2020ರ ಕೊರೊನಾ ಕಾಲದಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ಕಲ್ಲನಾಯಕನಹಳ್ಳಿಯ ಹಲವಾರು ರೈತರ ಬ್ಯಾಂಕ್ ಖಾತೆಗಳಿಗೆ ಮೂರು ಹಂತದಲ್ಲಿ ಹಣ ಜಮೆಯಾಗಿತ್ತು. ಆದರೆ ಗ್ರಾಮಸ್ಥರು ಆ ಹಣವನ್ನು ಕರ್ನಾಟಕದ ಇತಿಹಾಸದಲ್ಲಿ ಅತಿದೊಡ್ಡ ಮತದಾರರ ಮಾಹಿತಿ ಕಳ್ಳತನದ ಕಿಂಗ್‌ಪಿನ್ ಎಂಬ ಆರೋಪಹೊತ್ತು ಬಂಧನದಲ್ಲಿರುವ ‘ಚಿಲುಮೆ’ ಟ್ರಸ್ಟ್‌ನ ಸಂಸ್ಥಾಪಕ ರವಿಕುಮಾರ್ ಕೃಷ್ಣಪ್ಪನಿಗೆ ನಗದು ರೂಪದಲ್ಲಿ ಕೊಟ್ಟಿದ್ದರು. ಇದು ಯಾರ ಹಣ, ಎಲ್ಲಿಂದ ಬಂತು ಎಂಬುದು ತನಿಖೆಗೆ ಯೋಗ್ಯವಾಗಿದೆ.
2020ರಲ್ಲಿ ಕೊರೊನಾ ಉಲ್ಬಣಗೊಂಡು, ಲಾಕ್‌ಡೌನ್ ಹೇರಿಕೆಯಾಗಿದ್ದಾಗ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ದಿಕ್ಕು ತೋಚದ ಸ್ಥಿತಿಯಲ್ಲಿದ್ದರು. ಆರ್ಥಿಕತೆಯೂ ಸ್ಥಗಿತಗೊಂಡಿತ್ತು. ಆ ಸಮಯದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ಕಲ್ಲನಾಯಕನಹಳ್ಳಿಯ ಹಲವಾರು ರೈತರ ಬ್ಯಾಂಕ್ ಖಾತೆಗಳಿಗೆ ಮೂರು ಹಂತದಲ್ಲಿ ಹಣ ಜಮೆಯಾಗಿತ್ತು. ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಮಯದಲ್ಲಿ ಆ ಹಣವು ರೈತರಲ್ಲಿ ಆಶ್ಚರ್ಯವನ್ನಾಗಲೀ ಅಥವಾ ಅದೃಷ್ಟವೆಂದಾಗಲೀ ಅನ್ನಿಸಲಿಲ್ಲ. ಅವರು ಹಣವನ್ನು ಇಟ್ಟುಕೊಳ್ಳುವಂತೆಯೂ ಇರಲಿಲ್ಲ. ಕಾರಣವಿಷ್ಟೆ, ಕರ್ನಾಟಕದ ಇತಿಹಾಸದಲ್ಲಿ ಅತಿದೊಡ್ಡ ಮತದಾರರ ಮಾಹಿತಿ ಕಳ್ಳತನದ ಕಿಂಗ್‌ಪಿನ್ ಎಂಬ ಆರೋಪಹೊತ್ತು ಬಂಧನದಲ್ಲಿರುವ ‘ಚಿಲುಮೆ’ ಟ್ರಸ್ಟ್‌ನ ಸಂಸ್ಥಾಪಕ ರವಿಕುಮಾರ್ ಕೃಷ್ಣಪ್ಪನಿಗೆ ನಗದು ರೂಪದಲ್ಲಿ ಆ ಹಣವನ್ನು ಕೊಡಬೇಕಾಗಿತ್ತು.
ರವಿಕುಮಾರ್ ಮತ್ತು ಆತನ ಎನ್‌ಜಿಒ ‘ಚಿಲುಮೆ’ ನಡೆಸುತ್ತಿದ್ದ ಮತದಾರರ ಡೇಟಾ ಕಳ್ಳತನವನ್ನು ಬಹಿರಂಗ ಪಡಿಸಿದ ‘ದಿ ನ್ಯೂಸ್ ಮಿನಿಟ್‘ ಪತ್ರಿಕಾ ಸಂಸ್ಥೆ, ರವಿಕುಮಾರ್ ಇನ್ನೂ ದೊಡ್ಡ ಹಗರಣಗಳಲ್ಲಿ ಭಾಗಿಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿತ್ತು. ಅಲ್ಲದೆ, ಆತನ ಹಣದ ವಹಿವಾಟು ಸೇರಿದಂತೆ ವಿವಿಧ ರೀತಿಯ ತನಿಖೆಯನ್ನು ಆರಂಭಿಸಿತು. ಆಗ ಬಯಲಾಗಿದ್ದು, ಲಾಕ್‌ಡೌನ್ ಸಮಯದಲ್ಲಿ ಹಲವಾರು ಕಂಪನಿಗಳನ್ನು ಬಳಸಿಕೊಂಡು ರೈತರ ಖಾತೆಗಳಿಗೆ ಸಂಶಯಾಸ್ಪದವಾಗಿ ಹಣವನ್ನು ಜಮೆ ಮಾಡಿರುವುದು. ಈ ಪ್ರಕರಣದ ದಾಖಲೆಗಳನ್ನೂ ನ್ಯೂಸ್ ಮಿನಿಟ್ ಕಲೆ ಹಾಕಿದೆ.
ನೆಲಮಂಗಲ ತಾಲೂಕಿನ ಕಲ್ಲನಾಯಕನಹಳ್ಳಿ ಗ್ರಾಮದ ಕನಿಷ್ಠ 100 ಮಂದಿ ತಲಾ ಒಂದು ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಠೇವಣಿ ಮೂಲಕ ಪಡೆದಿದ್ದಾರೆ. ಆ ಎಲ್ಲ ಹಣವನ್ನು ರವಿಕುಮಾರ್ ನಗದು ರೂಪದಲ್ಲಿ ರೈತರಿಂದ ಮರಳಿ ಪಡೆದಿದ್ದಾರೆ ಎಂದು ಗ್ರಾಮದ ನಿವಾಸಿಗಳೇ ಹೇಳಿದ್ದಾರೆ. ಅಷ್ಟೂ ಹಣವನ್ನು ರವಿಕುಮಾರ್ ಅಕ್ರಮ ಹಾದಿಯಲ್ಲಿ ತನ್ನದಾಗಿಸಿಕೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.
ರವಿಕುಮಾರ್‌ಗೆ ನಗದು ರೂಪದಲ್ಲಿ ಹಣ ಕೊಟ್ಟಿದ್ದಾಗಿ ತಿಳಿಸಿದ ಹಲವರ ಖಾತೆಗೆ ಭಾರತ ಸರ್ಕಾರದ ಅಡಿಯಲ್ಲಿರುವ ‘ಸಿಎಸ್‌ಸಿ ಇ-ಕಾಮರ್ಸ್ ಸರ್ವಿಸ್ ಇನ್’ ಹೆಸರಿನ ಖಾತೆಯಿಂದ 2020ರಲ್ಲಿ ನೆಫ್ಟ್ ಮೂಲಕ ಹಣ ಜಮೆಯಾಗಿದೆ. ಕೆಲವರಿಗೆ 40,000 ರೂ. ಜಮೆಯಾಗಿದ್ದರೆ, ಕೆಲವರಿಗೆ 1,40,000 ರೂ.ವರೆಗೆ ಹಣ ಜಮೆಯಾಗಿದೆ. ಅವರೆಲ್ಲರ ಖಾತೆಗಳಿಗೆ 2020ರ ಅಕ್ಟೋಬರ್ 27, ನವೆಂಬರ್ 12 ಮತ್ತು ಡಿಸೆಂಬರ್ 15ರಂದು ಹಣ ಜಮೆಯಾಗಿದೆ. ಆ ಎಲ್ಲ ಹಣವನ್ನು ತಮ್ಮ ಖಾತೆಗೆ ಜಮೆಯಾದ ಕೆಲವೇ ದಿನಗಳಲ್ಲಿ ನಗದು ರೂಪದಲ್ಲಿ ರವಿಕುಮಾರ್ ಹಿಂಪಡೆದುಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಬ್ಯಾಂಕ್ ಪಾಸ್‌ಬುಕ್‌ಗಳ ಪ್ರತಿಗಳೂ ದೊರೆತಿವೆ.
‘ಸಿಎಸ್‌ಸಿ ಇ-ಕಾಮರ್ಸ್ ಸರ್ವಿಸ್ ಇಂಡಿಯಾ ಲಿಮಿಟೆಡ್’ ಒಂದು ವಿಶೇಷ ಉದ್ದೇಶದ ಸಂಸ್ಥೆಯಾಗಿದೆ. ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಯೋಜನೆ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಈ ಕಂಪನಿಯನ್ನು ರಚಿಸಲಾಗಿದೆ. ಇದು ದೇಶದಾದ್ಯಂತ ವಿಶೇಷವಾಗಿ ಹಳ್ಳಿಗಳಲ್ಲಿ ತನ್ನ ಕೇಂದ್ರಗಳನ್ನು ಸ್ಥಾಪಿಸುತ್ತದೆ. ಎಲ್ಲ ಸರ್ಕಾರಿ ಯೋಜನೆಗಳು ಮತ್ತು ಹಲವಾರು ವ್ಯಾಪಾರ ಸೇವೆಗಳು ಫಲಾನುಭವಿಗಳಿಗೆ ತಲುಪಿಸುವ ಸ್ಥಳೀಯ ಸಂಸ್ಥೆಯಂತೆ ಕೆಲಸ ಮಾಡುತ್ತದೆ.
ಸಿಎಸ್‌ಸಿ ಯೋಜನೆಯು ಗ್ರಾಮ ಮಟ್ಟದ ಉದ್ಯಮಿಗಳ (ವಿಎಲ್‌ಇ) ಮೂಲಕ ನಡೆಯುತ್ತದೆ. ಆ ಉದ್ಯಮಿಗಳು ಸಿಎಸ್‌ಸಿ ಫ್ರಾಂಚೈಸಿಗಳಾಗಿದ್ದು, ಮರಣ/ಜನನ ಪ್ರಮಾಣಪತ್ರಗಳನ್ನು ಸಲ್ಲಿಸುವುದು, ಸರ್ಕಾರಿ ಸಮೀಕ್ಷೆಗಳನ್ನು ನಡೆಸುವುದು ಮತ್ತು ಆಧಾರ್ ನೋಂದಣಿ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುತ್ತಾರೆ. ವಿಎಲ್‌ಇಗಳು ಸಲ್ಲಿಸುವ ಸೇವೆಗಳಿಗೆ ಸಿಎಸ್‌ಸಿ ಕಮಿಷನ್ ಪಾವತಿಸುತ್ತದೆ. ದೊಡ್ಡ ಮೊತ್ತದ ಹಣ ಪಡೆದ ಕಲ್ಲನಾಯಕನಹಳ್ಳಿ ನಿವಾಸಿಗಳಲ್ಲಿ ಯಾರೂ ವಿಎಲ್‌ಇಗಳಲ್ಲ. ಅವರಿಗೂ ಸಿಎಸ್‌ಸಿಗಳಿಗೂ ಯಾವುದೇ ಸಂಬಂಧವಿಲ್ಲ.
ಚೆಲ್ಲಯ್ಯ (ಹೆಸರು ಬದಲಾಯಿಸಲಾಗಿದೆ) ಎಂಬ ರೈತನ ಖಾತೆಗೂ ಮೂರು ಬಾರಿ ಹಣ ಜಮೆಯಾಗಿದೆ. ‘ಸಿಎಸ್‌ಸಿ ಇ-ಕಾಮರ್ಸ್ ಸರ್ವಿಸ್ ಇನ್’ನಿಂದ 2020ರ ಅಕ್ಟೋಬರ್ 27 ರಂದು ಚೆಲ್ಲಯ್ಯ ಖಾತೆಗೆ 44,245 ರೂ. ಜಮೆಯಾಗಿದೆ. ಬಳಿಕ, ನವೆಂಬರ್ 12ರಂದು 1,31,284 ರೂ. ಡಿಸೆಂಬರ್ 15ರಂದು 50,352 ರೂ. ಜಮೆಯಾಗಿದೆ. ಈ ಮೂರು ಸಂದರ್ಭಗಳಲ್ಲಿ, ಖಾತೆಗೆ ಜಮೆಯಾದ ಕೆಲವೇ ದಿನಗಳಲ್ಲಿ ಅಷ್ಟೂ ಹಣವನ್ನು ಹಿಂಪಡೆಯಲಾಗಿದೆ.

ಮತ್ತೊಬ್ಬ ನಿವಾಸಿ ಸಿದ್ದಣ್ಣ (ಹೆಸರು ಬದಲಾಯಿಸಲಾಗಿದೆ) ಎಂಬವರಿಗೂ ಚೆಲ್ಲಯ್ಯ ಖಾತೆಗೆ ಹಣ ಜಮೆಯಾದ ದಿನಾಂಕಗಳಲ್ಲೇ, ಅದೇ ಸಂಸ್ಥೆಯಿಂದ ಹಣ ಬಂದಿದೆ. ಕ್ರಮವಾಗಿ, 63,859 ರೂ, 60,472 ರೂ. ಮತ್ತು 23,108 ರೂ. ಅವರ ಖಾತೆಗೆ ಜಮೆಯಾಗಿದೆ. ಅಲ್ಲದೆ, ಆ ಎಲ್ಲ ಹಣವನ್ನು ಜಮೆಯಾದ ಕೆಲವೇ ದಿನಗಳಲ್ಲಿ ಹಿಂಪಡೆದಿದ್ದಾರೆ.
ಎಲ್ಲ ವಹಿವಾಟುಗಳನ್ನು ನೆಫ್ಟ್ (ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಫರ್) ಎಂದು ಗುರುತಿಸಲಾಗಿದೆ – ಅಂದರೆ, ಇವು ಆನ್‌ಲೈನ್ ಹಣ ವರ್ಗಾವಣೆಗಳಾಗಿವೆ.


ಮೂರನೇ ನಿವಾಸಿ, ಮಾಲಾ (ಹೆಸರು ಬದಲಾಯಿಸಲಾಗಿದೆ) ಅವರ ಖಾತೆಗೂ ಕೂಡ ಅದೇ ದಿನಾಂಕಗಳಲ್ಲಿ 65,210 ರೂ., 27,807 ರೂ. ಮತ್ತು 72,773 ರೂ. ಪಾವತಿಯಾಗಿದೆ. ಅದನ್ನು ಅವರು ಕೆಲವೇ ದಿನಗಳಲ್ಲಿ ಮರುಪಡೆದಿದ್ದಾರೆ.



ಹರಿ (ಹೆಸರು ಬದಲಾಯಿಸಲಾಗಿದೆ) ಅವರು ತಮ್ಮ ಪಾಸ್‌ಬುಕ್‌ಅನ್ನು ತೋರಿಸಲು ನಿರಾಕರಿಸಿದ್ದಾರೆ. ಆದರೆ, ಅವರೂ ಕೂಡ ತಮ್ಮ ಖಾತೆಗೆ ಒಟ್ಟು 2,00,000 ರೂ. ಜಮೆಯಾಗಿದ್ದಾಗಿ ಮತ್ತು ಅದನ್ನು ಹಿಂಪಡೆದಿದ್ದಾಗಿ ತಿಳಿಸಿದ್ದಾರೆ. “ರವಿಕುಮಾರ್ ನನ್ನ ಸಂಬಂಧಿ. ಅವರ ಜೊತೆಗಿದ್ದ ವ್ಯಕ್ತಿಗಳು ನನ್ನ ಖಾತೆ ಸಂಖ್ಯೆಯನ್ನು ಬಲವಂತವಾಗಿ ತೆಗೆದುಕೊಂಡರು. ನನ್ನ ಖಾತೆಗೆ ಹಣ ಬಂದಾಗ. ಆ ಹಣವನ್ನು ನಗದು ರೂಪದಲ್ಲಿ ರವಿಕುಮಾರ್ ಗೆ ನೀಡಿದ್ದೆ. ಕೇಂದ್ರ ಸರ್ಕಾರದಿಂದ ನನಗೆ ಮೂರು ಬಾರಿ ಹಣ ಜಮೆಯಾಗಿದೆ” ಎಂದು ಹರಿ ಹೇಳಿದ್ದಾರೆ.
“ರವಿಕುಮಾರ್ ಅವರ ಆಪ್ತರು ನಮ್ಮ ಮನೆಗೆ ಬಂದು ನಮ್ಮ ಪಾಸ್‌ಬುಕ್‌ಗಳನ್ನು ಸಂಗ್ರಹಿಸಿದರು. ಅವರು ನಮ್ಮಿಂದ ಬೇರೆ ಯಾವುದೇ ದಾಖಲೆಗಳನ್ನು ಕೇಳಲಿಲ್ಲ. ಗ್ರಾಮದ 100ಕ್ಕೂ ಹೆಚ್ಚು ಜನರ ಖಾತೆಗಳಿಗೆ ಕಳೆದ ಕೆಲವು ವರ್ಷಗಳಿಂದ ಅಪರಿಚಿತ ಮೂಲಗಳಿಂದ ಹಣ ಜಮೆಯಾಗುತ್ತಿದೆ. ಆದರೂ, ಅವರು ಯಾರೆಂದು ತಿಳಿದುಕೊಳ್ಳಲು ನಮಗೆ ಸಾಧ್ಯವಾಗಿಲ್ಲ” ಎಂದು ಹರಿ ಮತ್ತು ಇತರ ಕಲ್ಲನಾಯಕನಹಳ್ಳಿ ನಿವಾಸಿಗಳು ಹೇಳಿದ್ದಾರೆ.
ಜಮೆಯಾದ ಕೆಲವೇ ದಿನಗಳಲ್ಲಿ ಎಟಿಎಂಗಳಿಂದ ಹಣವನ್ನು ಹಿಂಪಡೆಯಲಾಗಿದೆ ಎಂಬುದನ್ನು ಪಾಸ್‌ಬುಕ್ ದಾಖಲೆಗಳು ತೋರಿಸುತ್ತವೆ. ಚೆಲ್ಲಯ್ಯ ಪ್ರಕರಣದಲ್ಲಿ, 2020ರ ಅಕ್ಟೋಬರ್ 27ರಂದು ಜಮೆಯಾದ 44,000 ರೂ. ಹಣವನ್ನು 25,000 ರೂ. ಮತ್ತು 19,000 ರೂ.ಗಳ ಎರಡು ಕಂತುಗಳಲ್ಲಿ ಹಿಂಪಡೆಯಲಾಗಿದೆ. 2020ರ ನವೆಂಬರ್ 12ರಂದು ಸ್ವೀಕರಿಸಿದ ಮೊತ್ತವನ್ನು ನವೆಂಬರ್ 21 ಮತ್ತು ಡಿಸೆಂಬರ್ 5 ರ ನಡುವೆ ಹಿಂಪಡೆಯಲಾಗಿದೆ.
ಗ್ರಾಮದ ಎಲ್ಲ ನಿವಾಸಿಗಳು ಹಣವನ್ನು ಹಿಂತೆಗೆದುಕೊಂಡು ನೇರವಾಗಿ ರವಿಕುಮಾರ್ ಅವರಿಗೆ ಅಥವಾ ಅವರ ಆಪ್ತರಿಗೆ ಹಸ್ತಾಂತರಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ರವಿಕುಮಾರ್ ಅವರ ಚಿಲುಮೆ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ನ ಬ್ಯಾಲೆನ್ಸ್ ಶೀಟ್‌ಗಳನ್ನು ಪರಿಶೀಲಿಸಲಾಗಿದ್ದು, 2021ರಲ್ಲಿ ‘ಸಿಎಸ್‌ಸಿ ಇ-ಕಾಮರ್ಸ್’ನಿಂದ ‘ವ್ಯಾಪಾರ ಸ್ವೀಕೃತಿಗಳು’ ಹೆಸರಿನಲ್ಲಿ 15 ಲಕ್ಷ ರೂಪಾಯಿ ಮತ್ತು 2022ರಲ್ಲಿ 1.5 ಲಕ್ಷ ರೂ. ಜಮೆಯಾಗಿದೆ.
“ಬ್ಯಾಲೆನ್ಸ್ ಶೀಟ್ ನಮೂದು ಅಧಿಕೃತವಾಗಿದ್ದರೆ, ರವಿಕುಮಾರ್ ಅವರು ಸಿಎಸ್‌ಸಿ ಕೇಂದ್ರವನ್ನು ನಡೆಸುತ್ತಿದ್ದರೆಂದು ಅರ್ಥೈಸಬಹುದು” ಎಂದು ‘ಸಿಎಸ್‌ಸಿ ಇ-ಕಾಮರ್ಸ್’ ಯೋಜನೆಯಲ್ಲಿ ಕೆಲಸ ಮಾಡಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.


‘ಸಿಎಸ್‌ಸಿ ಇ-ಕಾಮರ್ಸ್’ಗೆ ನ್ಯೂಸ್ ಮಿನಿಟ್ ಫೋನ್ ಮತ್ತು ಇಮೇಲ್ ಮೂಲಕ ಕೆಲವು ಪ್ರಶ್ನೆಗಳನ್ನು ಕಳುಹಿಸಿದೆ. ಆದರೆ, ಸಂಸ್ಥೆಯು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿಲ್ಲ. ನವದೆಹಲಿಯಲ್ಲಿರುವ ಸಂಸ್ಥೆ ಸಿಇಒ ಸಂಜಯ್ ರಾಕೇಶ್ ಅವರ ಕಚೇರಿಗೆ ವರದಿಗಾರರು ಭೇಟಿ ನೀಡಿದ್ದರೂ, ಕಚೇರಿಯು ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದೆ.
ಸಿಎಸ್‌ಸಿ ವಹಿವಾಟ ಹೊರತು ಪಡಿಸಿ, ಇತರ ಬ್ಯಾಂಕ್ ಖಾತೆಗಳಿಂದಲೂ ಗ್ರಾಮದ ನಿವಾಸಿಗಳ ಖಾತೆಗೆ ಹಣ ಜಮೆಯಾಗಿದೆ. 2016ರ ಮಾರ್ಚ್ ಮತ್ತು 2019ರ ಫೆಬ್ರವರಿ ನಡುವೆ ಐದು ಪ್ರತ್ಯೇಕ ವಹಿವಾಟುಗಳಲ್ಲಿ ಅದೇ ಗ್ರಾಮದ ಒಬ್ಬ ದಂಪತಿಗೆ (ಪತ್ನಿ-ಪತಿ) ತಲಾ 25,000 ರೂ. ರಿಂದ 50,000 ರೂ.ವರೆಗೆ ಹಣ ಜಮೆಯಾಗಿದೆ. ಆ ಹಣ ಎರಡು ಸಣ್ಣ ಹಣಕಾಸು ಬ್ಯಾಂಕ್‌ಗಳ ಖಾತೆಗಳಿಂದ ವರ್ಗಾವಣೆಯಾಗಿದೆ. ಈ ಪ್ರಕರಣಗಳಲ್ಲಿಯೂ ಹಣ ಜಮೆಯಾದ ಕೆಲವೇ ದಿನಗಳಲ್ಲಿ ಮೊತ್ತವನ್ನು ಹಿಂಪಡೆಯಲಾಗಿದೆ.
ಈ ಸುದ್ದಿ ಓದಿದ್ದೀರಾ?: ಬಿಜೆಪಿ ಟಿಕೆಟ್ ಕಗ್ಗಂಟು : ಸೋಗಲಾಡಿ ಬಿಜೆಪಿ ಮತ್ತು ವಂಶ ಪಾರಂಪರ್ಯ ರಾಜಕಾರಣ
“ನನ್ನ ಖಾತೆಗೆ ಜಮೆಯಾದ ಹಣದಲ್ಲಿ ಸುಮಾರು 1,000 ರೂ. ಇಟ್ಟುಕೊಂಡಿದ್ದೇನೆ. ಆದರೆ, ಉಳಿದ ಹಣವನ್ನು ರವಿಕುಮಾರ್‌ಗೆ ಹಿಂತಿರುಗಿಸಿದೆ” ಎಂದು ಪತಿ ನಂಜಯ್ಯ (ಹೆಸರು ಬದಲಾಯಿಸಲಾಗಿದೆ) ಹೇಳಿದ್ದಾರೆ. ಸಂಪೂರ್ಣ ಹಣವನ್ನು ರವಿಕುಮಾರ್‌ಗೆ ಹಸ್ತಾಂತರಿಸಿದ್ದಾಗಿ ಆತನ ಪತ್ನಿ ತಿಳಿಸಿದ್ದಾರೆ.
ರವಿಕುಮಾರ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದವರು, ಈಗ ಏಕೆ ಅವರ ವಿರುದ್ಧ ಮಾತನಾಡುತ್ತಿದ್ದೀರಿ ಎಂಬ ಪ್ರಶ್ನೆಗಳಿಗೆ ನಿವಾಸಿಗಳು ಉತ್ತರಿಸಿದ್ದಾರೆ. “2020ರ ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆ ವೇಳೆ ಅವರೆಲ್ಲರೂ ರವಿಕುಮಾರ್ ಅವರೊಂದಿಗೆ ಭಿನ್ನಾಭಿಪ್ರಾಯ ಬೆಳೆಸಿಕೊಂಡಿದ್ದಾರೆ. ಚುನಾವಣೆಯಲ್ಲಿ ರವಿಕುಮಾರ್ ಬೆಂಬಲಿಸಿದ ಅಭ್ಯರ್ಥಿ ಪರವಾಗಿದ್ದವರಿಗೆ ರವಿಕುಮಾರ್ ಸಹಾಯ ಮಾಡಲು ಆರಂಭಿಸಿದ್ದರು ಮತ್ತು ಆ ಅಭ್ಯರ್ಥಿಯ ವಿರುದ್ದವಿದ್ದವರಿಗೆ ತೊಂದರೆ ನೀಡಿದರು” ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.
“ರವಿಕುಮಾರ್ ಅವರ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಿದಾಗ ಪ್ರಬಲ ಸಚಿವರೊಂದಿಗಿನ ಸಂಬಂಧದ ಬಗ್ಗೆ ಆಗಾಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು” ಎಂದು ನಿವಾಸಿಗಳು ತಿಳಿಸಿದ್ದಾರೆ.
ಮತದಾರರ ಮಾಹಿತಿ ಕದಿದ್ದ ಪ್ರಕರಣದಲ್ಲಿ ಚಿಲುಮೆ ಸಂಸ್ಥೆಯೊಂದಿಗೆ ಪ್ರಭಾವಿ ರಾಜಕಾರಣಿಗಳು ಇದ್ದಾರೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಇಬ್ಬರು ರಾಜಕಾರಣಿಗಳು ಚುನಾವಣಾ ಸಮೀಕ್ಷೆಗಾಗಿ ಚಿಲುಮೆ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಮತ್ತೊಬ್ಬ ಪ್ರಭಾವಿ ರಾಜಕಾರಣಿಯ ಲೆಟರ್ ಹೆಡ್‍ಗಳು ಕೂಡ ದೊರೆತಿದ್ದವು.
ಅಲ್ಲದೆ, ಚಿಲುಮೆ ಸಂಸ್ಥೆಯ ಮೇಲೆ ಪೊಲೀಸರು ದಾಳಿ ಮಾಡಿದಾಗ, ಪ್ರಭಾವಿ ರಾಜಕಾರಣಿಗಳಿಗೆ ಸೇರಿದ ಚೆಕ್, ಲೆಟರ್ ಹೆಡ್ ಬ್ರೌಷರ್ ಪತ್ತೆಯಾಗಿವೆ. ಇದೆಲ್ಲವೂ ಮತದಾರರ ಮಾಹಿತಿ ಕದಿಯುವಲ್ಲಿ ರಾಜಕಾರಣಿಗಳ ಕೈವಾಡವಿದೆ ಎಂಬ ಅನುಮಾನವನ್ನು ಹುಟ್ಟುಹಾಕಿದ್ದವು.
ಇದೀಗ, ಚಿಲುಮೆ ಸಂಸ್ಥೆಯು ಅಕ್ರಮವಾಗಿ ಹಣ ಗಳಿಸಿರುವ ಹಗರಣ ಬಯಲಾಗುತ್ತಿದೆ. ಇದರಲ್ಲಿಯೂ ರಾಜಕಾರಣಿಗಳ ಕೈವಾಡವಿದೆಯೇ ಎಂಬ ಅನುಮಾನಗಳಿವೆ. ಎಲ್ಲವೂ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.