ಸರ್ಕಾರದ ಸಾಲದ ಹೊರೆ ಎಂಟು ವರ್ಷದ ಬಿಜೆಪಿ ಆಡಳಿತದಲ್ಲಿ ಬಲೂನಿನಂತೆ ಉಬ್ಬಿ ಹೋಗಿರುವ ಸಂದರ್ಭದಲ್ಲಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬಿಜೆಪಿಯ ಚುನಾವಣೆಗಾಗಿ ಕೋಟಿಗಟ್ಟಲೆ ಸರ್ಕಾರಿ ಹಣವನ್ನು ಬಳಸಿದ್ದಾರೆ
ಅಸ್ಸಾಂ ರಾಜ್ಯ ಸರ್ಕಾರದ ಕೋಟಿಗಟ್ಟಲೆ ಅನುದಾನವನ್ನು ರಾಜ್ಯದ ಒಳಗೆ ಮತ್ತು ಹೊರಗಿನ ಬಿಜೆಪಿಯ ಚುನಾವಣಾ ಪ್ರಚಾರಗಳಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬಳಿಸಿದ್ದಾರೆ. ಸರ್ಕಾರದ ಹಣವನ್ನು ಬಿಜೆಪಿ ಖಾಸಗಿ ಕಾರ್ಯಕ್ರಮಗಳಿಗಾಗಿ ಹೆಲಿಕಾಪ್ಟರ್‌ಗಳು ಮತ್ತು ಚಾರ್ಟರ್ಡ್ ವಿಮಾನಗಳ ಬಾಡಿಗೆಗೆ ವ್ಯಯಿಸಿದ್ದಾರೆ ಎಂಬುದು ಮಾಹಿತಿ ಹಕ್ಕು ಕಾಯ್ದೆಯಲ್ಲಿ (ಆರ್‌ಟಿಐ) ಸಲ್ಲಿಸಲಾದ ಅರ್ಜಿಗೆ ಅಸ್ಸಾಂ ಸರ್ಕಾರ ನೀಡಿರುವ ಉತ್ತರದಲ್ಲಿ ಬಹಿರಂಗವಾಗಿದೆ. ಇದು ಚುನಾವಣಾ ನೀತಿ ಸಂಹಿತೆಯ ಅತಿದೊಡ್ಡ ಉಲ್ಲಂಘನೆಯಾಗಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಶರ್ಮಾ ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸರ್ಕಾರಿ ಹಣವನ್ನು ಅಧಿಕೃತ ಸರ್ಕಾರಿ ಕೆಲಸಗಳಿಗೆ ವಿಮಾನಗಳನ್ನು ಬಾಡಿಗೆಪಡೆಯಲು ಮಾತ್ರ ಬಳಸಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು. ಆದರೆ ಆರ್‌ಟಿಐ ಮಾಹಿತಿಯಲ್ಲಿ ಇದಕ್ಕೆ ವಿರುದ್ಧವಾದ ವಿವರ ತಿಳಿದುಬಂದಿದೆ.
‘ದಿ ವೈರ್’ ವೆಬ್‌ತಾಣದಲ್ಲಿ ಪ್ರಕಟವಾಗಿರುವ 2022 ಆಗಸ್ಟ್ 26ರಂದು ‘ದ ಕ್ರಾಸ್‌ಕರೆಂಟ್’ ಸಲ್ಲಿಸಿದ ಆರ್‌ಟಿಐ ಅರ್ಜಿಯಲ್ಲಿ ತಿಳಿದು ಬಂದಿರುವ ವಿವರಗಳ ಪ್ರಕಾರ, ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಪಕ್ಷದ ಸಭೆಗಳಿಗೆ ಮಾತ್ರವಲ್ಲದೆ ಅನೇಕ ವಿವಾಹ ಸಮಾರಂಭಗಳು ಮತ್ತು ಇತರ ಕಾರ್ಯಕ್ರಮಗಳಿಗೆ ಭೇಟಿ ನೀಡಲು ತೆರಿಗೆದಾರರ ಹಣದಿಂದಲೇ ಪ್ರಯಾಣದ ವೆಚ್ಚ ಭರಿಸಿರುವುದು ಪತ್ತೆಯಾಗಿದೆ. ಸರ್ಕಾರಿ ಕೆಲಸದ ಹೊರತಾದ ಖಾಸಗಿ ಕಾರ್ಯಕ್ರಮಗಳಿಗೆ ಯಾವುದೇ ಸರ್ಕಾರ ಸಾರ್ವಜನಿಕ ಅನುದಾನಗಳನ್ನು ಬಳಸುವಂತಿಲ್ಲ. ಸಾಮಾನ್ಯವಾಗಿ ಖಾಸಗಿ ಪಾರ್ಟಿಗಳಿಗೆ ಹೋಗುವುದು, ತಮ್ಮ ಪಕ್ಷಕ್ಕೆ ಸಂಬಂಧಿಸಿದ ಸಭೆಗಳು- ಚಟುವಟಿಕೆಗಳನ್ನು ಸರ್ಕಾರೇತರ ಕಾರ್ಯಕ್ರಮಗಳೆಂದು ಪರಿಗಣಿಸಲಾಗುತ್ತದೆ, ಇವುಗಳಿಗಾಗಿ ಸಾರ್ವಜನಿಕ ಹಣವನ್ನು ಬಳಸುವಂತಿಲ್ಲ.
ಚುನಾವಣಾ ಆಯೋಗದ ನೀತಿ ಸಂಹಿತೆಯ ನಿಯಮ, 7(ಎ) ಪ್ರಕಾರ “ಸಚಿವರು ಅಧಿಕೃತ ಕಾರ್ಯಕ್ರಮವನ್ನು ಚುನಾವಣಾ ಪ್ರಚಾರದ ಕಾರ್ಯಕ್ರಮದ ಜೊತೆಗೆ ಸೇರಿಸಬಾರದು. ಸರ್ಕಾರಿ ಸೌಲಭ್ಯ ಅಥವಾ ಸಿಬ್ಬಂದಿಗಳನ್ನು ಚುನಾವಣಾ ಪ್ರಚಾರದ ಸಂದರ್ಭ ಬಳಸಬಾರದು” ಎಂಬ ವಿವರವಿದೆ. ನಿಯಮ 7(ಬಿ) ಪ್ರಕಾರ, ಸರ್ಕಾರದ ಕೆಲಸಗಳಿಗೆ ಬಳಸುವ ಸಾರಿಗೆಗಳಾದ ಸರ್ಕಾರಿ ವಿಮಾನಗಳು, ವಾಹನಗಳು, ಸೌಲಭ್ಯಗಳು ಅಥವಾ ಸಿಬ್ಬಂದಿಗಳನ್ನು ಅಧಿಕಾರದಲ್ಲಿರುವ ಪಕ್ಷದ ಹಿತಾಸಕ್ತಿಗಾಗಿ ಬಳಸಿಕೊಳ್ಳಬಾರದು.”
ಆದರೆ, ಅಸ್ಸಾಂ ಸರ್ಕಾರ ಒದಗಿಸಿರುವ ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಹಿಮಂತ ಬಳಸುವ ಖಾಸಗಿ ಸಾಮಾಜಿಕ ಜಾಲತಾಣಗಳಲ್ಲಿ ತೋರಿಸಿರುವ ಮಾಹಿತಿಗಳ ಪ್ರಕಾರ ಸರ್ಕಾರದ ವೆಚ್ಚದಲ್ಲಿ ಬಾಡಿಗೆಪಡೆದ ಹೆಲಿಕಾಪ್ಟರ್‌ಗಳನ್ನು ಬಿಜೆಪಿಯ ಮಿತ್ರಪಕ್ಷಗಳ ಅಭ್ಯರ್ಥಿಗಳ ಪ್ರಚಾರಕ್ಕೆ ಬಳಸಿ ಚುನಾವಣಾ ನೀತಿ ಸಂಹಿತೆಯನ್ನು ಐದು ಬಾರಿ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ವರದಿಯಾಗಿದೆ.
ಅಸ್ಸಾಂನಿಂದ ಹೊರಗೆ ಆಯೋಜಿಸಲಾಗಿದ್ದ ಬಿಜೆಪಿಯ ಚುನಾವಣಾ ಕಾರ್ಯಕ್ರಮಗಳಿಗೂ ಹಿಮಂತ ಸರ್ಕಾರಿ ವೆಚ್ಚದಲ್ಲೇ ಪ್ರಯಾಣಿಸಿರುವುದು ಆರ್‌ಟಿಐ ಅರ್ಜಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಪತ್ತೆಯಾಗಿದೆ. ಈ ಪ್ರಯಾಣದಲ್ಲಿ ದೆಹಲಿ ಪಾಲಿಕೆ ಚುನಾವಣೆಗಳಿಗೆ ಮಾಡಿರುವ ಪ್ರಚಾರವೂ ಸೇರಿದೆ!
ಕರ್ನಾಟಕ, ತ್ರಿಪುರಾ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ತೆಲಂಗಾಣಗಳಲ್ಲಿ ವಿಧಾನಸಭಾ ಚುನಾವಣೆಗೂ ಚಾರ್ಟರ್ಡ್ ವಿಮಾನಗಳಲ್ಲೇ ಹಿಮಂತ ಪ್ರಯಾಣಿಸಿದ್ದಾರೆ. ಆದರೆ ಈ ವಿಮಾನಗಳ ವೆಚ್ಚದ ಬಗ್ಗೆ ಅಸ್ಸಾಂ ಸರ್ಕಾರ ಸೂಕ್ತ ಸ್ಪಷ್ಟನೆ ನೀಡಿಲ್ಲ.
ಹಿಮಂತ ಅವರ ಹೆಲಿಕಾಪ್ಟರ್ ಮತ್ತು ಚಾರ್ಟರ್ಡ್ ಪ್ರಯಾಣಗಳ ಬಗ್ಗೆ ಅಸ್ಸಾಂ ಸರ್ಕಾರ ಅಲ್ಪ ಮಾಹಿತಿಯನ್ನಷ್ಟೇ ಆರ್‌ಟಿಐ ಅರ್ಜಿಯ ಪ್ರತಿಕ್ರಿಯೆಯಲ್ಲಿ ನೀಡಿ ಸಂಪೂರ್ಣ ವಿವರವನ್ನು ಬಹಿರಂಗಪಡಿಸಿಲ್ಲ. ಹೀಗಾಗಿ ನಾಗಾಲ್ಯಾಂಡ್‌ನಿಂದ ತೊಡಗಿ ಕರ್ನಾಟಕವರೆಗಿನ ಹಿಮಂತರ ಚುನಾವಣಾ ಸಾರಿಗೆ ವೆಚ್ಚದ ವಿವರಗಳು ಇನ್ನೂ ಅಸ್ಸಾಂ ಸರ್ಕಾರದ ಕಡತಗಳಲ್ಲಿ ಗೌಪ್ಯವಾಗಿ ಉಳಿದಿವೆ.
ಮಾತ್ರವಲ್ಲದೆ, ಹಿಮಂತ ಸರ್ಕಾರಿ ವೆಚ್ಚದಲ್ಲಿ ಸುಮಾರು ಐದು ವಿವಾಹ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ ನಾಗಾಲ್ಯಾಂಡ್ ಮುಖ್ಯಮಂತ್ರಿಯ ಮಗಳ ವಿವಾಹ ಸಮಾರಂಭದ ಪ್ರಯಾಣಕ್ಕೆ ರೂ 14,08,562 ವೆಚ್ಚವಾಗಿದೆ. ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬೃಜೇಶ್ ಪಾಟ್ನಾಯಿಕ್ ಮಗಳ ಮದುವೆಗೆ ಲಕ್ನೋಗೆ ಪ್ರಯಾಣಿಸಲು ಅಸ್ಸಾಂ ಸರ್ಕಾರದ ವೆಚ್ಚದಲ್ಲಿ ಪಡೆದ ಚಾರ್ಟರ್ಡ್ ವಿಮಾನ ಬಾಡಿಗೆಗೆ ರೂ 23,43,750 ತೆರಲಾಗಿದೆ. ಅಸ್ಸಾಂ ಒಳಗೂ ಪಕ್ಷದ ನಾಯಕರ ಕುಟುಂಬಗಳ ವಿವಾಹ ಸಮಾರಂಭಗಳಿಗೂ ಹಿಮಂತ ಅವರು ಸರ್ಕಾರಿ ವೆಚ್ಚದಲ್ಲೇ ಪ್ರಯಾಣಿಸಿದ್ದಾರೆ ಎಂದು ವೆಬ್‌ತಾಣದ ವರದಿ ತಿಳಿಸಿದೆ.
ಇದನ್ನೂ ಓದಿ: ನಾಥೂರಾಮ್ ಗೋಡ್ಸೆ ಹೊಗಳಿದ ಎನ್‌ಐಟಿ ಕ್ಯಾಲಿಕಟ್ ಪ್ರೊಫೆಸರ್, ದೂರು ದಾಖಲು
ಅಸ್ಸಾಂ ಮೇಲಿದೆ ಸಾಲದ ಹೊರೆ
ಹಿಮಂತ ಮತ್ತು ಅವರ ಸಹೋದ್ಯೋಗಿಗಳು ಸರ್ಕಾರಿ ವೆಚ್ಚದಲ್ಲಿ ಲಕ್ಷಾಂತರ ಹಣವನ್ನು ಖಾಸಗಿ ಬಳಕೆಗೆ ದುಂದುವೆಚ್ಚ ಮಾಡುತ್ತಿರುವ ಸಮಯದಲ್ಲಿ ರಾಜ್ಯ ದೊಡ್ಡ ಸರ್ಕಾರ ಸಾಲದ ಹೊರೆಯನ್ನು ಹೊತ್ತುಕೊಂಡಿರುವುದನ್ನು ಅಧಿಕೃತ ವಿವರಗಳು ತಿಳಿಸುತ್ತದೆ.
ಕಳೆದ ಡಿಸೆಂಬರ್‌ನಲ್ಲಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ದತ್ತಾಂಶದ ಪ್ರಕಾರ ತರುಣ್ ಗೊಗೋಯ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಸ್ಸಾಂ ಸರ್ಕಾರದ ಸಾಲದ ಬಾಧ್ಯತೆಗಳು ರೂ 41,963 ಕೋಟಿಗಳಷ್ಟಿದ್ದವು. ಆದರೆ ಎಂಟು ವರ್ಷಗಳ ಬಿಜೆಪಿ ಆಡಳಿತದಲ್ಲಿ ಈ ಹೊರೆ ಬಲೂನಿನಂತೆ ಉಬ್ಬಿ ಹೋಗಿದೆ. 2022-23ರಲ್ಲಿ ಸಾಲದ ಬಾಧ್ಯತೆ ರೂ 1,26,281.4 ಕೋಟಿಗಳಿಗೆ ಏರಿದೆ. ಇದೇ ದರದಲ್ಲಿ ಮುಂದುವರಿದಲ್ಲಿ 2024ರ ಕೊನೆಯಲ್ಲಿ ಅಸ್ಸಾಂನ ಸಾಲದ ಹೊರೆ ರೂ 1,50,900 ಕೋಟಿಗಳಿಗೆ ಏರುವ ನಿರೀಕ್ಷೆಯಿದೆ.