ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಅಕ್ಕಿ ಬದಲು ಹಣ ನೀಡುವುದಾಗಿ ಘೋಷಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿಯು ರಾಜ್ಯದ ಜನರಿಗೆ ಸಿದ್ದರಾಮಯ್ಯ ಅವರು ಕೈಯಾರೆ ಕೊಟ್ಟ ಅಕ್ಕಿ ಶೂನ್ಯ ಎಂದು ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, “ಪುಕ್ಕಟೆ ಅಕ್ಕಿ ಗ್ಯಾರಂಟಿ ಕೊಡ್ತೀವಿ ಅಂತ ಚೀರಾಡುತ್ತಲೇ ಅಧಿಕಾರ ಹಿಡಿದ ಮಾನ್ಯ ಸಿದ್ದರಾಮಯ್ಯ ಅವರೇ, ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ನಾಡಿನ 4.2 ಕೋಟಿ ಜನರಿಗೆ ತಿಂಗಳಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ತಲುಪಿಸಿ ಹಸಿವು ನೀಗಿಸುತ್ತಿದ್ದಾರೆ. ಸ್ವಾಮೀ, ನೀವು ಕೊಟ್ಟ ಅಕ್ಕಿ ಎಷ್ಟು? ಶೂನ್ಯ. ರಾಜ್ಯದ ಜನರಿಗೆ ಹಾಕಿದ್ದು ಪಂಗನಾಮ” ಎಂದು ಕಿಡಿಕಾರಿದೆ.
ಮಹಿಳೆಯರ ಶಾಪ ಒಳ್ಳೆಯದಲ್ಲ ಎಚ್ಚರ
“ಸಿದ್ದರಾಮಯ್ಯ ಅವರೇ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಹೆಸರಲ್ಲಿ ಮಹಿಳೆಯರ ಕಿವಿ ಮೇಲೆ ಹೂವು ಇಡುವುದಕ್ಕಾಗಿ ಕಾಲಹರಣ ಮಾಡುವುದನ್ನು ಬಿಡಿ. ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಯಾವಾಗ? ಅಂಗನವಾಡಿ ಕಾರ್ಯಕರ್ತೆಯರ ವೇತನ ₹15 ಸಾವಿರ ಯಾವಾಗ? ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ₹8 ಸಾವಿರ ಯಾವಾಗ? ಪೊಲೀಸ್ ಇಲಾಖೆಯಲ್ಲಿ ಶೇ.33ರಷ್ಟು ಮಹಿಳೆಯರ ನೇಮಕಾತಿ ಯಾವಾಗ? ಮೀನುಗಾರ ಮಹಿಳೆಯರಿಗೆ ₹3 ಲಕ್ಷ ವರೆಗೆ ಬಡ್ಡಿರಹಿತ ಸಾಲ ಯಾವಾಗ? ನಾರಿ ಮುನಿದರೆ ಮಾರಿ ನೆನಪಿರಲಿ” ಮಹಿಳೆಯರ ಶಾಪ ಒಳ್ಳೆಯದಲ್ಲ ಎಚ್ಚರ” ಎಂದು ಬಿಜೆಪಿ ಟ್ವೀಟ್ ಮಾಡಿದೆ.