ಅಯೋಧ್ಯೆಯಲ್ಲಿ ಜನವರಿ 22ರ ಸೋಮವಾರ ರಾಮಮಂದಿರ ಉದ್ಘಾಟನೆಯಾಗಲಿದೆ. ಇದೇ ವೇಳೆ, ಒಂದೆಡೆ ಬಿಜೆಪಿ ಸರ್ಕಾರ, ಅಯೋಧ್ಯೆ ಅಭಿವೃದ್ಧಿಗಾಗಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಆದರೆ, ಸ್ವಾಧೀನಪಡಿಸಿಕೊಂಡ ಭೂಮಿಗೆ ಸರಿಯಾದ ಪರಿಹಾರ ನೀಡಿಲ್ಲವೆಂದು ಹಲವು ರೈತರು ಆರೋಪಿಸಿದ್ದಾರೆ.
ಇಂತಹ ಕಾರಣಕ್ಕಾಗಿಯೇ ಮತ್ತೊಂದೆಡೆ, ರೈತರು ಖಾಸಗಿ ಕಂಪನಿಗಳಿಗೆ ತಮ್ಮ ಜಮೀನನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ, ಇತ್ತೀಚೆಗೆ ಅಯೋಧ್ಯೆಯಲ್ಲಿನ ಭೂಮಿಗೆ ಚಿನ್ನದ ಬೆಲೆ ಬಂದಿದೆ. ರೈತರಿಂದ ಜಮೀನು ಖರೀದಿಸಿದ ಖಾಸಗಿ ಕಂಪನಿಗಳು ಕೆಲವೆಡೆ ಭೂಮಿಯನ್ನು ನಿವೇಶನಗಳಾಗಿ (ಪ್ಲಾಟ್) ಪರಿವರ್ತಿಸಿ ಮಾರಾಟ ಮಾಡುತ್ತಿವೆ. ಅಂತದ್ದೇ ಒಂದು ನಿವೇಶನವನ್ನು ಅಮಿತಾಬ್ ಬಚ್ಚನ್ ಅವರು 14.5 ಕೋಟಿ ರೂ.ಗೆ ಖರೀದಿಸಿದ್ದಾರೆ.
ಇದೇ ಸಮಯದಲ್ಲಿ, ಬಿಜೆಪಿ ಜೊತೆಗೆ ನಂಟು ಇರುವ ಸಂಸ್ಥೆಯೊಂದು ಅಯೋಧ್ಯೆಯ ಪರಿಸರ ಸೂಕ್ಷ್ಮ ಭೂಮಿಯನ್ನು ಭಾರೀ ಲಾಭಕ್ಕೆ ಅದಾನಿ ಕಂಪನಿಗೆ ಮಾರಾಟ ಮಾಡಿದೆ. 2023ರ ಅಕ್ಟೋಬರ್-ಡಿಸೆಂಬರ್ ನಡುವೆ ಟೈಮ್ ಸಿಟಿ ಮಲ್ಟಿ ಸ್ಟೇಟ್ ಕೋಆಪರೇಟಿವ್ ಹೌಸಿಂಗ್ ಸೊಸೈಟಿ ಎಂಬ ಸಂಸ್ಥೆ ಅಯೋಧ್ಯೆಯ ಸರಯೂ ನದಿಯ ಬಳಿ 1.13 ಕೋಟಿ ರೂಪಾಯಿಗೆ ಸಣ್ಣ ಜಮೀನನ್ನು ಖರೀದಿಸಿತ್ತು. ಇದೀಗ, ಕೆಲವು ವಾರಗಳ ಬಳಿಕ ಆ ಭೂಮಿಯನ್ನು ಅದಾನಿ ಸಮೂಹಕ್ಕೆ ಮೂರು ಪಟ್ಟು ಹೆಚ್ಚು ಬೆಲೆಗೆ (3.57 ಕೋಟಿ ರೂ.) ಮಾರಾಟ ಮಾಡಿದೆ.
ಅಂದಹಾಗೆ, ಟೈಮ್ ಸಿಟಿ ಮಲ್ಟಿ ಸ್ಟೇಟ್ ಕೋಆಪರೇಟಿವ್ ಹೌಸಿಂಗ್ ಸೊಸೈಟಿ ಬಿಜೆಪಿ ಮುಖಂಡ, ಸಹಾರಾ ಸಮೂಹದ ಮಾಜಿ ಚಾರ್ಟರ್ಡ್ ಅಕೌಂಟೆಂಟ್ ಚಂದ್ರಪ್ರಕಾಶ್ ಶುಕ್ಲಾ ಅವರು ಸ್ಥಾಪಿಸಿದ ಟೈಮ್ ಸಿಟಿ ಗ್ರೂಪ್‌ನ ಭಾಗವಾಗಿದೆ. ಶುಕ್ಲಾ ಅವರು 2017ರಲ್ಲಿ ಉತ್ತರ ಪ್ರದೇಶದ ಕಪ್ತಂಗಂಜ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದರು. ಅವರ ಟೈಮ್ ಸಿಟಿ ಸಂಸ್ಥೆಯನ್ನ ಈಗ ಶುಕ್ಲಾ ಅವರ ಮಾಜಿ ಸಹವರ್ತಿ ಪಂಕಜ್ ಪಾಠಕ್ ನಡೆಸುತ್ತಿದ್ದಾರೆ. ಪಂಕಜ್ ಅವರು ಕೂಡ ಬಿಜೆಪಿಯಲ್ಲಿ ಹಲವು ನಾಯಕರ ಸ್ನೇಹ ಹೊಂದಿದ್ದಾರೆ.

ರಾಮಮಂದಿರ ನಿರ್ಮಾಣದ ಜೊತೆಗೆ ಹೆಚ್ಚುತ್ತಿರುವ ಭೂಮಿಯ ದರವು ಅದಾನಿ ಸಮೂಹ ಮತ್ತು ಲೋಧಾ ಸಮೂಹದಂತಹ ದೊಡ್ಡ ಸಂಸ್ಥೆಗಳನ್ನು ಅಯೋಧ್ಯೆಗೆ ಸೆಳೆಯುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ. ಆದರೆ, ಆ ಭೂಮಿಯನ್ನು ರೈತರು ಅಗ್ಗದ ಬೆಲೆಗೆ ಮಾರಾಟ ಮಾಡಿದ್ದರು. ಅಲ್ಲದೆ, ಆ ಭೂಮಿ ಮಜ್ಹಾ ಜಮ್ತಾರಾದಲ್ಲಿನ ಸರಸ್ ಕ್ರೇನ್, ಗ್ರೇ ಹೆರಾನ್ ಮತ್ತು ಭಾರತೀಯ ನರಿಗಳ ಆವಾಸಸ್ಥಾನವಾದ ಸರಯು ನದಿಯ ಪರಿಸರ ಸೂಕ್ಷ್ಮ ಜೌಗು ಪ್ರದೇಶದಲ್ಲಿದೆ. ಈ ಪ್ರದೇಶದಲ್ಲಿ 2022ರ ಡಿಸೆಂಬರ್‌ನಿಂದ ಯಾವುದೇ ಹೊಸ ನಿರ್ಮಾಣ ಕಾಮಗಾರಿಗಳನ್ನು ನಡೆಸಬಾರದು ಎಂದು ಸರ್ಕಾರ ನಿರ್ಬಂಧವನ್ನೂ ಹೇರಿದೆ. ಆದರೆ, ಈಗ ಆ ಭೂಮಿ ಅದಾನಿ ಸಮೂಹದ ಪಾಲಾಗಿದೆ.
“ಭೂಮಿ ಖರೀದಿಯಲ್ಲಿ ನಾವು ನಡೆಸಿರುವ ವಹಿವಾಟು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ. ಎಲ್ಲ ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಸಾರವಾಗಿ ಹಾಗೂ ಈಗ ಚಾಲ್ತಿಯಲ್ಲಿರುವ ಮಾರುಕಟ್ಟೆ ದರದಲ್ಲಿಯೇ ಆ ಭೂಮಿಯನ್ನು ಖರೀದಿಸಲಾಗಿದೆ” ಎಂದು ಅದಾನಿ ಸಮೂಹದ ವಕ್ತಾರ ಹೇಳಿರುವುದಾಗಿ ‘ಸ್ಕ್ರಾಲ್’ ವರದಿ ಮಾಡಿದೆ.
ಅದಾನಿ ಸಮೂಹದ ಭೂ ವ್ಯವಹಾರಗಳು
ಫೈಜಾಬಾದ್, ಅಯೋಧ್ಯೆ ಮತ್ತು ಸರಯೂ ನದಿಯ ನಡುವಿನ ವಿಶಾಲವಾದ, ಜನನಿಬಿಡ ಪ್ರದೇಶ ಮಜ್ಹಾ ಜಮ್ತಾರಾ. ಈ ಪ್ರದೇಶ ಈಗ ನಿರ್ಮಾಣವಾಗುತ್ತಿರುವ ರಾಮಮಂದಿರದಿಂದ ಸುಮಾರು 5 ಕಿ.ಮೀ. ದೂರದಲ್ಲಿದೆ. ಸುಮಾರು 20 ವರ್ಷಗಳ ಹಿಂದೆ ಈ ಪ್ರದೇಶದ ಹೆಚ್ಚಿನ ಭಾಗವನ್ನು ಸರಯೂ ನದಿ ಆವರಿಸಿಕೊಂಡಿತ್ತು. ಆದರೆ, 1990ರ ನಂತರ ನದಿಯ ನೀರು ಇಳಿದಂತೆ, ಅಲ್ಲಿನ ಭಾಗ ಕೃಷಿ ಪ್ರದೇಶವಾಗಿ ಮಾರ್ಪಟ್ಟಿತ್ತು. ಅಲ್ಲಿ ಯಾದವ ಸಮುದಾಯದ ರೈತರು ಕೃಷಿ ಮಾಡುತ್ತಿದ್ದರು.
2023ರ ಅಕ್ಟೋಬರ್‌ನಲ್ಲಿ ಮಜ್ಹಾ ಜಾಮ್ತಾರಾದಲ್ಲಿ ರೈತ ಘನಸೀರಾ ಯಾದವ್ ಮತ್ತು ಕಬೂತ್ರಾ ದೇವಿ ಅವರಿಗೆ ಸೇರಿದ ಭೂಮಿಯನ್ನು ಟೈಮ್ಸ್ ಸಿಟಿ ಸಂಸ್ಥೆ 2.4 ಎಕರೆ (ಒಂದು ಹೆಕ್ಟೇರ್) ಭೂಮಿಯನ್ನು ಖರೀದಿಸಿತ್ತು.

ಅಂದಹಾಗೆ, “2019ರಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬಳಿಕ ಸರ್ಕಾರ ಈ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳುತ್ತದೆ ಅಂತ ಹೇಳಲಾಗಿತ್ತು. ಅದರೆ, ಸರ್ಕಾರ ಸರಿಯಾದ ಪರಿಹಾರ ನೀಡುತ್ತದೆ ಎಂಬ ನಂಬಿಕೆ ಇಲ್ಲದೆ ಆ ಭೂಮಿಯನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದೆವು” ಎಂದು ಕಬೂತ್ರಾ ದೇವಿ ಅವರ ಮೊಮ್ಮಗ ಅಜಯ್ ಯಾದವ್ ಹೇಳಿದ್ದಾರೆ.
ಕಬೂತ್ರಾ ದೇವಿ ಅವರು ತಮ್ಮ 0.56 ಹೆಕ್ಟೇರ್ ಪಿತ್ರಾರ್ಜಿತ ಭೂಮಿಯನ್ನು 2021ರ ಫೆಬ್ರವರಿಯಲ್ಲಿ ಕಾನ್ಪುರದ ನಿವಾಸಿ ಸುಧಾ ದೀಕ್ಷಿತ್ ಎಂಬವರಿಗೆ ಎರಡು ಕಂತುಗಳಲ್ಲಿ 33.53 ಲಕ್ಷ ರೂ.ನಂತೆ (ಒಟ್ಟು 66 ಲಕ್ಷ) ಮಾರಾಟ ಮಾಡಿದ್ದರು. ಅದೂ ಸರ್ಕಾರ ನಿಗದಿ ಮಾಡಿದ್ದ ಬೆಲೆಗಿಂತ (77.46 ಲಕ್ಷ) ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು.
ಆ ಭೂಮಿಯನ್ನು ಎರಡು ವರ್ಷಗಳ ನಂತರ, 2023ರ ಅಕ್ಟೋಬರ್ 31 ರಂದು, ದೀಕ್ಷಿತ್ ಅವರು ಟೈಮ್ ಸಿಟಿಗೆ ಎರಡು ಸೇಲ್ ಡೀಡ್‌ಗಳ ಮೇಲೆ 40 ಲಕ್ಷ ರೂ. (ಒಟ್ಟು 80 ಲಕ್ಷ ರೂ.)ಗೆ ಮಾರಾಟ ಮಾಡಿದ್ದರು. ಈ ಮಾರಾಟ ಪತ್ರಗಳಲ್ಲಿ ಜೈಭಾನ್ ಸಿಂಗ್ ಮತ್ತು ಅವಿನಾಶ್ ಸಿಂಗ್ ಸಾಕ್ಷಿಗಳು.
ಇನ್ನೊಂದೆಡೆ, ಯಾದವ್ ಅವರು ತಮ್ಮ 0.44 ಹೆಕ್ಟೇರ್ ಮತ್ತೊಂದು ಭೂಮಿಯನ್ನು 2023ರ ನವೆಂಬರ್ 6 ರಂದು 33 ಲಕ್ಷ ರೂಪಾಯಿಗೆ ನೇರವಾಗಿ ಟೈಮ್ ಸಿಟಿಗೆ ಮಾರಾಟ ಮಾಡಿದ್ದರು. ಇದೂ ಕೂಡ, ಮಾರುಕಟ್ಟೆ ಬೆಲೆ (58 ಲಕ್ಷ ರೂ.)ಗಿಂತ ಕಡಿಮೆ ಬೆಲೆ ಮಾರಾಟ ಮಾಡಿದ್ದರು. ಈ ಒಪ್ಪಂದದಲ್ಲಿ ಅವಿನಾಶ್ ಸಿಂಗ್ ಮತ್ತು ಸೀತಾರಾಮ್ ಯಾದವ್ ಸಾಕ್ಷಿಗಳಾಗಿದ್ದರು. ಈ ಎಲ್ಲ ಸಾಕ್ಷಿಗಳು ಬಿಜೆಪಿ ಜೊತೆಗೆ ಸಂಪರ್ಕ ಹೊಂದಿರುವವರು.
ಬಳಿಕ, ಈ ಎಲ್ಲ ಭೂಮಿಯನ್ನು ಟೈಮ್ ಸಿಟಿ ನವೆಂಬರ್ 25 ರಂದು ಅಹಮದಾಬಾದ್ ಮೂಲದ ಹೋಮ್ಕ್ವೆಸ್ಟ್ ಇನ್ಫ್ರಾಸ್ಪೇಸ್ ಪ್ರೈವೇಟ್ ಲಿಮಿಟೆಡ್‌ಗೆ (ಎಚ್‌ಐಪಿಎಲ್) 2.54 ಕೋಟಿ ರೂ.ಗೆ ಮಾರಾಟ ಮಾಡಿದೆ. ವೀರೇನ್ ರಾಜೇಶ್‌ಕುಮಾರ್ ಮಕ್ವಾನಾ ಅವರು ಎಚ್‌ಐಪಿಎಲ್ ಪರವಾಗಿ ಪತ್ರದಲ್ಲಿ ಸಹಿ ಹಾಕಿದ್ದಾರೆ. ಈ ಕಂಪನಿ 2022ರ ಜನವರಿಯಿಂದ ಅದಾನಿ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ತನ್ನ ಅಂತಿಮ ಹಿಡುವಳಿ ಕಂಪನಿ ಎಂದು ಘೋಷಿಸಿದೆ. ಲಗತ್ತಿಸಲಾದ ಘೋಷಣೆಯಲ್ಲಿ, ಅದಾನಿ ಪ್ರಾಪರ್ಟೀಸ್ ಪ್ರತಿಯಾಗಿ ಗೌತಮ್ ಅದಾನಿ ಮತ್ತು ಅವರ ಸಹೋದರರಾದ ರಾಜೇಶ್ ಮತ್ತು ವಿನೋದ್ ಅದಾನಿಯನ್ನು ‘ಲಾಭದಾಯಕ ಮಾಲೀಕರು’ ಎಂದು ಪಟ್ಟಿ ಮಾಡಿದೆ.
ಇನ್ನೊಂದೆಡೆ, 2023ರ ಡಿಸೆಂಬರ್ 14ರಂದು ಘನಸೀರಾ ಯಾದವ್ ಅವರ ಪುತ್ರ ಭರತ್ ಭೂಷಣ್ ಯಾದವ್ ಅವರು 0.4 ಹೆಕ್ಟೇರ್ ಭೂಮಿಯನ್ನು ಟೈಮ್ ಸಿಟಿಗೆ ರೂ 39.92 ಲಕ್ಷಕ್ಕೆ ಮಾರಾಟ ಮಾಡಿದ್ದರು. ಹದಿನೈದು ದಿನಗಳ ನಂತರ, ಆ ಭೂಮಿಯನ್ನೂ ಎಚ್‌ಐಪಿಎಲ್ ಸಂಸ್ಥೆ 1.02 ಕೋಟಿ ರೂ.ಗೆ ಖರೀದಿಸಿದೆ.
ರಾಜ್ಯದ ಮುದ್ರಾಂಕ ಮತ್ತು ನೋಂದಣಿ ಇಲಾಖೆಯಲ್ಲಿ ಲಭ್ಯವಿರುವ ದಾಖಲೆಗಳು ದೃಢೀಕರಿಸಿದ ಪ್ರಕಾರ, ಟೈಮ್ ಸಿಟಿ 1.13 ಕೋಟಿ ರೂ. ಮೌಲ್ಯಕ್ಕೆ ಆ ಭೂಮಿಯನ್ನು ಖರೀದಿಸಿ, ಅದಾನಿ ಸಮೂಹಕ್ಕೆ 3.57 ಕೋಟಿ ರೂ.ಗೆ ಮಾರಾಟ ಮಾಡಿದೆ.
ಸರ್ಕಾರಿ ಭೂಮಿಯೇ?
2019ರಲ್ಲಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಚಿಸಿದ ಸಮಿತಿಯು ಮಜ್ಹಾ ಜಮ್ದಾರಾ ಜೌಗು ಪ್ರದೇಶದ ಸುತ್ತಲಿನ ಪ್ರದೇಶವು ರಾಜ್ಯ ಸರ್ಕಾರಕ್ಕೆ ಸೇರಿದೆ ಎಂದು ಪತ್ತೆ ಮಾಡಿದೆ.
ಅಯೋಧ್ಯೆಯ ರಾಮಾನುಜ್ ಆಚಾರ್ಯ ಎಂಬವರು 2019ರ ಮೇನಲ್ಲಿ ಮಜ್ಹಾ ಜಮ್ತಾರಾದಲ್ಲಿ ಜಲ ಮಾಲಿನ್ಯದ ಬಗ್ಗೆ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ಅವರಿಗೆ ದೂರು ನೀಡಿದ್ದರು. ಅವರು ಅಯೋಧ್ಯೆಯಲ್ಲಿ ಮಜ್ಹಾ ಜಾಮ್ತಾರಾ ಪ್ರದೇಶದಲ್ಲಿ ಸರಯೂ ನದಿಯ ಸೀತಾ ಸರೋವರ ನಶಿಸುತ್ತಿದೆ ಎಂದು ಹೇಳಿದ್ದರು.
ನದಿಯ ಸಮಸ್ಯೆಯನ್ನು ಪರಿಹರಿಸಲು, ಅಲಹಾಬಾದ್ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ದೇವಿ ಪ್ರಸಾದ್ ಸಿಂಗ್ ನೇತೃತ್ವದ ಸಮಿತಿ ರಚಿಸಲಾಗಿತ್ತು. ಸಮಿತಿಯು, ಭೂ ದಾಖಲೆಗಳನ್ನು ಪರಿಶೀಲಿಸಲು ನದಿಯ 4 ಕಿಲೋಮೀಟರ್ ಉದ್ದಕ್ಕೂ ಸಂಚರಿಸಿ, ಭೂಮಿಯ ಸ್ಥಿತಿಯನ್ನು ಅಳೆಯಲು ಜಿಲ್ಲಾಡಳಿತಕ್ಕೆ ಕೇಳಿತ್ತು.
ಜಿಲ್ಲಾಡಳಿತ 2019ರ ಮೇ-ಜೂನ್‌ನಲ್ಲಿ ವರದಿ ಸಲ್ಲಿಸಿದೆ. ಅದರ ಆಧಾರದ ಮೇಲೆ ಸಮಿತಿಯು, ಕಂದಾಯ ದಾಖಲೆಯಲ್ಲಿ ಸಂಪೂರ್ಣ ಭೂಮಿಯನ್ನು ನೀರಿನಲ್ಲಿ ಮುಳುಗಿದ ಭೂಮಿಯೆಂದು ದಾಖಲಿಸಲಾಗಿದೆ.

ಸಮಿತಿಯ ಮಧ್ಯಂತರ ವರದಿಯಲ್ಲಿ ಲಗತ್ತಿಸಲಾದ ಭೂ ದಾಖಲೆಗಳ ಪ್ರಕಾರ, ಅದಾನಿ ಸಮೂಹ ಖರೀದಿಸಿರುವ ಮಜ್ಹಾ ಜಮ್ತಾರಾದಲ್ಲಿನ ಭೂಮಿಯ ಹೆಚ್ಚಿನ ಭಾಗ ಈ ಮುಳುಗಡೆ ಪ್ರದೇಶದ ಅಡಿಯಲ್ಲಿ ಬರುತ್ತದೆ ಎಂದು ತೋರಿಸುತ್ತದೆ.
ಮಾರಾಟ ಪತ್ರಗಳ ಪ್ರಕಾರ, ಅದಾನಿ ಸಮೂಹ ಖರೀದಿಸಿರುವ 1.4 ಹೆಕ್ಟೇರ್ ಆಸ್ತಿಯು ಗ್ರಾಮದಲ್ಲಿ 16 ಪ್ಲಾಟ್ ಸಂಖ್ಯೆಗಳನ್ನು ಒಳಗೊಂಡಿದೆ: ಅವು – 57, 58, 59, 60, 63, 65, 74, 79, 80, 82, 83, 85, 96, 153, 172 ಮತ್ತು 20.
ಈ ಪೈಕಿ 12 ಪ್ಲಾಟ್‌ಗಳು – 57, 58, 74, 79, 80, 82, 83, 85, 96, 153, 172, 209 – ಮುಳುಗಡೆ ಪ್ರದೇಶದ ಅಡಿಯಲ್ಲಿ ಬಂದಿವೆ ಎಂದು ಜಿಲ್ಲಾಡಳಿತದ ವರದಿ ಹೇಳಿದೆ. ಸೀತಾ ಸರೋವರದ ಭಾಗವಾಗಿ ವ್ಯಾಖ್ಯಾನಿಸಲಾದ ಶೇ. 90 ಪ್ರದೇಶವು 1952ರಷ್ಟು ಹಿಂದೆಯೇ ಭೂ ದಾಖಲೆಗಳಲ್ಲಿ ನೀರಿನಲ್ಲಿ ಮುಳುಗಡೆಯಾಗಿತ್ತು ಎಂದು ಆ ವರದಿ ಹೇಳಿದೆ.
ಈ ಭೂಮಿಯನ್ನು “ಭೂ ಮಾಫಿಯಾ ಬಲವಂತವಾಗಿ ಆಕ್ರಮಿಸಿಕೊಂಡಿದೆ. ನಂತರ ಕಂದಾಯ ದಾಖಲೆಗಳಲ್ಲಿ ಯಾವುದೇ ಬದಲಾವಣೆಯಿಲ್ಲದೆ ನಿವೇಶನ 57, 58 ಸೇರಿದಂತೆ ಕೆಲವು ಸ್ಥಳಗಳಲ್ಲಿ ನಿರ್ಮಾಣ ಕಾಮಗಾರಿಗಳೂ ನಡೆದಿವೆ. ಮುಳುಗಡೆ ಪ್ರದೇಶದಲ್ಲಿ ಮಾಡಲಾದ ಎಲ್ಲ ಅತಿಕ್ರಮಣವನ್ನು ಜಿಲ್ಲಾಡಳಿತ ತೆರವುಗೊಳಿಸಬೇಕು. ಅಂತಹ ಸ್ಥಳಗಳನ್ನು ಸಾರ್ವಜನಿಕ ಉಪಯುಕ್ತತೆ ಕೇಂದ್ರಗಳ ಮನರಂಜನೆಯಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿಯ ವರದಿ ಹೇಳಿದೆ.
ಇನ್ನು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸಮಿತಿಯ ವರದಿ ಕೂಡ 2019ರ ಮಾರ್ಚ್‌ನಲ್ಲಿ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಸಿದ್ಧಪಡಿಸಿದ್ದ ಜೌಗುಭೂಮಿಯ ತಪಾಸಣಾ ವರದಿಯನ್ನು ಒಳಗೊಂಡಿದೆ. ಅದರಲ್ಲಿ, ‘ಖಾಸಗಿ/ಅಕ್ರಮ ನಿವೇಶನ ಮತ್ತು ಕಟ್ಟಡಗಳನ್ನು ಬಿಲ್ಡರ್‌ಗಳು/ಭೂಮಾಲೀಕರು ನಿರ್ಮಿಸುತ್ತಿದ್ದಾರೆ ಎಂಬುದನ್ನು ಗಮನಿಸಿದೆ. ಅಂತಹ ಒಂದು ನಿರ್ಮಾಣವಾಗಿ ಛಾಯಾಚಿತ್ರದಲ್ಲಿ ಮಜ್ಹಾ ಜಮ್ತಾರಾದಲ್ಲಿನ ಟೈಮ್ ಸಿಟಿ ಕಚೇರಿಯನ್ನು ತೋರಿಸಿದೆ. ಈ ಕಚೇರಿಯನ್ನು ಪ್ಲಾಟ್ ಸಂಖ್ಯೆ 57 ರಲ್ಲಿ ನಿರ್ಮಿಸಲಾಗಿದೆ.

ಈ ನಡುವೆ, 2020ರ ಡಿಸೆಂಬರ್‌ನಲ್ಲಿ ಅಯೋಧ್ಯೆ ಜಿಲ್ಲಾಡಳಿತವು ಹಸಿರು ನ್ಯಾಯಮಂಡಳಿ ಹೇಳಿರುವಂತೆ 57 ಮತ್ತು 58 ಪ್ಲಾಟ್‌ಗಳು ಜೌಗು ಪ್ರದೇಶದ ಭಾಗದಲ್ಲಿಲ್ಲ. ಅದು ಖಾತೆದಾರರ ಹೆಸರಿನಲ್ಲಿದೆ. ಹೀಗಾಗಿ, ಅಕ್ರಮ ಅತಿಕ್ರಮಣದ ಭಾಗಕ್ಕೆ ಒಳಪಟ್ಟಿಲ್ಲ ಎಂದು ಹೇಳಿದೆ.
ಆದರೆ, ಅಲಹಾಬಾದ್ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಸಿಂಗ್ ಅವರು ಜಿಲ್ಲಾಡಳಿತದ ವಾದವನ್ನು ವಿರೋಧಿಸಿದ್ದಾರೆ. ನಮ್ಮ ವರದಿ ಸರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ವಿಶಾಲ್ ಸಿಂಗ್, “ಮಜ್ಹಾ ಜಮ್ತಾರಾದಲ್ಲಿ ಸುಮಾರು 300 ಎಕರೆ ಭೂಮಿಯು ಸರ್ಕಾರಿ ಭೂಮಿಯಾಗಿದೆ. ಉಳಿದವು ಖಾಸಗಿ ಭೂಮಿಯಾಗಿದೆ. ಯಾವ ನಿವೇಶನ ಯಾರ ಒಡೆತನದಲ್ಲಿದೆ ಎಂಬುದನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಿಂದ ಹಂಚಿಕೆ ಮಾಡಲಾಗುತ್ತದೆ. ಅಭಿವೃದ್ಧಿ ಪ್ರಾಧಿಕಾರವಾಗಿ, ನಾವು 2022ರ ಡಿಸೆಂಬರ್ 31 ರಿಂದ ಆ ಪ್ರದೇಶವನ್ನು ‘ಹೊಸ ನಿರ್ಮಾಣ ರಹಿತ ವಲಯ’ವಾಗಿ ಘೋಷಿಸಿದ್ದೇವೆ. ಇದನ್ನು ಮರ, ಬಿದಿರು ಅಥವಾ ಹುಲ್ಲು ಬೆಳೆಸಲು ಬಳಸಬೇಕು” ಎಂದು ಹೇಳಿರುವುದಾಗಿ ಸ್ಕ್ರಾಲ್ ವರದಿ ಮಾಡಿದೆ.
ಇದಕ್ಕೂ ಮುಂಚೆ, 2022ರ ಜುಲೈನಲ್ಲಿ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಜೌಗು ಪ್ರದೇಶದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡವರ ವಿರುದ್ಧ ಕ್ರಮ ಕೈಗೊಂಡಿತ್ತು. ಆಗ, ಟೈಮ್ ಸಿಟಿ ಕಚೇರಿಯ ಕಾಂಪೌಂಡ್‌ಅನ್ನು ಕೆಡವಿತ್ತು. ಅಲ್ಲದೆ, ಅಕ್ರಮ ಅತಿಕ್ರಮಣ ಆರೋಪದ ಮೇಲೆ ಟೈಮ್ಸ್ ಸಿಟಿಯ ಮುಖ್ಯಸ್ಥ ಪಾಠಕ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಆದರೆ, ಈ ನಡುವೆ, ನಿವೇಶನ ಮಾರಾಟದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ವಿಶಾಸ್ ಸಿಂಗ್, “ಜೌಗು ಪ್ರದೇಶದಲ್ಲಿ ನಿವೇಶನಗಳನ್ನು ಹೇಗೆ ಮಾರಾಟ ಮಾಡಲು ಸಾಧ್ಯ. ಈ ಮಾರಾಟ ಖರೀದಿಯು ನಮ್ಮ ವ್ಯಾಪ್ತಿಯಲ್ಲಿಲ್ಲ. ಇದು ಮುದ್ರ ಕಾಯ್ದೆ ಮತ್ತು ಆಸ್ತಿ ವರ್ಗಾವಣೆ ಕಾಯ್ದೆಯಡಿಯಲ್ಲಿ ಬರುತ್ತದೆ. ಅದನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ನಿರ್ವಹಿಸುತ್ತದೆ” ಎಂದು ಹೇಳಿದ್ದಾರೆ.
ಅದಾನಿ ಸಮೂಹದ ವಕ್ತಾರರ ಪ್ರಕಾರ, “ಕಾನೂನು ಸಲಹೆಯಂತೆ, ಭೂಮಿ ಯಾವುದೇ ಕಾನೂನು ತೊಡಕುಗಳನ್ನು ಹೊಂದಿಲ್ಲ. ನಾವು ಯಾವುದೇ ನಿರ್ಮಾಣ ಕಾಮಗಾರಿ ಕೈಗೊಳ್ಳುವುದಾದರೆ ನಿಯಮಗಳನ್ನು ಅನುಸರಿಸುತ್ತೇವೆ. ಕಾನೂನಿನ ಮೂಲಕ ಅಗತ್ಯವಿರುವ ಎಲ್ಲ ಪರವಾನಗಿಗಳು ಮತ್ತು ಅನುಮತಿಗಳನ್ನು ಪಡೆದುಕೊಳ್ಳುತ್ತೇವೆ” ಎಂದಿದ್ದಾರೆ.
ಟೈಮ್ಸ್ ಸಿಟಿ ವಿರುದ್ಧ ವಂಚನೆ ಆರೋಪಗಳು
ಟೈಮ್ ಸಿಟಿಯು ಅಯೋಧ್ಯೆಯಲ್ಲಿ ಅದಾನಿ ಗುಂಪಿಗೆ ಭೂಮಿಯನ್ನು ಮಾರಾಟ ಮಾಡುವ ಆರು ದಿನಗಳ ಮೊದಲು, (2023ರ ನವೆಂಬರ್ 19) ಟೈಮ್ಸ್ ಸಿಟಿ ವಿರುದ್ಧ ಪ್ರಕರಣ ದಾಖಲಾಗಿದೆ. ಲಕ್ನೋದ ಗುಡಂಬಾ ಪೊಲೀಸ್ ಠಾಣೆಯಲ್ಲಿ ಪಾಠಕ್ ಮತ್ತು ಟೈಮ್ ಸಿಟಿ ಗುಂಪಿನ ಇತರ 16 ಹಿರಿಯ ಸಿಬ್ಬಂದಿಗಳ ವಿರುದ್ಧ ನಂಬಿಕೆಯ ಉಲ್ಲಂಘನೆ, ವಂಚನೆ, ನಕಲಿ, ಬೆದರಿಕೆ ಮತ್ತು ಗಲಭೆ ಆರೋಪಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಗೋರಖ್‌ಪುರ ನಿವಾಸಿ ಗಂಗಾ ಸಾಗರ್ ಯಾದವ್ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಗಂಗಾ ಸಾಗರ್ ಟೈಮ್ ಸಿಟಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು. “ನಾನು ಕಂಪನಿಯಲ್ಲಿ 20 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೇನೆ. ಅಲ್ಲದೆ, ನನ್ನ ಸ್ನೇಹಿತರು ಮತ್ತು ಕುಟುಂಬವು 5 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದೆ” ಎಂದು ಗಂಗಾ ಸಾಗರ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ರಾಮಮಂದಿರಕ್ಕೆ ದಲಿತರು ಕೊಟ್ಟ ದೇಣಿಗೆಯನ್ನು ‘ಅಶುದ್ಧ’ವೆಂದು ವಾಪಸ್ ಕೊಟ್ಟ ಸವರ್ಣೀಯರು
“ಹೂಡಿಕೆಯ ಹಣದಿಂದ ಟೈಮ್ಸ್ ಸಿಟಿ ಎಸ್ಟೇಟ್‌ಗಳನ್ನು ಖರೀದಿಸಿ, ಕೆಲ ವರ್ಷಗಳ ನಂತರ ಮಾರಾಟ ಮಾಡುತ್ತದೆ. ಬಂದ ಲಾಭವನ್ನು ಹೂಡಿಕೆಗೆ ಅನುಗುಣವಾಗಿ ಹಂಚಲಾಗುತ್ತದೆ. 2018ರವರೆಗೆ ಇದು ಸರಿಯಾಗಿಯೇ ನಡೆಯುತ್ತಿತ್ತು. ಆದರೆ, ನಂತರದಲ್ಲಿ ಹೂಡಿಕೆದಾರರಿಗೆ ಯಾವ ಲಾಭವನ್ನೂ ಹಂಚಿಕೆ ಮಾಡಿಲ್ಲ. ಫೋನ್ ಕರೆಗಳಿಗೂ ಉತ್ತರಿಸುವುದಿಲ್ಲ. ಕನಿಷ್ಠ 1000-2000 ಜನರು ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ. ಎಲ್ಲರಿಗೂ ಒಟ್ಟು 35 ಕೋಟಿ ರೂ. ಹಂಚಿಕೆ ಆಗಬೇಕಿದೆ” ಎಂದು ಗಂಗಾ ಸಾಗರ್ ಹೇಳಿದ್ದಾರೆ.

ಗುಡಂಬಾ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಪ್ರಕಾರ, ಗಂಗಾ ಸಾಗರ್ ಮತ್ತು ಇತರ ಹೂಡಿಕೆದಾರರು 2022ರ ಮಾರ್ಚ್‌ನಲ್ಲಿ ಲಕ್ನೋದಲ್ಲಿರುವ ಟೈಮ್ಸ್ ಸಿಟಿಯ ಕಚೇರಿಗೆ ಭೇಟಿ ನೀಡಿದ್ದರು. ಆಗ, ಪಾಠಕ್ ಮತ್ತು ಇತರ ಸಿಬ್ಬಂದಿಗಳು, ‘ನಿಮ್ಮ ಹೂಡಿಕೆಗಳನ್ನು ಮರೆತುಬಿಡಿ. ಇಲ್ಲದಿದ್ದರೆ ನಿಮ್ಮನ್ನು ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ.
ಟೈಮ್ಸ್ ಸಿಟಿ ಹೂಡಿಕೆದಾರರಲ್ಲಿ ಮುಂಬೈನ ಬ್ರಿಜ್ಭಾನ್ ಪಾಲ್ ಹಾಗೂ ಆರ್‌ಎಸ್‌ಎಸ್ ಜೊತೆಗೆ ಗುರುಸಿಕೊಂಡಿರುವ ಕಾನ್ಪುರ ಮೂಲದ ಪತ್ರಕರ್ತ ಸುಶೀಲ್ ಕುಮಾರ್ ಕೂಡ ಇದ್ದಾರೆ ಎಂದು ಹೇಳಲಾಗಿದೆ.

ಇನ್ನು, 2023ರ ಡಿಸೆಂಬರ್ 28ರಂದು, ಗುಡಂಬಾದಲ್ಲಿ ಟೈಮ್ ಸಿಟಿ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ಡಿಯೋರಿಯಾ ಜಿಲ್ಲೆಯ ಹೂಡಿಕೆದಾರ ಧರ್ಮೇಂದ್ರ ಅವರ ದೂರಿನ ಆಧಾರದ ಮೇಲೆ ಆ ಪ್ರಕರಣ ದಾಖಲಾಗಿದೆ. “ಟೈಮ್ ಸಿಟಿ ತನ್ನ ಹೂಡಿಕೆ ಯೋಜನೆಗಳನ್ನು ಮಾರಾಟ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರವಾನಗಿಯನ್ನು ನಕಲಿ ಮಾಡಿದೆ” ಎಂದು ಧರ್ಮೇಂದ್ರ ಅವರು ಆರೋಪಿಸಿದ್ದಾರೆ.
ಅದಾನಿ ಸಮೂಹದ ಸೇಲ್ ಡೀಡ್‌ಗಳಲ್ಲಿ ಟೈಮ್ ಸಿಟಿ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಕಾನೂನು ಸಲಹೆಗಾರ ಸೂರ್ಯಭಾನ್ ಸಿಂಗ್ ಅವರು ಎರಡೂ ಎಫ್‌ಐಆರ್‌ಗಳಲ್ಲಿ ಆರೋಪಿಯಾಗಿದ್ದಾರೆ.
“ಟೈಮ್ ಸಿಟಿ ವಿರುದ್ಧದ ಎಫ್‌ಐಆರ್‌ಗಳು ರಾಜಕೀಯ ಪ್ರೇರಿತವಾಗಿವೆ. ನನ್ನನ್ನು ಏಕೆ ಆರೋಪಿಯನ್ನಾಗಿ ಸೇರಿಸಲಾಗಿದೆ ಎಂಬುದು ನನಗೆ ತಿಳಿದಿಲ್ಲ. ಕಂಪನಿಯ ನೀತಿಗಳನ್ನು ಅದರ ಮಂಡಳಿಯಿಂದ ರೂಪಿಸಲಾಗಿದೆ. ನಾನು ಸಲಹೆಗಾರ ಮಾತ್ರ” ಎಂದು ಸೂರ್ಯಭಾನ್ ಸಿಂಗ್ ಹೇಳಿದ್ದಾಗಿ ಸ್ಕ್ರಾಲ್ ವರದಿ ಮಾಡಿದೆ.
ಮೂಲ: ಸ್ಕ್ರಾಲ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ