆ ತಿಳಿದಿಲ್ಲ. ಮುಸ್ಲಿಮರಿಗೆ ಹುಟ್ಟಿದ್ದಾನೋ, ಕ್ರೈಸ್ತರಿಗೆ ಹುಟ್ಟಿದ್ದಾನೋ ಎಂಬ ಬಗ್ಗೆ ತನಿಖೆ ಆಗಬೇಕು” ಎಂಬ ಅತ್ಯಂತ ಕೀಳು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ಕೂಡ ದಾಖಲಿಸಿದ್ದಾರೆ.
ಅಷ್ಟೇ ಅಲ್ಲದೇ, ಮೈಸೂರು ಹುಲಿ ಎಂದೇ ಹೆಸರಾಗಿರುವ ಟಿಪ್ಪು ಸುಲ್ತಾನ್ ವಿರುದ್ಧ ಈ ಹಿಂದಿನಿಂದಲೂ ಅಶ್ಲೀಲ ಪದಗಳಲ್ಲಿ ಪ್ರಚೋದನಾಕಾರಿ ಭಾಷಣ ಮಾಡುತ್ತಲೇ ಬಂದಿರುವ ಯತ್ನಾಳ, ಮುಧೋಳದಲ್ಲಿ ನಡೆದ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ, “ನೀವು ಇದನ್ನು ನಿಮ್ಮ ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಬಹುದು. ಟಿಪ್ಪು ಸುಲ್ತಾನ್ ಹರಂಖೋರ್ ಮತ್ತು ಬಿಟಾರ್ಡ್, ಔರಂಗಜೇಬ್ ಹರಂಖೋರ್ ಮತ್ತು ಬಿಟಾರ್ಡ್. ಟಿಪ್ಪು ಸುಲ್ತಾನ್ ಲಕ್ಷಾಂತರ ಹಿಂದುಗಳನ್ನು ಕೊಂದವನು. ನನ್ನ ವಿರುದ್ಧ ಬೇಕಾದಷ್ಟು ಎಫ್ಐರ್‌ಗಳನ್ನು ದಾಖಲಿಸಲಿ. ಈಗಾಗಲೇ ನನ್ನ ವಿರುದ್ಧ 36-37 ಎಫ್ಐಆರ್‌ಗಳು ದಾಖಲಾಗಿವೆ. ಮುಧೋಳದಲ್ಲಿ ಇನ್ನೂ ನಾಲ್ಕೈದು ಎಫ್ಐಆರ್‌ಗಳನ್ನು ದಾಖಲಿಸಹುದು” ಎಂದು ಪ್ರಚೋದನಾರಿ ಮತ್ತು ಕೋಮುದ್ವೇಷದ ಹೇಳಿಕೆ ನೀಡಿದ್ದರು. ಅದೇ ಭಾಷಣ ಸಂಬಂಧ ಮುಧೋಳ ಪೊಲೀಸರು ಯತ್ನಾಳ ವಿರುದ್ಧ ಸುಮೊಟೊ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇನ್ನು ವಿಜಯಪುರದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮವೊಂದರಲ್ಲಿ, “ಗಣಪತಿ ಪ್ರತಿಷ್ಠಾಪನೆಗೆ ಪರವಾನಗಿ ಅಗತ್ಯವಿಲ್ಲ ಎನ್ನುವ ಹಾಗೂ ಗಣಪತಿ ಮೇಲೆ ಕಲ್ಲು ಹಾಕಿದರೆ ಅವರ ಮೇಲೆ ಬುಲ್ಲೋಜರ್ ಹರಿಸುವಂತಹ ಮುಖ್ಯಮಂತ್ರಿ ಬೇಕು. ಇದು ಶಿವಾಜಿ ಮಹಾರಾಜರ ನೆಲ, ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ನಮ್ಮ ಮನೆಯಲ್ಲಿರುವ ಚಾಕುಗಳು ಈರುಳ್ಳಿ ಕಟ್ ಮಾಡಲಿಕ್ಕೆ ಇಟ್ಟಿಲ್ಲ. ಎಲ್ಲದಕ್ಕೂ ನಾವು ರೆಡಿಯಾಗಿದ್ದೇವೆ. ಶಿವಾಜಿ, ಮಹಾರಾಣಾ ಪ್ರತಾಪ್, ಚನ್ನಮ್ಮರ ಖಡ್ಗ ಕೂಡ ನಮ್ಮ ಹತ್ರ ಇದೆ. ಎಲ್ಲರೂ ತಮ್ಮ ಮನೆಯಲ್ಲಿ ತಯಾರಾಗಿ ಇಟ್ಟುಕೊಳ್ಳಿ. ನಮ್ಮ ಆತ್ಮರಕ್ಷಣೆಗಾಗಿ ನಾವು ಸನ್ನದ್ದರಾಗಬೇಕು” ಎಂಬ ಕೋಮು ಪ್ರಚೋದನೆಯ ಹೇಳಿಕೆ ನೀಡಿದ್ದರು.
ವಿಜಯಪುರದಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ, “ಸಚಿವ ಜಮೀರ್ ಅಹ್ಮದ್ ಅವರ ಅಪ್ಪ ಯಾರೆಂಬುದೇ ಅವರಿಗೆ ಗೊತ್ತಿಲ್ಲ. ನಿನ್ನ ಮತ್ತಜ್ಜನ ಹೆಸರು ಮಲ್ಲಪ್ಪ ಅಥವಾ ಕಲ್ಲಪ್ಪ ಇತ್ತೋ ಗೊತ್ತಿಲ್ಲ. ಹಿಂದೂಸ್ಥಾನದಲ್ಲಿ ಇರುವ ಎಲ್ಲ ಮುಸ್ಲಿಮರು ಔರಂಗಜೇಬ, ಟಿಪ್ಪು ಸುಲ್ತಾನ ಹಾಗೂ ಆದಿಲ್ ಶಹಾನ ಖಡ್ಗಕ್ಕೆ ಹೆದರಿಕೊಂಡು ಮತಾಂತರ ಆದವರು” ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜಕೀಯ ಲಾಭಕ್ಕಾಗಿ ಸಮುದಾಯಗಳ ನಡುವೆ ಗಲಭೆ ತಂದಿಟ್ಟ ಬಿಜೆಪಿ
ಇನ್ನು, ಮೊನ್ನೆ ನಡೆದ ದಸರಾ ಸಂಭ್ರದಲ್ಲಿ ಸ್ತಬ್ದಚಿತ್ರ ಪ್ರದರ್ಶನದ ವೇಳೆ ಪೆರಿಯಾರ್ ರಾಮಸ್ವಾಮಿ ಅವರ ಚಿತ್ರ ಬಳಕೆ ಮಾಡಿರುವುದು ಕೇಸರಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ದಸರಾ ಸ್ತಬ್ದಚಿತ್ರಗಳ ಪ್ರದರ್ಶನದಲ್ಲಿ ಪೆರಿಯಾರ್ ಅವರ ಚಿತ್ರವನ್ನು ಪ್ರದರ್ಶಿಸುವ ಮೂಲಕ ರಾಜ್ಯ ಸರ್ಕಾರ ಆಸ್ತಿಕರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದಾರೆ.
ಅಂದಹಾಗೇ ಬಿಜೆಪಿ ಸೇರುವ ಮೊದಲು ಯತ್ನಾಳ ಅವರು ಜೆಡಿಎಸ್‌ನಲ್ಲಿದ್ದರು. ಆ ಸಮಯದಲ್ಲಿ ಮುಸ್ಲಿಂ ಪರವಾಗಿ ಮಾತನಾಡುತ್ತಿದ್ದ ಯತ್ನಾಳ, ಕೋಮುದ್ವೇಷಿ ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದರು. “ಬಿಜೆಪಿಯದ್ದು ಕೆಟ್ಟ ಸಂಸ್ಕ್ರತಿ, ದ್ವೇಷ ರಾಜಕಾರಣ, ಬಿಜೆಪಿಯವರು ಸಂವಿಧಾನವನ್ನೇ ಮಾರಾಟ ಮಾಡಿದವರು” ಎಂಬ ಹೇಳಿಕೆ ನೀಡಿದ್ದರು. ಅದೇ ಯತ್ನಾಳ್ ಬಿಜೆಪಿ ಸೇರಿದ ಬಳಿಕ, “ನನ್ನ ಆಫೀಸ್ನಲ್ಲಿ ನನ್ನ ಹಿಂದೆ ಮುಂದೆ ಎಲ್ಲೂ ಬುರ್ಖಾದವರು, ಟೋಪಿಗಿ ಅವರು ಬಂದು ನಿಂದರಬಾರದು, ಹಿಂದುಪರವಾಗಿ ಕೆಲಸ ಮಾಡಬೇಕು, ಸಾಬರ ಪರವಾಗಿ ಅಲ್ಲ” ಎಂದಿದ್ದರು.
ಹಿಂದೂ ಫೈರ್ ಬ್ರ್ಯಾಂಡ್ ಎಂದು ಹೇಳಿಕೊಂಡು ತಿರುಗಾಡುವ ಯತ್ನಾಳ ಅವರು ನೀಡುವ ಎಲ್ಲ ಹೇಳಿಕೆಗಳು ರಾಜಕೀಯ ಬೆಳೆ ಬೇಯಿಸಿಕೊಳ್ಳಲು. ಈ ರಾಜಕೀಯ ಆಟಕ್ಕಾಗಿ ಮುಗ್ದ ಜನರನ್ನ, ಯುವಕರನ್ನ ಎತ್ತಿ ಕಟ್ಟುತ್ತಿದ್ದಾರೆ. ಮತಕ್ಕಾಗಿ, ಅಧಿಕಾರಕ್ಕಾಗಿ ಯತ್ನಾಳ ಅವರು ಕೋಮು ದ್ವೇಷ ಬಿತ್ತುವ ಭಾಷಣ ಮಾಡುತ್ತಿದ್ದಾರೆ. ಈ ಬಗ್ಗೆ ಕೂಡಲೇ ಎಚ್ಚೆತ್ತು ಇಂತಹ ಕೋಮು ದ್ವೇಷದ ಭಾಷಣ ಬಿತ್ತುವವರನ್ನ ಮಟ್ಟ ಹಾಕಬೇಕು. ಅಂದಾಗಲೇ ಕುವೆಂಪು ಅವರ ಬಯಸಿದ ‘ಸರ್ವಜನಾಂಗದ ಶಾಂತಿಯ ತೋಟ’ವಾಗಲೂ ಸಾಧ್ಯ.