ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ನಮ್ಮ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ನಾವು ಉತ್ತರಿಸುವುದೂ, ಹುಚ್ಚಾಸ್ಪತ್ರೆಗೆ ಸೇರುವುದೂ ಎರಡು ಒಂದೇ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಬಗ್ಗೆ ಕುಮಾರಸ್ವಾಮಿ ನಡೆಸುತ್ತಿರುವ ಟೀಕಾ ಪ್ರಹಾರದ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, “ಎಚ್ ಡಿ ಕುಮಾರಸ್ವಾಮಿ ಅವರ ಆರೋಪಗಳೇ ಹಾಸ್ಯಾಸ್ಪದ. ಯಾವುದೇ ಸರ್ಕಾರದಲ್ಲಿ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ಸಹಜ ಪ್ರಕ್ರಿಯೆ. ಇದು ಎಲ್ಲಾ ಸರ್ಕಾರಗಳಲ್ಲೂ ನಡೆಯುತ್ತದೆ. ಇದು ಎರಡು ಬಾರಿ ರಾಜ್ಯ ಆಳಿದವರಿಗೆ ಗೊತ್ತಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲೂ ಅಧಿಕಾರಿಗಳ ವರ್ಗಾವಣೆಯಾಗಿತ್ತು. ಆಗ ಎಚ್‌ಡಿಕೆ ಅಧಿಕಾರಿಗಳ ವರ್ಗಾವಣೆಗೆ ಇಂತಿಷ್ಟು ರೇಟ್ ಎಂದು ಫಿಕ್ಸ್ ಮಾಡಿದ್ರಾ? ಯಾಕಂದ್ರೆ ಕಳ್ಳನ ಗುಟ್ಟು ಕಳ್ಳನಿಗೇ ಗೊತ್ತು ಎಂಬಂತಿದೆ ಎಚ್‌ಡಿಕೆ ವರ್ತನೆ. ನಮ್ಮ ಸರ್ಕಾರದಲ್ಲಿ ವರ್ಗಾವಣೆ ಪಾರದರ್ಶಕವಾಗಿದೆ. ಆದರೆ ತಾನು ಕಳ್ಳ ಪರರ ನಂಬ ಎಂಬಂತೆ ಕುಮಾರಸ್ವಾಮಿ ವರ್ತಿಸಿದರೆ ಏನು ಮಾಡಲು ಸಾಧ್ಯ” ಎಂದು ಪ್ರಶ್ನಿಸಿದ್ದಾರೆ.
“ಸರ್ಕಾರದ ವಿರುದ್ಧದ ಆರೋಪಗಳಿಗೆ ಸಾಕ್ಷಿ ಇದೆ ಎಂದು ಕುಮಾರಸ್ವಾಮಿ ಪೆನ್ ಡ್ರೈವ್ ಎಂಬ ಹಾವಿನ ಬುಟ್ಟಿ ತೋರಿಸುತ್ತಿದ್ದಾರೆ. ಅವರ ಬಳಿಯಿರುವ ಹಾವಿನ ಬುಟ್ಟಿಯಲ್ಲಿ ಯಾವ ಹಾವಿದೆ ಎಂದು ತಿಳಿದುಕೊಳ್ಳುವ ಕುತೂಹಲ ನಮಗೂ ಇದೆ. ಅವರ ಬುಟ್ಟಿಯಲ್ಲಿ ಹಾವಿದ್ದರೆ ಹೊರಗೆ ಬಿಡಲಿ. ಆಗ ಅದು ಕೇರೇ ಹಾವೋ, ಮಂಡಲದ ಹಾವೋ ಅಥವಾ ವಿಷ ಕಕ್ಕುವ ನಾಗರಹಾವೋ ತಿಳಿಯುತ್ತದೆ” ಎಂದು ಲೇವಡಿ ಮಾಡಿದ್ದಾರೆ.