ಮುಂಬೈನಲ್ಲಿ ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ ಸಭೆ ಆರಂಭವಾಗುವ ಒಂದು ದಿನ ಮೊದಲೇ ಒಕ್ಕೂಟದ ಪ್ರಮುಖ ಪಕ್ಷವಾದ ಎಎಪಿಯು ತಮ್ಮ ನಾಯಕ ಅರವಿಂದ್ ಕೇಜ್ರೀವಾಲ್ ‘ಇಂಡಿಯಾ’ ವತಿಯಿಂದ ಪ್ರಧಾನಿಯಾಗಲು ಅರ್ಹರು ಎಂದು ತಿಳಿಸಿದೆ.
ಎಎಪಿಯ ಕೆಲವು ನಾಯಕರು ಬುಧವಾರ (ಆಗಸ್ಟ್ 30) ಅರವಿಂದ್ ಕೇಜ್ರೀವಾಲ್ ಅವರನ್ನು ಪ್ರತಿಪಕ್ಷದ ‘ಇಂಡಿಯಾ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಬಯಸುವುದಾಗಿ ತಿಳಿಸಿದ್ದಾರೆ.
‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಪ್ರಶ್ನೆಗೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಎಎಪಿಯ ಮುಖ್ಯ ರಾಷ್ಟ್ರೀಯ ವಕ್ತಾರರಾದ ಪ್ರಿಯಾಂಕಾ ಕಕ್ಕರ್, “ನೀವು ನನ್ನನ್ನು ಕೇಳಿದರೆ, ಅರವಿಂದ ಕೇಜ್ರಿವಾಲ್ ಅವರು ವಿರೋಧ ಪಕ್ಷದ ಮೈತ್ರಿ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ನಾನು ಬಯಸುತ್ತೇನೆ” ಎಂದು ಹೇಳಿದರು.
”ಅರವಿಂದ್ ಕೇಜ್ರಿವಾಲ್ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದ್ದಾರೆ. ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲಾಗಿ ಹೊರಹೊಮ್ಮಿದ್ದಾರೆ. ಪ್ರಧಾನಿಯವರ ಶೈಕ್ಷಣಿಕ ದಾಖಲೆಗಳು ಅಥವಾ ವಿದ್ಯಾರ್ಹತೆಗಳು ಅಥವಾ ಯಾವುದೇ ಸಮಸ್ಯೆಯಾಗಿರಲಿ, ಅರವಿಂದ ಕೇಜ್ರಿವಾಲ್ ಅವರು ಅಸಂಖ್ಯಾತ ವಿಷಯಗಳ ಬಗ್ಗೆ ಧೈರ್ಯದಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ” ಎಂದು ತಿಳಿಸಿದರು.
ಪಕ್ಷದ ದೆಹಲಿ ಸಂಚಾಲಕ ಮತ್ತು ಪರಿಸರ ಸಚಿವ ಗೋಪಾಲ್ ರೈ ಅವರನ್ನು ಈ ಬಗ್ಗೆ ಕೇಳಿದಾಗ, ಎಎಪಿಯ ಪ್ರತಿಯೊಬ್ಬ ಸದಸ್ಯರು ಕೇಜ್ರಿವಾಲ್ ಅವರನ್ನು ಪ್ರಧಾನಿ ಹುದ್ದೆಗೆ ಬಯಸುತ್ತಾರೆ. ಆದರೆ ಅದರ ನಿರ್ಧಾರವನ್ನು ಇಂಡಿಯಾ ಬಣದ ಸದಸ್ಯರು ಮಾತ್ರ ಅಂತಿಮಗೊಳಿಸುತ್ತಾರೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೇಂದ್ರ ಕಾನೂನು ಸಚಿವ ‘ಭ್ರಷ್ಟಾಚಾರಿ ನಂ. 1’ ಎಂದ ಬಿಜೆಪಿ ಶಾಸಕ
“ಪ್ರತಿಯೊಂದು ಪಕ್ಷವೂ ತಮ್ಮ ನಾಯಕ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ. ಎಎಪಿ ಸದಸ್ಯರು ತಮ್ಮ ರಾಷ್ಟ್ರೀಯ ಸಂಚಾಲಕ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ. ಇಂಡಿಯಾ ಮೈತ್ರಿಕೂಟದ ಎಲ್ಲ ಸದಸ್ಯರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ” ಎಂದು ಗೋಪಾಲ್ ರೈ ಅವರು ತಿಳಿಸಿದ್ದಾರೆ.
ನವದೆಹಲಿಯ ಸಂಪುಟ ಸಚಿವೆ ಅತಿಶಿ ಮರ್ಲೆನಾ, “ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಡೀ ದೇಶಕ್ಕೆ ಪ್ರಯೋಜನವಾಗುವಂತಹ ಮಾದರಿ ಆಡಳಿತವನ್ನು ನೀಡಿದ್ದಾರೆ. ಅದರೆ ಅವರು ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಇಲ್ಲ. ಪ್ರಿಯಾಂಕಾ ಕಕ್ಕರ್ ಅವರ ನೀಡಿರುವ ಹೇಳಿಕೆ ವೈಯಕ್ತಿಕವಾದದ್ದು” ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಎಎಪಿಯ ಹಿರಿಯ ನಾಯಕ ಮತ್ತು ಆಗಿನ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಕೇಜ್ರಿವಾಲ್ ಅವರನ್ನು ಪ್ರಧಾನಿಯಾಗಲು ಒತ್ತಾಯಿಸಿದ್ದರು. ‘ಕೇಜ್ರಿವಾಲ್‌ಗೆ ಒಂದು ಅವಕಾಶ’ ರಾಷ್ಟ್ರಮಟ್ಟದ ಚರ್ಚೆಯಾಗಿದೆ. ಜನರು 2024 ರಲ್ಲಿ ಮೋದಿಗೆ ಪರ್ಯಾಯವಾಗಿ ಕೇಜ್ರಿವಾಲ್ ಅವರನ್ನು ನೋಡಲು ಬಯಸುತ್ತಾರೆ. ಏಕೆಂದರೆ ಕೇಜ್ರಿವಾಲ್ ಅವರು ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಮಾತನಾಡುತ್ತಾರೆ” ಎಂದು ತಿಳಿಸಿದ್ದರು.
ಪ್ರತಿಪಕ್ಷದ ‘ಇಂಡಿಯಾ’ ಒಕ್ಕೂಟದ ಮೂರನೇ ಸಭೆ ಮುಂಬೈನಲ್ಲಿ ಆಗಸ್ಟ್ 31 ಹಾಗೂ ಸೆ. 1 ರಂದು ನಡೆಯಲಿದೆ.