ಪಾದಯಾತ್ರೆಗಳು ಯಾವಾಗ ಹೇಗೆ ಹುಟ್ಟಿಕೊಳ್ಳುತ್ತವೆ ಎಂದು ಹೇಳಲು ಆಗುವುದಿಲ್ಲ. ಕೆಲವೊಮ್ಮೆ ನಮ್ಮ ದೇಶ, ನಮ್ಮ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಉಳಿಸುವಂತಹ ಆಶಯಗಳೊಂದಿಗೆ ಹುಟ್ಟಿಕೊಳ್ಳುತ್ತವೆ. ಅಂತಹ ಪಾದಯಾತ್ರೆಗಳ ಇತಿಹಾಸ ರಾಜ್ಯ, ದೇಶದಲ್ಲಿ ಇದೆ. ಜೊತೆಗೆ ರಾಜಕೀಯ ಹಿತಾಸಕ್ತಿಯನ್ನೇ ಮೂಲವಾಗಿಟ್ಟುಕೊಂಡು ಪಾದಯಾತ್ರೆ ನಡೆದಿವೆ. ಆ ಮೂಲಕ ಅನೇಕ ಪಕ್ಷಗಳು ಅಧಿಕಾರದ ಲಾಭ ಪಡೆದುಕೊಂಡಿವೆ. ಅಂತಹ ಕೆಲವು ಪ್ರಮುಖ ಪಾದಯಾತ್ರೆಗಳ ಮಾಹಿತಿ ಇಲ್ಲಿದೆ.
ಆಡಳಿತಾರೂಢ ಸರ್ಕಾರವನ್ನು ಕಟ್ಟಿಹಾಕಬಲ್ಲ ಪ್ರಬಲ ಅಸ್ತ್ರ ಯಾವುದಾದರೂ ಇದ್ದರೆ ಅದು ಪಾದಯಾತ್ರೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸುತ್ತವೆ ಎಂದರೆ ಸಹಜವಾಗಿಯೇ ಆಡಳಿತಾರೂಢ ಪಕ್ಷಕ್ಕೆ ತಲೆ ನೋವು ಆರಂಭವಾಗುತ್ತೆ.
ಸರ್ಕಾರಗಳನ್ನು ಉರುಳಿಸಬಲ್ಲ ಶಕ್ತಿ ಪಾದಯಾತ್ರೆಗಳಿಗೆ ಇದೆ ಎಂಬುದು ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಸಾಬೀತಾಗಿದೆ. ಇಂತಹ ಪಾದಯಾತ್ರೆ ಅಸ್ತ್ರವನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಯೋಗಿಸಲು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಸಿದ್ಧವಾಗಿವೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿಬಂದಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣವನ್ನು ಬಿಜೆಪಿ ಬ್ರಹ್ಮಾಸ್ತ್ರ ಮಾಡಿಕೊಂಡಿದೆ. ಮುಂಗಾರು ಅಧಿವೇಶನದಲ್ಲಿ ಮುಡಾ ಅಕ್ರಮ ಕುರಿತು ಚರ್ಚೆಗೆ ಅವಕಾಶ ಕೊಡಿ ಎಂದು ಬಿಜೆಪಿ ಸದಸ್ಯರು ಅಹೋರಾತ್ರಿ ಧರಣಿ ಕುಳಿತರೂ ಕೂಡ ಸಭಾಧ್ಯಕ್ಷ ಯು ಟಿ ಖಾದರ್ ನಿರಾಕರಿಸಿದರು.
ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರೆ ಸದನವನ್ನು ಅರ್ಧಕ್ಕೆ ಮೊಟಕುಗೊಳಿಸಿ, ರಾಜ್ ಭವನ ಚಲೋ ನಡೆಸುವ ಮೂಲಕ ರಾಜ್ಯಪಾಲರಿಗೂ ದೂರು ನೀಡಿ, ಮುಡಾ ಅಕ್ರಮ ವಿರುದ್ಧ ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಜಂಟಿಯಾಗಿ ಘೋಷಿಸಿದರು.
ಬಿಜೆಪಿಯ ಪಾದಯಾತ್ರೆ ಇನ್ನೂ ಆರಂಭವೇ ಆಗಿಲ್ಲ. ಕಾಂಗ್ರೆಸ್ ಅಲರ್ಟ್ ಆಗಿದೆ. ಭಾನುವಾರ (ಜು.28) ಪಾದಯಾತ್ರೆ ಕುರಿತು ಬಿಜೆಪಿ ಸಭೆ ಕರೆದಿದ್ದು, ಅಂತಿಮವಾಗಿ ಪಾದಯಾತ್ರೆ ನಡೆಯುತ್ತದೋ ಇಲ್ಲವೋ ಎಂಬುದು ನಿರ್ಧಾರವಾಗಲಿದೆ. ಬಿಜೆಪಿ ನಡೆಸುವ ಪಾದಯಾತ್ರೆಯ ಪ್ರತಿದಿನವೂ ಅವರ ಕಾಲದ ಎಲ್ಲ ಹಗರಣಗಳನ್ನು ಒಂದೊಂದಾಗಿ ಬಯಲು ಮಾಡುತ್ತೇವೆ ಎಂದು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.
ಬಿಜೆಪಿಯ ಪಾದಯಾತ್ರೆ ಹಿಂದೆ ಜನಪರ ಕಾಳಜಿಗಿಂತಲೂ ಆರ್ ಅಶೋಕ್ ಮತ್ತು ಬಿ ವೈ ವಿಜಯೇಂದ್ರ ಅವರ ಚಲಾವಣೆಗೆ ಹೊಳಪು ತರುವ ಪ್ರಯತ್ನ ಹೆಚ್ಚಿದೆ. ಲೋಕಸಭೆ ಚುನಾವಣೆ ಮುಗಿದಿದೆ. ಈಗ ಇನ್ನೇನಿದ್ದರೂ ಇಬ್ಬರು ನಾಯಕರು ಸದಾ ಚಲಾವಣೆಯಲ್ಲಿರಬೇಕು. ಅಂದಾಗ ಮಾತ್ರ ಪಕ್ಷದಲ್ಲಿ ಅವರಿಗೂ ಪ್ರಾಮುಖ್ಯತೆ. ಇದರ ಭಾಗವಾಗಿಯೇ ಅವರಿಬ್ಬರೂ ನಾಯಕರು ಪಾದಯಾತ್ರೆಯ ಗುಂಗಿನಲ್ಲಿದ್ದಾರೆ. ಆದರೆ, ಇತ್ತೀಚಿನ ಬಿಜೆಪಿಯವರಿಗೆ ಪಾದಯಾತ್ರೆ ಮಾಡಿದ ಅನುಭವವೇ ಇಲ್ಲ.
ಈ ಪಾದಯಾತ್ರೆಗಳು ಯಾವಾಗ ಹೇಗೆ ಹುಟ್ಟಿಕೊಳ್ಳುತ್ತವೆ ಎಂದು ಹೇಳಲು ಆಗುವುದಿಲ್ಲ. ಕೆಲವೊಮ್ಮೆ ನಮ್ಮ ದೇಶ, ನಮ್ಮ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಉಳಿಸುವಂತಹ ಆಶಯಗಳೊಂದಿಗೆ ಹುಟ್ಟಿಕೊಂಡುಬಿಡುತ್ತವೆ. ಅಂತಹ ಪಾದಯಾತ್ರೆಗಳ ಇತಿಹಾಸ ರಾಜ್ಯ, ದೇಶದಲ್ಲಿ ಇದೆ. ಜೊತೆಗೆ ರಾಜಕೀಯ ಹಿತಾಸಕ್ತಿಯನ್ನೇ ಮೂಲವಾಗಿಟ್ಟುಕೊಂಡು ಪಾದಯಾತ್ರೆ ನಡೆದಿವೆ. ಆ ಮೂಲಕ ಅನೇಕ ಪಕ್ಷಗಳು ಅಧಿಕಾರದ ಲಾಭ ಪಡೆದುಕೊಂಡಿವೆ. ಅಂತಹ ಕೆಲವು ಪ್ರಮುಖ ಪಾದಯಾತ್ರೆಗಳ ಮಾಹಿತಿ ಇಲ್ಲಿದೆ.
ಗೋಲಿಬಾರ್ ಖಂಡಿಸಿ ಪಾದಯಾತ್ರೆ
ಕರ್ನಾಟಕದ ಅತಿರಥ-ಮಹಾರಥ ಜನ ನಾಯಕರು ಇಂತಹ ಪಾದಯಾತ್ರೆ ರಾಜಕಾರಣದಲ್ಲಿ ಹಿಂದೆ ಬಿದ್ದವರಲ್ಲ. ಹಾಸನ ದೊಡ್ಡಳ್ಳಿಯ ಗೋಲಿಬಾರ್ ಪ್ರತಿರೋಧಿಸಿ ಮಾಜಿ ಪ್ರಧಾನಿ ದೇವೇಗೌಡರು ದೊಡ್ಡಳ್ಳಿಯಿಂದ ಬೆಂಗಳೂರಿನವರೆಗೆ ಮೂರು ದಿನಗಳ ಪಾದಯಾತ್ರೆ ನಡೆಸಿದ್ದರು. ಹೊಳೆನರಸೀಪುರ ತಾಲೂಕು ದೊಡ್ಡಹಳ್ಳಿ ಗ್ರಾಮದಲ್ಲಿ 1982 ಸೆಪ್ಟೆಂಬರ್ 23 ರಂದು ಕುಡಿಯುವ ನೀರು ಸರಬರಾಜು ಉದ್ಘಾಟನೆ ಕಾರ್ಯಕ್ರಮದಲ್ಲಿ ದೇವೇಗೌಡರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇರದಿರುವುದಕ್ಕೆ ಅಲ್ಲಿನ ಜನರಲ್ಲಿ ಆಕ್ರೋಶಗೊಂಡಿದ್ದರು. ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಾಲ್ ಅನ್ನು ಕಿತ್ತೆಸಲಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಪೊಲೀಸರು ಅಶ್ರುವಾಯು ಸ್ಫೋಟಿಸಿದರು. ಅದಕ್ಕೂ ಜನ ಬಗ್ಗಲಿಲ್ಲ. ಕೊನೆಗೆ ಗೋಲಿಬಾರ್ ಮಾಡಲಾಯಿತು. ಇದರಿಂದ ಇಬ್ಬರು ರೈತರು ಸಾವಿಗೀಡಾಗಿದ್ದರು ಹಾಗೂ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದನ್ನು ವಿರೋಧಿಸಿ ದೊಡ್ಡಳ್ಳಿಯಿಂದ ದೇವೇಗೌಡರು ಮೂರು ದಿನ ಪಾದಯಾತ್ರೆ ಮಾಡಿದ್ದರು.
ನೀರಾ ಹೋರಾಟ ಪಾದಯಾತ್ರೆ
ಕನಕಪುರ ಲೋಕಸಭಾ ಕ್ಷೇತ್ರ ದೇಶದ ಅತಿದೊಡ್ಡ ಕ್ಷೇತ್ರವೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ದೇವೇಗೌಡರು 1999ರ ಲೋಕ ಸಮರದಲ್ಲಿ ಹಾಸನ ಕ್ಷೇತ್ರದಲ್ಲಿ ಸೋತು ಮನೆ ಸೇರಿದ್ದಾಗ ದೇವೇಗೌಡರ ರಾಜಕೀಯ ಇನ್ನೇನು ಮುಗಿದೇ ಹೋಯಿತು ಎನ್ನುವ ಮಾತುಗಳು ಕೇಳಿಬಂದಿದ್ದವು. ಅದೇ ಸಂದರ್ಭದಲ್ಲಿ ಕನಕಪುರ ಕಾಂಗ್ರೆಸ್ ಸಂಸದ ಚಂದ್ರಶೇಖರ್ ಮೂರ್ತಿ 2002ರಲ್ಲಿ ಮೃತಪಟ್ಟಿದ್ದರಿಂದ ಉಪಚುನಾವಣೆ ನಡೆಯುತ್ತೆ. ಆ ಅವಕಾಶವನ್ನೇ ದೇವೇಗೌಡರು ಬಳಸಿಕೊಳ್ಳುತ್ತಾರೆ. ಚನ್ನಪಟ್ಟಣದಲ್ಲಿ ನೀರಾ ಹೋರಾಟ ತೀವ್ರಗೊಂಡು ಇಬ್ಬರು ರೈತರು ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದರು. ಅದನ್ನು ರಾಜಕೀಯವಾಗಿ ಬಳಸಿಕೊಂಡ ದೇವೇಗೌಡರು, ಎಸ್ ಎಂ ಕೃಷ್ಣ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸುವ ಮೂಲಕ ರಾಜಕೀಯ ದಾಳ ಉರುಳಿಸಿ, ಕನಕಪುರದಿಂದ ಸ್ಪರ್ಧಿಸಿ ಗೆಲ್ಲುತ್ತಾರೆ. ರಾಜಕೀಯವಾಗಿಯೂ ಮರುಜನ್ಮ ಪಡೆಯುತ್ತಾರೆ. ಆಗ ಡಿ ಕೆ ಶಿವಕುಮಾರ್ ಅವರ ಎದುರಾಳಿ.
ಜೀತವಿಮುಕ್ತಿ, ಬಗರ್ ಹುಕುಂ ಭೂಮಿ ನೀಡಲು ಆಗ್ರಹಿಸಿ ಪಾದಯಾತ್ರೆ
ಜೀತವಿಮುಕ್ತಿ ಮತ್ತು ಹರಿಜನ – ಗಿರಿಜನರಿಗೆ ಬಗರ್ ಹುಕುಂ ಭೂಮಿ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಡೆಸಿದ ಪಾದಯಾತ್ರೆ ಮುಖ್ಯವಾದುದು. 1975ರ ತುರ್ತು ಪರಿಸ್ಥಿತಿ 45 ದಿನಗಳ ಕಾಲ ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ ಯಡಿಯೂರಪ್ಪ ಸೆರೆವಾಸ ಇದ್ದರು. 1981ರಲ್ಲಿ 1700 ಮಂದಿಯನ್ನು ಜೀತ ಪದ್ಧತಿಯಿಂದ ವಿಮುಕ್ತಿಗೊಳಿಸಿದರು ಹಾಗೂ ಬಗರ್ ಹುಕುಂ ರೈತರ ಪರವಾಗಿ ಪಾದಯಾತ್ರೆ ನಡೆಸಿದರು. 1987 ರಲ್ಲಿ ಸೈಕಲ್ ಜಾಥಾ ಮುಖಾಂತರ ಶಿಕಾರಿಪುರ ತಾಲ್ಲೂಕಿನಾದ್ಯಂತ ಸಂಚರಿಸಿ ಬರ ಪರಿಸ್ಥಿತಿ ಅಧ್ಯಯನ ಮಾಡಿ ಸರ್ಕಾರದ ಗಮನಕ್ಕೆ ತಂದರಲ್ಲದೇ ಸಂತ್ರಸ್ತರಿಗೆ ನ್ಯಾಯ ದೊರಕಿಸುವಲ್ಲಿ ಸಫಲರಾದರು.
ಕಾವೇರಿ ನೀರಿಗಾಗಿ ಪಾದಯಾತ್ರೆ
1998ರಲ್ಲಿ ಕಾವೇರಿ ನೀರಿಗಾಗಿ ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ಹಾಗೂ ಯಡಿಯೂರಪ್ಪ ಅವರು ಅರ್ಧಕ್ಕೆ ನಿಲ್ಲಿಸಿದ ಪಾದಯಾತ್ರೆ ಕೂಡ ಇತಿಹಾಸದಲ್ಲಿ ದಾಖಲಾಗಿದೆ. 2012ರಲ್ಲಿ ಬಿ.ಎಸ್.ಆರ್. ಕಾಂಗ್ರೆಸ್‌ನ ಶ್ರೀರಾಮುಲು ಅವರು ರಾಜಕೀಯ ಪ್ರಚಾರದ ಭಾಗವಾಗಿ 590 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದಾರೆ.
ಗಣಿ ಕುಳಗಳ ವಿರುದ್ಧ ಸಿದ್ದರಾಮಯ್ಯ ಪಾದಯಾತ್ರೆ
2010ರಲ್ಲಿ ಬಳ್ಳಾರಿ ಗಣಿ ಕುಳಗಳ ಎದೆ ನಡುಗಿಸಿದ್ದು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪಾದಯಾತ್ರೆ. ‘ಕಾಂಗ್ರೆಸ್ ನಡಿಗೆ ಜನರ ಕಡೆ’ ಘೋಷವಾಕ್ಯದ ಜೊತೆ ಬೆಂಗಳೂರಿನಿಂದ ಬಳ್ಳಾರಿಗೆ ಸಿದ್ದರಾಮಯ್ಯ ನಡೆಸಿದ ಪಾದಯಾತ್ರೆ ಸರ್ಕಾರ ರಚನೆಗೂ ಕಾರಣವಾಯಿತು. ಇದು ಇತ್ತೀಚಿನ ದಶಕದ ಪಾದಯಾತ್ರೆಗಳಲ್ಲಿ ಮೈಲುಗಲ್ಲಾಗಿ ಉಳಿದಿದೆ.
ಮೇಕೆದಾಟು ಪಾದಯಾತ್ರೆ
2022ರಲ್ಲಿ ಮೇಕೆದಾಟು ಪಾದಯಾತ್ರೆಯು ಹಳೇ ಮೈಸೂರು ಭಾಗದಲ್ಲಿ ವಿಶೇಷವಾಗಿ ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪರ ಧನಾತ್ಮಕ ವರ್ಚಸ್ಸು ಮೂಡಿಸಲು ನೆರವಾಗಿತ್ತು.
ಭಾರತ್ ಜೋಡೋ ಪಾದಯಾತ್ರೆ
ಹಾಗೆಯೇ 2022ರಲ್ಲಿ ರಾಹುಲ್ ಗಾಂಧಿ ಅವರ ಸಾರಥ್ಯದಲ್ಲಿ ಪ್ರಜಾಪ್ರಭುತ್ವ ಉಳಿವಿನ ದೊಡ್ಡ ಆಶಯದೊಂದಿಗೆ ನಡೆದ ಭಾರತ್ ಜೋಡೋ ಯಾತ್ರೆಯು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಹೊಸ ಹುರುಪು ತುಂಬಿತು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಒಗ್ಗಟ್ಟು ಪ್ರದರ್ಶನಕ್ಕೂ ವೇದಿಕೆಯಾಗಿ, ರಾಹುಲ್ ಗಾಂಧಿ ಸಮ್ಮುಖದಲ್ಲೇ ಉಭಯ ನಾಯಕರು ಪರಸ್ಪರ ಕೈ ಹಿಡಿದು ಮುಂದೆ ಸಾಗುವ ಸಂದೇಶ ರವಾನಿಸಿದರು. ಆ ಮೂಲಕ ಕಾಂಗ್ರೆಸ್ ಅಧಿಕಾರ ಗದ್ದುಗೆ ಹಿಡಿಯಲು ಭಾರತ್ ಜೋಡೋ ನೆರವಾಯಿತು.
ಮಹಾತ್ಮ ಗಾಂಧಿ ಪಾದಯಾತ್ರೆ
ಈ ಎಲ್ಲ ಪಾದಯಾತ್ರೆಗಳು ಇತ್ತೀಚಿನವು. ಇನ್ನೂ ಹಿಂದಕ್ಕೆ ಹೋಗಿ ನೋಡಿದಾಗ ಬ್ರಿಟಿಷ್ ಚಕ್ರಾಧಿಪತ್ಯ ಉಪ್ಪಿನ ಮೇಲೆ ಸಾಧಿಸಿದ್ದ ಏಕಸ್ವಾಮ್ಯ ಪ್ರತಿರೋಧಿಸಿ 1930ರ ಮಾರ್ಚ್ 12ರಂದು ಅಹಮದಾಬಾದ್‌ನ ಸಾಬರಮತಿ ಆಶ್ರಮದಿಂದ ಮಹಾತ್ಮ ಗಾಂಧೀಜಿ ನಡೆಸಿದ ಪಾದಯಾತ್ರೆ. 240 ಮೈಲಿ ಕಾಲ್ನಡಿಗೆಯಲ್ಲಿ ನಡೆದು 1930ರ ಏಪ್ರಿಲ್ 6ರಂದು ತಮ್ಮ ಇಪ್ಪತ್ತನಾಲ್ಕು ದಿನಗಳ ಪಾದಯಾತ್ರೆ ಮುಗಿಸಿ, ಉಪ್ಪು ಉತ್ಪಾದನೆ ಮಾಡಿದ ಗಾಂಧೀಜಿ, ‘ಬ್ರಿಟೀಷರೇ ಭಾರತ ಬಿಟ್ಟು ತೊಲಗಲು ಇದು ಸಕಾಲ’ ಎಂದು ಕರೆ ನೀಡಿದ್ದರು.
ವಿನೋಬಾ ಭಾವೆ ಕಾಲ್ನಡಿಗೆ
ಹಾಗೆಯೇ 1951ರಲ್ಲಿ ವಿನೋಬಾ ಭಾವೆಯವರ ಪಾದಯಾತ್ರೆ ದೇಶದಲ್ಲಿ ದೊಡ್ಡ ಮೈಲುಗಲ್ಲಾಗಿದೆ. ಭೂ ದಾನ – ಭೂಮಿ ಉಳ್ಳವರು ಭೂಮಿ ಇಲ್ಲದವರಿಗೆ ದಾನ ಮಾಡುವ ಒಂದು ಮಹಾನ್ ಆಂದೋಲನ ಇವರ ನೇತೃತ್ವದಲ್ಲಿ ನಡೆಯಿತು. ಮಹಾತ್ಮ ಗಾಂಧಿಯವರ ನಿಕಟ ಅನುಯಾಯಿ ಆಚಾರ್ಯ ವಿನೋಬಾ ಭಾವೆ, ಭೂರಹಿತರಿಗೆ ಭೂಮಿ ದೊರಕಿಸಿದ ಮೌನ ಕ್ರಾಂತಿಯ ಆದ್ಯ ಪ್ರವರ್ತಕ ಎಂದೇ ಖ್ಯಾತಿಗಳಿಸಿದ್ದಾರೆ. ಇದಕ್ಕಾಗಿ ಇವರು ಕಾಲ್ನಡಿಗೆಯಲ್ಲಿ ಭಾರತದ ಉದ್ದಗಲ ಸಾವಿರಾರು ಮೈಲಿ ಸಂಚರಿಸಿ ಭೂ ದಾನ ಚಳವಳಿಯನ್ನು ಯಶಸ್ವಿಗೊಳಿಸಿದ್ದರು.
ವಿನೋಬಾ ಭಾವೆ ಕಾಲ್ನಡಿಗೆಯಲ್ಲಿ ಕರ್ನಾಟಕದಲ್ಲಿಯೂ ಸಂಚರಿಸಿದರು. ಜನಪರ ಹೋರಾಟಗಳ ನೆಲೆಯಾದ ಶಿವಮೊಗ್ಗ ಜಿಲ್ಲೆಗೂ ಭಾವೆಯವರು ಕಾಲ್ನಡಿಗೆಯಲ್ಲಿ ಭೇಟಿ ನೀಡಿದ್ದರು. ಸೊರಬ ತಾಲ್ಲೂಕಿನ ಎಣ್ಣೆಕೊಪ್ಪದ ಮಲ್ಲಿಕಾರ್ಜುನಪ್ಪ ಗೌಡ ಎನ್ನುವ ಜಮೀನ್ದಾರರು ಭಾವೆಯವರ ಸದಾಶಯಕ್ಕೆ ಮಾರು ಹೋಗಿ ತಮ್ಮ ಸಾವಿರ ಎಕರೆಯನ್ನು ದಾನ ಮಾಡಿದ್ದರು. ಕರ್ನಾಟಕದ ಜನತೆ ಭಾವೆಯವರ ಪಾದಯಾತ್ರೆಗೆ ಉತ್ತಮವಾಗಿ ಸ್ಪಂದಿಸಿದ್ದರು. ಭೂಮಿ ಉಳ್ಳ ರೈತರು ಸಾವಿರಾರು ಎಕರೆ ಭೂಮಿಯನ್ನು ದಾನವಾಗಿ ನೀಡಿ ಭಾವೆಯವರ ‘ಭೂದಾನ’ ಚಳವಳಿಯ ಯಶಸ್ಸಿಗೆ ತಮ್ಮ ಮಹತ್ವದ ಕೊಡುಗೆ ನೀಡಿದ್ದರು.
ನರಗುಂದ ರೈತರ ಪಾದಯಾತ್ರೆ
ಇಂತಹದ್ದೇ ಆಶಯದೊಂದಿಗೆ ರೈತ ಸಮುದಾಯ ಹಿತ ಕಾಪಾಡುವ ದಿಸೆಯಲ್ಲಿ 1980ರಲ್ಲಿ ನರಗುಂದದಿಂದ ಬೆಂಗಳೂರಿನವರೆಗೆ ನಡೆದ ಪಾದಯಾತ್ರೆ ಕರ್ನಾಟಕದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಬದುಕಿನಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡಿದೆ. ಮಲಪ್ರಭಾ ನೀರಾವರಿ ಪ್ರದೇಶದ ರೈತರು ಸಮನ್ವಯ ಸಮಿತಿಯೊಂದನ್ನು ಸ್ಥಾಪಿಸಿಕೊಂಡು ನೀರಾವರಿ ಕಾಲುವೆಗಳ ರಿಪೇರಿ, ಬೆಳೆ ವಿಮೆ ಜಾರಿ, ರಸಗೊಬ್ಬರ ಕ್ರಿಮಿನಾಶಕಗಳಿಗೆ ರಿಯಾಯಿತಿ ಹಾಗೂ ಸಬ್ಸಿಡಿ ನೀಡಿಕೆ, ಅಭಿವೃದ್ಧಿ ಕರ ರದ್ಧತಿ ಮುಂತಾದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು.
ನರಗುಂದ, ರೋಣ, ನವಲಗುಂದ, ಸವದತ್ತಿ ಹಾಗು ರಾಮದುರ್ಗದ ಹತ್ತು ಸಾವಿರಕ್ಕೂ ಹೆಚ್ಚು ರೈತರು, ನರಗುಂದ ತಹಸಿಲ್ದಾರ್ ಕಚೇರಿಯೆದುರು ಜಮಾಯಿಸಿ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದರು. ರೈತ ಹೋರಾಟ ಹಿಂಸಾರೂಪಕ್ಕೆ ತಿರುಗಿ ಗೋಲಿಬಾರ್‌ನಲ್ಲಿ ಹದಿನಾರು ಮಂದಿ ಸಾವನ್ನಪ್ಪಿದ್ದರು.
ರೈತ ಶ್ರಮಿಕರ ಪಾದಯಾತ್ರೆ
ಸರ್ಕಾರದ ರೈತ ವಿರೋಧಿ ನೀತಿ ಪ್ರತಿಭಟಿಸಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರ ನೇತೃತ್ವದಲ್ಲಿ ಸ್ಥಾಪನೆಗೊಂಡ ಪ್ರಗತಿಪರ ಪ್ರಜಾಸತ್ತಾತ್ಮಕ ರಂಗ 1980ರ ಡಿಸೆಂಬರ್ 12ರಿಂದ ನರಗುಂದದಿಂದ ಬೆಂಗಳೂರಿನವರೆಗೆ ಸುಮಾರು ಐದು ನೂರು ಕಿಲೋಮೀಟರ್ ಅಂತರದ ಪಾದಯಾತ್ರೆಯ ಮೂಲಕ ರೈತರ ಜಾಥಾ ನಡೆಸಲು ತೀರ್ಮಾನಿಸಿತ್ತು. ರೈತ ಜ್ಯೋತಿ ಹಿಡಿದು ಕಾಲ್ನಡಿಗೆಯನ್ನು ಹೊರಟ ರೈತ ಶ್ರಮಿಕರ ಪಾದಯಾತ್ರೆ ಕರ್ನಾಟಕದಲ್ಲಿ ರೈತಸಂಘದ ಉದಯಕ್ಕೂ ನಾಂದಿ ಹಾಡಿತು.
ಈ ಬೆಳವಣಿಗೆ ನಂತರ ಶಿವಮೊಗ್ಗದ ಎಚ್ ಎಸ್ ರುದ್ರಪ್ಪ, ಡಾ. ಎಂ ಡಿ ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ರೈತಸಂಘವು 1985ರಲ್ಲಿ ಅಧಿಕಾರ ಸೂತ್ರ ಹಿಡಿದಿದ್ದ ರಾಮಕೃಷ್ಣ ಹೆಗಡೆಯವರ ಸರ್ಕಾರ ಸಹಕಾರ ಸಂಘ ಕಾಯಿದೆಯ 101ಸಿಗೆ ತಿದ್ದುಪಡಿಯೊಂದನ್ನು ತರಲು ನಿರ್ಧರಿಸಿದಾಗ ಸರ್ಕಾರದ ನಿರ್ಧಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಸಿಡಿದೆದ್ದು, ಬೃಹತ್ ಪ್ರತಿಭಟನೆ ನಡೆಸಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಪಾದಯಾತ್ರೆ ಆರಂಭಿಸಿ 1985 ಅಕ್ಟೋಬರ್ 2ರ ಗಾಂಧೀ ಜಯಂತಿಯಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು.
ಕರ್ನಾಟಕದಲ್ಲಿ ಸಾಗಿದ ಮಾಜಿ ಪ್ರಧಾನಿ ಎಸ್. ಚಂದ್ರಶೇಖರ್ ಪಾದಯಾತ್ರೆ
ಮಾಜಿ ಪ್ರಧಾನಿ ಎಸ್. ಚಂದ್ರಶೇಖರ್ ಅವರು 1983ರಲ್ಲಿ ಆರು ತಿಂಗಳು ಕಾಲ ಕನ್ಯಾಕುಮಾರಿಯಿಂದ ದೆಹಲಿಯಲ್ಲಿರುವ ಮಹಾತ್ಮ ಗಾಂಧಿಯವರ ಸಮಾಧಿ ಸ್ಥಳ ರಾಜಘಾಟ್‌ವರೆಗೆ ಪಾದಯಾತ್ರೆ ನಡೆಸಿದ್ದರು. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ರೈತ ಸಮುದಾಯವನ್ನು ಕಾಡುವ ಗಂಭೀರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದೇ ಅವರ ಪಾದಯಾತ್ರೆಯ ಉದ್ದೇಶವಾಗಿತ್ತು. ಚಂದ್ರಶೇಖರ್ ಅವರು ತಮಿಳುನಾಡು – ಕರ್ನಾಟಕದ ಗಡಿ ಪ್ರದೇಶವಾದ ಅತ್ತಿಬೆಲೆಯಿಂದ ಕರ್ನಾಟಕ ಪ್ರವೇಶಿಸಿ, ಹದಿನೈದು ದಿನಗಳ ಕಾಲ ಪಾದಯಾತ್ರೆಯಲ್ಲಿ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಸಂಚರಿಸಿದರು. ಚಂದ್ರಶೇಖರ ಅವರ ಪಾದಯಾತ್ರೆಯ ಸಂದರ್ಭದಲ್ಲಿ ಕರ್ನಾಟಕದ ಮರಳವಾಡಿಯಲ್ಲಿ ಸ್ಥಾಪನೆಗೊಂಡ ಭಾರತ ಯಾತ್ರಾ ಕೇಂದ್ರ ಯಾವುದೇ ಚಟುವಟಿಕೆ ನಡೆಸದೆ, ಚಂದ್ರಶೇಖರ್ ಪಾದಯಾತ್ರೆಗೆ ಸಾಕ್ಷಿಯಾಗಿ ಉಳಿದಿದೆ.
ಒಟ್ಟಾರೆ ಪಾದಯಾತ್ರೆ ಎಂದರೆ ಸರ್ಕಾರಗಳು ಹೆದರುತ್ತವೆ. ಇತ್ತೀಚಿನ ಪಾದಯಾತ್ರೆಗಳ ಉದ್ದೇಶ ಜನಹಿತ ಕಾಪಾಡುವ ಸದಾಶಯದಂತೆ ಕಂಡರೂ ವ್ಯಕ್ತಿಪ್ರತಿಷ್ಠೆ ಮತ್ತು ಪಕ್ಷಪ್ರತಿಷ್ಠೆ ಆಳವಾಗಿ ಬೇರು ಬಿಟ್ಟಿರುತ್ತೆ. ಜನಹಿತದ ಆಚೆಗೂ ಕೆಲವೊಮ್ಮೆ ಪಾದಯಾತ್ರೆಗಳನ್ನು ಸ್ವಾರ್ಥ ಸಾಧಕರು – ಸಮಯ ಸಾಧಕರ ಕಾಲ್ನಡಿಗೆ ಎಂದು ಕೂಡ ವಿಶ್ಲೇಷಿಸಲಾಗಿದೆ. ಮಹಾತ್ಮಾ ಗಾಂಧಿ, ವಿನೋಬಾ ಭಾವೆ, ಮಾಜಿ ಪ್ರಧಾನಿ ಎಸ್. ಚಂದ್ರಶೇಖರ್ ಹಾಗೂ ನರಗುಂದ ರೈತರ ಪಾದಯಾತ್ರೆಗಳು ನಿಜಕ್ಕೂ ಜನಪರವಾಗಿವೆ. ಆ ನೆಲೆಯಲ್ಲಿ ಇಂದಿನ ಪಾದಯಾತ್ರೆಗಳು ರೂಪುಗೊಳ್ಳಬೇಕಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.