ಪಕ್ಷ ವಿರೋಧಿ ಚಟುವಣಿಕೆಯ ಆರೋಪದ ಮೇಲೆ ಬಿಜೆಪಿ ಸದಸ್ಯೆ ಸರಸ್ವತಿ ಧೋಂಗಡಿ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯತ್ವ ಕಳೆದುಕೊಂಡಿದ್ದಾರೆ. ಅವರ ಸದಸ್ಯತ್ವವನ್ನು ಅನರ್ಹಗೊಳಿಸಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಆದೇಶ ಹೊರಡಿಸಿದ್ದಾರೆ.
2023ರ ಜೂನ್ 20ರಂದು ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಪ್ರಕ್ರಿಯೆಯಲ್ಲಿ ಪಕ್ಷದ ಸದಸ್ಯರು ಕಡ್ಡಾಯವಾಗಿ ಭಾವಹಿಸಬೇಕೆಂದು ಬಿಜೆಪಿ ವಿಪ್ ಜಾರಿ ಮಾಡಿತ್ತು. ಆದರೆ, ಸರಸ್ವತಿ ಅವರು ಪ್ರಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ.
ಮೇಯರ್, ಉಪ ಮೆಯರ್ ಆಯ್ಕೆಯಲ್ಲಿ ಭಾಗವಹಿಸದ ಸರಸ್ವತಿ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಅಂದಿನ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿರುವ ಪ್ರಾದೇಶಿಕ ಆಯುಕ್ತರು ಸರಸ್ವತಿ ಅವರನ್ನು ಪಾಲಿಕೆ ಸದಸ್ಯತ್ವದಿಂದ ಅನರ್ಹಗೊಳಿಸಿದ್ದಾರೆ.