- ‘ಪ್ರಕರಣ ವಾಪಸ್ ಪಡೆಯುವುದು ಜನರಿಗೆ ಮಾಡುವ ದ್ರೋಹ’
- ನಾವು ಇದನ್ನು ಇಷ್ಟಕ್ಕೆ ಬಿಡುವುದಿಲ್ಲ: ಬೊಮ್ಮಾಯಿ ಎಚ್ಚರಿಕೆ
ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿರುದ್ದ ದಂಗೆ ಎದ್ದವರ ರಕ್ಷಣೆಗೆ ಸರ್ಕಾರ ಮುಂದಾಗಿರುವುದು ರಾಜ್ಯದ ಜನತೆಗೆ ಮಾಡುವ ದ್ರೋಹವಾಗಿದೆ. ಅಲ್ಲದೇ ದಲಿತ ಶಾಸಕನ ಮನೆ ಸುಟ್ಟವರ ರಕ್ಷಣೆ ಮಾಡುವುದು ಕಾಂಗ್ರೆಸ್‌ನ ದಲಿತ ವಿರೋಧಿ ನೀತಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಶಾಸಕ ತನ್ವೀರ್ ಸೇಠ್ ಗೃಹ ಸಚಿವರಿಗೆ ಪತ್ರ ಬರೆದು ಆರೋಪಿಗಳ ವಿರುದ್ದದ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ ಬಹಳ ಗಂಭೀರವಾಗಿದೆ. ಈ ಪ್ರಕರಣದಲ್ಲಿ ಪೊಲೀಸ್ ಠಾಣೆ, ಪೊಲೀಸ್ ವಾಹನಗಳು ಹಾಗೂ ಕಾಂಗ್ರೆಸ್ ಶಾಸಕನ ಮನೆ ಸುಟ್ಟಿದ್ದಾರೆ. ಇದು ರಾಜ್ಯ ಸರ್ಕಾರದ ವಿರುದ್ದದ ದಂಗೆಯಾಗಿದೆ” ಎಂದಿದ್ದಾರೆ.
“ರಾಜ್ಯದ ಮೇಲೆ ದಂಗೆ ಎದ್ದರೂ ಕೂಡ ಅವರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ತೀರ್ಮಾನ ಮಾಡಿದ್ದಾರೆ ಎಂದರೆ ರಾಜ್ಯದ ವಿರುದ್ಧ ಏನೇ ಮಾಡಿದರೂ ರಕ್ಷಣೆ ದೊರೆಯುತ್ತದೆ ಎಂದು ಅಪರಾಧಿಗಳಿಗೆ ಧೈರ್ಯ ಬರುತ್ತದೆ. ದಂಗೆ ಎದ್ದವರಿಗೂ ಕೂಡ ಆಶ್ರಯ ಕೊಡುತ್ತಿರುವುದು ಸ್ಪಷ್ಟವಾಗುತ್ತದೆ” ಎಂದು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಂತ್ರಾಲಯದಲ್ಲಿ ರಾಮನ ವಿಗ್ರಹ; ಆಂಧ್ರದಲ್ಲಿ ಬಿಜೆಪಿಯ ಪ್ರತಿಮಾ ರಾಜಕಾರಣ
ಎನ್.ಐ.ಎ ತನಿಖೆ
“ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣವನ್ನು ಎನ್.ಐ.ಎ ತೆಗೆದುಕೊಂಡಿದೆ. ಇದರಲ್ಲಿ ಪಿಎಎಫ್‌ಐ, ಎಸ್‌ಡಿಪಿಐ ಕೈವಾಡ ಇದೆ ಅಂತ ಬಹಳ ಸ್ಪಷ್ಟವಾದ ಪುರಾವೆಗಳಿವೆ. ತನಿಖೆ ನಡಿಸಿ ಚಾರ್ಜ್ ಸೀಟ್ ಆಗಿದೆ. ಎನ್.ಐ.ಎ ತನಿಖೆ ನಡೆಸುತ್ತಿರುವ ಪ್ರಕರಣವನ್ನು ಇವರು ಹೇಗೆ ವಾಪಸ್ ಪಡೆಯುತ್ತಾರೆ. ನಾವು ಅಧಿಕಾರದಲ್ಲಿ ಇದ್ದಾಗಲೂ ಈ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಒತ್ತಡ ಇತ್ತು. ನಾವು ಸಾಕ್ಷಿ ಸಮೇತ ಹಿಡಿದುಕೊಂಡು ಅವರನ್ನು ಆರೆಸ್ಟ್ ಮಾಡಿದ್ದೆವು” ಎಂದು ಹೇಳಿದ್ದಾರೆ.
“ಈ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇನೆ. ಈ ತರಹ ದಂಗೆ ಎದ್ದು ಪೊಲೀಸ್ ಠಾಣೆ ಸುಟ್ಟವರ ವಿರುದ್ದದ ಪ್ರಕರಣಗಳನ್ನು ವಾಪಸ್ ಪಡೆಯಲು ಮುಂದಾಗಿರುವ ಈ ಸರ್ಕಾರ ಜನರಿಗೆ ದ್ರೋಹ ಮಾಡುತ್ತಿದೆ. ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯಬಾರದು. ಮುಖ್ಯಮಂತ್ರಿಗಳಿಗೆ ಕೆಲವು ಸಂಘಟನೆಗಳು ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಒತ್ತಡ ಹೇರುತ್ತಿವೆ ಎಂಬ ಮಾಹಿತಿ ಇದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟ ನಿಲುವಿನೊಂದಿಗೆ ಬರಬೇಕು” ಎಂದು ಆಗ್ರಹಿಸಿದ್ದಾರೆ.
ದಲಿತ ವಿರೋಧಿ ನೀತಿ
“ಈ ಪ್ರಕರಣದಲ್ಲಿ ಮಾಜಿ ಮೇಯರ್ ಮತ್ತು ಕಾರ್ಪೊರೇಟರ್ ರಕ್ಷಣೆಗೆ ಆಗಲೇ ಪ್ರಯತ್ನ ನಡೆಸಿದ್ದರು. ಈಗ ಅವರ ವಿರುದ್ದ ಚಾರ್ಜ್ ಶೀಟ್ ಸಿದ್ದವಾಗಿದೆ. ಹೀಗಾಗಿ ಅವರ ರಕ್ಷಣೆಗೆ ಈ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಪ್ರಕರಣಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಡೆಸಿದ್ದಾರೆ. ನಾವು ಇದನ್ನು ಸುಮ್ಮನೆ ಬಿಡುವುದಿಲ್ಲ. ಇದರ ವಿರುದ್ದ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಹಾಗೂ ಇದನ್ನು ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ” ಎಂದು ಎಚ್ಚರಿಸಿದರು.
ಏನೂ ಇಲ್ಲದಿದ್ದರೆ ಏನಾದರೂ ಹೇಳ ಬೇಕಲ್ಲ.