ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನದಲ್ಲಿ ನಾವು ಯಾವುದೇ ದ್ವೇಷದ ರಾಜಕಾರಣ ಮಾಡುವುದಾಗಲಿ, ನಿರಪರಾಧಿಗಳನ್ನು ಬಂಧಿಸುವ ಕೆಲಸವಾಗಲಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕೊಪ್ಪಳ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ತಪ್ಪು ಮಾಡಿದವರಿಗೆ ಏನು ಮಾಡಬೇಕು? ಸುಮ್ಮನೆ ಬಿಟ್ಟುಬಿಡಬೇಕಾ? ಹೀಗಾಗಿ ಹಳೇ ಪ್ರಕರಣಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ. ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆ” ಎಂದರು.
“ನ್ಯಾಯಾಲಯದ ಸೂಚನೆ ಇದ್ದರೆ, ಅದರಂತೆ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅತಿಥಿ ಉಪನ್ಯಾಸಕರು ಪಾದಯಾತ್ರೆ ಮಾಡುವ ಬಗ್ಗೆ ಮಾತನಾಡಿ, “ಅವರೊಂದಿಗೆ ಮಾತನಾಡಿದ್ದರೂ ಪಾದಯಾತ್ರೆ ಮಾಡುತ್ತಿದ್ದಾರೆ. ಅವರನ್ನು ಖಾಯಂ ಮಾಡಿ ಎಂದು ಬೇಡಿಕೆ ಇದೆ. ಖಾಯಂ ಮಾಡುವುದು ಕಷ್ಟದ ಕೆಲಸ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಆಂಜನೇಯರಿಗೆ ಸಿದ್ದರಾಮಯ್ಯ ದೇವರು, ಮನೆಯಲ್ಲಿ ಅವರ ಫೋಟೋ ಇಟ್ಟು ಪೂಜಿಸಲಿ: ಶಾಸಕ ಯತ್ನಾಳ್
ರಾಮಮಂದಿರ ಉದ್ಘಾಟನೆಗೆ ಕೇವಲ ರಾಮಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ರಾಮಮಂದಿರದ ಮುಖ್ಯ ಅರ್ಚಕರು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, “ಯಾರಿಗೆ ಆಹ್ವಾನ ಹೋಗಿದೆ, ಬಿಟ್ಟಿದೆ ಎಂದು ಗೊತ್ತಿಲ್ಲ. ಆಹ್ವಾನ ಕೊಟ್ಟವರು ಹೋಗುತ್ತಾರೆ, ಇಲ್ಲದವರು ಇಲ್ಲ” ಎಂದರು.
“ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ 2 ಸಾವಿರ ರೂ.ಗಳನ್ನು ಒದಗಿಸಲಾಗಿದೆ. ಆಧಾರ್ ಲಿಂಕ್ ಮಾಡಿದ ನಂತರ ಮೊತ್ತ ರೈತರಿಗೆ ತಲುಪಲಿದೆ” ಎಂದು ತಿಳಿಸಿದರು.