ಮೀಸಲಾತಿ ಮಿತಿ ಮೀರಲು ಅಂಕಿ-ಅಂಶಗಳು ಅಗತ್ಯ. ಜಾತಿಗಣತಿ ಆ ಕೊರತೆಯನ್ನು ನೀಗುತ್ತದೆ. ಆದರೆ ಸಂಘಪರಿವಾರ ಜಾತಿ ಗಣತಿಯನ್ನು ವಿರೋಧಿಸುತ್ತಾ ಎಸ್‌ಸಿ, ಎಸ್‌ಟಿ ಒಬಿಸಿಗಳಿಗೆ ಅನ್ಯಾಯ ಮಾಡುತ್ತಿದೆ.
ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಜಾತಿ ಗಣತಿಯ ಪ್ರಶ್ನೆಯನ್ನು ಒಟ್ಟಿಗೆ ಚರ್ಚೆಗೆ ಎತ್ತಿಕೊಂಡರೆ ಬಿಜೆಪಿ, ಸಂಘಪರಿವಾರದ ಬೂಟಾಟಿಕೆಯ ಕುರಿತು ಸ್ಪಷ್ಟ ಚಿತ್ರಣ ಸಿಗುತ್ತದೆ.
ಜಾತಿ ಗಣತಿಗೂ ಒಬಿಸಿಗಳ ಅಭಿವೃದ್ಧಿಗೂ ನೇರಾ ನೇರಾ ಸಂಬಂಧವಿದೆ. 1931ರ ಜಾತಿಗಣತಿಯನ್ನು ಆಧರಿಸಿಯೇ ಮಂಡಲ್ ಆಯೋಗ ಒಬಿಸಿಗಳಿಗೆ ಮೀಸಲಾತಿಯನ್ನು ಶಿಫಾರಸ್ಸು ಮಾಡಿತ್ತು. ಸ್ವಾತಂತ್ರ್ಯ ನಂತರದಲ್ಲಿ ಯಾವುದೇ ಸರ್ಕಾರ ಜಾತಿ ಗಣತಿ ಮಾಡಿಲ್ಲ. ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ಈಗ ಜಾತಿಗಣತಿಯ ಮಹತ್ವವನ್ನು ಕಾಂಗ್ರೆಸ್ ಮುನ್ನೆಲೆಗೆ ತಂದಿದೆ. ಜಾತಿ ಗಣತಿ ಮತ್ತು ಎಸ್‌ಸಿ, ಎಸ್‌ಟಿ, ಒಬಿಸಿಗಳ ಅಸ್ತಿತ್ವ ಒಂದಕ್ಕೊಂದು ಪೂರಕವಾದ ಸಂಗತಿ.
“ಒಬಿಸಿಯಲ್ಲಿ ಮುಸ್ಲಿಮರನ್ನು ಸೇರಿಸಿದ ಕಾಂಗ್ರೆಸ್, ಒಬಿಸಿಗಳ ಮೀಸಲಾತಿಯನ್ನು ಕಡಿಮೆ ಮಾಡಿ, ಮುಸ್ಲಿಮರಿಗೆ ಅನುಕೂಲ ಮಾಡಿಕೊಟ್ಟಿತು” ಎಂದು ಪ್ರಧಾನಿ ಮೋದಿಯವರೇ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಹಿಂದುಳಿದ ವರ್ಗಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಸುಳ್ಳಿನ ಸೌಧವನ್ನೇ ಕಟ್ಟುತ್ತಿರುವ ಮೋದಿ ಸಾಹೇಬರು ಜನರ ದಿಕ್ಕು ತಪ್ಪಿಸಿ, ಒಬಿಸಿ ಶೂದ್ರರನ್ನೂ ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ದುಷ್ಟ ಕೆಲಸಕ್ಕೆ ಇಳಿದಿರುವುದು ಆತಂಕಕಾರಿ ಸಂಗತಿ.
ಒಬಿಸಿಗಳ ಮೇಲೆ ಅಪಾರ ಒಲವು ತೋರಿಸುತ್ತಿರುವ ಬಿಜೆಪಿ, ಸಂಘಪರಿವಾರದವರು ಜಾತಿ ಗಣತಿಯನ್ನು ವಿರೋಧಿಸುತ್ತಿರುವುದು ಏತಕ್ಕೆ ಎಂಬುದನ್ನೂ ನಾವು ಗಂಭೀರವಾಗಿ ಆಲೋಚಿಸಬೇಕಿದೆ.
ಆರ್‌ಎಸ್‌ಎಸ್ ವಿದರ್ಭ ಸಹ ಸಂಘಚಾಲಕ ಶ್ರೀಧರ ಗಾಡ್ಗೆ ಅವರು ಕೆಲವು ತಿಂಗಳ ಹಿಂದೆಯಷ್ಟೇ ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. “ಜಾತಿ ಗಣತಿಯಿಂದ ಏನನ್ನೂ ಸಾಧಿಸಲಾಗದು. ಅದರ ಅವಶ್ಯಕತೆಯೂ ಇಲ್ಲ. ಜಾತಿ ಆಧಾರಿತ ಜನಗಣತಿಯಿಂದ ಒಂದು ನಿರ್ದಿಷ್ಟ ಜಾತಿಯ ಜನಸಂಖ್ಯೆಯ ದತ್ತಾಂಶ ಒದಗಿಸಬಹುದು. ಇಂತಹ ಕಸರತ್ತು, ರಾಜಕೀಯವಾಗಿ ಕೆಲವು ವ್ಯಕ್ತಿಗಳಿಗೆ ಮಾತ್ರ ಲಾಭವಾಗಬಹುದು. ಆದರೆ, ಇದು ಸಾಮಾಜಿಕವಾಗಿ ಮತ್ತು ರಾಷ್ಟ್ರೀಯ ಏಕತೆಯ ದೃಷ್ಟಿಯಿಂದ ಒಳಿತಲ್ಲ. ನಮಗೆ ಜಾತಿ ಗಣತಿಯ ಅವಶ್ಯಕತೆ ಇಲ್ಲವೆನಿಸುತ್ತದೆ. ಇದಕ್ಕೆ ಬೇರೆ ಕಾರಣವೇನಿಲ್ಲ, ಜಾತಿ ಆಧಾರಿತ ಸಮೀಕ್ಷೆಯಿಂದ ನಾವು ಏನು ಸಾಧಿಸಬಹುದು?” ಎಂದು ಪ್ರಶ್ನಿಸುತ್ತಾರೆ.
ಬಿಹಾರದಲ್ಲಿ ಆರ್‌ಜೆಡಿ- ಜೆಡಿಯು ಸಮ್ಮಿಶ್ರ ಸರ್ಕಾರವಿದ್ದಾಗ, ಜಾತಿ ಗಣತಿಯ ವಿವರಗಳನ್ನು ಬಹಿರಂಗಪಡಿಸಲಾಯಿತು. ಆಗಿನ್ನೂ ನಿತೀಶ್ ಕುಮಾರ್ ಮತ್ತೆ ಬಿಜೆಪಿಯ ಸಖ್ಯಕ್ಕೆ ಬಂದಿರಲಿಲ್ಲ. ಬಿಹಾರದ ಸ್ಥಳೀಯ ಬಿಜೆಪಿ ನಾಯಕರು ಜಾತಿ ಗಣತಿ ವರದಿಯನ್ನು ಸ್ವಾಗತಿಸಿದರೂ ಮೋದಿಯವರು, “ಜಾತಿಯ ಹೆಸರಲ್ಲಿ ದೇಶವನ್ನು ಒಡೆಯಲು ಯತ್ನಿಸಲಾಗುತ್ತಿದೆ. ಇರುವುದು ಎರಡೇ ಜಾತಿ, ಒಂದು ಬಡವ ಮತ್ತು ಶ್ರೀಮಂತ” ಎಂದಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿಯವರು, “ಮೋದಿ ತಮ್ಮ ಭಾಷಣಗಳಲ್ಲಿ ನಾನು ಒಬಿಸಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಜಾತಿ ಬಗ್ಗೆ ನಾನು ಮಾತನಾಡಿದಾಗ, ಜಾತಿ ಇಲ್ಲ ಎನ್ನುತ್ತಾರೆ” ಎಂದು ಕುಟುಕಿದ್ದರು.
ಯಾವ ಜಾತಿಗಳ ಆರ್ಥಿಕ ಸಾಮಾಜಿಕ ಸ್ಥಿತಿ ಹೇಗಿದೆ ಎಂಬುದನ್ನು ತಿಳಿಯಲು ಜಾತಿ ಗಣತಿ ಅಗತ್ಯ. ಆಗ ಯಾವ ಜಾತಿಯ ಪ್ರಾತಿನಿಧ್ಯ ಹೆಚ್ಚಿದೆ, ಯಾರಿಗೆ ಕಡಿಮೆಯಾಗಿದೆ ಎಂದೂ ಆ ಮೂಲಕ ನಿರ್ಧರಿಸಬಹುದು. ಸಂಪತ್ತು ಬೆರಳೆಣಿಕೆಯ ಜನರ ಬಳಿ ಕ್ರೋಢೀಕರಣ ಆಗುವುದನ್ನು ತಪ್ಪಿಸಿ, ಎಲ್ಲ ಜನವರ್ಗಕ್ಕೂ ಹಂಚಿಕೆಯಾಗುವ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಬಹುದು. ಒಬಿಸಿ, ಎಸ್‌ಸಿ, ಎಸ್‌ಟಿಗಳ ಸ್ಥಿತಿ ಯಾವ ಮಟ್ಟದಲ್ಲಿದೆ ಎಂದು ತಿಳಿದುಕೊಳ್ಳಬಹುದು. ಜಾತಿ ಗಣತಿ, ಮೀಸಲಾತಿ ಮಿತಿ ಹೆಚ್ಚಳ ಮತ್ತು ಸಂಪತ್ತಿನ ಹಂಚಿಕೆ- ಒಂದಕ್ಕೊಂದು ಪೂರಕವಾದ ಅಂಶಗಳಾಗಿವೆ.
ಯಾವುದೇ ಸಮಿತಿಯ ಶಿಫಾರಸ್ಸು ಇಲ್ಲದೆ, ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಿ, ಶೇ. 3ರಷ್ಟಿರುವ ಜನರಿಗೆ ಶೇ. 10ರಷ್ಟು ಮೀಸಲಾತಿಯನ್ನು ಒದಗಿಸುವ ’ಇಡಬ್ಲ್ಯುಎಸ್’ ಕೋಟಾವನ್ನು ಮೋದಿ ಸರ್ಕಾರ ಜಾರಿಗೆ ತಂದಿತು. ನ್ಯಾಯಾಂಗವೂ ಅದನ್ನು ಎತ್ತಿಹಿಡಿದದ್ದು ಆತಂಕಕಾರಿಯೇ ಸರಿ. ಈಗಲೂ ಸುಪ್ರೀಂಕೋರ್ಟ್ ಈ ವಿಚಾರವನ್ನು ಪುನರ್ ಪರಿಶೀಲನೆ ಮಾಡಬೇಕೆಂದೇ ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ. ಇಡಬ್ಲ್ಯುಎಸ್ ಮೀಸಲಿಗೆ ತೋರಿದ ಆಸಕ್ತಿಯನ್ನು ಮೋದಿಯವರು ಒಬಿಸಿಗಳ ಮೀಸಲಾತಿ ಹೆಚ್ಚಳಕ್ಕೆ ಯಾಕೆ ತೋರಲಿಲ್ಲ? ನಿಜಕ್ಕೂ ಅವರಿಗೆ ಹಿಂದುಳಿದ ವರ್ಗಗಳ ಮೇಲೆ ಕಾಳಜಿ ಇದೆಯೇ? ಎಂಬುದು ನಮ್ಮ ಮುಂದಿರುವ ಅಸಲಿ ಪ್ರಶ್ನೆ.
ಕಾಂಗ್ರೆಸ್ ಪಕ್ಷ ಜಾತಿಗಣತಿಯ ಬಗ್ಗೆ ಸ್ಪಷ್ಟ ನಿಲುವು ತಾಳಿದ್ದರೂ ಬಿಜೆಪಿ ಈ ಕುರಿತು ತನ್ನ ಧೋರಣೆಯೇನು ಎಂಬುದನ್ನು ಸರಿಯಾಗಿ ಹೇಳುತ್ತಿಲ್ಲ. ಸಂಘಪರಿವಾರ ಮೊದಲಿನಿಂದಲೂ ಜಾತಿಗಣತಿಯನ್ನು ವಿರೋಧಿಸುತ್ತಲೇ ಬಂದಿದೆ. ಮತ್ತೊಂದೆಡೆ ಮುಸ್ಲಿಮರಿಗೆ ಧರ್ಮಾಧಾರಿತವಾಗಿ ಮೀಸಲಾತಿಯನ್ನು ಕೊಟ್ಟಿದ್ದರಿಂದ ಒಬಿಸಿ ಸಮುದಾಯಗಳಿಗೆ ಅನ್ಯಾಯವಾಗಿದೆ ಎನ್ನುವುದು ಭಯಾನಕ ಸುಳ್ಳು.
ಮೈಸೂರು ರಾಜ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಚಿಸಿದ ಮಿಲ್ಲರ್ ಆಯೋಗದಿಂದ ಹಿಡಿದು ಈವರೆಗಿನ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದವರೆಗೂ ಮುಸ್ಲಿಮರನ್ನು ಧರ್ಮದ ಹಿನ್ನೆಲೆಯಲ್ಲಿ ಹೊರಗಿಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿಲ್ಲ. ಹಾವನೂರು ಆಯೋಗದ ವರದಿ ಬಂದಾಗ, ಮುಸ್ಲಿಮರನ್ನು ಒಬಿಸಿ ಪಟ್ಟಿಯಲ್ಲಿ ಇಡಬೇಕಾ, ಬೇಡವಾ ಎಂಬ ಪ್ರಶ್ನೆ ಇತ್ತು. ಮುಸ್ಲಿಮರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಗುರುತಿಸಿದ್ದ ಆಯೋಗವು ಅವರಿಗೆ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬೇಕು, ಆದರೆ ಒಬಿಸಿ ಪಟ್ಟಿಯಲ್ಲಿ ಅಲ್ಲ ಎಂಬ ನಿಲುವು ತಾಳಿತ್ತು. ದೇವರಾಜ ಅರಸು ಅವರ ಸರ್ಕಾರ ಎಲ್ಲಾ ಒಬಿಸಿಯೊಳಗೆಯೇ ಮುಸ್ಲಿಮರನ್ನು ಸೇರಿಸಿದ್ದು ನಿಜ. ಇದನ್ನು ಪ್ರಶ್ನಿಸಿ ಸೋಮಶೇಖರಪ್ಪ ಮತ್ತು ಇತರರು ಹೈಕೋರ್ಟ್‌ನಲ್ಲಿ ದಾವೆ ಹೂಡಿದರು.
ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್, “ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು ಎಂದ ಮಾತ್ರಕ್ಕೆ ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡಲು ಯಾವುದೇ ಆಧಾರವಿಲ್ಲ. ನಮ್ಮ ಅಭಿಪ್ರಾಯದಲ್ಲಿ ಮುಸ್ಲಿಂ ಸಮೂಹಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಿರುವ ಸರ್ಕಾರದ ನಿಲುವು ನಿರ್ದಿಷ್ಟವಾಗಿ ಸಮರ್ಥನೀಯ” ಎಂದಿತ್ತು.
ಹಿಂದುಳಿದ ವರ್ಗಗಳ ಮೀಸಲಾತಿ, ಜಾತಿ ಆಧಾರಿತವಾದದ್ದೋ ಧರ್ಮ ಆಧಾರಿತವಾದದ್ದೋ ಅಲ್ಲವೇ ಅಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡೇತರ ಸಮುದಾಯಗಳ ಆರ್ಥಿಕ ಸಾಮಾಜಿಕ ಸ್ಥಿತಿಯನ್ನು ಆಧರಿಸಿ ರೂಪಿಸಲಾದದ್ದು ಒಬಿಸಿ ಪಟ್ಟಿ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುತ್ತಾರೋ ಅವರನ್ನು ಹಿಂದುಳಿದ ವರ್ಗವಾಗಿ ಪರಿಗಣಿಸಬಹುದು ಎಂದು ಸಂವಿಧಾನದ ಅನುಚ್ಛೇದ 15 (4), 16 (4)ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದು ಬಾಬಾ ಸಾಹೇಬರ ಆಶಯವೂ ಆಗಿತ್ತು.
ಸ್ವಾತಂತ್ರ್ಯ ಭಾರತದಲ್ಲಿ ಮೊದಲ ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಿದ್ದು 1953ರಲ್ಲಿ. ಕಾಕಾ ಕಾಲೇಲ್ಕರ್ ಅಧ್ಯಕ್ಷರಾಗಿದ್ದರು. ಎರಡನೇ ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಿದ್ದು, 1978ರಲ್ಲಿ ಅಂದರೆ ಸುಮಾರು 25 ವರ್ಷಗಳ ನಂತರ. ಬಿ.ಪಿ.ಮಂಡಲ್ ಅವರು ಅದರ ಅಧ್ಯಕ್ಷರಾಗಿದ್ದರು. ಮಂಡಲ್ ಆಯೋಗವು ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಬೇಕೆಂದು ರೂಪಿಸಿದ ವರದಿಯನ್ನು ಮೊರಾರ್ಜಿ ದೇಸಾಯಿ ಅವರ ನೇತೃತ್ವದ ಸರ್ಕಾರ ಜಾರಿಗೆ ತರಲಿಲ್ಲ. 1990ರವರೆಗೆ ವರದಿ ನನೆಗುದಿಗೆ ಬಿದ್ದಿತ್ತು. ಅದನ್ನು ಪ್ರಧಾನಿ ವಿ.ಪಿ.ಸಿಂಗ್ ಅವರು ಕೈಗೆತ್ತಿಕೊಂಡಾಗ ದೇಶದ್ಯಾಂತ ಆಕ್ರೋಶ ಭುಗಿಲೆದ್ದಿತ್ತು. ಅದು ಒಬಿಸಿಗಳಿಗೆ ಸಂಬಂಧಪಟ್ಟ ವರದಿಯಾದರೂ ಎಸ್‌ಸಿ, ಎಸ್‌ಟಿಗಳ ತಲೆಗೆ ಕಟ್ಟಿ ಸಂಘ ಪರಿವಾರ ಅಪಪ್ರಚಾರ ಮಾಡಿತು. ತಪ್ಪು ತಿಳಿದು ಬೀದಿಗಿಳಿದ ಒಬಿಸಿಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ಆತ್ಮಾಹುತಿಗೆ ಒಳಗಾದರು. ಒಬಿಸಿಗಳ ಹಿತ ಕಾಯುತ್ತಿದ್ದ ಮಂಡಲ್ ವರದಿಯನ್ನು ವಿರೋಧಿಸಿದ ಸಂಘಪರಿವಾರದ ಶಿಶು ಮೋದಿಯರಿಗೆ ಒಬಿಸಿಗಳ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ?
ಮಂಡಲ್ ಕಮಿಷನ್ ಶೇ. 52ರಷ್ಟು ಒಬಿಸಿಗಳಿರುವುದನ್ನು ಗುರುತಿಸಿತ್ತು. ವರದಿಯನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ ಅನೇಕರ ಅರ್ಜಿಗಳನ್ನು ವಿಚಾರಣೆ ನಡೆಸಲಾಯಿತು. ಅದರಲ್ಲಿ ಇಂದ್ರಾ ಸಾಹ್ನಿ ಎಂಬವರ ಅರ್ಜಿ ಬಹಳ ಪ್ರಮುಖವಾಗಿದೆ. ಇಂದಿರಾ ಸಾಹ್ನಿ v/s ಭಾರತ ಸರ್ಕಾರ ಕೇಸ್‌ನಲ್ಲಿ ತೀರ್ಪು ನೀಡಿದ ಕೋರ್ಟ್ “ಎಸ್‌ಸಿ, ಎಸ್‌ಟಿ, ಒಬಿಸಿಗಳ ಒಟ್ಟು ಮೀಸಲಾತಿ ಶೇ. 50ರಷ್ಟು ಮೀರಬಾರದು” ಎಂದು ಸೂಚಿಸಿತು. ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠ ನೀಡಿದ ತೀರ್ಪಿನಲ್ಲಿ ಉಲ್ಲೇಖಗೊಂಡಿರುವ ಮತ್ತೊಂದು ಅಂಶ ಹೀಗಿದೆ: “ಸರ್ಕಾರಿ ಸೇವೆಗಳಲ್ಲಿ ಅಸಮರ್ಪಕ ಪ್ರಾತಿನಿಧ್ಯವು ಯಾವುದೇ ಒಂದು ಜನವರ್ಗಕ್ಕೆ ಸೇರಿಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಎಲ್ಲರಿಗೂ ಅದು ಸಮಾನವಾಗಿ ಅನ್ವಯವಾಗುತ್ತದೆ. ಹಿಂದೂಗಳಲ್ಲಿನ ಶೂದ್ರ ಸಮುದಾಯಕ್ಕೆ ಸೇರಿದವರಾಗಿರಬಹುದು, ಅದೇ ರೀತಿ ಹಿಂದುಳಿದಿರುವಿಕೆಗೆ ಗುರಿಯಾಗಿರುವ ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದರೂ ಸಮಾನವಾಗಿ ಅನ್ವಯವಾಗುತ್ತದೆ” ಎಂದಿತ್ತು ಕೋರ್ಟ್.
ಗಮನಿಸಬೇಕಾದ ಸಂಗತಿ ಎಂದರೆ- ಶೇ.50ರಷ್ಟು ಮೀಸಲಾತಿ ಮಿತಿಯನ್ನು ಮೀರಿಯೇ ಇಡಬ್ಲ್ಯುಎಸ್ ಜಾರಿಯಾಗಿದೆ, ಅಗತ್ಯ ಅಂಕಿ- ಅಂಶಗಳನ್ನು ಒದಗಿಸಿದರೆ ನಾವೀಗ ಒಬಿಸಿಗಳಲ್ಲಿನ ಎಲ್ಲರಿಗೂ ಮೀಸಲಾತಿ ಸೌಲಭ್ಯ ಒದಗಿಸಬಹುದು. ಹೀಗಾಗಿಯೇ ಜಾತಿ ಗಣತಿ ಮತ್ತು ಮೀಸಲಾತಿ ಮಿತಿ ಮೀರುವ ಪ್ರಸ್ತಾಪವನ್ನು ಕಾಂಗ್ರೆಸ್ ಒಟ್ಟಿಗೆ ಮಾಡಿದೆ. ಇದನ್ನು ಸಹಿಸಿಕೊಳ್ಳಲಾಗದೆ ಮೋದಿಯವರು ಪೇಚಾಡುತ್ತಿದ್ದಾರೋ ಅನಿಸತೊಡಗಿದೆ.
ಮಂಡಲ್ ಆಯೋಗವು ತನ್ನ ವರದಿಯನ್ನು ಸಿದ್ಧಪಡಿಸಲು ಆಧರಿಸಿದ್ದು 1931ರಲ್ಲಿ ಬ್ರಿಟಿಷರು ಮಾಡಿದ್ದ ಜಾತಿ ಗಣತಿಯ ವರದಿಯನ್ನು. ಆನಂತರದಲ್ಲಿ ಜಾತಿ ಗಣತಿ ಆಗಿಯೇ ಇಲ್ಲ. ಕಾಂಗ್ರೆಸ್ ಪಕ್ಷವು ಜಾತಿ ಗಣತಿಯ ಬಗ್ಗೆ ಮಾತನಾಡುತ್ತಿರುವುದು ಮಹತ್ವದ ಸಂಗತಿ. ಆದರೆ ಮೋದಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಕಮಂಡಲ ರಾಜಕಾರಣದ ವಿರುದ್ಧ ಹೋರಾಡಿದವರಲ್ಲಿ ಸಿದ್ದರಾಮಯ್ಯನವರೂ ಪ್ರಮುಖರು. ಅವರೀಗ ಕರ್ನಾಟಕದಲ್ಲಿ ಸಿಎಂ ಆಗಿದ್ದಾರೆ. ಅವರು ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗಲೇ ಜಾತಿ ಗಣತಿಯನ್ನು ನಡೆಸಿದ್ದರು. ಅದೀಗ ಸರ್ಕಾರಕ್ಕೆ ಸಲ್ಲಿಕೆಯೂ ಆಗಿದೆ. ವರದಿ ಬಿಡುಗಡೆಗೆ ಅಡ್ಡ ಹಾಕುತ್ತಿರುವುದು ಇದೇ ಬಿಜೆಪಿ- ಜೆಡಿಎಸ್ ಮೈತ್ರಿ ಎಂಬುದನ್ನು ಮರೆಯಬಾರದು. ಮೋದಿಯವರು ನಿಜಕ್ಕೂ ಒಬಿಸಿಗಳ ಪರವಾಗಿದ್ದರೆ ಜಾತಿ ಗಣತಿ ಬಿಡುಗಡೆಗೆ ಒತ್ತಾಯಿಸಬೇಕಿತ್ತಲ್ಲವೇ? ಮುಸ್ಲಿಮರನ್ನು ಸೇರಿಸಿದ್ದರಿಂದಲೇ ಒಬಿಸಿಗಳಿಗೆ ಅನ್ಯಾಯವಾಯಿತು ಎಂದು ಸಮುದಾಯಗಳ ನಡುವೆ ಬೆಂಕಿ ಹಚ್ಚಲು ಯತ್ನಿಸುತ್ತಿರುವ ಮೋದಿ ಸಾಹೇಬರು ಹತ್ತು ವರ್ಷ ಅಧಿಕಾರದಲ್ಲಿದ್ದರು. ಇಡಬ್ಲ್ಯುಎಸ್‌ಗೆ ತೋರಿದ ಒಲವನ್ನು ಒಬಿಸಿಗಳ ಮೀಸಲಾತಿ ಹೆಚ್ಚಳಕ್ಕೂ ತೋರಿದ್ದರೆ ಅವರೊಳಗೆ ನಿಜಕ್ಕೂ ಹಿಂದುಳಿದ ವರ್ಗಗಳ ಮೇಲೆ ನಿಜವಾದ ಪ್ರೇಮವಿದೆ ಅನಿಸುತ್ತಿತ್ತು. ಆದರೆ ಈಗ ಕಾಣುತ್ತಿರುವುದೆಲ್ಲ ಬೂಟಾಟಿಕೆ ಎನ್ನದೆ ವಿಧಿ ಇಲ್ಲ.
ಮಿಲ್ಲರ್ ಸಮಿತಿ, ಕಾಕಾ ಕಾಲೇಲ್ಕರ್ ಕಮಿಟಿ, ನಾಗನಗೌಡ ಕಮಿಟಿ, ವೆಂಕಟರೆಡ್ಡಿ ಆಯೋಗ, ಹಾವನೂರ ಆಯೋಗ, ಚಿನ್ನಪ್ಪರೆಡ್ಡಿ ಆಯೋಗ, ರವಿವರ್ಮಾ ಕುಮಾರ್ ಆಯೋಗ, ಸಿ.ಎಸ್.ದ್ವಾರಕನಾಥ್ ಆಯೋಗ- ಎಲ್ಲವೂ ಹಿಂದುಳಿದ ವರ್ಗಗಳ ಮೀಸಲಾತಿಯ ಕುರಿತು ಅನೇಕ ಚರ್ಚೆಗಳನ್ನು ಕಾಲಕಾಲಕ್ಕೆ ನಡೆಸಿವೆ.
1988ರಲ್ಲಿ ರಚನೆಯಾದ ಜಸ್ಟಿಸ್ ಚಿನ್ನಪ್ಪ ರೆಡ್ಡಿ ಆಯೋಗ ಹೇಳಿದ ಮಾತೊಂದು ಗಮನಾರ್ಹ. “ಮುಸ್ಲಿಮರ ಶೈಕ್ಷಣಿಕ ಪರಿಸ್ಥಿತಿಯು ಅಸ್ಪೃಶ್ಯ ಜಾತಿಗಳ ಪರಿಸ್ಥಿತಿಯಂತೆಯೇ ಇದೆ. ಜನಸಂಖ್ಯೆಗೆ ಹೋಲಿಸಿದರೆ ಅಲ್ಲಿನ ಅರ್ಧದಷ್ಟು ಜನರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಉದ್ಯೋಗ, ಉನ್ನತ ಶಿಕ್ಷಣದಲ್ಲಿ ಅವರ ಪ್ರಮಾಣ ಶೇ.50ರಷ್ಟೂ ಇಲ್ಲ” ಎನ್ನತ್ತಾರೆ ಚಿನ್ನಪ್ಪ ರೆಡ್ಡಿ.
“1994ರ ಸೆಪ್ಟೆಂಬರ್‌ನಲ್ಲಿ ಮತ್ತೆ ಒಬಿಸಿ ಮೀಸಲಾತಿ ಚರ್ಚೆ ಬಂದಿತು. ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿದ್ದರು. ಅಂದಿನ ಸರ್ಕಾರ ಹಿಂದುಳಿದ ವರ್ಗಗಳನ್ನು ನಾಲ್ಕು ವಿಂಗಡನೆ ಮಾಡಿತು. ಎಸ್‌ಸಿ ಎಸ್‌ಟಿಗಳ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಗೆ ತೀರ ಹತ್ತಿರದಲ್ಲಿರುವ ಸಮುದಾಯಗಳನ್ನು ಪ್ರವರ್ಗ- 1 ಎಂದು ಪರಿಗಣಿಸಲಾಗುತ್ತದೆ. ಪ್ರವರ್ಗ-1ಕ್ಕಿಂತ ಉತ್ತಮವಾಗಿದ್ದಾರೆ, ಆದರೆ ಇತರರಿಗಿಂತ ಹಿಂದುಳಿದ್ದಾರೆ ಎನ್ನುವವರು 2ಎ ಎಂದು ಪರಿಗಣಿಸಲಾಯಿತು. 2ಎಗಿಂತ ಉತ್ತಮವಾಗಿದ್ದಾರೆ ಎನ್ನುವವರನ್ನು 2ಬಿಯಲ್ಲಿ ಗುರುತಿಸಲಾಗಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಒಂದಿಷ್ಟು ಮುಂದುವರಿದಿರುವ ಸಮುದಾಯಗಳನ್ನು 3ಎ ಮತ್ತು 3ಬಿಯಲ್ಲಿ ಸೇರಿಸಿಕೊಳ್ಳಲಾಯಿತು. ಮುಸ್ಲಿಮರಲ್ಲಿಯೂ ಕೂಡ 2ಎಗೆ ಸೇರಿದ ಕೆಲವು ಜಾತಿಗಳಿವೆ, ಪ್ರವರ್ಗ- 1ರಲ್ಲೂ ಮುಸ್ಲಿಂ ಜಾತಿಗಳಿವೆ ಎಂಬುದನ್ನು ಗಮನಿಸಬೇಕು. ಇಡೀ ಬೌದ್ಧ ಸಮುದಾಯವನ್ನು 2ಎನಲ್ಲಿ ಸೇರಿಸಲಾಗಿದೆ. ಇಡೀ ಕ್ರಿಶ್ಚಯನ್, ಜೈನರನ್ನು 3ಬಿಯಲ್ಲಿ ಸೇರಿಸಿದ್ದಾರೆ” ಎಂದು ವಿವರಿಸುತ್ತಾರೆ ಚಿಂತಕ ಶಿವಸುಂದರ್.
ಜನರ ಕಷ್ಟಗಳನ್ನು ಆಲಿಸಲು ಹೃದಯ ಬೇಕು. ನಾಯಕನಾದವನಿಗೆ ಸಂವಿಧಾನದ ಬಗ್ಗೆ ಗೌರವ ಇರಬೇಕು. ಮೀಸಲಾತಿಯನ್ನು ದಶಕಗಳ ಕಾಲ ವಿರೋಧಿಸಿದ ಸಂಘಪರಿವಾರ ಇಂದು ಮೀಸಲಾತಿಯ ಹೆಸರಲ್ಲೇ ಸಮುದಾಯಗಳನ್ನು ಒಡೆದು ಆಳುವ ದುಷ್ಕೃತ್ಯಕ್ಕೆ ಇಳಿದಿರುವುದು ದುರಂತವೇ ಸರಿ. ಕರ್ನಾಟಕದ ಮೀಸಲಾತಿ ವ್ಯವಸ್ಥೆಯ ಬಗ್ಗೆ ನಿರಂತರ ಸುಳ್ಳುಗಳನ್ನು ಹೇಳುತ್ತಿರುವ ಮೋದಿಯವರು ಈ ರಾಜ್ಯದ ಜನರ ಕ್ಷಮೆ ಕೇಳಬೇಕಿದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.