ಸಚಿವ ಬೈರತಿ ಸುರೇಶ್ ಮತ್ತು ಕೇಂದ್ರ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಯಡಿಯೂರಪ್ಪ ಪತ್ನಿ ಸಾವಿನ ವಿಚಾರವಾಗಿ ತಮ್ಮ ಬಗ್ಗೆ ಮಾತನಾಡಿದ್ದ ಬೈರತಿ ಸುರೇಶ್‌ಗೆ ನವದೆಹಲಿಯಲ್ಲಿ ತಿರುಗೇಟು ನೀಡಿದ್ದಾರೆ.
ನವದೆಹಲಿಯಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, “ರಾಕೇಶ್ ಸಿದ್ದರಾಮಯ್ಯ ಸಾವಿಗೆ ಸಚಿವ ಬೈರತಿ ಸುರೇಶ್ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ನಾನು ಆ ಮಾತನ್ನು ಹೇಳಬೇಕಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬೈರತಿ ಸುರೇಶ್ ದರೋಡೆಕೋರ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಹಾಳು ಮಾಡಿದವರು. ಅವರನ್ನು ಹೆಬ್ಬಾಳದಿಂದ ಓಡಿಸುತ್ತೇವೆ. ಮೈಸೂರು ಮುಡಾದಿಂದ ಸಾವಿರಾರು ಕಡತಗಳನ್ನು ಎತ್ತಿಕೊಂಡು ಬಂದು ಅದನ್ನು ಸುಟ್ಟು ಹಾಕಿದ್ದಾರೆ” ಎಂದು ಆರೋಪಿಸಿದರು.
“ದರೋಡೆಕೋರರನ್ನು ಹಿಡಿಯಲು ಹೋದಾಗ ಪೊಲೀಸರಿಗೆ ಗುಂಡು ಹೊಡೆಯುವವರು ಇದ್ದಾರೆ. ಅದೇ ಕೆಲಸವನ್ನು ಬೈರತಿ ಸುರೇಶ್ ಮಾಡಿದ್ದಾರೆ. ಸಿದ್ದರಾಮಯ್ಯನವರೇ ಇಂಥವರನ್ನು ಯಾಕೆ ಹತ್ತಿರ ಇಟ್ಟುಕೊಂಡಿದ್ದೀರಿ” ಎಂದು ಪ್ರಶ್ನಿಸಿದರು.
“ರಾಜಕಾರಣಿಗಳು ಮಹಾಭಾರತವನ್ನು ಓದಬೇಕು. ಕೌರವರ ಜೊತೆ ಶಕುನಿ ಯಾಕೆ ಸೇರಿಕೊಂಡಿದ್ದ? ಕೌರವರಿಂದ ದುರ್ಯೋಧನನ್ನು ಉದ್ಧಾರ ಮಾಡಲು ಅವನು ಸೇರಿಕೊಂಡಿರಲಿಲ್ಲ. ಅವರನ್ನು ಮುಗಿಸಲು ಸೇರಿಕೊಂಡಿದ್ದ. ಅಂಥ ಶಕುನಿಗಳು ಇವತ್ತಿಗೂ ರಾಜಕಾರಣದಲ್ಲಿ ದೊಡ್ಡ ಪದವಿಗೆ ಬಂದಾಗ ಮುಖ್ಯಮಂತ್ರಿಯ ಹಿಂದೆ ಮುಂದೆ ಸುತ್ತುತ್ತಿರುತ್ತಾರೆ” ವ್ಯಂಗ್ಯವಾಡಿದರು.
“ಬಿ.ಎಸ್.ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಅವರ ಸಾವಿನಲ್ಲಿ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎಂದು ನನಗೆ ಅನುಮಾನವಿದೆ. ಈ ಬಗ್ಗೆ ತನಿಖೆಯಾಗಲಿ” ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಆರೋಪಿಸಿದ್ದರು.