ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಇತ್ತೀಚೆಗಷ್ಟೇ ‘ಕರೆಂಟ್ ಕಳ್ಳ’ ಎಂಬ ಪೋಸ್ಟರ್ ವೈರಲ್ ಆಗಿತ್ತು. ಆಗ, ನಾನು ದಂಡ ಕಟ್ಟಿದ್ದೇನೆ. ನನ್ನನ್ನು ಕರೆಂಟ್ ಕಳ್ಳ ಎನ್ನುವುದನ್ನು ನಿಲ್ಲಿಸಿ ಎಂದು ಕುಮಾರಸ್ವಾಮಿ ಹೇಳಿದ್ದರು. ಇದೀಗ, ಮತ್ತೊಂದು ಪೋಸ್ಟರ್ ವೈರಲ್ ಆಗಿದ್ದು, ಬೆಂಗಳೂರಿನ ನಾನಾ ಭಾಗಗಳಲ್ಲಿ ಆ ಪೋಸ್ಟರ್‌ಅನ್ನು ಅಂಟಿಸಲಾಗಿದೆ.
ಬೆಂಗಳೂರಿನ ಶೇಷಾದ್ರಿಪುರ ರಸ್ತೆ, ರಾಜಾಜಿನಗರ ಸೇರಿದಂತೆ ವಿವಿಧೆಡೆ ಸಿನಿಮಾ ಮಾದರಿಯಲ್ಲಿ ಪೋಸ್ಟರ್ ಚಿತ್ರಿಸಿ, ಅಂಟಿಸಲಾಗಿದೆ. ‘ಪಿಕ್ಚರ್ ಇನ್ನೂ ಬಾಕಿ ಇದೆ’ ಎಂಬ ಶೀರ್ಷಿಕೆಯಲ್ಲಿ ಪೋಸ್ಟರ್ ನಿರ್ಮಿಸಲಾಗಿದೆ. ಪೋಸ್ಟರ್ ಅಂಟಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವುಗಳನ್ನು ಅಂಟಿಸಿದ ಕಿಡಿಗೇಡಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ.
ಅಂಟಿಸಲಾದ ಪೋಸ್ಟರ್‌ನಲ್ಲಿ, “ಕರೆಂಟ್ ಕಳ್ಳ ಖ್ಯಾತಿಯ ಎಚ್‌ಡಿಕೆ ನಿರ್ಮಾಣದ ಚಿತ್ರ ‘ಪೆನ್ ಡ್ರೈವ್ ಬ್ರದರ್’. ಪ್ರಾಮಾಣಿಕ ಕರೆಂಟ್ ಕಳ್ಳ ಖ್ಯಾತಿಯ ನಿರ್ದೇಶನ. ಬರೀ ಟೀಸರ್ಗೆ ಇಷ್ಟೊಂದು ಟೆನ್ಶನ್ ಆದರೆ ಹೇಗೆ. ಸಿನಿಮಾ ಇನ್ನೂ ಬಾಕಿಯಿದೆ. ರಾಧಾ, ಮಾರ, ಬ್ಲೂ ಬಾಯ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆ. ಚಿತ್ರದ ನಿರ್ಮಾಣದ ವೆಚ್ಚ 68,000” ಎಂದು ವ್ಯಂಗ್ಯವಾಡಲಾಗಿದೆ.
ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ‘ಕರೆಂಟ್ ಕಳ್ಳ’ ಪೋಸ್ಟರ್ ಅಭಿಯಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಕಾರಣವೆಂದು ಆರೋಪಿಸಿದ್ದರು. “ನನ್ನ ವಿರುದ್ಧ ಪೋಸ್ಟರ್ ಅಭಿಯಾನ ಮಾಡುತ್ತಿರುವವರು ಈ ಹಿಂದೆ ಟೆಂಟ್‌ಗಳಲ್ಲಿ ಬ್ಲೂ ಫಿಲಂಗಳನ್ನು ಜನರಿಗೆ ತೋರಿಸುತ್ತಿದ್ದರು. ಅವರಿಂದಲೇ ಇಂಥ ಪೋಸ್ಟರ್ ಅಭಿಯಾನ ನಡೆಯುತ್ತಿದೆ” ಎಂದು ಆರೋಪಿಸಿದ್ದರು.
ಅವರ ಈ ಹೇಳಿಕೆಯ ವಿರುದ್ಧ ಸಿಟ್ಟಿಗೆದ್ದಿರುವ ಕೆಲವರು ಈ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ ಎಂದು ಹೇಳಲಾಗಿದೆ.