ಮನೆಯಲ್ಲಿ ನೋಟು ಎಣಿಸುವ ಯಂತ್ರ ಇಟ್ಟುಕೊಂಡಿರುವ, ಮಗನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಹೈಕಮಾಂಡ್ ಅನ್ನು ಓಲೈಸುತ್ತಿರುವ, ಆರೆಸ್ಸೆಸ್ ಹಿನ್ನೆಲೆಯ ‘ಶಿಸ್ತಿನ ಸಿಪಾಯಿ’ ಕೆ ಎಸ್ ಈಶ್ವರಪ್ಪರ 'ಅಶಿಸ್ತಿನ' ಹೇಳಿಕೆ ರಾಜ್ಯದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ, ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
ಕೆ ಎಸ್ ಈಶ್ವರಪ್ಪ ಮತ್ತೊಮ್ಮೆ ತಮ್ಮ ಬಿಡುಬೀಸು ಹೇಳಿಕೆಯಿಂದ ಸುದ್ದಿಯಾಗಿದ್ದಾರೆ. ಸಾಮಾನ್ಯವಾಗಿ ತಮ್ಮ ಹೇಳಿಕೆಗಳಿಂದ ವಿರೋಧಿಗಳನ್ನು ಕೆಣಕುತ್ತಿದ್ದ ಈಶ್ವರಪ್ಪನವರು ಈ ಬಾರಿ ಸ್ವಂತ ಪಕ್ಷದವರನ್ನೇ ಕುಟುಕಿದ್ದಾರೆ. ಆದರೆ, ಎಂದಿನಂತೆ, ಈಶ್ವರಪ್ಪರ ಸುಳ್ಳು ಮತ್ತು ಅರೆಸತ್ಯದ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ.
‘ಬಿಜೆಪಿಯಲ್ಲಿ ಸದ್ಯ ಅಶಿಸ್ತು ಮೂಡಿದೆ, ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ವಲಸಿಗರು ಬಂದ ನಂತರ ಪಕ್ಷದಲ್ಲಿ ಅಶಿಸ್ತು ಮೂಡಿದ್ದು, ಅಶಿಸ್ತು ತೋರುವವರ ಬಾಲವನ್ನು ಕಟ್ ಮಾಡುತ್ತೇವೆ’ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಅವರ ಹೇಳಿಕೆಯ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿದರೆ, ಈಶ್ವರಪ್ಪನವರ ಮತ್ತು ಬಿಜೆಪಿ ಪಕ್ಷದ ಬಗೆಗಿನ ಹಲವು ಸತ್ಯಗಳು ಅನಾವರಣಗೊಳ್ಳುತ್ತವೆ.
ಬಿಜೆಪಿಯಲ್ಲಿ ಅಶಿಸ್ತು ಮೂಡಿದೆ ಎಂದು ಈಶ್ವರಪ್ಪನವರು ಹಲುಬಿದ್ದಾರೆ. ಅದು ನಿಜ. ಬಸನಗೌಡ ಪಾಟೀಲ್ ಯತ್ನಾಳ್- ಮುರುಗೇಶ್ ನಿರಾಣಿ ನಡುವಿನ ಬಹಿರಂಗ ಜಗಳ, ಬಸವರಾಜ ಬೊಮ್ಮಾಯಿ – ಯತ್ನಾಳ್ ನಡುವಿನ ವಾಕ್ಸಮರ ಇತ್ಯಾದಿಗಳನ್ನು ನೋಡಿದರೂ ಸಾಕು, ಬಿಜೆಪಿಯಲ್ಲಿ ಎಷ್ಟರಮಟ್ಟಿಗೆ ಅಶಿಸ್ತು ತಾಂಡವವಾಡುತ್ತಿದೆ ಎನ್ನುವುದು ಅರಿವಿಗೆ ಬರುತ್ತದೆ. ಕೋಲಾರ, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವು ಕಡೆ ಬಿಜೆಪಿಯ ಸಭೆಗಳಲ್ಲಿ ಇಂಥ ಜಗಳ, ಕೆಸರೆರೆಚಾಟ, ಮನಸ್ತಾಪ, ವಾಕ್ಸಮರಗಳು ನಡೆದಿದ್ದು ವರದಿಯಾಗಿದೆ. ಆದರೆ, ಇಂಥ ಜಗಳಗಳಿಗೆ ಕಾರಣ ಎಂದು ಈಶ್ವರಪ್ಪನವರು ಬೊಟ್ಟು ಮಾಡಿ ತೋರಿಸುತ್ತಿರುವುದರ ಬಗ್ಗೆ ಈಗ ಚರ್ಚಯಾಗುತ್ತಿದೆ.
‘ಬಿಜೆಪಿಗೆ ಬಂದ ವಲಸಿಗರಿಂದ ಪಕ್ಷದಲ್ಲಿ ಅಶಿಸ್ತು ಮೂಡಿದೆ’ ಎನ್ನುವುದು ಈಶ್ವರಪ್ಪನವರ ಮಾತು. ವಲಸಿಗರನ್ನು ಆಪರೇಷನ್ ಕಮಲದ ಅನೈತಿಕ ಮಾರ್ಗದಿಂದ ಕರೆತಂದು, ಬಿಜೆಪಿ ಸರ್ಕಾರ ರಚನೆ ಮಾಡಿ, ಆ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದ ಸನ್ಮಾನ್ಯ ಈಶ್ವರಪ್ಪನವರಿಗೆ ವಲಸಿಗರಿಂದ ಪಕ್ಷಕ್ಕೆ ಕೆಟ್ಟ ಹೆಸರು ಬರಬಹುದೆನ್ನುವ ತಿಳಿವಳಿಕೆ ಆಗ ಇರಲಿಲ್ಲ ಎನ್ನುವುದೇ ಒಂದು ಚೋದ್ಯ. ಅದರ ಬಗ್ಗೆ ಎಂದೂ ಚಕಾರ ಎತ್ತದಿದ್ದ ಈಶ್ವರಪ್ಪನರಿಗೆ, ಬಿಜೆಪಿಯ ಅಂಥ ಚಟುವಟಿಕೆಗಳನ್ನು ನೋಡಿ ರೋಸಿದ ಕರ್ನಾಟಕದ ಜನ ಆ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್‌ಗೆ ಬಹುಮತ ಕೊಟ್ಟು ಗೆಲ್ಲಿಸಿದ ನಂತರ ಇಂಥದ್ದೊಂದು ಜ್ಞಾನೋದಯವಾಗಿರುವುದು ವಿಚಿತ್ರವಾಗಿದೆ.
ಈ ಸುದ್ದಿ ಓದಿದ್ದೀರಾ: ವರ್ತಮಾನ | ಉಚಿತ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆಯೇ?
ಅಧಿಕಾರ ಇದ್ದಾಗ ತನ್ನ ಜಾತಿ, ತನ್ನ ಹಿನ್ನೆಲೆ, ಬಿಜೆಪಿಯ ಗರ್ಭಗುಡಿ ಸಂಸ್ಕೃತಿ ಎಲ್ಲವನ್ನೂ ಮರೆತು ಅಧಿಕಾರ ಅನುಭವಿಸುವುದು ಈಶ್ವರಪ್ಪನವರ ಜಾಯಮಾನ. ಹಿಂದೆ ಕೂಡ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ಹಲವು ಬಾರಿ ಸಾಬೀತಾಗಿದೆ. ತಮ್ಮನ್ನು ಮಂತ್ರಿ ಮಾಡಲು ವಿಳಂಬ ಮಾಡಿದರೆ, ಆಗ ಅವರಲ್ಲಿನ ‘ಕುರುಬ ಪ್ರಜ್ಞೆ’ ಜಾಗೃತಗೊಂಡು ‘ರಾಯಣ್ಣ ಬ್ರಿಗೇಡ್’ ಎಂದು ಹೊರಡುತ್ತಿದ್ದರು. ಸಮಯಕ್ಕೆ ಸರಿಯಾಗಿ ಅಧಿಕಾರ ಸಿಕ್ಕರೆ, ಬಿಜೆಪಿ ಹೈಕಮಾಂಡ್ ಅನ್ನು, ಯಡಿಯೂರಪ್ಪನವರನ್ನು ಹೊಗಳಿಕೊಂಡು ಕಾಲ ಹಾಕುತ್ತಿದ್ದರು.
ಹೀಗೆ ಅಧಿಕಾರ ಸಿಕ್ಕಾಗ ಈಶ್ವರಪ್ಪನವರು ಏನು ಮಾಡಿದರು ಎನ್ನುವುದನ್ನು ನೋಡಿದರೂ ಅವರ ಆದ್ಯತೆಗಳೇನು ಎನ್ನುವುದು ತಿಳಿಯುತ್ತವೆ. ಬಿಜೆಪಿ ಸರ್ಕಾರದಲ್ಲಿದ್ದ ಕೆ ಸುಧಾಕರ್, ಮುನಿರತ್ನ ಮುಂತಾದವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಅವರೆಲ್ಲ ವಲಸಿಗರು, ಸರಿ. ಆದರೆ, ಬಿಜೆಪಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಈಶ್ವರಪ್ಪನವರ ವಿರುದ್ಧ 40% ಕಮಿಷನ್ ಆರೋಪ ಬಂದಿತ್ತು ಎನ್ನುವುದನ್ನು ಮರೆಯಲಾದೀತೆ? ಗುತ್ತಿಗೆದಾರ ಸಂತೋಷ್ ಪಾಟೀಲ್ ನೇರವಾಗಿ ಈಶ್ವರಪ್ಪನವರ ವಿರುದ್ಧ ಲಂಚಾವತಾರದ ಆರೋಪ ಮಾಡಿದ್ದರಲ್ಲದೇ, ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದರು. ಅದರಿಂದಾಗಿ ಈಶ್ವರಪ್ಪನವರು ಸಚಿವ ಸ್ಥಾನ ತೊರೆಯಬೇಕಾಗಿ ಬಂದಿತ್ತು. ಇದೆಲ್ಲ ಯಾವ ಅರ್ಥದಲ್ಲಿ, ಯಾವ ಕೋನದಲ್ಲಿ ಶಿಸ್ತಿನ ನಡವಳಿಕೆಯಾಗಿತ್ತು ಎಂದು ಈಶ್ವರಪ್ಪನವರೇ ಹೇಳಬೇಕು.
ಸಿಡಿ ಕೇಸ್‌ನಲ್ಲಿ ಸಿಲುಕಿದ ರಮೇಶ್ ಜಾರಕಿಹೊಳಿಯವರನ್ನು ವಲಸಿಗರು ಎಂದೇ ಪರಿಗಣಿಸೋಣ. 2013ರಲ್ಲಿ ಇಂಥದ್ದೇ ಸೆಕ್ಸ್ ಸಿಡಿ ಪ್ರಕರಣದಲ್ಲಿ ಸಿಲುಕಿದ್ದ ಉಡುಪಿ ಶಾಸಕ ರಘುಪತಿ ಭಟ್ ಅವರೂ ಕೂಡ ಆರೆಸ್ಸೆಸ್ ಹಿನ್ನೆಲೆಯಿಂದಲೇ ಬಿಜೆಪಿಗೆ ಬಂದವರೆನ್ನುವುದನ್ನು ಈಶ್ವರಪ್ಪನವರು ಮರೆತರೆ? 2014ರಲ್ಲಿ ಮೈಸೂರಿನ ಎಸ್ ಎ ರಾಮದಾಸ್ ಅವರ ಪ್ರೇಮ ಪ್ರಕರಣ ವಿವಾದವಾಗಿ ಮಾರ್ಪಟ್ಟಿದ್ದು ಹೇಗೆ? ಪ್ರೀತಿಸಿದಾಕೆಗೆ ವಂಚನೆ ಮಾಡಿದ ಆರೋಪಕ್ಕೆ ಗುರಿಯಾಗುವುದು ಯಾವ ರೀತಿಯ ಶಿಸ್ತಿನ ನಡವಳಿಕೆ ಎನ್ನುವುದನ್ನು ಈಶ್ವರಪ್ಪನವರು ವಿವರಿಸುವರೆ?
ಅದಕ್ಕೂ ಹಿಂದೆ, 2012ರಲ್ಲಿ, ಇವರ ಶಿಸ್ತಿನ ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದ ಲಕ್ಷ್ಮಣ ಸವದಿ, ಸಿ ಸಿ ಪಾಟೀಲ್, ಕೃಷ್ಣ ಪಾಲೇಮಾರ್ ಕಲಾಪದಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಿದ್ದು ದೊಡ್ಡ ವಿವಾದವಾಗಿತ್ತು. ಅದಕ್ಕಿಂತಲೂ ಆಘಾತಕಾರಿ ವಿಚಾರವೇನೆಂದರೆ, 2009ರಲ್ಲಿ ಹರತಾಳು ಹಾಲಪ್ಪನವರ ವಿರುದ್ಧ ಗೆಳೆಯನ ಪತ್ನಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪ ವ್ಯಕ್ತವಾಗಿ, ಅದರಿಂದಾಗಿ ಮಂತ್ರಿಯಾಗಿದ್ದ ಹಾಲಪ್ಪ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಅದೊಂದು ಹೇಯ ಕೃತ್ಯವೆಂದು ವ್ಯಾಪಕ ಟೀಕೆ ಎದುರಾಗಿತ್ತು.
ಬಿಜೆಪಿಯ ಸಂಘನಿಷ್ಠ ಸೇವಕರಿಂದ ಇಂಥ ನೂರೆಂಟು ಹಗರಣಗಳು, ವಿವಾದಗಳು ಆಗಿಹೋಗಿವೆ. ಅದನ್ನೆಲ್ಲ ಸಹಿಸಿಕೊಂಡು ಇಷ್ಟು ದಿನ ಕಂಡೂ ಕಾಣದಂತೆ ಇದ್ದ ಈಶ್ವರಪ್ಪನವರು ಚುನಾವಣೆಯಲ್ಲಿ ತಮ್ಮ ಪಕ್ಷ ಸೋತ ನಂತರ ಅದರ ಹೊರೆಯನ್ನು ವಲಸಿಗರ ಮೇಲೆ ಹೊರಿಸುತ್ತಿರುವುದು ಆತ್ಮವಂಚನೆಯಾಗಿದೆ.
ಈ ಸುದ್ದಿ ಓದಿದ್ದೀರಾ: ಪ್ರಧಾನಿಯನ್ನು ಗಲ್ಲಿಗಲ್ಲಿ ಸುತ್ತಿಸಿದ್ದೇ ಬಿಜೆಪಿ ಸೋಲಿಗೆ ಕಾರಣ : ರೇಣುಕಾಚಾರ್ಯ ಹೊಸ ಬಾಂಬ್
ಇಂದು ಆಪರೇಷನ್ ಕಮಲ ಎನ್ನುವುದು ಇಂದು ಕೇವಲ ಭಾರತ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಕುಖ್ಯಾತಿ ಪಡೆದಿದೆ. ಅಧಿಕಾರ ನಡೆಸಲು ವಲಸಿಗರು ಬೇಕು, ಅವರಿಂದ ಕೆಟ್ಟ ಹೆಸರು ಮಾತ್ರ ಬೇಡ ಎನ್ನುವ ಈಶ್ವರಪ್ಪನವರ ಧೋರಣೆ ತಮಾಷೆಯಾಗಿದೆ. ಈಶ್ವರಪ್ಪನವರಿಗೆ ಗೊತ್ತಿಲ್ಲದೇ ಇರುವ ವಿಚಾರವೇನೆಂದರೆ, ಕೇವಲ ಕರ್ನಾಟಕದಲ್ಲಿ ಮಾತ್ರವೇ ಅಲ್ಲ, ದೇಶದಲ್ಲಿ ಬಿಜೆಪಿ ಎಲ್ಲೆಲ್ಲಿ ಅಧಿಕಾರದಲ್ಲಿದೆಯೋ ಅಲ್ಲೆಲ್ಲ ಆ ಪಕ್ಷದಲ್ಲಿರುವ ಶಾಸಕರು, ಮಂತ್ರಿಗಳ ಪೈಕಿ ಶೇ.25ರಷ್ಟು ಮಂದಿ ವಲಸಿಗರೇ ಆಗಿದ್ದಾರೆ. ಅಷ್ಟು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಲು ಕಾರಣಕರ್ತರಾಗಿರುವವರೇ ಆ ವಲಸಿಗರು.
ಈಶ್ವರಪ್ಪನವರು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದರು. ತಮ್ಮ ಬಿಡುಬೀಸು ಹೇಳಿಕೆಗಳಿಗೆ ಹೆಸರಾಗಿದ್ದ ಈಶ್ವರಪ್ಪನವರು ಇನ್ನು ಮುಂದಾದರೂ ಅಂಥ ಹೇಳಿಕೆ ನೀಡುವುದನ್ನು ನಿಲ್ಲಿಸಬಹುದೆಂದು ಕೆಲವರು ಅಪೇಕ್ಷಿಸಿದ್ದರು. ಆದರೆ, ಈಶ್ವರಪ್ಪನವರು ತಾವು ಸುಮ್ಮನಿರುವವರಲ್ಲ ಎನ್ನುವುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ.
ಮನೆಯಲ್ಲಿ ನೋಟು ಎಣಿಸುವ ಯಂತ್ರ ಇಟ್ಟುಕೊಂಡಿರುವ, ಮಗನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಹೈಕಮಾಂಡ್ ಅನ್ನು ಓಲೈಸುತ್ತಿರುವ, ಆರೆಸ್ಸೆಸ್ ಹಿನ್ನೆಲೆಯ ‘ಶಿಸ್ತಿನ ಸಿಪಾಯಿ’ ಈಶ್ವರಪ್ಪನವರು ಇನ್ನು ಮುಂದಾದರೂ ಸತ್ಯ ಮಾತಾಡಲಿ ಎನ್ನುವುದು ರಾಜ್ಯದ ಜನರ ಅಪೇಕ್ಷೆ.