ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಭಾನುವಾರ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ನಿತೀಶ್ ಕುಮಾರ್ ಹೀಗೆ ಮಾಡುತ್ತಾರೆಂದು ಮೊದಲೇ ತಿಳಿದಿತ್ತು. ದೇಶದಲ್ಲಿ ‘ಆಯಾ ರಾಮ್ – ಗಯಾ ರಾಮ್’ ಅಂತವರು ಅನೇಕರಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ನಿತೀಶ್ ಮೈತ್ರಿಯಲ್ಲಿ ಉಳಿಯಲು ಬಯಸ್ಸಿದ್ದರೆ, ಉಳಿಯುತ್ತಿದ್ದರು. ಅದರೆ, ಅವರು ಹೋಗಬೇಕೆಂದು ಬಯಸುತ್ತಾರೆ. ಅವರು ಹೋಗಿದ್ದಾರೆ. ಅವರ ಈ ನಡೆ ಬಗ್ಗೆ ನಮಗೆ ಮೊದಲೇ ಗೊತ್ತಿತ್ತು. ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರು ನಿತೀಶ್ ಮೈತ್ರಿ ತೊರೆಯುತ್ತಿದ್ದಾರೆ ಎಂದು ಹೇಳಿದ್ದರು. ಅದು ಇಂದು ನಡೆದಿದೆ. ದೇಶದಲ್ಲಿ ‘ಆಯಾ ರಾಮ್-ಗಯಾ ರಾಮ್’ ಎಂಬಂತಹ ಅನೇಕ ಜನರಿದ್ದಾರೆ” ಎಂದು ಖರ್ಗೆ ಹೇಳಿದ್ದಾರೆ.
ಭಾನುವಾರ, ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಟ್ನಾದ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಇಂಡಿಯಾ ಮೈತ್ರಿಕೂಟ ತೊರೆದು, ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳಲಿದ್ದಾರೆ.
ಬಿಹಾರ ವಿಧಾನಸಭೆಯು 243 ಸದಸ್ಯ ಬಲವನ್ನು ಹೊಂದಿದೆ. ಆ ಪೈಕಿ, ಆರ್‌ಜೆಡಿ 79 ಶಾಸಕರನ್ನು ಹೊಂದಿದೆ; ನಂತರದ ಸ್ಥಾನದಲ್ಲಿ ಬಿಜೆಪಿ 78, ಜೆಡಿಯು 45, ಕಾಂಗ್ರೆಸ್ 19, ಸಿಪಿಐ(ಎಂ-ಎಲ್) 12, ಸಿಪಿಐ(ಎಂ) ಮತ್ತು ಸಿಪಿಐ ತಲಾ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) 4, ಎಐಎಂಐಎಂ 1 ಹಾಗೂ ಇಬ್ಬರು ಪಕ್ಷೇತರ ಶಾಸಕರಿದ್ದಾರೆ.