ತಮಿಳುನಾಡಿನಲ್ಲಿ ಬಿಜೆಪಿ-ಎಐಡಿಎಂಕೆ ಮೈತ್ರಿಯ ಹಾದಿ ಮತ್ತು ಜಾತಿ ಸಮೀಕರಣವನ್ನು ‘ಸುಗಮಗೊಳಿಸಲು’ ಕೆ ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಆ ಹುದ್ದೆಗೆ ನೈನಾರ್ ನಾಗೇಂದ್ರನ್ ಅವರನ್ನು ನೇಮಿಸಲಾಗಿದೆ. ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿರುವ ಅಣ್ಣಾಮಲೈ ಅವರ ಭವಿಷ್ಯದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಅವರಿಗೆ ಪಕ್ಷದಲ್ಲಿ ‘ರಾಷ್ಟ್ರೀಯ ಸ್ಥಾನ’ ನೀಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಇತ್ತೀಚೆಗೆ ತಮಿಳುನಾಡಿಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿರ್ಗಮಿತ ಅಧ್ಯಕ್ಷ ಅಣ್ಣಾಮಲೈ ಅವರನ್ನು ಶ್ಲಾಘಿಸಿದರು. “ಪಕ್ಷದ ರಾಷ್ಟ್ರೀಯ ಕಾರ್ಯನಿರ್ವಹಣೆಯಲ್ಲಿ ಅಣ್ಣಾಮಲೈ ಅವರ ಶ್ರಮ-ಕೌಶಲ್ಯಗಳನ್ನು ಬಿಜೆಪಿ ಬಳಸಿಕೊಳ್ಳಲಿದೆ” ಎಂದು ಅಮಿತ್ ಶಾ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಅಂತಹ ಪ್ರಬಲ ನೆಲೆಯನ್ನು ಹೊಂದಿರದ ಬಿಜೆಪಿ, ಕೆಲವು ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವಲ್ಲಿ ಅಣ್ಣಾಮಲೈ ಅವರ ಪಾತ್ರವಿದೆ ಎಂದು ಬಿಜೆಪಿಗರು ಹೇಳುತ್ತಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯ ಮತ ಪಾಲು ಕೇವಲ 3% ಇತ್ತು.ಅಣ್ಣಾಮಲೈ ನೇತೃತ್ವದಲ್ಲಿ 2024ರ ಚುನಾವಣೆಯಲ್ಲಿ ಅದು 11%ಗೆ ಏರಿಕೆಯಾಗಿದೆ. ಬಿಜೆಪಿಯ ಮತ ಹಂಚಿಕೆ ಹೆಚ್ಚಿಸುವಲ್ಲಿ ಅಣ್ಣಾಮಲೈ ಪಾತ್ರ ಮುಖ್ಯವಾದದ್ದು ಎಂದು ಪಕ್ಷವು ಭಾವಿಸಿದೆ.
ಈ ವರದಿ ಓದಿದ್ದೀರಾ?: ಭ್ರಷ್ಟಾಚಾರ ನಿಗ್ರಹಕ್ಕೆ ಸಾಂಸ್ಥಿಕ ಬದಲಾವಣೆಯೊಂದೇ ದಾರಿಯೇ?
ಐಪಿಎಸ್ ಅಧಿಕಾರಿ ಹುದ್ದೆಯನ್ನು ತೊರೆದು, ಬಿಜೆಪಿ ಸೇರಿ ರಾಜಕಾರಣ ಆರಂಭಿಸಿದ ಅಣ್ಣಾಮಲೈ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಅಥವಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಬಹುದು. ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಸರ್ಕಾರದ ಭಾಗವಾಗಿಯೂ ನೇಮಿಸಿಕೊಳ್ಳಬಹುದು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಆದಾಗ್ಯೂ, ಕೇಂದ್ರ ಸಚಿವ ಸಂಪುಟ ಪುನರ್ರಚನೆ ಮಾಡುವ ಬಗ್ಗೆ ಬಿಜೆಪಿಯಲ್ಲಿ ಸದ್ಯಕ್ಕೆ ಯಾವುದೇ ಯೋಜನೆಗಳಿಲ್ಲ. ಸದ್ಯ, ತಮಿಳುನಾಡಿನಿಂದ ಒಬ್ಬ ಸಚಿವ ಎಲ್ ಮುರುಗನ್ ಇದ್ದಾರೆ. ಹೀಗಾಗಿ, ಅಣ್ಣಾಮಲೈ ಅವರು ಹೆಚ್ಚು ದಿನ ಕಾಯಬೇಕಾಗಬಹುದು” ಎಂದು ಅವರು ಹೇಳಿದ್ದಾರೆ.