‘ಸ್ಕಿಲ್ ಡೆವಲಪ್ಮೆಂಟ್ ಹಗರಣ’ದಲ್ಲಿ ಭಾಗಿಯಾದ ಆರೋಪದಲ್ಲಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷರಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಇಂದು (ಸೆ.9 ಶನಿವಾರ) ಮುಂಜಾನೆ ನಂದ್ಯಾಲ್ ಪೊಲೀಸರು ಬಂಧಿಸಿದ್ದಾರೆ.
ಮಾಹಿತಿಯ ಪ್ರಕಾರ ‘ಸ್ಕಿಲ್ ಡೆವಲಪ್ಮೆಂಟ್ ಯೋಜನೆ’ಯಲ್ಲಿ ಚಂದ್ರಬಾಬು ನಾಯ್ಡು ಅವರು ಕೋಟ್ಯಂತರ ರೂಪಾಯಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ನಂದ್ಯಾಲ್ ರೇಂಜ್ ಡಿಐಜಿ ರಘುರಾಮಿ ರೆಡ್ಡಿ ಮತ್ತು ಅಪರಾಧ ತನಿಖಾ ದಳ (ಸಿಐಡಿ) ನೇತೃತ್ವದ ಪೊಲೀಸರ ತಂಡ ನಂದ್ಯಾಲ ಪಟ್ಟಣದಲ್ಲಿ ಆರ್‌ಕೆ ಫಂಕ್ಷನ್ ಹಾಲ್‌ನಲ್ಲಿ ಶಿಬಿರದಲ್ಲಿದ್ದ ಚಂದ್ರಬಾಬು ನಾಯ್ಡು ಅವರನ್ನು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ವಶಕ್ಕೆ ಪಡೆಯಲು ಬಂದಿದ್ದರು. ಈ ವೇಳೆ ನಾಯ್ಡು ಅವರು ತಮ್ಮ ಕಾರವಾನ್‌ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಟಿಡಿಪಿ ಕಾರ್ಯಕರ್ತರು ಪೊಲೀಸರಿಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಬೆಳಗ್ಗೆ 5.30 ರವರೆಗೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲು ಬಿಡಲಿಲ್ಲ. ಕೊನೆಗೆ ಬೆಳಗ್ಗೆ 6 ಗಂಟೆ ಸುಮಾರಿಗೆ ಪೊಲೀಸರು ನಾಯ್ಡು ವಾಹನದಿಂದ ಅವರನ್ನು ಕೆಳಗಿಳಿಸಿ ಬಂಧಿಸಿದ್ದು, ವಿಜಯವಾಡಕ್ಕೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರು ನೀಡಿದ ನೋಟಿಸ್ ಪ್ರಕಾರ, ಪೊಲೀಸರು ನಾಯ್ಡು ಅವರನ್ನು ಐಪಿಸಿ ಸೆಕ್ಷನ್ 120 (8), 166, 167, 418, 420, 465, 468, 471, 409, 201, 34 & 37 ಹಾಗೂ ಭ್ರಷ್ಟಾಚಾರ ತಡೆ ಕಾಯಿದೆ, 1988 ಇತರ ವಿಭಾಗಗಳಡಿ ಬಂಧಿಸಲಾಗಿದೆ.
ಅಲ್ಲದೇ ನೋಟಿಸ್ನಲ್ಲಿ ಜಾಮೀನು ರಹಿತ ಅಪರಾಧ, ಜಾಮೀನಿನ ಮೇಲೆ ಬಿಡುಗಡೆಯಾಗುವಂತಿಲ್ಲ ಎಂದು ತಿಳಿಸಲಾಗಿದೆ. ಆದರೆ “ನ್ಯಾಯಾಲಯದ ಮೂಲಕ ಮಾತ್ರ ಜಾಮೀನು ಪಡೆಯಬಹುದು” ಎಂದು ಸಿಐಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ ಧನುಂಜಯುಡು ತಿಳಿಸಿದ್ದಾರೆ.