ಲೋಕಸಭೆಯಲ್ಲಿ ವಕ್ಪ್ ಐತಿಹಾಸಿಕ ಮಸೂದೆಗೆ ಅಂಗೀಕಾರ ಲಭಿಸಿದೆ. ಕಾಂಗ್ರೆಸ್ ಪಕ್ಷ ವಕ್ಫ್ ಕಾಯಿದೆಗೆ ತಿದ್ದುಪಡಿಯನ್ನು ರಾಜ್ಯ, ದೇಶದಲ್ಲಿ ವಿರೋಧಿಸುವುದು ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಗುರುವಾರ ಬಿಜೆಪಿಯ ಅಹೋರಾತ್ರಿ ಧರಣಿ ಮುಂದುವರೆಯಿತು. ಈ ವೇಳೆ ವಿಜಯೇಂದ್ರ ಮಾತನಾಡಿದರು.
“ಕರ್ನಾಟಕದಲ್ಲಿ ಸಾವಿರಾರು ಕೋಟಿ ಮೌಲ್ಯದ ಜಮೀನುಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರು, ರಾಜಕಾರಣಿಗಳು ಲೂಟಿ ಮಾಡಿದ್ದಾರೆ. ಇಂಥ ಕಾಂಗ್ರೆಸ್ ಮುಖಂಡರು ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿದ್ದಾರೆ. ಹಲವಾರು ದಶಕಗಳಿಂದ ವಕ್ಫ್ ಕಾಯಿದೆ ಬಗ್ಗೆ ದೇಶ- ರಾಜ್ಯದಲ್ಲಿ ಚರ್ಚೆ ನಡೆಯುತ್ತಿತ್ತು. ನಮ್ಮ ರಾಜ್ಯದಲ್ಲಿ ಸಾವಿರ ವರ್ಷಗಳ ಇತಿಹಾಸ ಇರುವ ದೇವಾಲಯಗಳು, ಧಾರ್ಮಿಕ ಸಂಸ್ಥೆಗಳ ಜಮೀನನ್ನು, ರಾಜ್ಯದ ಲಕ್ಷ ಲಕ್ಷ ರೈತರ ಜಮೀನನ್ನು ಕೂಡ ವಕ್ಫ್ ಬೋರ್ಡ್ ಹೆಸರು ಹೇಳಿಕೊಂಡು ಕಿತ್ತುಕೊಳ್ಳುವ ಕೆಲಸ ನಡೆದಿತ್ತು” ಎಂದು ಆರೋಪಿಸಿದರು.
ಬೆಲೆ ಏರಿಕೆಯನ್ನು ಖಂಡಿಸಿ ಧರಣಿ ಸ್ಥಳದಿಂದ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೆ ಮುತ್ತಿಗೆ ಹಾಕಲು ಕರೆ ನೀಡಿದರು. ಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಬೈರತಿ ಬಸವರಾಜ್, ಪ್ರಮುಖರಾದ ಸಿ.ಟಿ.ರವಿ, ಎಸ್.ಆರ್.ವಿಶ್ವನಾಥ್ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಪೊಲೀಸರು ದಾರಿ ಮಧ್ಯೆ ವಶಕ್ಕೆ ಪಡೆದರು.