ನಬಾರ್ಡ್ ನಿಂದ ರಾಜ್ಯಕ್ಕೆ ಶೇ.58ರಷ್ಟು ಹಣ ಕಡಿತ ಮಾಡಲಾಗಿದೆ. ಆ ಮೂಲಕ ಕೇಂದ್ರ ಸರಕಾರ ರಾಜ್ಯಕ್ಕೆ ಮತ್ತೊಂದು ಮಹಾ ದ್ರೋಹ ಎಸಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲು ಸಮಯ ಕೋರಿದ್ದಾರೆ.
ನವದೆಹಲಿ ಪ್ರವಾಸದ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, “ನಾಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲು ಸಮಯ ಕೋರಲಾಗಿದೆ. ರಾಜ್ಯಕ್ಕೆ ನಬಾರ್ಡ್ ನಿಂದ ರಾಜ್ಯಕ್ಕೆ ನೀಡಲಾಗುವ ಸಾಲದ ಮೊತ್ತವನ್ನು ಕಳೆದ ವರ್ಷದ 5600 ಕೋಟಿ ರೂ.ಗಳಿಂದ , ಈ ವರ್ಷ 2340 ಕೋಟಿ ರೂ. ಗಳಿಗೆ ಇಳಿಸಲಾಗಿದೆ. ಆದ್ದರಿಂದ ಕೇಂದ್ರ ವಿತ್ತ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿಕೊಳ್ಳಲಾಗುವುದು. ಈ ಮಧ್ಯೆ ಸಮಯಾವಕಾಶವಿದ್ದಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲಾಗುವುದು” ಎಂದರು.
ಕನಕ ಜಯಂತಿ ಪ್ರಯುಕ್ತ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ, ಮಾಧ್ಯಮದವರ ಜೊತೆ ಮಾತನಾಡಿದ್ದ ಸಿದ್ದರಾಮಯ್ಯ “ನಬಾರ್ಡ್ ವತಿಯಿಂದ ಕಳೆದ ವರ್ಷ ರಾಜ್ಯಕ್ಕೆ 5,600 ಕೋಟಿ ರೂ. ಸಾಲ ನೀಡಲಾಗಿತ್ತು. ಆದರೆ ಈ ವರ್ಷ 2,340 ಕೋಟಿ ರೂ. ನೀಡಿದ್ದಾರೆ. ಇದು ಅನ್ಯಾಯವಲ್ಲವೇ? ಸಾಲದ ಪ್ರಮಾಣವನ್ನು ಶೇ.58ರಷ್ಟು ಕಡಿಮೆ ಮಾಡಿದ್ದಾರೆ. ರಾಜ್ಯದಿಂದ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿಯವರು ಏನು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದ್ದರು.