- ‘100 ದಿನ ಅವಕಾಶ ನೀಡಿದರೆ ಸಾಕು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಥ ತುಂಬುವೆ’
- ‘ಕಹಿ ಘಟನೆ ಮರೆತು ಪಕ್ಷವನ್ನು ಮುನ್ನೆಲೆಗೆ ತರಲು 24X7 ಕೆಲಸ ಮಾಡುವೆ’
ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ನಮ್ಮ ರಾಷ್ಟ್ರೀಯ ನಾಯಕರನ್ನು ಕೇಳಿರುವೆ. ನನಗೆ 100 ದಿನ ಅವಕಾಶ ನೀಡಿದರೆ ಸಾಕು. ಒಬ್ಬ ರಾಜ್ಯಾಧ್ಯಕ್ಷ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತೋರಿಸುವೆ ಎಂದು ಮಾಜಿ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
ಗುರುವಾರ ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅವರು, “ಬಿಜೆಪಿಯಲ್ಲಿ 15 ವರ್ಷದಿಂದ ನಾನು ದುಡಿದಿರುವೆ. ಪಕ್ಷ ಈಗ ಕಷ್ಟದ ಸನ್ನಿವೇಶದಲ್ಲಿದೆ. ಇದನ್ನು ಮೇಲೆತ್ತಬೇಕಿದೆ. ನಾನೇ ಮುಂದೆ ಬಂದು ರಾಜ್ಯಾಧ್ಯಕ್ಷ ಸ್ಥಾನ ನೀಡಿ ಎಂದು ಕೇಳಿಕೊಂಡಿರುವೆ” ಎಂದರು.
“ಅನೇಕ ಏಳು ಬೀಳುಗಳನ್ನು ಕಂಡಿರುವೆ. ನಾನು ಎಲ್ಲಿ ಇರುತೇನೋ ಅಲ್ಲಿ ಪಕ್ಷವನ್ನು ಗೌರವಪೂರ್ವಕವಾಗಿ ಕಂಡಿರುವೆ. ತಾಯಿ ಸಮಾನವಾಗಿ ಪಕ್ಷವನ್ನು ನೋಡಿರುವೆ. 45 ವರ್ಷದ ರಾಜಕೀಯ ಅನುಭವವಿದೆ. ಅನೇಕ ನಾಯಕರ ಜೊತೆ ಕೆಲಸ ಮಾಡಿದ್ದೇನೆ. ಹತ್ತಾರು ಚುನಾವಣೆ ಎದುರಿಸಿದ್ದೇನೆ. ಬಿಜೆಪಿ ಕೊಟ್ಟ ಅನೇಕ ಟಾಸ್ಕ್‌ಗಳನ್ನು ನಿಭಾಯಿಸಿದ್ದೇನೆ. ಈ ಎಲ್ಲ ಕಾರಣಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಕೇಳಿರುವೆ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಗೃಹ ಸಚಿವರಿಗೆ ಕೆಲಸದ ಒತ್ತಡ ಜಾಸ್ತಿಯಾಗಿ ಖಾತೆಯನ್ನು ಮರಿ ಖರ್ಗೆಗೆ ವಹಿಸಿದ್ದಾರೆಯೇ: ನಳಿನ್ ಕುಮಾರ್ ಪ್ರಶ್ನೆ
ಈವರೆಗೂ ಪಕ್ಷ ಕೊಟ್ಟ ಕೆಲಸಗಳನ್ನು ತಲೆ ಮೇಲೆ ಹೊತ್ತುಕೊಂಡು ಕೆಲಸ ಮಾಡಿದ್ದೇನೆ. ಹೀಗಾಗಿ ಒಂದು ಅವಕಾಶ ಮಾಡಿಕೊಡಿ ಎಂದು ಮನವಿಯವನ್ನು ರಾಷ್ಟ್ರೀಯ ನಾಯಕರ ಬಳಿ ಇಟ್ಟಿದ್ದೇನೆ. ನನ್ನ ಅನುಭವದ ಮೇಲೆ ಪಕ್ಷವನ್ನು ಮೇಲೆತ್ತುವೆ. ಒಗ್ಗಟ್ಟಿನಿಂದ ಎಲ್ಲರನ್ನು ಕೊಂಡೊಯ್ಯುವೆ” ಎಂದರು.
“ಕೇವಲ 100 ದಿನಗಳ ಅವಕಾಶ ಕೇಳಿರುವೆ. ಅಷ್ಟರಲ್ಲೇ ಪಕ್ಷ ಕೈಗೊಳ್ಳಬೇಕಾದ ಜವಾಬ್ದಾರಿಗಳನ್ನು ಪೂರ್ಣಗೊಳಿಸುವೆ. ಮೋದಿ ಅವರ ಜನಪ್ರಿಯ ಕಾರ್ಯಕ್ರಮಗಳನ್ನು ಮನೆಮನೆಗೂ ತಿಳಿಸುವೆ. ಎಲ್ಲ ಕಹಿ ಘಟನೆ ಮರೆತು ಪಕ್ಷವನ್ನು ಮತ್ತೆ ಮುನ್ನೆಲೆಗೆ ತರಲು 24X7 ಕೆಲಸ ಮಾಡುವೆ” ಎಂದಿದ್ದಾರೆ.