ದೆಹಲಿ ಮಾಜಿ ಮುಖ್ಯಮಂತ್ರಿ ಆತಿಶಿ, ಸಂಸದ ಗೋಪಾಲ್ ರೈ ಸೇರಿದಂತೆ ಸುಮಾರು 12 ಶಾಸಕರನ್ನು ದೆಹಲಿ ವಿಧಾನಸಭೆಯಿಂದ ಸ್ಪೀಕರ್ ವಿಜೇಂದರ್ ಗುಪ್ತಾ ಮಂಗಳವಾರ ಅಮಾನತುಗೊಳಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಭಾಷಣದ ವೇಳೆ ಎಎಪಿ ಶಾಸಕರು ಘೋಷಣೆ ಕೂಗಿದ್ದು, ಈ ಕಾರಣಕ್ಕೆ ಸ್ಪೀಕರ್ ಶಾಸಕರನ್ನು ಅಮಾನತುಗೊಳಿಸಿದ್ದಾರೆ.
ಮುಖ್ಯಮಂತ್ರಿ ಕಚೇರಿಯಿಂದ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದುಹಾಕುವ ಮೂಲಕ ಅಂಬೇಡ್ಕರ್ ಅವರಿಗೆ ಬಿಜೆಪಿ ಅಪಮಾನ ಮಾಡಿದೆ ಎಂದು ಆತಿಶಿ ಆರೋಪಿಸಿದ್ದಾರೆ. ಎಎಪಿ ಶಾಸಕರು ಘೋಷಣೆ ಕೂಗುತ್ತಿದ್ದಂತೆ ಆತಿಶಿ ಸೇರಿ ಎಎಪಿ ಶಾಸಕರಾದ ವೀರ್ ಸಿಂಗ್ ಧಿಂಗನ್, ಮುಕೇಶ್ ಅಹ್ಲಾವತ್, ಚೌಧರಿ ಜುಬೇರ್ ಅಹ್ಮದ್, ಅನಿಲ್ ಜ್ಹಾ, ವಿಶೇಶ್ ರವಿ ಮತ್ತು ಜಾರ್ನೆಲ್ ಸಿಂಗ್ ಕೂಡಾ ಸಂಸತ್ತಿನಿಂದ ಅಮಾನತುಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾಗಿ ಮಾಜಿ ಸಿಎಂ ಆತಿಶಿ ಆಯ್ಕೆ
“ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದುಹಾಕುವ ಮೂಲಕ ಬಿಜೆಪಿ ತನ್ನ ನೈಜ ಬಣ್ಣವನ್ನು ಪ್ರದರ್ಶಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಾಬಾ ಸಾಹೇಬ್ ಅವರ ಸ್ಥಾನವನ್ನು ಪಡೆಯಬಹುದು ಎಂದು ಬಿಜೆಪಿ ಭಾವಿಸಿದೆಯೇ” ಎಂದು ಆತಿಶಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ದೆಹಲಿ ಸರ್ಕಾರದಿಂದ ಸಿಎಜಿ ವರದಿ ಮಂಡನೆ
ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದಲ್ಲಿ ದೆಹಲಿಯಲ್ಲಿ ಹೊಸದಾಗಿ ರಚನೆಯಾದ ಬಿಜೆಪಿ ನೇತೃತ್ವದ ಸರ್ಕಾರವು ಮಂಗಳವಾರ ವಿಧಾನಸಭೆಯ ಎರಡನೇ ಅಧಿವೇಶನದಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಯ 14 ವರದಿಗಳನ್ನು ಮಂಡಿಸಲಿದೆ. ಈ ನಡುವೆ ಎಎಪಿ ಶಾಸಕರ ಅಮಾನತು ಆಗಿದೆ.
ಸಿಎಜಿ ವರದಿಯು ಎಎಪಿಯ ಕರಾಳ ಕೃತ್ಯಗಳನ್ನು ಪಟ್ಟಿ ಮಾಡುತ್ತದೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಹೇಳಿದ್ದಾರೆ. “ಭ್ರಷ್ಟಾಚಾರ ಎಸಗಿದ ಯಾರೇ ಆದರೂ ಉತ್ತರಿಸಬೇಕಾಗುತ್ತದೆ ಎಂದು ನಾವು ಚುನಾವಣೆಯ ಸಮಯದಲ್ಲಿ ದೆಹಲಿಯ ಜನರಿಗೆ ಭರವಸೆ ನೀಡಿದ್ದೆವು” ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಇರುವುದು ಜನ ಸರಕಾರವಲ್ಲ ಇದು ಗುಂಡಾ ಸರಕಾರ