ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಸೋಮವಾರ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲು ಅಧಿಕಾರಿಗಳು ನೀಡಿದ ಹೇಳಿಕೆ ವಿಚಾರದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, “ಅರವಿಂದ್ ಕೇಜ್ರಿವಾಲ್ ಕೋಮಾಗೆ ಜಾರಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತಿಹಾರ್ ಜೈಲು ಅಧಿಕಾರಿಗಳು ನೀಡಿರುವ ಹೇಳಿಕೆಯಲ್ಲಿ “ದೆಹಲಿ ಮುಖ್ಯಮಂತ್ರಿ ಅವರು ಚೆನ್ನಾಗಿಯೇ ಇದ್ದಾರೆ ಮತ್ತು ಅವರ ಜೀವನಾವಶ್ಯಕತೆಗಳು ಸಾಮಾನ್ಯವಾಗಿವೆ” ಎಂದು ಉಲ್ಲೇಖಿಸಲಾಗಿದೆ. ಆದರೆ ಜೈಲು ಅಧಿಕಾರಿಗಳು ಕೈದಿಯ ವೈದ್ಯಕೀಯ ವರದಿಯನ್ನು ಬಿಡುಗಡೆ ಮಾಡುವ ಮೂಲಕ ಅಪರಾಧ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
“ಬಂಧನದ ನಂತರ ಅರವಿಂದ್ ಕೇಜ್ರಿವಾಲ್ 8.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಐದು ಬಾರಿ 50 mg/dL ಗಿಂತ ಕಡಿಮೆಯಾಗಿದೆ” ಎಂದು ಸಂಜಯ್ ಸಿಂಗ್ ತಿಳಿಸಿದ್ದಾರೆ.
“ಏಮ್ಸ್ ವೈದ್ಯರ ತಂಡವು ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯವನ್ನು ಪರೀಕ್ಷಿಸುತ್ತಿದೆ ಮತ್ತು ಕೇಜ್ರಿವಾಲ್ ಅವರು ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದಾರೆ. ಹೈಪೊಗ್ಲಿಸಿಮಿಯಾದಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಐದು ಬಾರಿ 50 mg/dL ಗಿಂತ ಕಡಿಮೆಯಾಗಿದೆ. ಇದರಿಂದಾಗಿ ಅವರು ಕೋಮಾಕ್ಕೆ ಜಾರಬಹುದು ಅಥವಾ ಸಾವನ್ನಪ್ಪಬಹುದು” ಎಂದು ಸಂಜಯ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆಯೇ?
“ಇದು ಅರವಿಂದ್ ಕೇಜ್ರಿವಾಲ್ ಅವರನ್ನು ಸಾವಿಗೆ ತಳ್ಳುವ ಸಂಚಾಗಿದೆ. ಅವರನ್ನು ಬಂಧಿಸಿದ ದಿನ, ಅವರ ತೂಕ 70 ಕೆಜಿ ಇತ್ತು, ಅದು ಈಗ 61.5 ಕೆಜಿಗೆ ಇಳಿದಿದೆ. ಕೇಜ್ರಿವಾಲ್ ಅವರ ಜೀವನದ ಜೊತೆ ಚೆಲ್ಲಾಟವಾಡಬೇಡಿ ಎಂದು ನಾನು ಪ್ರಧಾನಿ ಮೋದಿಗೆ ಮನವಿ ಮಾಡುತ್ತೇನೆ. ಏನಾದರೂ ಅಹಿತಕರ ಘಟನೆ ನಡೆದರೆ ಬಳಿಕ ಕೇಂದ್ರ ಸರ್ಕಾರಕ್ಕೆ ಉತ್ತರ ಹುಡುಕುವುದು ಕಷ್ಟವಾಗುತ್ತದೆ” ಎಂದು ಹೇಳಿದರು.
प्रधानमंत्री नरेंद्र मोदी और BJP ने @ArvindKejriwal जी की ज़िंदगी से खिलवाड़ करने का षड्यंत्र रचा है। जेल में अरविंद केजरीवाल के साथ कुछ भी अनहोनी हो सकती है।
AIIMS के डॉक्टर के द्वारा जारी की गई रिपोर्ट में कहा गया है कि केजरीवाल जी का वजन घटा है और उनका Sugar level कई बार 50… pic.twitter.com/SLBLdPfeKa
— AAP (@AamAadmiParty) July 15, 2024
ಆದರೆ ತಿಹಾರ್ ಜೈಲಿನ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಎಪಿ ಆರೋಪಗಳನ್ನು ತಿರಸ್ಕರಿಸಿದ್ದಾರೆ. “ಕೈದಿಯ ಆರೋಗ್ಯವನ್ನು ನಿರಂತರ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ. ವೈದ್ಯಕೀಯ ವೃತ್ತಿಪರರು ನಿಯಮಿತವಾಗಿ ಮೌಲ್ಯಮಾಪನ ಮಾಡುತ್ತಿದ್ದಾರೆ” ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಕಾರಾಗೃಹ ಸಂಖ್ಯೆ 2 ರ ಅಧೀಕ್ಷಕರ ಕಚೇರಿಯ ಪ್ರಕಾರ, ನ್ಯಾಯಾಲಯದ ಆದೇಶದಂತೆ ಕೇಜ್ರಿವಾಲ್ ಮನೆಯಲ್ಲಿ ತಯಾರಿಸಿದ ಆಹಾರ ಸೇರಿದಂತೆ ವೈದ್ಯಕೀಯವಾಗಿ ಸೂಚಿಸಲಾದ ಆಹಾರವನ್ನು ಅನುಸರಿಸುತ್ತಿದ್ದಾರೆ. “ಸ್ವಲ್ಪ ತೂಕ ನಷ್ಟದ ಹೊರತಾಗಿಯೂ, ಅವರ ಜೀವನಶೈಲಿ ಸಾಮಾನ್ಯವಾಗಿದೆ. ಅವರ ಎಲ್ಲಾ ಕಾಯಿಲೆಗಳಿಗೆ ಸೂಕ್ತವಾದ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಾರೆ” ಎಂದು ಜೈಲು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.