ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ರಾಜ್ಯ ಬಿಜೆಪಿ ಘಟಕ ಬುಧವಾರ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿತು.
ಹುಬ್ಬಳ್ಳಿಯ ಶಹರ ಠಾಣೆ ಎದುರು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆದಿದೆ. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಉಪಸ್ಥಿತಿಯಲ್ಲಿ ಪ್ರತಿಭಟನೆ ನಡೆದಿದೆ.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಆರ್ ಅಶೋಕ್, “ರಾಮ ಭಕ್ತರನ್ನು ಬಂಧಿಸುವ ಹುನ್ನಾರ ಕಾಂಗ್ರೆಸ್ ಮಾಡುತ್ತಿದೆ. ರಾಜ್ಯದಲ್ಲಿ ಸುಮಾರು 56,000 ಪೆಂಡಿಂಗ್ ಕೇಸ್ಗಳು ಇವೆ. ಆದರೆ, ಅವೆಲ್ಲವನ್ನು ಬಿಟ್ಟು ಹುಬ್ಬಳ್ಳಿ ಕಡೆ ಬಂದಿರೋದು ಯಾಕೆ? ಕರಸೇವಕರನ್ನು ಹುಡುಕಿ ಬಂಧನ ಮಾಡಿದ್ದು ನ್ಯಾಯವಾ? ರಾಮನ ಮೇಲೆ ಕಾಂಗ್ರೆಸ್ಗೆ ಕೋಪ ಏಕೆ” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಚೀಟಿಂಗ್ ಕೇಸ್ ಇಲ್ವಾ ಎಂದು ಪ್ರಶ್ನಿಸಿದ ಅಶೋಕ್, ಹಿಂದೂ ಕಾರ್ಯಕರ್ತರನ್ನು ಹುಡುಕಿ ಹುಡುಕಿ ಕೇಸ್ ಹಾಕುತ್ತಿದ್ದಾರೆ. ಕೂಡಲೇ ಜೈಲಿನಿಂದ ಶ್ರೀಕಾಂತ ಪೂಜಾರಿ ಬಿಡುಗಡೆ ಮಾಡಬೇಕು. ನನ್ನ ಮೇಲೂ ಕೇಸ್ ಇದೆ ಬಂಧಿಸಿ ನೋಡೋಣ ಎಂದು ಸರ್ಕಾರಕ್ಕೆ ಸವಾಲೆಸೆದರು.
ಪ್ರತಿಭಟನಾಕಾರರು, ಸಿಎಂ ಸಿದ್ದರಾಮಯ್ಯ ಮತ್ತು ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ವಿರುದ್ಧ ಧಿಕ್ಕಾರ ಕೂಗಿದರು. “ನಾವು ರಾಮ ಭಕ್ತರಾಗಿ ಬಂದಿದ್ದೇವೆ, ಆಂಜನೇಯ ಆಗೋಕೆ ಬಿಡಬೇಡಿ” ಇದೇ ವೇಳೆ ಅಶೋಕ್ ಅವರು ಪೊಲೀಸರಿಗೆ, ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.
48 ಗಂಟೆಗಳ ಗಡುವನ್ನು ಮುಖ್ಯಮಂತ್ರಿಗಳಿಗೆ, ರಾಜ್ಯ ಸರ್ಕಾರಕ್ಕೆ ನೀಡುತ್ತಿದ್ದೇವೆ. 48 ಗಂಟೆಯೊಳಗಡೆ ರಾಮಭಕ್ತ ಶ್ರೀಕಾಂತ್ ಪೂಜಾರಿ ಅವರನ್ನು ಬಿಡುಗಡೆ ಮಾಡದಿದ್ದರೆ, ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತೇವೆ.
– ಶ್ರೀ @BYVijayendra, ರಾಜ್ಯಾಧ್ಯಕ್ಷರು#RamaVirodhiCongress pic.twitter.com/EE39fndcO4
— BJP Karnataka (@BJP4Karnataka) January 3, 2024
ಬೆಂಗಳೂರಲ್ಲೂ ಪ್ರತಿಭಟನೆ
“ರಾಜ್ಯದ ಕಾಂಗ್ರೆಸ್ ಸರಕಾರವು ಕರಸೇವಕರನ್ನು ಬಂಧಿಸುತ್ತಿರುವುದು ಖಂಡನೀಯ” ಎಂದು ಶಾಸಕ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‍ಕುಮಾರ್ ಅವರು ತಿಳಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ, “1992ರಲ್ಲಿ ಕರಸೇವಕರನ್ನು ಹತ್ಯೆ ಮಾಡಲು ಮುಂದಾಗಿತ್ತು. ಈಗ ಜವಾಬ್ದಾರಿಯುತ ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರ ಹಿಂದೂ ವಿರೋಧಿ ನೀತಿ ಸ್ಪಷ್ಟವಾಗುತ್ತದೆ” ಎಂದು ಟೀಕಿಸಿದರು.
“ಅಲ್ಪಸಂಖ್ಯಾತರ ಬಗ್ಗೆ ಅತಿಯಾದ ಒಲವು ನಿಮ್ಮದು. ಹಿಂದೆ ಟಿಪ್ಪು ಜಯಂತಿ ಮಾಡಿದ್ದೀರಿ. ಕನ್ನಡ ಭಾಷಾ ಹೋರಾಟಗಾರರನ್ನು ಬಂಧಿಸುತ್ತೀರಿ. ರೈತ ವಿರೋಧಿ ನಿಲುವು ನಿಮ್ಮದು” ಎಂದರು.
ಮಾಜಿ ಸಚಿವ ಸಿ ಎನ್ ಅಶ್ವತ್ಥನಾರಾಯಣ್ ಮಾತನಾಡಿ, “ರಾಮಮಂದಿರ ನಮ್ಮ ಸ್ವಾಭಿಮಾನದ ಸಂಕೇತ. ಹಲವಾರು ಸವಾಲುಗಳ ಬಳಿಕ ಇದರ ಪುನರ್ ನಿರ್ಮಾಣವಾಗಿದೆ. ಕರ್ನಾಟಕ ಮಾತ್ರವಲ್ಲದೆ ಇಡೀ ದೇಶ ಸಂಭ್ರಮ ಪಡುವ ಈ ಸುಸಂದರ್ಭದಲ್ಲಿ ಕಾಂಗ್ರೆಸ್ ಸರಕಾರದ ಕ್ರಮ ಅತ್ಯಂತ ಆಕ್ಷೇಪಾರ್ಹ ಮತ್ತು ಖಂಡನೀಯ. ಸರಕಾರ ತನ್ನ ಭಂಡತನ ಕೈಬಿಡಬೇಕು. ಬಂಧಿತರನ್ನು ಬಿಡುಗಡೆ ಮಾಡದಿದ್ದರೆ ಹೋರಾಟ ತೀವ್ರವಾಗಲಿದೆ” ಎಂದು ಎಚ್ಚರಿಕೆ ನೀಡಿದರು.