ವಿಶ್ಲೇಷಣೆ | ಆರ್‌ಎಸ್‌ಎಸ್‌ ಮೀಸಲಾತಿ ವಿರುದ್ಧ ಇಲ್ಲವೇ?

Date:

Advertisements

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಅವರಿಗೆ ಸಂಬಂಧಿಸಿದಂತೆ ವಿಡಿಯೊವೊಂದು ಇತ್ತೀಚೆಗೆ ವೈರಲ್ ಆಗಿದೆ. “ಮೀಸಲಾತಿಗೆ ಆರ್‌ಎಸ್‌ಎಸ್ ವಿರುದ್ಧವಿದೆ ಎಂದು ಪ್ರತಿಪಾದಿಸುತ್ತಿರುವ ಈ ವಿಡಿಯೊವೂ ನಕಲಿ” ಎಂದು ಮೋಹನ್ ಭಾಗವತ್ ಪ್ರತಿಕ್ರಿಯಿದ್ದಾರೆ. “ಎಲ್ಲ ರೀತಿಯ ಮೀಸಲಾತಿಯು ಮುಂದುವರಿಯಬೇಕು, ಅದುವೇ ಆರ್‌ಎಸ್‌ಎಸ್ ನಿಲುವು. ಸಂಘವು ಎಂದಿಗೂ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತದೆ” ಎಂದೂ ತಿಳಿಸಿದ್ದಾರೆ.

ಆದರೆ ಇದು ಪ್ರಾಮಾಣಿಕವಾದ ಅಭಿಪ್ರಾಯವೇ ಅಥವಾ ಸಂಘಪರಿವಾರವು ತನ್ನ ಹಿಡನ್ ಅಜೆಂಡಾವನ್ನು ಮುಚ್ಚಿಡುತ್ತಿದೆಯೇ ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ. ವಾಸ್ತವದಲ್ಲಿ ಭಾರತದ ಸಂವಿಧಾನವನ್ನು ಆರ್‌ಎಸ್‌ಎಸ್‌ ಕಟುವಾಗಿ ಟೀಕಿಸಿತ್ತು.

ಆರ್‌ಎಸ್‌ಎಸ್‌ ಮುಖವಾಣಿಯಾದ ’ಆರ್ಗನೈಸರ್‌’ ಪತ್ರಿಕೆಯು ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಬರೆದ ಸಾಲುಗಳು ಮತ್ತೆ ಮತ್ತೆ ಚರ್ಚೆಗೆ ಗ್ರಾಸವಾಗಿವೆ. ನವಂಬರ್ 30, 1949ರ ಸಂಚಿಕೆಯಲ್ಲಿ, “ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಹೀನಾಯವಾದದ್ದು ಏನೆಂದರೆ ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮೃತಿ ಅತ್ಯಂತ ಪ್ರಾಚೀನವಾಗಿದ್ದು. ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ” ಎಂದು ಕಟುವಾಗಿ ಬರೆಯಲಾಗಿತ್ತು.

Advertisements

ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಇಡಬೇಕೆಂದು ಬಯಸುತ್ತಿರುವುದರಿಂದಲೇ ’ಮನುಸ್ಮೃತಿ’ಯ ಆರಾಧನೆ ಮಾಡುತ್ತಿದ್ದಾರೆಂಬುದು ಸ್ಪಷ್ಟ.

ಒಬಿಸಿಗಳಿಗೆ ಮೀಸಲಾತಿ ನೀಡುವ ಮಂಡಲ್ ಆಯೋಗದ ವರದಿ ಬಂದಾಗ, ವಿ.ಪಿ.ಸಿಂಗ್ ಅವರು ಅದನ್ನು ಜಾರಿಗೆ ತಂದಾಗ ಇಡೀ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಸಂಘಪರಿವಾರವು ಹಬ್ಬಿಸಿದ ಸುಳ್ಳಿಗೆ ಒಬಿಸಿಗಳು ಬಲಿಯಾಗಿದ್ದರು. ಇದು ಎಸ್ಸಿ, ಎಸ್ಟಿಗಳಿಗೆ ಕೊಡುತ್ತಿರುವ ಹೆಚ್ಚಿನ ಮೀಸಲಾತಿ ಎಂದು ಸುಳ್ಳು ಹಬ್ಬಿಸಲಾಗಿತ್ತು. ಸುಮಾರು 250ಕ್ಕೂ ಹೆಚ್ಚು ಒಬಿಸಿಗಳು ಆತ್ಮಾಹುತಿಯಾಗಿದ್ದರು.

ಆರ್‌ಎಸ್‌ಎಸ್‌ ಗರಡಿಯಲ್ಲಿ ಪಳಗಿದವರು ಕಳೆದ ಒಂದು ದಶಕದ ಹಿಂದಿನವರೆಗೂ ಮೀಸಲಾತಿಯ ವಿರುದ್ಧ ಬಹಿರಂಗ ಅಸಹನೆಯನ್ನು ಹೊರಹಾಕುತ್ತಲೇ ಬಂದಿದ್ದರು. ಆದರೆ ಈಗ ಮೀಸಲಾತಿ ಮತ ರಾಜಕಾರಣದ ಪ್ರಮುಖ ಅಸ್ತ್ರವಾಗಿರುವುದರಿಂದ ಮತ್ತು ಮೇಲ್ಜಾತಿಯ ಮೂರು ಪರ್ಸೆಂಟ್ ಜನರಿಗೆ ಹತ್ತು ಪರ್ಸೆಂಟ್ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಇಡಬ್ಲ್ಯುಎಸ್ ಹೆಸರಲ್ಲಿ ಜಾರಿಗೆ ತಂದಿದ್ದರಿಂದ ಮೀಸಲಾತಿ ವಿರೋಧಿ ಬಹಿರಂಗ ಹೇಳಿಕೆಗಳು ತಗ್ಗಿವೆ. ಪತ್ರಿಕೆಗಳಲ್ಲಿ ಅಸಹನೆಯನ್ನು ಹೊರಹಾಕುವ ಖೊಟ್ಟಿ ಪತ್ರಕರ್ತರು ಕಡಿಮೆಯಾಗಿದ್ದಾರೆ.

ಆದರೆ ಅಲ್ಲಲ್ಲಿ ಸಂಘಪರಿವಾರದ ಮುಖಂಡರು ಮೀಸಲಾತಿಯ ವಿರುದ್ಧ ತಮ್ಮ ಅಸಹನೆಯನ್ನು ಹೊರಹಾಕಿರುವುದು ಇತ್ತೀಚಿನ ದಿನಗಳವರೆಗೂ ನಡೆದಿದೆ. ಮೀಸಲಾತಿ ಎಂದರೆ ಕೇವಲ ದಲಿತರಿಗಷ್ಟೇ ಇದೆ ಎಂಬ ಮೌಢ್ಯವನ್ನು ಬಿತ್ತುವ ಮತ್ತು ಆ ಮೂಲಕ ದಲಿತರ ವಿರುದ್ಧ ಇತರ ಸಮುದಾಯಗಳಲ್ಲಿ ದ್ವೇಷವನ್ನು ಪಸರಿಸುವ ಕೆಲಸ ಎಗ್ಗಿಲ್ಲದೆ ಸಾಗುತ್ತಿದೆ.

ಭಾಗವತ್‌ ಅವರಿಗೆ ಸಂಬಂಧಿಸಿದಂತೆ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೊ ನಕಲಿ ಎಂದೇ ಭಾವಿಸಿ ಪಕ್ಕಕ್ಕಿಡೋಣ. ಆದರೆ ಸಂಘ ಪರಿವಾರವು ಎಂದಿಗೂ ಮೀಸಲಾತಿಯ ವಿರುದ್ಧ ನಿಂತಿಲ್ಲ ಎಂದು ಅವರು ಹೇಳುತ್ತಿರುವುದು ಹಸಿಹಸಿ ಸುಳ್ಳಿನ ಸಂಗತಿಯಾಗಿದೆ. ಭಾಗವತ್ ಅವರ ಹೇಳಿಕೆಗೆ ತದ್ವಿರುದ್ಧವಾಗಿ ಆರ್‌ಎಸ್‌ಎಸ್ ನಾಯಕರು ಆಡಿರುವ ಮಾತುಗಳನ್ನು ‘ದಿ ವೈರ್‌’ ಕಲೆಹಾಕಿ ಇತ್ತೀಚೆಗೆ ಒಂದು ಲೇಖನವನ್ನು ಪ್ರಕಟಿಸಿತ್ತು. ಯಾರ್‍ಯಾರು, ಯಾವಾಗ ಏನು ಹೇಳಿದರು ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

  1. ಮನಮೋಹನ್ ವೈದ್ಯ ಹೇಳಿಕೆ

2017ರ ಜನವರಿಯಲ್ಲಿ ಆರ್‌ಎಸ್‌ಎಸ್‌ನ ಪ್ರಚಾರ ಮುಖ್ಯಸ್ಥ ಮನಮೋಹನ್ ವೈದ್ಯ ಅವರು, “ಮೀಸಲಾತಿಗಳನ್ನು ವಿಭಿನ್ನ ಸನ್ನಿವೇಶದಲ್ಲಿ ಪರಿಚಯಿಸಲಾಗಿದೆ ಮತ್ತು ಮೀಸಲಾತಿಗೆ ಸಮಯ ಮಿತಿ ಹೊಂದಿರಬೇಕು” ಎಂದು ಅಭಿಪ್ರಾಯ ತಾಳಿದ್ದರು.

ಜೈಪುರ ಸಾಹಿತ್ಯೋತ್ಸವದಲ್ಲಿ ಮಾತನಾಡಿದ್ದ ಅವರು, “ಎಸ್‌ಸಿ, ಎಸ್‌ಟಿಗೆ ಮೀಸಲಾತಿಯನ್ನು ವಿಭಿನ್ನ ಸನ್ನಿವೇಶದಲ್ಲಿ ನೀಡಲಾಗಿದೆ. ಅವರಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದು ನಮ್ಮ ಜವಾಬ್ದಾರಿಯಾಗಿತ್ತು. ಹಾಗಾಗಿ, ಅವರಿಗೆ ಮೀಸಲಾತಿ (ಸಂವಿಧಾನ) ಆರಂಭದಿಂದಲೂ ಇದೆ. ಆದರೆ, ಅಂಬೇಡ್ಕರ್ ಅವರು ಕೂಡ ಶಾಶ್ವತವಾಗಿ ಮೀಸಲಾತಿ ಮುಂದುವರಿಯುವುದು ಒಳ್ಳೆಯದಲ್ಲ ಎಂದಿದ್ದಾರೆ. ಅದಕ್ಕೊಂದು ಕಾಲಮಿತಿ ಇರಬೇಕು. ಮೀಸಲಾತಿಯನ್ನು ಮುಂದುವರಿಸಿದರೆ ಪಂಥೀಯತೆಯನ್ನು ಉತ್ತೇಜಿಸದಂತೆ ಆಗುತ್ತದೆ” ಎಂದಿದ್ದರು.

2. ಕೆ.ಎನ್. ಗೋವಿಂದಾಚಾರ್ಯರ ಹೇಳಿಕೆ

2016ರಲ್ಲಿ ‘ದಿ ವೈರ್‌’ಗೆ ನೀಡಿದ ಸಂದರ್ಶನದಲ್ಲಿ ಆರ್‌ಎಸ್‌ಎಸ್ ಮುಖಂಡ ಕೆ.ಎನ್. ಗೋವಿಂದಾಚಾರ್ಯ ಅವರು ಸಂವಿಧಾನಕ್ಕೆ ಹೊಸ ಚೌಕಟ್ಟನ್ನು ರಚಿಸುವ ಬಗ್ಗೆ ಮಾತನಾಡಿದ್ದರು. ನಿರ್ದಿಷ್ಟವಾಗಿ ಮೀಸಲಾತಿಯು ಸ್ವಲ್ಪಮಟ್ಟಿಗೆ ಸಹಾಯ ಮಾಡಬಹುದು. ಅದು ಭಾವನಾತ್ಮಕವಾಗಿ ಮುಖ್ಯವಾಗಿದ್ದರೂ, “ಜನರಿಗೆ ಸಹಾಯ ಮಾಡಲು ಇನ್ನೇನು ಮಾಡಬಹುದು ಎಂಬುದನ್ನು ನಾವು ಚರ್ಚಿಸಬೇಕು” ಎಂದಿದ್ದರು.

“ನಮ್ಮ ಸಂವಿಧಾನವು ತುಂಬಾ ಅಸ್ಪಷ್ಟವಾಗಿದೆ, ನಿರ್ದಿಷ್ಟವಾಗಿಲ್ಲ. ಪಾಶ್ಚಿಮಾತ್ಯ ತತ್ವಗಳನ್ನು ಮುಂದುವರಿಸುತ್ತಿದೆ. ಇದು ವ್ಯಕ್ತಿ-ಕೇಂದ್ರಿತವಾಗಿದೆ. ವ್ಯಕ್ತಿಯ ದೈಹಿಕ ಯೋಗಕ್ಷೇಮದ ಮೇಲೆ ಕೇಂದ್ರೀಕೃತವಾಗಿದೆ. ನಮ್ಮ ನಾಗರಿಕತೆಯು 4,000-5,000 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ” ಎನ್ನುತ್ತಾ ಹೊಸ ಸಂವಿಧಾನ ಬೇಕೆಂದು ಸಮರ್ಥಿಸಲು ಯತ್ನಿಸಿದ್ದರು.

3. ಎಂ.ಜಿ. ವೈದ್ಯ ಹೇಳಿಕೆ

ಆರ್‌ಎಸ್‌ಎಸ್ ವಿಚಾರಗಳ ಪ್ರತಿಪಾದಕ ಎಂ.ಜಿ. ವೈದ್ಯ ಅವರು 2015ರಲ್ಲಿ ‘ದಿ ಹಿಂದೂ’ ಜೊತೆ ಮಾತನಾಡುತ್ತಾ, “ಮೀಸಲಾತಿ ರದ್ದುಗೊಳಿಸಬೇಕು” ಎಂದಿದ್ದರು. “ಈಗ ಜಾತಿ ಆಧಾರಿತ ಮೀಸಲಾತಿ ಅಗತ್ಯವಿಲ್ಲ, ಏಕೆಂದರೆ ಯಾವುದೇ ಜಾತಿ ಹಿಂದುಳಿದಿಲ್ಲ. ಹೆಚ್ಚೆಂದರೆ, ಇದನ್ನು ಎಸ್‌ಸಿ, ಎಸ್‌ಟಿಗಳಿಗೆ ಮುಂದುವರಿಸಿ, ಆದರೆ 10 ವರ್ಷಗಳವರೆಗೆ ಮಾತ್ರ. ಅದರ ನಂತರ ಜಾತಿ ಆಧಾರಿತ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು” ಎಂದು ಆಗ್ರಹಿಸಿದ್ದರು.

“ಜಾತಿ ಆಧಾರಿತ ಮೀಸಲಾತಿಯು ಜಾತಿಯನ್ನು ನಿರ್ಮೂಲನೆ ಮಾಡುವ ಬದಲು ಬಲಪಡಿಸುತ್ತದೆ” ಎಂದು ಅಭಿಪ್ರಾಯ ತಾಳಿದ್ದರು.

4. ಮೋಹನ್ ಭಾಗವತ್ ಹೇಳಿಕೆ

ಸ್ವತಃ ಭಾಗವತ್ ಅವರೇ ಆಡಿದ್ದ ಮಾತುಗಳು ದಾಖಲಾಗಿವೆ. “ಮೀಸಲಾತಿ ನೀತಿಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಆದ್ದರಿಂದ ಮೀಸಲಾತಿಯನ್ನು ಮರುಪರಿಶೀಲನೆ ಮಾಡಬೇಕು” ಎಂದು 2015ರಲ್ಲಿ ಹೇಳಿದ್ದರು.

“ಇಡೀ ರಾಷ್ಟ್ರದ ಹಿತಾಸಕ್ತಿಗಾಗಿ ಪ್ರಾಮಾಣಿಕವಾಗಿ ಕಾಳಜಿ ವಹಿಸುವ ಮತ್ತು ಸಾಮಾಜಿಕ ಸಮಾನತೆಗೆ ಬದ್ಧವಾಗಿರುವ ಜನರ ಸಮಿತಿಯನ್ನು ರಚಿಸಿ, ಯಾವ ವರ್ಗಗಳಿಗೆ ಮೀಸಲಾತಿ ಬೇಕು ಮತ್ತು ಎಷ್ಟು ಸಮಯದವರೆಗೆ ಇರಬೇಕು ಎಂದು ಅವರು ನಿರ್ಧರಿಸಬೇಕು” ಎನ್ನುತ್ತಾರೆ ಭಾಗವತ್‌. ಇದನ್ನು ’ದಿ ಹಿಂದೂ’ ವರದಿ ಮಾಡಿತ್ತು. “ಸ್ವಾಯತ್ತ ಆಯೋಗಗಳಂತಹ ರಾಜಕೀಯೇತರ ಸಮಿತಿಯು ಅನುಷ್ಠಾನ ಪ್ರಾಧಿಕಾರವಾಗಿರಬೇಕು; ಪ್ರಾಮಾಣಿಕತೆ ಮತ್ತು ಸಮಗ್ರತೆಗಾಗಿ ಸಮಿತಿಯನ್ನು ರಾಜಕೀಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು” ಎಂದು ತಿಳಿಸಿದ್ದರು.

ಇದು ಆರ್‌ಎಸ್‌ಎಸ್‌ ಪರಿವಾರ ಮೀಸಲಾತಿಯ ಕುರಿತು ಹೊಂದಿರುವ ಧೋರಣೆ. ಮೀಸಲಾತಿಯಿಂದ ಜಾತಿ ವ್ಯವಸ್ಥೆ ಬಲವಾಯಿತು ಎನ್ನುವವರು ಶತಮಾನಗಳ ಕಾಲ ಬೇರು ಬಿಟ್ಟಿರುವ ಜಾತಿ ಅಸಮಾನತೆಗಳ ಬಗ್ಗೆ ಮೌನವಾಗಿರುತ್ತಾರೆ. ಸಂವಿಧಾನ ಬದಲಿಸುತ್ತೇವೆ ಎನ್ನುವ ಜನರು ಆರ್‌ಎಸ್‌ಎಸ್‌ ಗರಡಿಯಲ್ಲಿ ಪಳಗಿದವರೇ ಆಗಿರುವುದು ಕಾಕತಾಳೀಯ. ಇಂತಹ ಹೇಳಿಕೆ ನೀಡುವ ಕೆಲವರಿಗೆ ಬಿಜೆಪಿ ಟಿಕೆಟ್ ಕೂಡ ನೀಡಿದೆ. ನಿಜಕ್ಕೂ ಆರ್‌ಎಸ್‌ಎಸ್ ಮೀಸಲಾತಿ ಮುಂದುವರಿಕೆಯ ಬಗ್ಗೆ ಪ್ರಾಮಾಣಿಕ ಮಾತುಗಳನ್ನು ಆಡುತ್ತಿದೆಯೇ ಎಂಬುದನ್ನು ನಾವೀಗ ಯೋಚಿಸಬೇಕಿದೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಬಿಹಾರದಲ್ಲಿ ಒಂದು ಮತವನ್ನೂ ಕದಿಯಲು ನಾವು ಬಿಡಲ್ಲ: ರಾಹುಲ್ ಗಾಂಧಿ

ಮತಗಳನ್ನು ಕದಿಯಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿದೆ ಎಂದು...

Download Eedina App Android / iOS

X