ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಹೀನಾಯ ಸೋಲು ಕಂಡ ಬಳಿಕ, ಮುಖ್ಯಮಂತ್ರಿ ಸ್ಥಾನಕ್ಕೆ ಆತಿಶಿ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಜಯ್ ಕುಮಾರ್ ಸಕ್ಸೇನಾ ಅವರಿಗೆ ಸಲ್ಲಿಸಿದ್ದಾರೆ.
ಶನಿವಾರ, ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಪ್ರಕಟವಾಗಿದೆ. ಒಟ್ಟು 70 ಸ್ಥಾನಗಳ ಪೈಕಿ ಬಿಜೆಪಿ 48 ಸ್ಥಾನಗಳನ್ನು ಗೆದ್ದಿದೆ. 27 ವರ್ಷಗಳ ಬಳಿಕ ಸರ್ಕಾರ ರಚಿಸಲು ಸಿದ್ದವಾಗಿದೆ. ಕಳೆದ 11 ವರ್ಷಗಳಿಂದ ದೆಹಲಿ ಆಡಳಿತ ನಡೆಸಿದ್ದ ಎಎಪಿ 22 ಸ್ಥಾನಗಳನ್ನು ಗಳಿಸಿದ್ದು, ಹೀನಾಯ ಸೋಲು ಕಂಡಿದೆ.
2020ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 62 ಸ್ಥಾನಗಳನ್ನು ಗೆದ್ದು, ಭರ್ಜರಿ ಗೆಲುವು ಸಾಧಿಸಿತ್ತು. ವಿಪಕ್ಷಗಳೇ ಇಲ್ಲದ ರೀತಿಯಲ್ಲಿ ಸರ್ಕಾರ ರಚನೆ ಮಾಡಿತ್ತು. ಆದರೆ, ಈ ಬಾರಿ ಬರೋಬ್ಬರಿ 40 ಸ್ಥಾನಗಳನ್ನು ಕಳೆದುಕೊಂಡಿದೆ.
ಇದನ್ನು ಓದಿದ್ದೀರಾ? ದುಷ್ಟ ಶಕ್ತಿಗಳ ನಿವಾರಣೆಗೆ ‘ಗಣಹೋಮ’ದ ಮೊರೆಹೋದ ಉಡುಪಿ ವಕೀಲರ ಸಂಘ!
ಎಎಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಸೇರಿದಂತೆ ಹಲವು ಘಟಾನುಘಟಿ ನಾಯಕರು ಸೋಲುಂಡಿದ್ದಾರೆ. ಮುಖ್ಯಮಂತ್ರಿಯಾಗಿದ್ದು, ಕಲ್ಕಜಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಆತಿಶಿ ಗೆಲುವು ಸಾಧಿಸಿದ್ದಾರೆ.