ಮಹಾರಾಷ್ಟ್ರದಲ್ಲಿ ತನ್ನ ಮಿತ್ರಪಕ್ಷವಾದ ಶಿವಸೇನೆಯ (ಉದ್ಧವ್ ಠಾಕ್ರೆ ಬಣ) ಬಾಬರಿ ಮಸೀದಿ ಧ್ವಂಸ ಸಮರ್ಥನೆ ಮಾಡುವಂತಹ ಜಾಹೀರಾತು ಪ್ರಕಟಿಸಿರುವುದಕ್ಕೆ ಸಮಾಜವಾದಿ ಪಕ್ಷ (ಎಸ್‌ಪಿ) ತೀವ್ರ ವಿರೋಧ ವ್ಯಕ್ತಪಡಿಸಿದೆ. ಸಮಾಜವಾದಿ ಪಕ್ಷವು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಿಂದ ಹೊರನಡೆದಿದೆ.
ಶಿವಸೇನೆ ಕೋಮುವಾದ ಮಾಡುತ್ತದೆ ಎಂದು ಎಸ್‌ಪಿ ಆರೋಪಿಸಿದೆ. ಈ ನಡುವೆ ಕಾಂಗ್ರೆಸ್ ನಾಯಕರು ಕೂತು ಚರ್ಚಿಸುವ ಮತ್ತು ಸಮಸ್ಯೆ ನಿವಾರಣೆಗೆ ಯೋಜನೆ ರೂಪಿಸುವ ಎಂದು ತಿಳಿಸಿದ್ದಾರೆ.
ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಸಮಾಜವಾದಿ ಪಕ್ಷದ ಕೇಂದ್ರ ನಾಯಕತ್ವವು ಇಂಡಿಯಾ ಒಕ್ಕೂಟದೊಂದಿಗೆ ಉಳಿಯಲಿದೆ ಎಂದು ತಿಳಿಸಿದ್ದಾರೆ. ಇಂಡಿಯಾ ಒಕ್ಕೂಟದ ಕಾರ್ಯವೈಖರಿ ಬಗ್ಗೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.
ಇದನ್ನು ಓದಿದ್ದೀರಾ? ಬಾಬರಿ ಮಸೀದಿ ಧ್ವಂಸ ತರುವಾಯ ತೀವ್ರಗೊಂಡ ಮುಸ್ಲಿಮರ ಮೇಲಿನ ದಾಳಿ
ಉದ್ಧವ್ ಠಾಕ್ರೆ ಅವರ ಆಪ್ತ ಸಹಾಯಕ ಎಂಎಲ್‌ಸಿ ಮಿಲಿಂದ್ ನಾರ್ವೇಕರ್ ಬಾಬರಿ ಮಸೀದಿ ಧ್ವಂಸವನ್ನು ಶ್ಲಾಘಿಸಿದ್ದು, ಇದರ ಹಿಂದಿರುವವರನ್ನು ಅಭಿನಂದಿಸುವ ಜಾಹೀರಾತನ್ನು ಪೋಸ್ಟ್ ಮಾಡಿದ್ದಾರೆ. ಶಿವಸೇನೆ (ಯುಬಿಟಿ) ಕಾರ್ಯದರ್ಶಿ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಮತ್ತು ಅವರ ಚಿತ್ರಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಇದು ಎಂವಿಎಯಲ್ಲಿ ಚರ್ಚೆಗೆ ಕಾರಣವಾಗಿದೆ.
“ಬಾಬರಿ ಮಸೀದಿ ಕೆಡವಿದವರನ್ನು ಅಭಿನಂದಿಸಿ ಶಿವಸೇನೆ (ಯುಬಿಟಿ) ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದೆ. ಅವರ (ಉದ್ಧವ್ ಠಾಕ್ರೆ) ಸಹಾಯಕ ಕೂಡ ಎಕ್ಸ್‌ನಲ್ಲಿ ಮಸೀದಿ ಧ್ವಂಸವನ್ನು ಶ್ಲಾಘಿಸಿ ಪೋಸ್ಟ್ ಮಾಡಿದ್ದಾರೆ. ನಾವು ಎಂವಿಎಯನ್ನು ತೊರೆಯುತ್ತಿದ್ದೇವೆ. ನಾನು ಅಖಿಲೇಶ್ ಯಾದವ್ ಅವರೊಂದಿಗೆ ಮಾತನಾಡುತ್ತಿದ್ದೇನೆ” ಎಂದು ಎಸ್‌ಪಿ ಮಹಾರಾಷ್ಟ್ರ ಮುಖ್ಯಸ್ಥ ಅಬು ಅಜ್ಮಿ ಪಿಟಿಐಗೆ ತಿಳಿಸಿದರು.
ಹಾಗೆಯೇ ಉದ್ಧವ್ ಠಾಕ್ರೆ ನೇತೃತ್ವದ ಬಣದೊಂದಿಗಿನ ಮೈತ್ರಿಯನ್ನು ಮರುಪರಿಶೀಲಿಸುವಂತೆ ಅಜ್ಮಿ ಕಾಂಗ್ರೆಸ್‌ಗೆ ಒತ್ತಾಯಿಸಿದರು. “ಎಂವಿಎಯಲ್ಲಿ ಯಾರಾದರೂ ಈ ರೀತಿಯ ನಿಲುವು ಹೊಂದಿರುವುದಾದರೆ ಬಿಜೆಪಿ ಮತ್ತು ಅವರ (ಶಿವಸೇನೆ) ನಡುವಿನ ವ್ಯತ್ಯಾಸವೇನು? ನಾವೇಕೆ ಅವರ ಜೊತೆ ಇರಬೇಕು? ಈ ರೀತಿ ಮಾತನಾಡುವವರ ಜತೆ ಮೈತ್ರಿ ಮಾಡಿಕೊಳ್ಳಬಹುದೇ ಎಂಬುದನ್ನು ಕಾಂಗ್ರೆಸ್ ನಿರ್ಧರಿಸಬೇಕಿದೆ” ಎಂದು ಸುದ್ದಿಗಾರರಿಗೆ ತಿಳಿಸಿದರು.
