ಮೋದಿ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಹಗರಣ ತಾಂಡವ | ಚಿಕಿತ್ಸೆಗೆ ಫಲಾನುಭವಿಗಳಿಂದ ಹಣ ಪಾವತಿ; ಸಿಎಜಿ ವರದಿಯಲ್ಲಿ ಉಲ್ಲೇಖ

Date:

Advertisements

ಮೋದಿ ಸರ್ಕಾರವು ಪ್ರಾರಂಭಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಒಂದಾದ ಆಯುಷ್ಮಾನ್ ಭಾರತ್- ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಲ್ಲಿ(ಪಿಎಂಜೆಎವೈ) ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆಯುಷ್ಮಾನ್ ಭಾರತ್ ಯೋಜನೆಯು ಉಚಿತವಾಗಿ ನಗದು ರಹಿತ ಸೇವೆಗಳನ್ನು ಒದಗಿಸಲು ಉದ್ದೇಶಿಸಿದ್ದರೂ ಫಲಾನುಭವಿಗಳು ಚಿಕಿತ್ಸೆಗಾಗಿ ಹಣವನ್ನು ಪಾವತಿಸಿದ್ದಾರೆ. ಆಸ್ಪತ್ರೆಗಳು ಅಥವಾ ಸೇವಾ ಪೂರೈಕೆದಾರರು ಹಣ ಪೀಕಿದ್ದಾರೆ ಎಂದು ಸಿಎಜಿ ವರದಿ ಹೇಳಿದೆ.

ಸಿಎಜಿಯು, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾದ ಪಿಎಂಜೆಎವೈ ಕುರಿತಾದ ತನ್ನ ಕಾರ್ಯಕ್ಷಮತೆಯ ಲೆಕ್ಕಪರಿಶೋಧನಾ ವರದಿಯಲ್ಲಿ, “ರೋಗಿಯು ಆಸ್ಪತ್ರೆಗೆ ದಾಖಲಾದ ನಂತರ, ಎಲ್ಲ ರೋಗನಿರ್ಣಯ ಪರೀಕ್ಷೆಗಳು, ಔಷಧಿಗಳು ಇತ್ಯಾದಿಗಳ ವೆಚ್ಚವನ್ನು ಆಸ್ಪತ್ರೆಯು ಭರಿಸಬೇಕಾಗುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ಸಂಚಿತ ಪ್ಯಾಕೇಜ್ ಮೊತ್ತದಲ್ಲಿ ಸೇರಿಸಲಾಗಿದೆ. ಆದಾಗ್ಯೂ, ಪಿಎಂಜೆಎವೈ ಅಡಿಯಲ್ಲಿ ರೋಗಿಗಳು ತಮ್ಮ ಚಿಕಿತ್ಸೆಯ ಭಾಗವಾಗಿ ಹಣವನ್ನು ಪಾವತಿಸಿರುವ ನಿದರ್ಶನಗಳನ್ನು ವರದಿಯ ಪರಿಶೋಧನೆಯಲ್ಲಿ ಗಮನಿಸಲಾಗಿದೆ.

Advertisements

2018 ರಲ್ಲಿ ಜಾರಿಗೊಳಿಸಿದ, ಎಬಿ – ಪಿಎಂಜೆಎವೈ ಯೋಜನೆ ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆ ಸೇವೆಗಳಿಗಾಗಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿಗಳವರೆಗೆ ಆರೋಗ್ಯ ವಿಮೆಯನ್ನು ಒದಗಿಸುತ್ತದೆ. ಸರ್ಕಾರವೇ ತಿಳಿಸಿರುವ ಪ್ರಕಾರ ಈ ಆರೋಗ್ಯ ರಕ್ಷಣೆ ಯೋಜನೆಯು 50 ಕೋಟಿ ಜನರನ್ನು ಒಳಗೊಂಡಿದೆ. ಯೋಜನೆಯಡಿ ನಗದುರಹಿತ ಮತ್ತು ಕಾಗದರಹಿತದ ಮೂಲಕ ಫಲಾನುಭವಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು.

ಅಲ್ಲದೆ ಈ ಯೋಜನೆಲ್ಲಿ ರೋಗಗಳ ಚಿಕಿತ್ಸೆಯನ್ನು 4 ಹಂತದಲ್ಲಿ ವಿಭಜಿಸಲಾಗಿದೆ. ಚಿಕಿತ್ಸಾ ಕೋಡ್‌ಗಳಾದ ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು (2ಎ), ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು (2ಬಿ), ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು (3ಎ) ಮತ್ತು ತುರ್ತು ಚಿಕಿತ್ಸೆ 169 ಚಿಕಿತ್ಸಾ ವಿಧಾನಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು (4ಎ) ಆಗಿದ್ದು ಯೋಜನೆಯಡಿ ಒಟ್ಟು 1650 ಚಿಕಿತ್ಸಾ ಕೋಡ್‌ಗಳು ಲಭ್ಯವಿರುತ್ತದೆ.

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾ ಆರೋಗ್ಯ ಯೋಜನೆಯಡಿ ಚಿಕಿತ್ಸೆ ಪಡೆಯಲು ಯಾವುದೇ ವ್ಯಕ್ತಿಗೆ ರೋಗ ಲಕ್ಷಣಗಳು ಕಂಡುಬಂದಲ್ಲಿ ಪ್ರಥಮವಾಗಿ ಹತ್ತಿರದ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಪ್ರಾಥಮಿಕ ಮತ್ತು ಸಾಮಾನ್ಯ ದ್ವಿತೀಯ ಚಿಕಿತ್ಸೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುವುದು. ದ್ವಿತೀಯ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದಲ್ಲಿ ಅಲ್ಲಿಯೇ ನೀಡಲಾಗುತ್ತದೆ. ಇಲ್ಲದಿದ್ದಲ್ಲಿ ಬೇರೆ ಆಸ್ಪತ್ರೆಗೆ ಯೋಜನೆಯಡಿ ಶಿಫಾರಸ್ಸು(ರೆಫರಲ್) ನೀಡಲಾಗುತ್ತದೆ. ಹೀಗೆ ರೆಫರಲ್ ಪಡೆದುಕೊಂಡ ರೋಗಿಯು ತಾನು ಇಚ್ಛಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೇ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ.

ಈ ಸುದ್ದಿ ಓದಿದ್ದೀರಾ? ಜೈಪುರ – ಮುಂಬೈ ರೈಲಿನಲ್ಲಿ ನಾಲ್ವರನ್ನು ಕೊಂದಿದ್ದ ಆರ್‌ಪಿಎಫ್‌ ಕಾನ್‌ಸ್ಟೆಬಲ್ ಸೇವೆಯಿಂದ ವಜಾ

ಹಲವು ರಾಜ್ಯಗಳಲ್ಲಿ ಯೋಜನೆಗೆ ಹಣ ನೀಡಿರುವ ಫಲಾನುಭವಿಗಳು

ಪಿಎಂಜೆಎವೈ ವ್ಯಾಪ್ತಿಗೆ ಒಳಪಟ್ಟಿದ್ದರೂ ಫಲಾನುಭವಿಗಳು ನಗದು ಪಾವತಿಸಬೇಕಾದ ವಿವಿಧ ನಿದರ್ಶನಗಳನ್ನು ಸಿಎಜಿ ವರದಿಯಲ್ಲಿ ಉಲ್ಲೇಖಿಸಿದೆ. “ಹಿಮಾಚಲ ಪ್ರದೇಶದಲ್ಲಿ,ಇಹೆಚ್‌ಸಿಪಿ (ಪಿಎಂಜೆಎವೈ ಸೇವೆ ಒದಗಿಸುವ ನೊಂದಾಯಿತ ಆರೋಗ್ಯ ಸೇವಾ ಪೂರೈಕೆದಾರ ಕೇಂದ್ರ)ಗಳಲ್ಲಿ 50 ಫಲಾನುಭವಿಗಳು ತಮ್ಮ ರೋಗನಿರ್ಣಯ ಪರೀಕ್ಷೆಗಳನ್ನು ಆಸ್ಪತ್ರೆಗಳು ಹಾಗೂ ರೋಗನಿರ್ಣಯ ಕೇಂದ್ರದಿಂದ ಉಚಿತವಾಗಿ ಪಡೆದುಕೊಳ್ಳಬೇಕಾಗಿತ್ತು. ಆದರೆ ಪರೀಕ್ಷೆಗಳ ವೆಚ್ಚವನ್ನು ಫಲಾನುಭವಿಗಳು ಭರಿಸಿದ್ದಾರೆ. ರಾಜ್ಯ ಅರೋಗ್ಯ ಕೇಂದ್ರಗಳು (ಎಸ್‌ಹೆಚ್‌ಎ) ರೋಗಿಗಳ ಯೋಜನೆಯ ಖರ್ಚಿನ ಮೊತ್ತವನ್ನು ವಾಪಸ್ ಭರಿಸಲಿಲ್ಲ ಎಂದು ಸಿಎಜಿ ವರದಿ ತಿಳಿಸಿದೆ.

ಅದೇ ರೀತಿ, ಜಮ್ಮು ಮತ್ತು ಕಾಶ್ಮೀರದಲ್ಲಿ, 459 ರೋಗಿಗಳು ತಮ್ಮ ಸ್ವಂತ ಜೇಬಿನಿಂದ ಆರಂಭದಲ್ಲಿ 43.27 ಲಕ್ಷ ರೂ.ಗಳನ್ನು ಪಾವತಿಸಿದ್ದಾರೆ, ಇದಕ್ಕಾಗಿ ಬಿಲ್‌ಗಳನ್ನು ಪರಿಶೀಲಿಸಿದ ನಂತರ ರೋಗಿಗಳಿಗೆ ಮರುಪಾವತಿ ಮಾಡಲಾಗಿದೆ. 75 ರೋಗಿಗಳಿಗೆ ಇನ್ನೂ 6.70 ಲಕ್ಷ ರೂಪಾಯಿ ಮರುಪಾವತಿ ಮಾಡಬೇಕಾಗಿದೆ ಎಂದು ಸಿಎಜಿ ವರದಿಯಲ್ಲಿ ದಾಖಲಾಗಿದೆ.

ಹಲವಾರು ಪ್ರಕರಣಗಳಲ್ಲಿ ಲೆಕ್ಕಕ್ಕೆ ಸಿಗದಷ್ಟು ವಿವರಗಳು ಲಭ್ಯವಿಲ್ಲ ಎಂದು ಸಿಎಜಿ ವರದಿ ಹೇಳುತ್ತದೆ. “ಜಾರ್ಖಂಡ್‌ನಲ್ಲಿನ ಗೊಡ್ಡಾದ 36 ಲೈಫ್ ಕೇರ್ ಆಸ್ಪತ್ರೆಗಳಲ್ಲಿ ರೋಗಿಗಳು, ಔಷಧಿಗಳು, ಚುಚ್ಚುಮದ್ದು, ರಕ್ತ ಇತ್ಯಾದಿಗಳನ್ನು ಖರೀದಿಸಲು ವಿವಿಧ ರೀತಿಯಲ್ಲಿ ಮೊತ್ತವನ್ನು ಪಾವತಿಸಿರುವುದನ್ನು ವಿಮಾ ಕಂಪನಿ ಗಮನಿಸಿದೆ. ವೆಚ್ಚದ ವಿವರಗಳು ರಾಜ್ಯ ಆರೋಗ್ಯ ಕೇಂದ್ರದ ಬಳಿ ಲಭ್ಯವಿಲ್ಲ.

ವಿಮಾ ಕಂಪನಿಯ ಅವಲೋಕನದ ಆಧಾರದ ಮೇಲೆ, ಎಸ್‌ಹೆಚ್‌ಎ ಆಗಸ್ಟ್ 28, 2020 ರಂದು ದಂಡವನ್ನು ತಪ್ಪಿಸಲು ಐದು ದಿನಗಳಲ್ಲಿ ತನ್ನ ವಿವರಣೆಯನ್ನು ಸಲ್ಲಿಸುವಂತೆ ಆಸ್ಪತ್ರೆಯನ್ನು ಕೇಳಿದೆ. ವಿಫಲವಾದರೆ ಆಸ್ಪತ್ರೆಯನ್ನು ಅಮಾನತುಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಆದಾಗ್ಯೂ, ಆಸ್ಪತ್ರೆಯು ಯಾವುದೇ ವಿವರಣೆಯನ್ನು ಸಲ್ಲಿಸಲಿಲ್ಲ ಅಥವಾ ಎಸ್‌ಹೆಚ್‌ಎ ಆಸ್ಪತ್ರೆಯ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ.

ಮೇಘಾಲಯದಲ್ಲಿ, ಫೆಬ್ರವರಿ 2019 ರಿಂದ ಮಾರ್ಚ್ 2021 ರವರೆಗೆ ಐದು ಖಾಸಗಿ ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದ 19,459 ಫಲಾನುಭವಿಗಳಲ್ಲಿ, 13,418 (ಶೇ. 69) ಮಂದಿ ಡಿಸ್ಚಾರ್ಜ್ ಸಮಯದಲ್ಲಿ 12.34 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಿದ್ದಾರೆ.

ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ, ಮೋದಿ ಸರ್ಕಾರವು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವನ್ನು (ಎನ್‌ಹೆಚ್‌ಎ) ಸ್ಥಾಪಿಸಿದೆ. ಇದು ಪಿಎಂಜೆಎವೈ ಅನ್ನು ಜಾರಿಗೆ ತರಲು 33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಒಡಂಬಡಿಕೆಗಳಿಗೆ ಸಹಿ ಹಾಕಿದೆ. ಆದರೂ ಬಹುತೇಕ ರಾಜ್ಯಗಳಲ್ಲಿ ಫಲಾನುಭವಿಗಳು ನಗದು ಪಾವತಿಸಿದ್ದಾರೆ ಎಂದು ಸಿಎಜಿ ವರದಿ ದಾಖಲಿಸಿದೆ. 

ಪಿಎಂಜೆಎವೈ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಸುಮಾರು 1393 ಚಿಕಿತ್ಸಾ ಪ್ಯಾಕೇಜ್‌ಗಳು ಲಭ್ಯವಿವೆ ಮತ್ತು ಈ ಯೋಜನೆಯ ಯಾವುದೇ ಫಲಾನುಭವಿಯು ಪ್ರಯೋಜನಗಳನ್ನು ಪಡೆಯಲು ದೇಶದ ಯಾವುದೇ ನೋಂದಾಯಿತ ಆಸ್ಪತ್ರೆಯನ್ನು ಸಂಪರ್ಕಿಸಬಹುದು. “ಇದು ಅರ್ಹತೆ ಆಧಾರಿತ ಯೋಜನೆಯಾಗಿದೆ ಮತ್ತು ನೋಂದಣಿ ಅಥವಾ ಪ್ಲಾಸ್ಟಿಕ್ ಕಾರ್ಡ್‌ಗಳ ವಿತರಣೆಯನ್ನು ಒಳಗೊಂಡಿಲ್ಲ ಎಂದು ಯೋಜನೆಯನ್ನು ಪ್ರಾರಂಭಿಸುವಾಗ ಕೇಂದ್ರ ಸರ್ಕಾರ ಹೇಳಿದೆ. ಉಚಿತ ಯೋಜನೆಯಾದರೂ ಸಾರ್ವಜನಿಕರು ಕೋಟ್ಯಾಂತರ ರೂ. ಪಾವತಿಸಿರುವುದು ಭ್ರಷ್ಟಾಚಾರ ಅಧಿಕಾರಿಗಳ ಸಮ್ಮುಖದಲ್ಲಿ ನಡೆದಿರುವುದಕ್ಕೆ ಪ್ರಮುಖ ಸಾಕ್ಷಿಯಾಗಿದೆ.

ಕಾಂಗ್ರೆಸ್ ಆಕ್ರೋಶ

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಉಂಟಾಗಿರುವ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಟ್ವೀಟ್‌ ಮೂಲಕ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್‌ ವಿಭಾಗಗಳ ಅಧ್ಯಕ್ಷರಾದ ಸುಪ್ರಿಯಾ ಶ್ರೀನಾಥೆ, “ ಮೋದಿ ಸರ್ಕಾರ ಎಸಗಿರುವ ಪ್ರಮುಖ ಹಗರಣಗಳನ್ನು ಸಿಎಜಿ ವರದಿ ಬಯಲಿಗೆಳದಿದೆ. ಮೋದಿಯವರ ಮೂಗಿನ ನೇರಕ್ಕೆ ಹಗರಣಗಳ ಮೇಲೆ ಹಗರಣಗಳು ಬಯಲಾಗುತ್ತಿವೆ. ಆದರೆ  ಮೋದಿಯವರು ಈ ಬಗ್ಗೆ ತುಟಿ ಬಿಚ್ಚದೆ ಮೌನವಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ದ್ವಾರಕಾ ಎಕ್ಸ್‌ಪ್ರೆಸ್ ನಂತರ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಭ್ರಷ್ಟಾಚಾರ ಬಯಲಾಗಿದೆ. ಇದು ಸಾರ್ವಜನಿಕ ಲೂಟಿ ಎಂದು ನಾನು ಭಾವಿಸುತ್ತೇನೆ. ಇದು ದೇಶದ ಬೊಕ್ಕಸವನ್ನು ಹಾಗೂ ಭಾರತದ ಜನರನ್ನು ಲೂಟಿ ಮಾಡಲಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು” ಎಂದು ಆಗ್ರಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X