ಎನ್‌ಡಿಎ ಅಧಿಕಾರಕ್ಕೆ ಬಂದಾಗಿನಿಂದ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಅರಾಜಕತೆಯ ಬಗ್ಗೆ ರಾಷ್ಟ್ರದ ಗಮನ ಸೆಳೆಯಲು ಜುಲೈ 24ರಂದು ದೆಹಲಿಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಶಾಂತಿಯುತ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಮುಖ್ಯಮಂತ್ರಿ, ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.
ಆಂಧ್ರದಲ್ಲಿ ಟಿಡಿಪಿ ನೇತೃತ್ವದ ಸರ್ಕಾರ ರಚನೆ ಮಾಡಿದಾಗಿನಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಈ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಸಮಯ ಕೇಳಲಾಗಿದೆ ಎಂದು ರೆಡ್ಡಿ ಹೇಳಿದ್ದಾರೆ.
“ನಾವು ಜುಲೈ 24 ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ. ಎನ್ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಸರ್ಕಾರ ರಚನೆಯಾದ 45 ದಿನಗಳಲ್ಲಿ ಆಂಧ್ರಪ್ರದೇಶವನ್ನು ಅರಾಜಕತೆ ಪೀಡಿತ ರಾಜ್ಯವನ್ನಾಗಿ ಮಾಡಲಾಗಿದೆ. ಈ ಬಗ್ಗೆ ರಾಷ್ಟ್ರದ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತಿದ್ದಾರೆ” ಎಂದು ರೆಡ್ಡಿ ತಿಳಿಸಿದ್ದಾರೆ.
“ಟಿಡಿಪಿ, ಬಿಜೆಪಿ ಮತ್ತು ಜನಸೇನೆಯ ಮೈತ್ರಿ ಸರ್ಕಾರವು ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ. ನಾಯ್ಡು ಮುಖ್ಯಮಂತ್ರಿಯಾದ ಎರಡು ತಿಂಗಳಲ್ಲಿ 36 ರಾಜಕೀಯ ಕೊಲೆಗಳು ಮತ್ತು 300 ಕೊಲೆ ಯತ್ನಗಳು ನಡೆದಿವೆ. ಟಿಡಿಪಿಯ ಕಿರುಕುಳದಿಂದ 37 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ರೆಡ್ಡಿ ಆರೋಪಿಸಿದ್ದಾರೆ.