ಲಿಂಗಾಯತರು ರಾಜಕೀಯ ಪಕ್ಷಗಳ ಗುಲಾಮರೇ? ಲಿಂಗಾಯತ ನಾಯಕರಿಗೆ ಪಾಟೀಲರ ಪತ್ರ

Date:

Advertisements
ಏಣಿ ಶ್ರೇಣಿ ಬಯಸುವ, ಮನು ಸಿದ್ಧಾಂತದ ಬಿಜೆಪಿಗರಾದ ಗೌಡ್ರುಗಳೆ, ಸಾಹುಕಾರರೆ ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ ಸ್ವಾಮಿ. ನಿಜವಾಗಲೂ ನಿಮಗೆ ನಾವು ಬೇಕಾಗಿದ್ದಲ್ಲಿ ಲಿಂಗಾಯತಕ್ಕೆ ಧರ್ಮ ಮಾನ್ಯತೆ ನೀಡಿ. ನಂತರ ನಮ್ಮ ಬಗ್ಗೆ ಯೋಚಿಸಿ.

ಸ್ವಾಮಿ,

ಲಿಂಗಾಯತರು ನಿಮ್ಮ ರಾಜಕೀಯ ಪಕ್ಷಗಳ ಗುಲಾಮರೆ? ನಮ್ಮನ್ನು ಚುನಾವಣಾ ಸರಕೆಂದು ಭಾವಿಸಿದ್ದೀರಾ? ಅಥವಾ ನಮ್ಮದೇನಾದರೂ ಮಾರಾಟಕ್ಕಿರುವ ಧರ್ಮದ ಅನುಯಾಯಿಗಳೆಂದು ತಿಳಿದಿದ್ದಾರಾ? ಕಾಂಗ್ರೆಸ್ಸಿಗರಿಗೆ ನಮ್ಮದು ಧರ್ಮವಾದರೆ, ಬಿಜೆಪಿಗರಿಗೆ ನಮ್ಮದೊಂದು ಜಾತಿ!

ಹಿಂದೂ ಹುಲಿ ಬಸನಗೌಡ ಪಾಟೀಲರು ಲಿಂಗಾಯತ ಧರ್ಮವನ್ನು ಹೀಗಳೆಯುತ್ತಾರೆ. ನಿಜಲಿಂಗಾಯತ ಪೂಜ್ಯರನ್ನು ಅವಮಾನಿಸುತ್ತಾರೆ. ತಾವೂ ಹಿಂದೂ ಎನ್ನುತ್ತಾರೆ. ಲಿಂಗಾಯತರ ನಾಯಕರೆಂದು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ ಯಡಿಯೂರಪ್ಪನವರು ‘ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಕೊಡಬೇಡಿ’ ಎನ್ನುತ್ತಾರೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸಾಹೇಬರು, ಕಾಂಗ್ರೆಸ್ಸಿಗರು ನಮಗೆ ನೀಡಿದ ‘ಅಲ್ಪ ಸಂಖ್ಯಾತ ಮಾನ್ಯತೆ’ಯನ್ನು ಅಪಹಾಸ್ಯ ಮಾಡಿ ‘ಚುನಾವಣೆ ಗಿಮಿಕ್’ ಎಂದು ಅವಮಾನಿಸುತ್ತಾರೆ. ಇನ್ನೊಬ್ಬ ಲಿಂಗಾಯತ ನಾಯಕರಾದ ಬಸವರಾಜ ಬೊಮ್ಮಾಯಿಯವರು ಲಿಂಗಾಯತರ ಸಹವಾಸ ಬೇಡವೆನ್ನುತ್ತಾರೆ. ಬಸವಣ್ಣನವರನ್ನು ಆಧರಿಸುವ ವೀರಶೈವರನ್ನು ಹೀಗಳೆಯುತ್ತಾರೆ. ನೀವು ಹಿಂದೂ ಧರ್ಮದ ಉಚ್ಚ ಕುಲದವರು ಲಿಂಗಾಯತದೊಂದಿಗೆ ಸೇರಬೇಡಿ ಎನ್ನುತ್ತ ಅವರ ಕಣ್ಣಿಗೆ ಪಟ್ಟಿ ಕಟ್ಟುತ್ತಾರೆ. ಲಿಂಗಾಯತರನ್ನು ಇಬ್ಭಾಗಿಸುತ್ತ ಗುರು – ವಿರಕ್ತರ ಮಧ್ಯದಲ್ಲಿ ಗೋಡೆ ಕಟ್ಟುತ್ತಾರೆ. ತಮಗೆ ಅನುಕೂಲವಾಗುವ ಮಠ – ಪೀಠಗಳನ್ನು ಮಾತ್ರ ಬೆಂಬಲಿಸುತ್ತ ಅವರಿಗೆ ತನು, ಮನ, ಧನವನ್ನು ಅರ್ಪಿಸುತ್ತಾರೆ.

Advertisements

ಎಂಟುನೂರು ವರ್ಷಗಳ ತರುವಾಯ ಲಿಂಗಾಯತರಿಗೆ ರಾಜ್ಯ ಸರ್ಕಾರ ನೀಡಿದ್ದ ‘ಅಲ್ಪ ಸಂಖ್ಯಾತ ಧರ್ಮ’ದ ಮಾನ್ಯತೆಯನ್ನು ಅಪಹಾಸ್ಯ ಮಾಡಿ ‘ಧರ್ಮ ಒಡೆದರು’ ಎಂಬ ಹಣೆಪಟ್ಟಿ ಹಚ್ಚುತ್ತಾರೆ. ಸಮಸಮಾಜದ ಕನಸನ್ನು ಕೈಗೂಡಿಸಿದ ಬಸವಣ್ಣನವರನ್ನೂ ಜಾತಿಗೆ ಸೀಮಿತಗೊಳಿಸಿ ಅವರನ್ನೂ ಅವಮಾನಿಸುತ್ತಾರೆ.

2018ರಲ್ಲಿ ಧರ್ಮ ಮಾನ್ಯತೆ ನೀಡಿದ ಸಿದ್ಧರಾಮಯ್ಯನವರ ಸೋಲಿಗೆ ಲಿಂಗಾಯತರು ಕಾರಣ ಎನ್ನುತ್ತಾರೆ. ಅಂದು ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾರವರು ಲಿಂಗಾಯತ ಮಠಗಳೆಲ್ಲವನ್ನು ಸುತ್ತಿ ಕೊಡಬೇಕಾದ ಎಲ್ಲವನ್ನು (???) ಕೊಟ್ಟು ಲಿಂಗಾಯತ ಸ್ವಾಮಿಗಳಿಂದಲೇ ಬಸವಣ್ಣನವರನ್ನು ದೂರ ಮಾಡುತ್ತಾರೆ.

ಇತ್ತ ಕಾಂಗ್ರೆಸ್ಸಿನ ಕೆಲ ನಾಯಕರು ಕೂಡ ಉರಿಯುವ ಮನೆಯಲ್ಲಿ ಗಳ ಹಿರಿಯುವ ಕೆಲಸ ಮಾಡುತ್ತಾರೆ. ಲಿಂಗಾಯತರು ಮುಂದೆ ಬಂದರೆ ಜಗತ್ತೆ ಮುಳುಗುತ್ತದೆ ಎಂಬಂತೆ ವರ್ತಿಸುತ್ತಾರೆ. ಲಿಂಗಾಯತರೆಂದರೆ ಲಿಂಗ ಧರಿಸಿದ ಸಮಸ್ತರು ಎಂಬುದನ್ನು ಮರೆತು, ಕೇವಲ ಮೇಲ್ವರ್ಗದ ಪಂಚಮಸಾಲಿ, ಬಣಜಿಗ, ಜಂಗಮ, ಸಾದರ, ನೊಣಬ, ರೆಡ್ಡಿ, ಗಾಣಿಗ, ಕೂಡಒಕ್ಕಲಿಗ ಸಮಾಜದವರು ಮಾತ್ರ ಲಿಂಗಾಯತರು ಎನ್ನುತ್ತ ಬಸವಣ್ಣನವರ ಕಲ್ಪನೆಯ ಲಿಂಗಾಯತರನ್ನು ಪರಿಗಣಿಸದೆ, ಅವರನ್ನೆಲ್ಲ ಹಿಂದೂಗಳೆಂದು ಪರಿಗಣಿಸಿ ಶರಣರ ಮುಖ್ಯ ಆಶಯಕ್ಕೆ ಕೊಳ್ಳಿ ಇಡುತ್ತಾರೆ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಲಿಂಗಾಯತವನ್ನೂ ಹಿಂದೂ ಧರ್ಮದಲ್ಲಿರುವ ಏಣಿಶ್ರೇಣಿ ಜಾತಿಯಲ್ಲಿ ಸೇರಿಸಲು ಇಚ್ಛೆಪಡುತ್ತಾರೆ.

ಇದನ್ನು ಓದಿದ್ದೀರಾ?: ವಚನಯಾನ | ಉದರ ವೈರಾಗ್ಯವುಳ್ಳ ನಕಲಿ ಫಕೀರರು

2018ರಲ್ಲಿ ‘ಧರ್ಮ ಒಡೆದ ಕಾರಣ ಕಾಂಗ್ರೆಸ್ಸಿಗೆ ಸೋಲಾಯಿತು’ ಎಂದು ಕಾಗೆ ಹಾರಿಸುತ್ತಾರೆ. ಆನೆ ಬಿದ್ದಾಗ ಆಳಿಗೊಂದು ಕಲ್ಲು ಎಂಬಂತೆ ಲಿಂಗಾಯತಕ್ಕೆ ಕಲ್ಲೆಸೆದು, ತಮ್ಮ ವೈಫಲ್ಯಕ್ಕೆ ಲಿಂಗಾಯತರೇ ಹೊಣೆ ಎನ್ನುತ್ತಾರೆ. ಆದರೆ ಆಳುವ ಸರ್ಕಾರಗಳು ಕಳೆದ ನಲ್ವತ್ತು ವರ್ಷಗಳಲ್ಲಿ ಮರಳಿ ಅಧಿಕಾರಕ್ಕೆ ಬಂದಿಲ್ಲವೆಂಬ ಸತ್ಯವನ್ನು ಮುಚ್ಚಿಡುತ್ತಾರೆ. ಸಿದ್ಧರಾಮಯ್ಯನವರ ಬಸವಪರ ನಿಲುವಿನಿಂದಾಗಿಯೇ 85 ಶಾಸಕರು ಚುನಾಯಿತರಾಗಿದ್ದನ್ನು ಮರೆಮಾಚಿ ತಮ್ಮ ಸೋಲಿಗೆ ಅವರ ಜನಪ್ರಿಯ ಯೋಜನೆಗಳನ್ನೇ ದೂರುತ್ತಾರೆ. ತಾವು ಅಂದು ಸೋಲುಂಡಿದ್ದು ತಮ್ಮ ವೈಯಕ್ತಿಕ ವೈಫಲ್ಯ ಮತ್ತು ತಮ್ಮ ಪಕ್ಷದಲ್ಲಿರುವ ಕೆಲ ಬಲಾಢ್ಯ ನಾಯಕರ ಒಳ ಒಪ್ಪಂದದಿಂದಾಗಿ ಎಂಬ ಕಾರಣ ಮರೆಮಾಚುತ್ತಾರೆ.

ನಿಜಲಿಂಗಾಯತರು ಸತ್ಯದ ಪರವಾಗಿದ್ದಾರೆ. ಇವನಾರವ ಇವನಾರವ ಎನ್ನದೆ ಸಮಸಮಾಜವನ್ನು ಬಯಸುವ ಪಕ್ಷವನ್ನು ಅವರು ಬೆಂಬಲಿಸುತ್ತಾರೆ. ಇವರು ಕಾಂಗ್ರೆಸ್ಸಿಗೆ ಹತ್ತಿರ ಎಂದು ಕಾಣಲು ಬಸವಣ್ಣನವರ ಸಮಾಜವಾದಿ ಸಿದ್ಧಾಂತ ಕಾಂಗ್ರೆಸ್ ಪಕ್ಷಕ್ಕೆ ಹತ್ತಿರವಾಗಿರುವುದರಿಂದ ಇತ್ತ ಬಿಜೆಪಿ “ಒಂದು ಧರ್ಮ, ಒಂದು ದೇಶ, ಒಬ್ಬ ನಾಯಕ”ನೇ ತಮ್ಮ ಸಿದ್ಧಾಂತ ಎನ್ನುತ್ತದೆ. ಆದರೆ ಲಿಂಗಾಯತವು ಪ್ರಜಾಸತ್ತಾತ್ಮಕ ಆಡಳಿತ ಬಯಸುತ್ತದೆ. ಎಲ್ಲರೂ ಸಮಾನರು ಎನ್ನುತ್ತದೆ. ಸಹಬಾಳ್ವೆ, ಸಮಾನತೆ, ಸಹಕಾರ, ಮೌಢ್ಯರಹಿತ ಸಮಾಜದ ಆಶಯ ಲಿಂಗಾಯತದ ಸಿದ್ಧಾಂತ. ಲಿಂಗಾಯತದ ಪ್ರಮುಖ ಸಿದ್ಧಾಂತವಾದ ‘ದಾಸೋಹ’ ‘ಬಂಡವಾಳಶಾಹಿ’ಗೆ ವ್ಯತಿರಿಕ್ತವಾಗಿದೆ. ಶರಣರು ಬಂಡವಾಳಶಾಹಿಯ ವಿರುದ್ಧವಾಗಿದ್ದರು.

ಲಿಂಗಾಯತ ಮತ್ತು ಹಿಂದೂ ಧರ್ಮದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ‘ಹಿಂದೂ ನಾವೆಲ್ಲ ಒಂದು’ ಹೇಳುವುದನ್ನು ಲಿಂಗಾಯತರು ನಂಬುವುದಿಲ್ಲ. ಕಾರಣ ನಿಮ್ಮ ಸಿದ್ಧಾಂತ ಅದಲ್ಲ. ಕಣ್ಣಿಗೆ ಬಟ್ಟೆ ಕಟ್ಟಿ ಬಾವಿಗೆ ತಳ್ಳುವ ತಂತ್ರ ಎಂಬ ಭಾವನೆ ತರಿಸುತ್ತದೆ. ಶರಣರು ಹೇಳಿಲ್ಲವೆ ‘ತಮಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ’ ಎಂದು. ಮೇಲಾಗಿ ಈ ಪಕ್ಷದ ನಿಯಂತ್ರಕರು ಮತ್ತು ವರಿಷ್ಠ ನಾಯಕರು ಇದೇ ಸಿದ್ಧಾಂತದವರು.

ಬಸನಗೌಡರಾಗಲಿ, ಯಡಿಯೂರಪ್ಪನವರಾಗಲಿ, ಶೆಟ್ಟರರವರಾಗಲಿ ಅಥವಾ ಬೊಮ್ಮಾಯಿಯವರಾಗಲಿ ನಮ್ಮ ವಿರೋಧಿಗಳಲ್ಲ. ಅವರು ನಮ್ಮ ಸೈದ್ಧಾಂತಿಕ ವಿರೋಧಿಗಳಷ್ಟೇ. ಅದರಂತೆ ನಿಜಲಿಂಗಾಯತರಾದ ಸಿದ್ಧರಾಮಯ್ಯನವರು, ಎಂ.ಬಿ. ಪಾಟೀಲ ಮತ್ತಿತರರು ನಿಜ ಲಿಂಗಾಯತರಾಗಿದ್ದಕ್ಕೆ ಪ್ರೀತಿಸುತ್ತೇವೆ. ಅವರ ಸಿದ್ಧಾಂತ ಮತ್ತು ಬಸವಣ್ಣನವರ ಬಗ್ಗೆ ಅವರಿಗಿದ್ದ ಪ್ರೀತಿಗಾಗಿ ಅವರನ್ನು ಆಧರಿಸುತ್ತೇವೆ.

ಲಿಂಗಾಯತರು ಸರ್ವ ಸ್ವತಂತ್ರರು. ಬಿಜ್ಜಳ ರಾಜನನ್ನೆ ಧಿಕ್ಕರಿಸಿದ ಸ್ವಾಭಿಮಾನಿಗಳು. ನೀವು ಅವರನ್ನು ‘ಗುಲಾಮರೆಂತಾಗಲಿ’, ‘ಕೊಳ್ಳುವ ಸರಕೆಂತಾಗಲಿ ಭಾವಿಸಬೇಡಿ’. ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿಯವರ ಒಂದು ಮಾತನ್ನು ನೆನಸಿಕೊಳ್ಳುತ್ತ ಲೇಖನ ಮುಗಿಸುತ್ತೇನೆ.

“ಆರಂಭದಲ್ಲಿ ಬಸವೇಶ್ವರನಿಗೆ ಸಹಾಯವಾದವರು ಪ್ರಮುಖ ಸಮಾಜದವರಲ್ಲ. ಅವನಿಗೆ ಸಹಾಯವಾದವರು ಒಬ್ಬ ಅಗಸ, ಒಬ್ಬ ಕಿನ್ನರಿ ಬಾರಿಸುವವ, ಒಬ್ಬ ಮುದ್ದಲಿಗ, ಒಬ್ಬ ಒಡ್ಡರ ನಾಯಕ, ಒಬ್ಬ ನಾಪಿತ, ಹೊಲೆಯ, ಡೋರ, ಕಟ್ಟಿಗೆ ಮಾರಿ ಜೀವಿಸುವನೊಬ್ಬ, ದೇಶತ್ಯಾಗ ಮಾಡಿದ ಒಬ್ಬ ಸ್ತ್ರಿ, ಇಂಥವರೆ ಇದ್ದಾರೆ. ಕ್ರೈಸ್ತನಿಗೆ ಮೊದಲ ಅನುಯಾಯಿಗಳಾದವರು ಇಂಥವರೇ. ಮಹಮ್ಮದ, ಬುದ್ಧ ಇವರ ಸ್ಥಿತಿಯಾದರೂ ಹೀಗೇ ಇದೆ. ಮೇಲಿನ ತರಗತಿಯ ಸಮಾಜದವರು ಇಂಥ ಮಹಾತ್ಮರನ್ನೂ ಆರಂಭದಲ್ಲಿ ಪೀಡಿಸುತ್ತಾರೆ.” ಎಂದು ನೂರು ವರ್ಷಗಳ ಹಿಂದೆ ಬರೆಯುತ್ತಾರೆ.

ಏಣಿ ಶ್ರೇಣಿ ಬಯಸುವ, ಮನು ಸಿದ್ಧಾಂತದ ಬಿಜೆಪಿಗರಾದ ಗೌಡ್ರುಗಳೆ, ಸಾಹುಕಾರರೆ ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ ಸ್ವಾಮಿ. ನಿಜವಾಗಲೂ ನಿಮಗೆ ನಾವು ಬೇಕಾಗಿದ್ದಲ್ಲಿ ಲಿಂಗಾಯತಕ್ಕೆ ಧರ್ಮ ಮಾನ್ಯತೆ ನೀಡಿ. ನಂತರ ನಮ್ಮ ಬಗ್ಗೆ ಯೋಚಿಸಿ.

?s=150&d=mp&r=g
ಜಿ.ಬಿ ಪಾಟೀಲ್
+ posts
ಜಿ ಬಿ ಪಾಟೀಲ್
ಜಿ ಬಿ ಪಾಟೀಲ್‌

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X