ಆಪಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ 6 ತಿಂಗಳಿನಿಂದ ದೆಹಲಿಯ ತಿಹಾರ್ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ. ಸತತ 177 ದಿನಗಳ ಬಳಿಕ ಸುಪ್ರೀಂ ಕೋರ್ಟ್ ಶುಕ್ರವಾರದಂದು ಅರವಿಂದ್ ಕೇಜ್ರೀವಾಲ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ₹10 ಲಕ್ಷ ಮೊತ್ತದ ಬಾಂಡ್ ನೀಡಿ ಜಾಮೀನಿನ ಮೇಲೆ ಬಿಡುಗಡೆಯಾಗುವಂತೆ ಸುಪ್ರೀಂ ಕೋರ್ಟ್ ಅರವಿಂದ್ ಕೇಜ್ರಿವಾಲ್‌ಗೆ ಸೂಚಿಸಿದೆ.
ಕೇಜ್ರಿವಾಲ್ ಅವರು ಸಿಬಿಐ ಬಂಧನವನ್ನು ಪ್ರಶ್ನಿಸಿ ಮತ್ತು ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ದ್ವಿಸದಸ್ಯ ಪೀಠವು ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಜಾಮೀನು ನೀಡಿದೆ. ಅದಾಗ್ಯೂ, ಸಿಬಿಐ ತಮ್ಮನ್ನು ಬಂಧಿಸಿದ್ದನ್ನೇ ಪ್ರಶ್ನಿಸಿದ್ದ ಕೇಜ್ರಿವಾಲ್ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ ವೇಳೆ ಸಿಬಿಐ ನಡೆ Insurance arrest (ವಿಮಾ ಬಂಧನ) ಎಂಬುದಾಗಿ ಆರೋಪಿಸಿದ್ದರು. ಆದರೆ, ಜಸ್ಟೀಸ್ ಸೂರ್ಯಕಾಂತ್ ಅವರು ತನಿಖೆಯ ಉದ್ದೇಶದಿಂದ ಬಂಧನ ಮಾಡುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂದಿದ್ದಾರೆ. ಆದರೆ, ಉಜ್ಜಲ್ ಭುಯಾನ್ ಬಂಧನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಂಧನದ ಬಗ್ಗೆ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರ ಹೊರತಾಗಿಯೂ, ಜಾಮೀನು ಅರ್ಜಿಯ ವಿಷಯದಲ್ಲಿ ಇಬ್ಬರೂ ಒಂದೇ ತೀರ್ಪು ನೀಡಿದ್ದಾರೆ.
ಕೇಜ್ರೀವಾಲ್ ಅವರನ್ನ ಸಿಬಿಐ ಬಂಧಿಸಿದ ವಿಚಾರದಲ್ಲಿ ಇಬ್ಬರು ನ್ಯಾಯಾಧೀಶರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ‘ಸಿಬಿಐ ಬಂಧನ ಕಾನೂನುಬದ್ಧವಾಗಿದೆ’ ಎಂದಿದ್ದರೆ, ನ್ಯಾಯಮೂರ್ತಿ ಭುಯಾನ್ ಅವರು, ‘ಇಡಿ ಪ್ರಕರಣದಲ್ಲಿ ನೀಡಲಾದ ಜಾಮೀನನ್ನು ವಿಫಲಗೊಳಿಸಲು ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧನ ಮಾಡಿರುವುದು ಉತ್ತರಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮಾರ್ಚ್ 2023ರಲ್ಲಿ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಒಳಪಡಿಸಿದರೂ ಅವರನ್ನು ಬಂಧಿಸುವ ಅಗತ್ಯವಿದೆ ಎಂದು ಸಿಬಿಐಗೆ ಅನಿಸಿಲ್ಲ. ಇಡಿ ಬಂಧನದಿಂದ ಜಾಮೀನು ದೊರೆತ ಬಳಿಕವೇ ಸಿಬಿಐ ಬಂಧನ ಮಾಡಿದೆ. ಈ ಬಂಧನದ ಸಮಯ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ” ಎಂದು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಹೇಳಿದ್ದಾರೆ. ಅಲ್ಲದೇ, “ಸಿಬಿಐ ಪಂಜರದ ಗಿಳಿಯನ್ನಾಗಿ ಮಾಡುವಂತೆ ವರ್ತಿಸಬಾರದು. ಬಂಧನದ ಅಧಿಕಾರವನ್ನು ಉದ್ದೇಶಿತ ಕಿರುಕುಳಕ್ಕೆ ಬಳಸಿಕೊಳ್ಳಬಾರದು” ಎಂದು ಜಸ್ಟೀಸ್ ಭುಯಾನ್ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.
“ಇಡಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಲಭಿಸಿರುವಾಗ ಅವರನ್ನು ಜೈಲಿನಲ್ಲಿಡುವುದು ನ್ಯಾಯದ ಅಪಹಾಸ್ಯವಾಗುತ್ತದೆ. ಇಡಿ ಪ್ರಕರಣದಲ್ಲಿ ನೀಡಲಾಗಿದ್ದ ಜಾಮೀನನ್ನು ವಿಫಲಗೊಳಿಸಲೆಂದೇ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜತೆಗೆ, “ಈ ಪ್ರಕರಣ ಸಂಬಂಧ ಯಾವುದೇ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಬಾರದು ಮತ್ತು ವಿಚಾರಣಾ ನ್ಯಾಯಾಲಯದ ಮುಂದೆ ಎಲ್ಲ ವಿಚಾರಣೆಗಳಿಗೂ ಕೇಜ್ರಿವಾಲ್ ಹಾಜರಾಗಬೇಕು. ಮಾತ್ರವಲ್ಲದೇ, ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಒಪ್ಪಿಗೆಯಿಲ್ಲದೆ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಕಚೇರಿ ಅಥವಾ ದೆಹಲಿ ಸಚಿವಾಲಯಕ್ಕೆ ಹೋಗುವಂತಿಲ್ಲ. ಸರ್ಕಾರಿ ಕಡತಗಳಿಗೆ ಸಹಿ ಹಾಕುವಂತಿಲ್ಲ ಹಾಗೂ ನ್ಯಾಯಾಲಯದ ವಿನಾಯ್ತಿ ಹೊರತುಪಡಿಸಿ ಪ್ರತಿ ವಿಚಾರಣೆಗೂ ಕೇಜ್ರಿವಾಲ್ ಖುದ್ದು ಹಾಜರಾಗಬೇಕು” ಎಂದು ಸರ್ವೋಚ್ಚ ನ್ಯಾಯಾಲಯ ಷರತ್ತು ವಿಧಿಸಿದೆ.
ಅಂದಹಾಗೆ, ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಎಎಪಿಯನ್ನು ಕಟ್ಟಿ ಸಧೃಢವಾಗಿ ಬೆಳೆಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇನ್ನೇನು 2024ರ ಲೋಕಸಭಾ ಚುನಾವಣೆಗೆ ಭಾರೀ ತಯಾರಿ ನಡೆಸಿದ್ದರು. ಇಂಡಿಯಾ ಒಕ್ಕೂಟದ ಜತೆಗೆ ಸೇರಿ ಕೋಮುವಾದಿ, ಫ್ಯಾಸಿಸ್ಟ್ ಬಿಜೆಪಿ ಸರ್ಕಾರವನ್ನ ಹೊಡೆದೋಡಿಸಲು ಪಣವನ್ನ ತೊಟ್ಟಿದ್ದರು. ಆದರೆ, ಕೇಂದ್ರ ಸರ್ಕಾರದ ಕುತಂತ್ರದಿಂದಾಗಿ ಅಬಕಾರಿ ನೀತಿ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಬರೋಬ್ಬರಿ 6 ತಿಂಗಳುಗಳ ಕಾಲ ಜೈಲು ಪಾಲಾಗಿದ್ದರು.
ಆಪಾದಿತ ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮಾರ್ಚ್ 21ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಮೊದಲ ಬಾರಿಗೆ ಬಂಧಿಸಿತ್ತು. 10 ದಿನಗಳ ವಿಚಾರಣೆಯ ನಂತರ ಕೇಜ್ರೀವಾಲ್ ಅವರನ್ನು ಏಪ್ರಿಲ್ 1ರಂದು ತಿಹಾರ್ ಜೈಲಿಗೆ ಕಳುಹಿಸಲಾಯಿತು. ಲೋಕಸಭಾ ಚುನಾವಣೆಯ ಸಮಯದಲ್ಲಿ ಮೇ 10ರಂದು ಚುನಾವಣೆಯ ಪ್ರಚಾರಕ್ಕಾಗಿ ಕೇಜ್ರೀವಾಲ್ ಅವರನ್ನು 21 ದಿನಗಳ ಕಾಲ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಅವಧಿ ಮುಗಿದ ಬಳಿಕ ಜೂನ್ 2ರಂದು ಕೇಜ್ರಿವಾಲ್ ತಿಹಾರ್ ಜೈಲಿಗೆ ಮರಳಿದ್ದರು. ನಂತರ ಈ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಗುತ್ತಿದ್ದಂತೆ ಜೂನ್ 26ರಂದು ಅಬಕಾರಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದಾಗಲೇ ಸಿಬಿಐ ಅವರನ್ನು ಬಂಧಿಸಿತ್ತು.
ರದ್ದಾದ 2021ರ ದೆಹಲಿ ಅಬಕಾರಿ ನೀತಿ ಜಾರಿಯಲ್ಲಿ ಕೋಟ್ಯಂತರ ರೂಪಾಯಿ ಹಣ ಲಾಭ ಮಾಡಿಕೊಳ್ಳಲಾಗಿದೆ ಎನ್ನುವ ಆರೋಪಗಳನ್ನು ದೆಹಲಿ ಸರ್ಕಾರದ ಮೇಲೆ ಸಿಬಿಐ ಹೊರಿಸಿತ್ತು. ಸಿಬಿಐ ಹಾಗೂ ಇಡಿ ದಾಳಿ ನಡೆಸಿ ದೆಹಲಿ ಸರ್ಕಾರದ ಹಲವರನ್ನು ಬಂಧಿಸಲಾಗಿತ್ತು. ಕೆಲ ದಿನಗಳ ಹಿಂದೆ ಇದೇ ಪ್ರಕರಣದಲ್ಲಿ ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ, ತೆಲಂಗಾಣದ ಬಿಆರ್‌ಎಸ್ ನಾಯಕಿ ಕವಿತಾ, ಎಎಪಿ ನಾಯಕರಾದ ಸಂಜಯ್ ಸಿಂಗ್, ವಿಜಯ್ ನಾಯರ್ ಅವರಿಗೂ ಜಾಮೀನು ದೊರೆತಿದೆ. ಇದೀಗ, ಕೇಜ್ರಿವಾಲ್ ಕೂಡ ಬಂಧನ ಮುಕ್ತರಾಗಿದ್ದಾರೆ.
ಕೇಜ್ರಿವಾಲ್ ಅವರು ಜೈಲಿನಲ್ಲಿ ಕಳೆದ ಒಟ್ಟು ಸಮಯ 177 ದಿನಗಳು, ಅದರಲ್ಲಿ 21 ದಿನಗಳನ್ನು ಕಳೆದರೆ ಕೇಜ್ರಿವಾಲ್ ಒಟ್ಟು 156 ದಿನಗಳ ಕಾಲ ಜೈಲಿನಲ್ಲಿದ್ದರು. ಇಷ್ಟು ದಿನಗಳ ಕಾಲ ಕೇಜ್ರಿವಾಲ್ ಅವರು ಜೈಲಿನಲ್ಲಿಯೇ ಇದ್ದುಕೊಂಡು ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿಗಳನ್ನ ನಿರ್ವಹಿಸುತ್ತಿದ್ದರು. ಇದೀಗ, 156 ದಿನಗಳ ಜೈಲು ವಾಸದ ನಂತರ ದೆಹಲಿ ಸಿಎಂ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಇಡಿ ಪ್ರಕಾರ, ಅಬಕಾರಿ ನೀತಿಯನ್ನು ಅಂತಿಮಗೊಳಿಸಲು ಕೇಜ್ರಿವಾಲ್ ನೇತೃತ್ವದ ಎಎಪಿ 100 ಕೋಟಿಗಳಷ್ಟು ಕಿಕ್‌ಬ್ಯಾಕ್ ಪಡೆದಿದೆ. ಈ ಹಣದ ದೊಡ್ಡ ಭಾಗವನ್ನು ಪಕ್ಷವು ತನ್ನ ಗೋವಾ ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿದೆ ಎಂದು ಆರೋಪಿಸಲಾಗಿದೆ.
ಅದೇನೇ ಇರಲಿ, ಶುಕ್ರವಾರ ನಡೆದ ವಿಚಾರಣೆ ವೇಳೆ ಸಿಬಿಐ ನಡೆಯ ಬಗ್ಗೆ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಅಸಮಾಧಾನದ ಹೇಳಿಕೆಗಳು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಓರ್ವ ಮುಖ್ಯಮಂತ್ರಿ ಜೈಲಿನಿಂದ ಹೊರಬರಬಾರದು ಎಂಬ ಕಾರಣಕ್ಕೆ ಅವರನ್ನು ಸಿಬಿಐ ಬಂಧಿಸುವುದು ಆಂತಕ ಮತ್ತು ಕಳವಳವನ್ನು ಹುಟ್ಟುಹಾಕುತ್ತದೆ.
ಕೇಂದ್ರದಲ್ಲಿ ಆಡಳಿತದಲ್ಲಿರುವ ಮೋದಿ ಅವರು ವಿಪಕ್ಷಗಳನ್ನು ಹಣಿಯಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸರ್ಕಾರಿ ತನಿಖಾ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ, ಸಿಸಿಬಿ ಸೇರಿದಂತೆ ಇನ್ನಿತರ ತನಿಖಾ ಸಂಸ್ಥೆಗಳನ್ನ ತನ್ನ ಕೈಗೊಂಬೆಯಾಗಿ ಮಾಡಿಕೊಂಡಿದೆ. ತಮ್ಮ ವಿರೋಧಿಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ಛೂ ಬಿಡುತ್ತಿದೆ. ಆದ್ದರಿಂದಲೇ, ಚುನಾವಣೆಯ ಸಮಯದಲ್ಲಿ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತ್ತು. ಚುನಾವಣಾ ಸಮಯದಲ್ಲಿಯೇ ಕೇಜ್ರಿವಾಲ್ ಬಂಧನ ಯಾಕೆ? ಎಂದು ಪ್ರಶ್ನಿಸಿದ್ದ ಸುಪ್ರೀಂ ಕೋರ್ಟ್, ಮೇ ತಿಂಗಳಿನಲ್ಲಿ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿತ್ತು. ಸಿಬಿಐ ಕೂಡ ಕೇಜ್ರಿವಾಲ್ ಅವರನ್ನು ಕೇಂದ್ರ ಸರ್ಕಾರದ ಪಿತೂರಿಯ ಭಾಗವಾಗಿಯೇ ಬಂಧಿಸಿದೆ ಎಂಬುದನ್ನು ಈಗ ಸುಪ್ರೀಂ ಕೋರ್ಟ್ ಕೂಡ ಗಮನಿಸಿದೆ.