ಎಫ್‌ಸಿಐ ಗೋದಾಮಿನಲ್ಲಿ 8 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇಟ್ಟುಕೊಂಡು ರಾಜ್ಯಕ್ಕೆ ಪೂರೈಕೆ ಮಾಡುವ ಬಗ್ಗೆ ಸಮ್ಮತಿ ಪತ್ರ ಕೊಟ್ಟು, ಅಕ್ಕಿ ನೀಡದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ರಾಜ್ಯ ಬಿಜೆಪಿ ನಾಯಕರು ರಾಜ್ಯದ ಜನತೆಗೆ ಉತ್ತರಿಸಲಿ ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮದ್ ಖಾನ್ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ತಲಾ 10 ಕೆ.ಜಿ ಅಕ್ಕಿ ಕೊಡುವ ಗ್ಯಾರಂಟಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಎಷ್ಟೇ ಅಸಹಕಾರ ತೋರಿದರೂ ನಾವು ನಮ್ಮ ಬದ್ಧತೆ ತೋರಿದ್ದೇವೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಅಕ್ಕಿ ಪೂರೈಕೆ ಮಾಡದೆ ತೊಂದರೆ ನೀಡಿದರೂ ಬಿಪಿಎಲ್ ಕುಟುಂಬಗಳಿಗೆ ಅಕ್ಕಿ ಬದಲು ಕೆ.ಜಿಗೆ 34 ರೂ. ನಂತೆ ಹಣ ನೀಡಲು ಸಂಪುಟ ಸಭೆ ನಿರ್ಣಯ ಮಾಡಿದ್ದು, ಇದು ಕಾಂಗ್ರೆಸ್ ನ ಜನಪರ ನಿಲುವಿಗೆ ಸಾಕ್ಷಿ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ 10 ಕೆ.ಜಿ ಅಕ್ಕಿ ಕೊಡುವ ವಾಗ್ದಾನ ಪೂರೈಸಿಯೇ ತೀರುತ್ತದೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಈಗಲಾದರೂ ಕೇಂದ್ರ ಬಿಜೆಪಿ ಸರ್ಕಾರ ಜನವಿರೋಧಿ ಧೋರಣೆ ಕೈ ಬಿಟ್ಟು ರಾಜ್ಯದ ಜನಪರ ಯೋಜನೆಗೆ ಸಹಕಾರ ನೀಡಲಿ ಎಂದು ಆಶಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅನ್ನಭಾಗ್ಯ ಯೋಜನೆ | 10 ಕೆ.ಜಿ ಅಕ್ಕಿಯ ಹಣವನ್ನು ಜನರ ಖಾತೆಗೆ ವರ್ಗಾಯಿಸಿ: ಬಿಜೆಪಿ
ಸಂಪುಟ ಸಭೆಯಲ್ಲಿ ರಾಜ್ಯದ ಬಡವರಿಗೆ 5 ಕೆ.ಜಿ ಉಚಿತ ಅಕ್ಕಿ ಮತ್ತು ಇನ್ನುಳಿದ 5 ಕೆ.ಜಿಗೆ ಅಕ್ಕಿ ಬದಲಾಗಿ ಕೆ.ಜಿಗೆ 34 ರೂ.ಗಳಂತೆ ಹಣ ಸಿಗಲಿದೆ. ಆದಷ್ಟು ಬೇಗ ಇನ್ನುಳಿದ 5 ಕೆ.ಜಿ ಅಕ್ಕಿ ಕೂಡ ಕೊಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.