ಅಯೋಧ್ಯೆಯ ರಾಮಮಂದಿರ ಸಂಕೀರ್ಣದಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪ್ರಕರಣದ ತನಿಖೆಯಲ್ಲಿ ಬೇಜವಾಬ್ದಾರಿತನದಿಂದ ವರ್ತಿಸಿರುವ ಪೊಲೀಸರ ವಿರುದ್ಧವೂ ಶಿಕ್ಷಾರ್ಹ ಕ್ರಮ ಕೈಗೊಳ್ಳಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.
20 ವರ್ಷದ ಸಂತ್ರಸ್ತ ಯುವತಿ, ಆಗಸ್ಟ್ 16 ಮತ್ತು 25 ರ ನಡುವೆ ಮೂರು ವಿಭಿನ್ನ ಸಂದರ್ಭಗಳಲ್ಲಿ ತನ್ನ ಮೇಲೆ ಒಂಬತ್ತು ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ. ಪ್ರಕರಣದಲ್ಲಿ ಈವರೆಗೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ಧೋರಣೆಯಿಂದ ನಡೆದುಕೊಂಡಿದ್ದಾರೆ. ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸಲು ಹಿಂದೇಟು ಹಾಕಿದ್ದಾರೆ ಎಂದು ಯುವತಿ ವಿವರಿಸಿರುವ ವಿಡಿಯೋ ತುಣುಕನ್ನು ಅಖಿಲೇಶ್ ಯಾದವ್ ‘ಎಕ್ಸ್‘ನಲ್ಲಿ ಹಂಚಿಕೊಂಡಿದ್ದಾರೆ.
“ಅಯೋಧ್ಯೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತ ಯುವತಿಯ ವಿಡಿಯೋ ಹೇಳಿಕೆಯು ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಮೂಲ ಕಾರಣವನ್ನು ಬಹಿರಂಗಪಡಿಸಿದೆ. ಪೊಲೀಸರಿಗೆ ದೂರು ನೀಡಲು ಸಂತ್ರಸ್ತೆ ಹೇಗೆಲ್ಲ ಹೆಣಗಾಡಿದ್ದಾಳೆ. ದೂರು ಸಲ್ಲಿಸಲು ಕಷ್ಟವಾಗಿರುವ ಕಾರಣದಿಂದಾಗಿ, ಅನೇಕ ಅಪರಾಧಗಳು ವರದಿಯಾಗುತ್ತಿಲ್ಲ. ಇದು ಅಪರಾಧಿಗಳ ಆತ್ಮಸ್ಥೈರ್ಯವನ್ನು ಹೆಚ್ಚುತ್ತದೆ. ಕೃತ್ಯಕ್ಕೆ ಪ್ರಚೋದಿಸುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.