”ಮಾಲಿನ್ಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ದೀಪಾವಳಿ ದಿನದಂದು ಸಾಕಷ್ಟು ಪಟಾಕಿ ಹೊಡೆಯಿರಿ” ಎಂದು ಬಿಜೆಪಿ ನಾಯಕ ಅಣ್ಣಾಮಲೈ ಜನರಿಗೆ ಪ್ರಚೋದನೆಯ ಕರೆ ನೀಡಿದ್ದಾರೆ.
ಏನಿದು ಒಬ್ಬ ಮಾಜಿ ಪೊಲೀಸ್ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷನಾಗಿರುವ ಅಣ್ಣಾಮಲೈ ‘ಮಾಲಿನ್ಯವಾದರೂ ಪರವಾಗಿಲ್ಲ, ಪಟಾಕಿ ಹೊಡೆಯಿರಿ’ ಎಂದು ಹೇಳುತ್ತಾರೆಂದರೆ, ಏನರ್ಥ ಎಂದೆನ್ನಿಸಬಹುದು. ಅಣ್ಣಾಮಲೈ ಅವರು ಜನರ ಜೀವ-ಜೀವನ, ಆರೋಗ್ಯದ ಬಗ್ಗೆ ಕಾಳಜಿ ತೋರುವುದಕ್ಕಿಂತ ಪಟಾಕಿ ಉದ್ಯಮದ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿದ್ದಾರೆ. ಇದೇ ಅಲ್ವಾ ಬಿಜೆಪಿಗರ ಅಜೆಂಡಾ. ಬಿಜೆಪಿಗರ ಪ್ರಮುಖ ಗುರಿ; ಬಂಡವಾಳಶಾಹಿಗಳನ್ನ ಬೆಳೆಸಬೇಕು ಎಂಬುದೇ ಹೊರತು ಜನರ ಕಲ್ಯಾಣವಲ್ಲ.
ಅಣ್ಣಾಮಲೈ ಅವರು ಮಾಲಿನ್ಯವಾದರೂ ಪರವಾಗಿ, ಪಟಾಕಿ ಸಿಡಿಸಿರಿ ಎನ್ನುತ್ತಿದ್ದಾರೆ. ಇಲ್ಲಿ, ಮಾಲಿನ್ಯದ ವಿಚಾರ ಒಂದೆಡೆಯಾದರೆ, ಪಟಾಕಿ ಸಿಡಿಸುವುದರಿಂದ ಆಗುತ್ತಿರುವ ಅವಘಡಗಳು, ಆರೋಗ್ಯ ಸಮಸ್ಯೆಗಳು ಮತ್ತೊಂದೆಡೆ.
ದೀಪಾವಳಿ ಹಬ್ಬದ ಸಮಯದಲ್ಲಿ ದೇಶಾದ್ಯಂತ ಪಟಾಕಿ ಅವಘಡಗಳು ಸಂಭವಿಸಿರುವುದು ವರದಿಯಾಗಿದೆ. ಈ ವರ್ಷ ದೀಪಾವಳಿಗೂ ಮುನ್ನವೇ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಕಮ್ಮನಹಳ್ಳಿಯ 18 ವರ್ಷದ ಯುವಕ ಪಟಾಕಿ ಸಿಡಿಸುವುದನ್ನು ನೋಡುತ್ತಿರುವಾಗ ಬೆಂಕಿಯ ಕಿಡಿ ಆತನ ಕಣ್ಣಿಗೆ ತಗುಲಿ ಗಾಯವಾಗಿದೆ.
ಪಟಾಕಿ ಅವಘಡಗಳಿಂದ ಬೆಂಗಳೂರಿನ ಕಣ್ಣಿನ ಆಸ್ಪತ್ರೆಗಳಲ್ಲಿ ವರದಿಯಾಗುವ ಪಟಾಕಿ ಗಾಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿವೆ. ಹೀಗಾಗಿ, ದೀಪಾವಳಿ ಹಬ್ಬದ ಸಮಯದಲ್ಲಿ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಆದರೂ ಕೂಡ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯ ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪ್ರತಿ ಬಾರಿಯೂ ಹಬ್ಬದ ಸಮಯದಲ್ಲಿ ನೂರಾರು ಜನರು ಪಟಾಕಿ ದುರಂತಗಳಿಗೆ ತುತ್ತಾಗಿದ್ದಾರೆ.
ಕರ್ನಾಟಕದಲ್ಲಿ ಹಬ್ಬದ ಅವಧಿಯಲ್ಲಿ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ 2020ರಲ್ಲಿ 23, 2021ರಲ್ಲಿ 33, 2022 ಹಾಗೂ 2023ರಲ್ಲಿ ತಲಾ 40 ಪ್ರಕರಣಗಳು ವರದಿಯಾಗಿದ್ದವು. ನಾರಾಯಣ ನೇತ್ರಾಲಯದಲ್ಲಿ ಕ್ರಮವಾಗಿ 24, 17, 45 ಹಾಗೂ 58 ಮಂದಿ ಪಟಾಕಿ ಗಾಯಕ್ಕೆ ಚಿಕಿತ್ಸೆ ಪಡೆದಿದ್ದರು. ಕಳೆದ ವರ್ಷ ಪಟಾಕಿ ಗಾಯಕ್ಕೆ ಸಂಬಂಧಿಸಿದಂತೆ ಮಿಂಟೊ ಆಸ್ಪತ್ರೆಗೆ ದಾಖಲಾದವರಲ್ಲಿ ಗಾಯದ ತೀವ್ರತೆಗೆ ಎಂಟು ಮಂದಿ ದೃಷ್ಟಿ ಕಳೆದುಕೊಂಡಿದ್ದರು. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 15ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದಿದ್ದರು. ನೇತ್ರಧಾಮ, ಡಾ. ಅಗರ್ವಾಲ್ಸ್ ಸೇರಿ ನಾನಾ ಕಣ್ಣಿನ ಆಸ್ಪತ್ರೆಗಳಲ್ಲಿಯೂ ಪ್ರಕರಣಗಳು ವರದಿಯಾಗಿದ್ದವು.
ಪಟಾಕಿ ಸಿಡಿಸುವವರ ಜತೆಗೆ ವೀಕ್ಷಿಸುವವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡು, ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಮಿಂಟೊದಲ್ಲಿ ಕಳೆದ ವರ್ಷ ಚಿಕಿತ್ಸೆ ಪಡೆದವರಲ್ಲಿ ಅರ್ಧದಷ್ಟು ಮಂದಿ ಪಟಾಕಿ ಸಿಡಿತ ವೀಕ್ಷಿಸುತ್ತಿರುವವರು, ಪಾದಚಾರಿಗಳು ಹಾಗೂ ವಾಹನ ಸವಾರರಾಗಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದವರಲ್ಲಿ 25 ಮಂದಿ ಸಿಡಿತ ವೀಕ್ಷಿಸುವ ವೇಳೆ ಗಾಯಗೊಂಡವರಾಗಿದ್ದಾರೆ.
ಇನ್ನು ಮಾರುಕಟ್ಟೆಯಲ್ಲಿ ಹಸಿರು ಪಟಾಕಿಗಳು ಅಂತ ನಾನಾ ರೀತಿಯ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ಖರೀದಿಸುವ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದೆ ಪಟಾಕಿ ಸಿಡಿಸುವುದರಿಂದ ಅಪಾಯವನ್ನು ತಂದೊಡ್ಡಿಕೊಳ್ಳುತ್ತಿದ್ದಾರೆ. ಹಾಗಾಗಿ, ಪರವಾನಗಿ ಪಡೆದ ಮಳಿಗೆಗಳಲ್ಲಿ ಹಸಿರು ಪಟಾಕಿ ಬಗ್ಗೆ ಖಚಿತಪಡಿಸಿಕೊಂಡು ಖರೀದಿಸಬೇಕು. ಆದಾಗ್ಯೂ, ಹಸಿರು ಪಟಾಕಿಗಳಲ್ಲಿ ರಾಸಾಯನಿಕಗಳ ಬಳಕೆ ಪ್ರಮಾಣ, ಮಾಲಿನ್ಯ ಪ್ರಮಾಣ ಕಡಿಮೆಯಾದರೂ ಸ್ಫೋಟ ಮತ್ತು ಶಬ್ದದ ತೀವ್ರತೆ ಸಾಮಾನ್ಯ ಪಟಾಕಿಗಳಂತೆ ಇರುತ್ತದೆ. ಪಟಾಕಿಗಳು ಸ್ಫೋಟಗೊಳ್ಳಲು ಬಳಸುವ ರಾಸಾಯನಿಕಗಳು ಅಪಾಯಕಾರಿಯಾಗಿದ್ದು ಅನಿರೀಕ್ಷಿತ ಸಿಡಿತಗಳು ಹಾಗೂ ಬೆಂಕಿಯ ಕಿಡಿಗಳು ಕಣ್ಣಿಗೆ ಹಾನಿ ಮಾಡಲಿವೆ ಎಂದು ವೈದ್ಯರು ಪ್ರತಿ ವರ್ಷ ಹೇಳುತ್ತಲೇ ಬಂದಿದ್ದಾರೆ.
ಇನ್ನು, ಪಟಾಕಿ ಅಂಗಡಿಗೆ ಬೆಂಕಿ ತಗುಲಿ ಹಲವು ಜನ ಪ್ರಾಣತೆತ್ತಿದ್ದಾರೆ. ದೀಪಾವಳಿ ನಿಮಿತ್ತ ಮಾರುಕಟ್ಟೆಗಳಲ್ಲಿ ಪಟಾಕಿ ಅಂಗಡಿಗಳನ್ನೂ ತೆರೆಯಲಾಗಿದೆ. ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಪಟಾಕಿ ಅಂಗಡಿಗೆ ಬೆಂಕಿ ತಗುಲಿದೆ. ಈ ಬೆಂಕಿಯಿಂದಾಗಿ ರೆಸ್ಟೋರೆಂಟ್ ಮತ್ತು 7-9 ಕಾರುಗಳು ಸುಟ್ಟುಹೋಗಿವೆ. ಮಹಿಳೆಯೊಬ್ಬರು ಗಾಯಗೊಂಡಿರುವ ಸುದ್ದಿಯೂ ಇದೆ. ಇನ್ನು ಕಳೆದ ವರ್ಷ ಬೆಂಗಳೂರಿನ ಅತ್ತಿಬೆಲೆಯಲ್ಲಿ ಪಟಾಕಿ ಸ್ಫೋಟದಲ್ಲಿ 17 ಜನರು ಮೃತಪಟ್ಟಿದ್ದರು. ಪಟಾಕಿ ಹಚ್ಚುವಾಗ ಅವಘಡಗಳು ಸಂಭವಿಸುತ್ತವೆ. ಅದಕ್ಕಾಗಿ ಮುನ್ನೆಚರಿಕೆ ವಹಿಸಬೇಕು. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಮಿಂಟೋ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ 35 ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ. ತುರ್ತು ಸಹಾಯವಾಣಿಯನ್ನು ಕೂಡ ತೆರೆಯಲಾಗಿದೆ.
ಇನ್ನು ವಾಯುಮಾಲಿನ್ಯದ ವಿಚಾರಕ್ಕೆ ಬರೋದಾದ್ರೆ, ದೀಪಾವಳಿ ಟೈಮ್‌ನಲ್ಲಿ ರಾಜಧಾನಿಯ ಗಲ್ಲಿಗಲ್ಲಿಯಲ್ಲಿಯೂ ಪಟಾಕಿ ಅಬ್ಬರ ಜೋರಾಗಿರುತ್ತದೆ. ಪಟಾಕಿ ಹಬ್ಬ ಮುಗಿದ ಕೇವಲ ಮೂರೇ ದಿನಕ್ಕೆ ಬೆಂಗಳೂರಿನ ಗಾಳಿಯ ಗುಣಮಟ್ಟ ಊಹೆಗೂ ಮೀರಿ ಕಲುಷಿತಗೊಳ್ಳುತ್ತದೆ. ನಗರದಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತದೆ. ಹಬ್ಬಕ್ಕೆ ಸಿಡಿದ ಬಗೆಬಗೆಯ ಪಟಾಕಿಗಳು ಗಾಳಿಯನ್ನೇ ಮಲಿನ ಮಾಡುತ್ತದೆ.
ದೀಪಾವಳಿ ಮುಗಿದ ನಂತರ ಆಸ್ತಮಾ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಪಟಾಕಿಯಿಂದ ಹೊರಹೊಮ್ಮುವ ರಾಸಾಯನಿಕ ಮಿಶ್ರಿತ ಹೊಗೆ ಗಾಳಿಯಲ್ಲಿ ಸೇರುತ್ತದೆ. ಇದರ ಉಸಿರಾಟದಿಂದ ಅಸ್ತಮಾ, ಗಂಭೀರ ಶ್ವಾಸಕೋಶ ಕಾಯಿಲೆ, ಸೈನಟಿಸ್, ಅಲರ್ಜಿ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಭಾರತದ 10 ಪ್ರಮುಖ ಮಹಾನಗರಗಳಲ್ಲಿ ವರ್ಷಕ್ಕೆ ಸುಮಾರು 33,000 ಮಂದಿ ವಾಯು ಮಾಲಿನ್ಯದ ಕಾರಣಕ್ಕೆ ಸಾವಿಗೀಡಾಗುತ್ತಿದ್ದಾರೆಂದು ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ಪ್ರತಿ ಕ್ಯುಬಿಕ್ ಮೀಟರ್‌ನಲ್ಲಿ 15 ಮೈಕ್ರೋಗ್ರಾಮ್ ಗಿಂತಲೂ ಉತ್ತಮವಾಗಿದೆ. ಆದರೆ, ಭಾರತದ ನಗರಗಳಲ್ಲಿ ವಿಪರೀತ ವಾಯುಮಾಲಿನ್ಯ ಆಗುತ್ತಿದ್ದು, ಇಲ್ಲಿನ ಜನರನ್ನು ವಾಯುಮಾಲಿನ್ಯದ ಅಪಾಯದಿಂದ ಪಾರು ಮಾಡಲು ಭಾರತ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದು ವರದಿ ತಿಳಿಸಿದೆ.
ಬೆಂಗಳೂರು, ಅಹಮದಾಬಾದ್, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ಪುಣೆ, ಶಿಮ್ಲಾ ಮತ್ತು ವಾರಾಣಸಿ ಮಹಾನಗರಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. ಇಷ್ಟೂ ನಗರಗಳಲ್ಲಿ ಪ್ರತಿವರ್ಷ 33 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪೂರ್ಣ ಕುಂಭ ಮೇಳಕ್ಕೆ ಲಿಂಗಾಯತರಿಗೆ ವಿಶೇಷ ಆಹ್ವಾನ: ಯೋಗಿ ಆದಿತ್ಯನಾಥ್ ಸಲಹೆಗೆ ಆರೆಸ್ಸೆಸ್ ಸಮ್ಮತಿ
ಭಾರತದ 10 ನಗರಗಳು ವಾಯುಮಾಲಿನ್ಯದಿಂದ ಭಾರೀ ಸಮಸ್ಯೆ ಎದುರಿಸುತ್ತಿವೆ. ದಿಲ್ಲಿಯಲ್ಲೇ ವಾಯುಮಾಲಿನ್ಯಕ್ಕೆ ಅತಿ ಹೆಚ್ಚು ಸಾವು-ನೋವುಗಳಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಿಂತ ಇಲ್ಲಿನ ವಾಯುವಿನ ಗುಣಮಟ್ಟ ಅತ್ಯಂತ ಕೆಳಸ್ತರದಲ್ಲಿದ್ದು ವರ್ಷಕ್ಕೆ 11 ಸಾವಿರ ಮಂದಿ ಸಾವಿಗೀಡಾಗುತ್ತಿದ್ದಾರೆ. 2ನೇ ಸ್ಥಾನದಲ್ಲಿರುವುದು ಮುಂಬೈನಲ್ಲಿ ವರ್ಷಕ್ಕೆ ಸುಮಾರು 5,100 ಮಂದಿ ವಾಯುಮಾಲಿನ್ಯ ಸಂಬಂಧಿ ಕಾಯಿಲೆಗಳಿಂದಾಗಿ ಕೊನೆಯುಸಿರೆಳೆಯುತ್ತಿದ್ದಾರೆ.
ಕೋಲ್ಕತಾದಲ್ಲಿ 4,700 ಮಂದಿ, ಚೆನ್ನೈನಲ್ಲಿ 2,900 ಮಂದಿ ಸಾವಿಗೀಡಾಗುತ್ತಿದ್ದಾರೆ. 5ನೇ ಸ್ಥಾನದಲ್ಲಿ ಉದ್ಯಾನ ನಗರಿ ಬೆಂಗಳೂರು ಇದೆ. ಇಲ್ಲಿ ವರ್ಷಕ್ಕೆ 2100 ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ದೀಪಾವಳಿ ಸಮಯದಲ್ಲಿ ಪಟಾಕಿ ಹಚ್ಚಿದ್ದರೆ, ಈ ವಾಯುಮಾಲಿನ್ಯ ಇನ್ನು ಎಷ್ಟು ವಿಸ್ತರಿಸಬಹುದು ಎಂಬುದನ್ನ ನೀವು ಅಂದಾಜಿಸಬಹುದು..
ದೀಪಾವಳಿಯನ್ನ ಇಡೀ ದೇಶದ ಜನ ಆಚರಣೆ ಮಾಡುತ್ತಾರೆ. ಇಂತಹ ಸಮಯದಲ್ಲಿ ಎಲ್ಲರೂ ದೀಪವನ್ನ ಬೆಳಗುವ ಮೂಲಕ ದೀಪಾವಳಿಯನ್ನ ಆಚರಿಸಬೇಕು. ಪಟಾಕಿಯನ್ನ ಹೊಡೆದು ಶಬ್ಧ ಮಾಲಿನ್ಯ, ವಾಯು ಮಾಲಿನ್ಯ, ಆರೋಗ್ಯ ಸಮಸ್ಯೆ, ಮಾಡಿಕೊಳ್ಳಬೇಡಿ ಎಂದು ಜನರಿಗೆ ತಿಳಿವಳಿಕೆ ಹೇಳಬೇಕಾದ ರಾಜಕಾರಣಿಗಳು ಪರಿಸರ ಹೋರಾಟಗಾರರ ‘ಪಟಾಕಿ ನಿಷೇಧ’ದ ಅಭಿಯಾನದ ನಡುವೆಯೇ ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಇದಕ್ಕೆ ವ್ಯತಿರಿಕ್ತವಾಗಿ ಸಾಕಷ್ಟು ಪಟಾಕಿ ಹೊಡೆಯುವಂತೆ ಕರೆ ನೀಡಿದ್ದಾರೆ.
”ವಾತಾವರಣಕ್ಕೆ ಇಂಗಾಲ ಹೊರಸೂಸುವಿಕೆಯಲ್ಲಿ ಭಾರತ 125ನೇ ಸ್ಥಾನದಲ್ಲಿದೆ. ಯುಎಸ್ 16 ಮತ್ತು ಚೀನಾ 25ನೇ ಸ್ಥಾನದಲ್ಲಿವೆ. ಆದರೆ, ನಾವು ಕೇವಲ ಒಂದು ದಿನ ಪಟಾಕಿ ಸಿಡಿಸುವುದನ್ನು ಪ್ರಮುಖ ವಿಷಯವಾಗಿ ಚರ್ಚಿಸುತ್ತಿದ್ದೇವೆ. ಸುಮಾರು 8 ಲಕ್ಷ ಜನ ನೇರವಾಗಿ ಮತ್ತು ಪರೋಕ್ಷವಾಗಿ ಪಟಾಕಿ ಉದ್ಯಮದೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರು ನಮ್ಮ ಸಂತೋಷಕ್ಕಾಗಿ ಸಾಕಷ್ಟು ಸವಾಲುಗಳ ನಡುವೆ ಪಟಾಕಿಗಳನ್ನು ತಯಾರಿಸುತ್ತಾರೆ. ನಾವು ಅವರ ಸಂತೋಷಕ್ಕಾಗಿ ಪಟಾಕಿಗಳನ್ನು ಖರೀದಿಸಿ ಏಕೆ ಸಿಡಿಸಬಾರದು” ಎಂದು ಅವರು ಕೇಳಿದ್ದಾರೆ.
”ಒಂದು ದಿನ ಪಟಾಕಿಗಳನ್ನು ಹಚ್ಚುವುದರಿಂದ ಏನೂ ಆಗುವುದಿಲ್ಲ. ಇದರಿಂದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟದ ಮೂಲಕ ಸಾಲ ತೀರಿಸುವ ಕನಸು ಕಾಣುತ್ತಿರುವ ಲಕ್ಷಾಂತರ ಸಣ್ಣ ವ್ಯಾಪಾರಿಗಳ ಕನಸು ನನಸಾಗುತ್ತದೆ” ಎಂದು ಹೇಳಿರುವ ಅಣ್ಣಾಮಲೈ ಅವರು ಜನರ ಜೀವನದ ಬಗ್ಗೆ ಇಲ್ಲಿಯವರೆಗೂ ಆದ ಇಷ್ಟೊಂದು ಘಟನೆಗಳ ಬಗ್ಗೆ ಮರೆತಂದಿದೆ. ಅಲ್ಲದೇ, ಬಂಡವಾಳಶಾಹಿಗಳನ್ನ ಬೆಳೆಸಲು ವಾಯುಮಾಲಿನ್ಯ ಆದರೂ ಪರವಾಗಿಲ್ಲ ಪಟಾಕಿ ಹೊಡೆಯಿರಿ ಎಂದು ಹೇಳುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ.
ಇಂಥವಕೆಲ್ಲ ಶಿಕ್ಷಣ ಬೇರೆ ಕೇಡು,,ಐ ಪಿ ಎಸ್ ಅದ್ಯಾವನು ಕೊಟ್ಟನೋ ಇವನಿಗೆ,,, ಬಹುಶಃ ಆ ಪಕ್ಷದ ಮಹಿಮೆ ಇರಬೇಕು,, ಉನ್ನತ ಶಿಕ್ಷಣ ಪಡೆದ ಶೂದ್ರ ಮುಂಡೇವುಗಳನ್ನು ಇಂಥಾ ಅವಿವೇಕ ಮಾಡಿಸಿ ಮುಂಡಾ ಮುಂಚೆ ಬಿಡುವರು,,