ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಚೋದನಕಾರಿ ಹಾಗೂ ನಿಂದನಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಜ.18ರಂದು ಎಸ್ ಆರ್ ಸನತ್ ಕುಮಾರ್ ಎಂಬುವವರು ದೂರು ನೀಡಿದ್ದು, ಸಂಸದನ ವಿರುದ್ಧ ಎಫ್ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಜ.13 ರಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕುಮಟಾದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, ರಾಮಮಂದಿರ ಉದ್ಘಾಟನೆಯ ವಿಚಾರವಾಗಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಅನಂತಕುಮಾರ್ ಹೆಗಡೆಯವರು “ಸಿದ್ದರಾಮಯ್ಯ ನೀ ಬಾ ಬಿಡು, ರಾಮಜನ್ಮಭೂಮಿ ನಿಲ್ಲಲ್ಲ ಮಗನೇ” ಎಂದು ನಿಂದಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಬಾಗಲಗುಂಟೆ ಪೊಲೀಸ್ ಠಾಣೆ ಸಿಬ್ಬಂದಿ, “ದೂರು ಸ್ವೀಕರಿಸಿದ್ದೇವೆ. ಈಗಾಗಲೇ ಇದೇ ವಿಚಾರವಾಗಿ ಉತ್ತರಕನ್ನಡ ಕುಮಟಾದಲ್ಲಿ ಎಫ್‍ಐಆರ್ ದಾಖಲಾಗಿದೆ. ಹಾಗಾಗಿ ಈ ದೂರನ್ನು ಕೂಡ ಅಲ್ಲಿಗೇ ವರ್ಗಾಯಿಸಲು ಅಧಿಕಾರಿಗಳು ಚಿಂತಿಸಿದ್ದಾರೆ” ಎಂದು ಮಾಹಿತಿ ನೀಡಿದರು.
ಬಂಧನದ ಬಗ್ಗೆ ಸ್ಥಳೀಯ ಪೊಲೀಸರು ನಿರ್ಧರಿಸಲಿದ್ದಾರೆ: ಗೃಹ ಸಚಿವ ಪರಮೇಶ್ವರ್
“ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಉತ್ತರಕನ್ನಡ ಕ್ಷೇತ್ರದ ಅನಂತಕುಮಾರ್ ಹೆಗಡೆ ವಿರುದ್ಧ ಕುಮಟಾದಲ್ಲಿ ಎಫ್‍ಐಆರ್ ದಾಖಲಾಗಿದೆ. ಸಾಕ್ಷ್ಯ ಸಂಗ್ರಹಿಸಿ ಬಂಧಿಸಬೇಕೋ, ಬೇಡವೋ ಎಂಬುದನ್ನು ಸ್ಥಳೀಯ ಪೊಲೀಸರು ನಿರ್ಧರಿಸಲಿದ್ದಾರೆ” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇತ್ತೀಚೆಗೆ ಮಾಹಿತಿ ನೀಡಿದ್ದರು.
“ಪೊಲೀಸರು ದಾಖಲಾಗಿರುವ ಪ್ರಕರಣದ ಆಧಾರದ ಮೇಲೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಬಂಧಿಸಬೇಕೋ, ಬೇಡವೋ ಎಂಬುದನ್ನು ಸ್ಥಳೀಯವಾಗಿ ನಿರ್ಧರಿಸುತ್ತಾರೆ. ನಾವು ಸ್ಥಳೀಯ ಪೊಲೀಸರಿಗೆ ಯಾವುದೇ ರೀತಿಯ ನಿರ್ದೇಶನಗಳನ್ನು ನೀಡುವುದಿಲ್ಲ. ಅವರನ್ನು ಬಂಧಿಸಿ ಅಥವಾ ಬಿಟ್ಟುಬಿಡಿ ಎಂದು ನಾವು ಯಾರಿಗೂ ಹೇಳುವುದಿಲ್ಲ. ಯಾವ ಸೆಕ್ಷನ್‍ನಡಿ ಪ್ರಕರಣ ದಾಖಲಿಸಿಕೊಳ್ಳಬೇಕು, ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ಸ್ಥಳೀಯ ಪೊಲೀಸರೇ ನಿರ್ಧರಿಸುತ್ತಾರೆ” ಎಂದು ಗೃಹ ಸಚಿವರು ತಿಳಿಸಿದ್ದರು.