ಸುರೇಶ್ ಮತ್ತು ಮಂಜುನಾಥ್ – ಇಬ್ಬರೂ ಒಕ್ಕಲಿಗರೇ ಆಗಿದ್ದು, ಹಣ, ಅಧಿಕಾರ ಮತ್ತು ಜಾತಿಯಿಂದ ಸಮಸ್ಪರ್ಧಿಗಳೇ. ಆದರೆ ಒಬ್ಬರು ಜನನಾಯಕನಾದರೆ, ಮತ್ತೊಬ್ಬರು ಜನಪ್ರಿಯ ವೈದ್ಯರು. ಸುರೇಶ್ ಬೆನ್ನಿಗೆ ಡಿಸಿಎಂ ಡಿಕೆ ಇದ್ದರೆ, ಮಂಜುನಾಥ್ ಬೆಂಬಲಕ್ಕೆ ಮಾಜಿ-ಹಾಲಿ ಪ್ರಧಾನಿಗಳೇ ಇದ್ದಾರೆ.
ರಾಜ್ಯದ ಜನತೆಯ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆಯ್ಕೆಗೆ ಇಂದು ತೆರೆ ಬಿದ್ದಿದೆ. ಅಂತೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ತಮ್ಮ ಅಳಿಯ ಡಾ. ಸಿ.ಎನ್ ಮಂಜುನಾಥ್ ಅವರನ್ನು ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜನಪ್ರಿಯ ವೈದ್ಯರು ಕಣಕ್ಕಿಳಿದಿದ್ದಾರೆ.
ಚನ್ನರಾಯಪಟ್ಟಣದ ಅಂಚಿನಲ್ಲಿರುವ ಚೋಳೇನಹಳ್ಳಿಯ ಬಡ ಕೃಷಿ ಕುಟುಂಬದಲ್ಲಿ 1957ರಲ್ಲಿ ಜನಿಸಿದ ಮಂಜುನಾಥ್, ಕಷ್ಟಪಟ್ಟು ಓದಿ ವೈದ್ಯರಾದವರು. ವೈದ್ಯರಾಗಿ ಜನರ ಹೃದಯ ಗೆದ್ದವರು. 1988ರಲ್ಲಿ ಜಯದೇವ ಆಸ್ಪತ್ರೆಗೆ ಬಂದ ಮಂಜುನಾಥ್, ತಿರುಗಿ ನೋಡಿದವರಲ್ಲ. ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಮಂಜುನಾಥ್, 2006ರಲ್ಲಿ ಸಂಸ್ಥೆಯ ನಿರ್ದೇಶಕರಾದರು. 2006ರಿಂದ 2024ರ ಜನವರಿ 31ರವರೆಗೆ, 18 ವರ್ಷಗಳ ಕಾಲ ನಿರಂತರವಾಗಿ ಜಯದೇವ ಸಂಸ್ಥೆಯ ನಿರ್ದೇಶಕರಾಗಿದ್ದ ಮಂಜುನಾಥ್, ಸಂಸ್ಥೆಯನ್ನು ದೇಶದ ಪ್ರತಿಷ್ಠಿತ ಸಂಸ್ಥೆಯಾಗಿ, ಜನರ ಸಂಸ್ಥೆಯಾಗಿ ರೂಪಿಸಿದವರು.
ಇಂತಹ ಡಾ. ಮಂಜುನಾಥ್ ನಿವೃತ್ತಿಯ ನಂತರ, ಗಳಿಸಿದ ಜನಪ್ರಿಯತೆಯನ್ನು ಜನರಿಗಾಗಿಯೇ ಮೀಸಲಿಟ್ಟು ವೈದ್ಯ ವೃತ್ತಿಯನ್ನು ಮುಂದುವರೆಸಿದ್ದರೆ, ಅವರ ಬಗೆಗಿನ ಗೌರವ ಇನ್ನಷ್ಟು ಹೆಚ್ಚಾಗುತ್ತಿತ್ತು. ಆದರೆ, ದೇವೇಗೌಡರ ಗಾಳಕ್ಕೆ ಸಿಕ್ಕು, ರಾಜಕಾರಣಕ್ಕೆ ಧುಮುಕಿ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ, ಅವರು ವೈದ್ಯರಾಗಿ ಗಳಿಸಿದ ಗೌರವವೆಲ್ಲ ಹೊಳೇಲಿ ಹುಣಸೇಹಣ್ಣು ಕಿವುಚಿದಂತಾಗಿದೆ ಎಂದು ಜನರಾಡಿಕೊಳ್ಳುವಂತಾಗಿದೆ.
ಇತ್ತೀಚಿನ ವರ್ಷಗಳಲ್ಲಿ, ಎಚ್.ಡಿ ದೇವೇಗೌಡರ ರಾಜಕೀಯ ನಿಲುವುಗಳ ಕುರಿತು ಸಾರ್ವಜನಿಕ ವಲಯದಲ್ಲಿ ಅಂತಹ ಒಳ್ಳೆಯ ಅಭಿಪ್ರಾಯಗಳಿಲ್ಲ. ತಮ್ಮ ಸುದೀರ್ಘ ರಾಜಕೀಯ ಅನುಭವವನ್ನು ಅವರು, ಅವರ ಕುಟುಂಬದ ಏಳಿಗೆಗಾಗಿ ವ್ಯಯಿಸುತ್ತಿರುವುದು, ನಾಡಿನ ಜನತೆಯಲ್ಲಿ ಅಸಹ್ಯ ಹುಟ್ಟಿಸುತ್ತಿದೆ. ಜೊತೆಗೆ, ದೇವರು-ಧರ್ಮದ ಮರೆಯಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಬಾಯ್ತುಂಬ ಹೊಗಳುತ್ತ, ಹಿಂದುತ್ವ ಪ್ರತಿಪಾದಿಸುವ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಗೌಡರ ಮೇಲಿದ್ದ ಗೌರವವನ್ನು ಗಟಾರಕ್ಕೆ ಎಸೆದಿದೆ.
ಇಂತಹ ಸಂದರ್ಭದಲ್ಲಿ ಡಾ. ಮಂಜುನಾಥ್, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದದ್ದು- ಅವರ ವೈದ್ಯರಾಗಿ ಗಳಿಸಿದ ವ್ಯಕ್ತಿತ್ವವನ್ನೇ ಅನುಮಾನಿಸುವಂತಾಗಿದೆ.
2008ರಲ್ಲಿ ಕ್ಷೇತ್ರ ವಿಂಗಡಣೆಯಾದ ನಂತರ ನಡೆದ 2009ರ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಎಚ್.ಡಿ ಕುಮಾರಸ್ವಾಮಿ ಗೆದ್ದಿದ್ದರು. ಆದರೆ, 2013ರಲ್ಲಿ ವಿಧಾನಸಭೆಗೆ ಹೋಗಲು ಎಚ್‌ಡಿಕೆ ರಾಜೀನಾಮೆ ನೀಡಿದಾಗ ನಡೆದ ಉಪಚುನಾವಣೆಯಲ್ಲಿ ಡಿ.ಕೆ. ಸುರೇಶ್ ಜಯ ಗಳಿಸಿದರು. ಅಲ್ಲಿಂದ ಅವರು ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಂಡರು, ಮತ್ತೊಬ್ಬರು ಕಾಲೂರದಂತೆ ನೋಡಿಕೊಂಡರು.
2013ರಲ್ಲಿ ಸುರೇಶ್ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು 1.37 ಲಕ್ಷ ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು. 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ 2.31 ಮತಗಳ ಅಂತರದಲ್ಲಿ ಬಿಜೆಪಿಯ ಮುನಿರಾಜು ಗೌಡ ವಿರುದ್ಧ ಗೆದ್ದಿದ್ದರು. 2019ರಲ್ಲಿ 8,78,258 ಮತಗಳನ್ನು ಪಡೆದು ಬಿಜೆಪಿಯ ಡಾ. ಅಶ್ವತ್ಥ ನಾರಾಯಣ ಅವರನ್ನು ಸೋಲಿಸಿ ಮೂರನೇ ಸಲ ಸಂಸತ್‌ಗೆ ಆಯ್ಕೆಯಾದರು. 2019ರಲ್ಲಿ 28 ಕ್ಷೇತ್ರಗಳಲ್ಲಿ 25 ಕ್ಷೇತ್ರಗಳನ್ನು ಬಿಜೆಪಿ ಗದ್ದಾಗಲೂ, ಕಾಂಗ್ರೆಸ್ ನಿಂದ ಗೆದ್ದದ್ದು ಸುರೇಶ್ ಒಬ್ಬರೇ.
ಇಂತಹ ಜನನಾಯಕ ಡಿ.ಕೆ. ಸುರೇಶ್ ವಿರುದ್ಧ ಎಚ್.ಡಿ ದೇವೇಗೌಡರ ಅಳಿಯ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ, ಬಿಜೆಪಿ ಚಿಹ್ನೆಯಡಿಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ 8 ವಿಧಾನಸಭಾ ಕ್ಷೇತ್ರಗಳು ಸೇರ್ಪಡೆಗೊಳ್ಳುತ್ತವೆ. ಕುಣಿಗಲ್, ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಆನೇಕಲ್(ಮೀಸಲು), ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ. ಈ ಎಂಟರಲ್ಲಿ 5 ಕ್ಷೇತ್ರಗಳು ಕಾಂಗ್ರೆಸ್ ಗೆದ್ದಿದ್ದರೆ, 2ರಲ್ಲಿ ಬಿಜೆಪಿ, ಒಂದರಲ್ಲಿ ಜೆಡಿಎಸ್ ಗೆದ್ದಿದೆ. ಜೆಡಿಎಸ್ ಹಿಡಿತದಲ್ಲಿದ್ದ ರಾಮನಗರ ಈ ಬಾರಿ ಕಾಂಗ್ರೆಸ್ ಪಾಲಾಗಿ, ಜೆಡಿಎಸ್ ಗೆ ಶಾಕ್ ಕೊಟ್ಟಿದೆ. ಹಾಗೆಯೇ ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿನಗರದಲ್ಲಿ ಬಿಜೆಪಿ ಗೆದ್ದಿದ್ದರೂ, ಕಡಿಮೆ ಅಂತರದಲ್ಲಿ ಸೋತಿರುವ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ.
ಒಟ್ಟಾರೆ, ಕಾಂಗ್ರೆಸ್ಸಿನ ಡಿ.ಕೆ. ಸುರೇಶ್ ಮೂರು ಬಾರಿ ಗೆದ್ದು ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದು, ಜೊತೆಗೆ 5 ಜನ ಎಂಎಲ್ಎಗಳು ಗೆದ್ದಿರುವುದು ಸುರೇಶ್ ರ ಜಯದ ಓಟಕ್ಕೆ ಬ್ರೇಕ್ ಹಾಕುವುದು ಕಷ್ಟ ಎಂಬ ಮಾತುಗಳು ಈಗಾಗಲೇ ಕೇಳಿಬರುತ್ತಿವೆ.
ಈ ಕ್ಷೇತ್ರದಲ್ಲಿ ಒಟ್ಟು 26,43,397 ಮತದಾರರಿದ್ದು, ಅದರಲ್ಲಿ ಜಾತಿವಾರು 7 ಲಕ್ಷದ 20 ಸಾವಿರ ಒಕ್ಕಲಿಗರು, 3 ಲಕ್ಷದ 40 ಸಾವಿರ ದಲಿತರು, 2 ಲಕ್ಷ ಚಿಲ್ಲರೆ ಮುಸ್ಲಿಮರು, ಒಂದು ಲಕ್ಷ ಚಿಲ್ಲರೆ ಬ್ರಾಹ್ಮಣರು, 90 ಸಾವಿರ ಕುರುಬ ಮತದಾರರಿದ್ದಾರೆ. ಮೇಲ್ನೋಟಕ್ಕೇ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರವಾಗಿ ಕಂಡರೂ, ಸಣ್ಣಪುಟ್ಟ ಜಾತಿಗಳು ಒಂದಾದರೆ, ಅವರೇ ಇಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದಾಗಿದೆ.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ ಲೋಕಸಭಾ ಕ್ಷೇತ್ರ | ಮಾಜಿ ಸಿಎಂ ಕುಟುಂಬಗಳ ನಡುವೆ ಜಿದ್ದಾಜಿದ್ದಿ
ಸುರೇಶ್ ಮತ್ತು ಮಂಜುನಾಥ್ – ಇಬ್ಬರೂ ಒಕ್ಕಲಿಗರೇ ಆಗಿದ್ದು, ಇಬ್ಬರಿಗೂ ರಾಜಕೀಯ ಕುಟುಂಬಗಳ ಹಿನ್ನೆಲೆ ಇದೆ. ಹಣ, ಅಧಿಕಾರ ಮತ್ತು ಜಾತಿಯಿಂದ ಇಬ್ಬರೂ ಸಮಸ್ಪರ್ಧಿಗಳೇ. ಆದರೆ ಒಬ್ಬರು ಜನನಾಯಕನಾದರೆ, ಮತ್ತೊಬ್ಬರು ಜನಪ್ರಿಯ ವೈದ್ಯರು. ಒಬ್ಬರದು ಒರಟು ವ್ಯಕ್ತಿತ್ವವಾದರೆ, ಇನ್ನೊಬ್ಬರದು ಮೃದುಸ್ವಭಾವ. ಸುರೇಶ್ ಬೆನ್ನಿಗೆ ಡಿಸಿಎಂ ಡಿಕೆ ಇದ್ದರೆ, ಮಂಜುನಾಥ್ ಬೆಂಬಲಕ್ಕೆ ಮಾಜಿ-ಹಾಲಿ ಪ್ರಧಾನಿಗಳೇ ಇದ್ದಾರೆ. ಜೊತೆಗೆ ಮೋದಿ ಅಲೆಯೂ ಇದೆ.
ಪ್ರತಿಸಲ ಒನ್ ಸೈಡೆಡ್ ಎನ್ನುತ್ತಿದ್ದ ಕ್ಷೇತ್ರ, ಈ ಬಾರಿ ಇಬ್ಬರು ಘಟಾನುಘಟಿಗಳಿಂದಾಗಿ ಕುತೂಹಲದ ಕಣವಾಗಿ ಮಾರ್ಪಟ್ಟಿದೆ. ಮತದಾರ ಯಾರಿಗೆ ಒಲಿಯುತ್ತಾನೋ, ನೋಡಬೇಕು.