ನಗರದ ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾದಲ್ಲಿ (ಕ್ವೀನ್ಸ್ ರಸ್ತೆ) ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಳವಡಿಸಿದ್ದ ಅನಧಿಕೃತ ಬ್ಯಾನರ್‌ಅನ್ನು ಬಿಬಿಎಂಪಿ ತೆರವುಗೊಳಿಸಿದ್ದು, 50,000 ರೂ. ದಂಡ ವಿಧಿಸಿದೆ.
ವಸಂತನಗರ ವಾರ್ಡ್-93 ವ್ಯಾಪ್ತಿಯ ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾದಲ್ಲಿ ಸ್ವತ್ತಿನ ಸಂಖ್ಯೆ:12/1 ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ವಿಭಾಗವು ಬ್ಯಾನರ್ ಅಳವಿಡಿಸಿತ್ತು. ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ರವರ ಜನ್ಮ ದಿನಾಚರಣೆ (ಆಗಸ್ಟ್ 20) ಅಂಗವಾಗಿ ಕಾಂಗ್ರೆಸ್ ಕಛೇರಿಯ ಮುಂಭಾಗದಲ್ಲಿ ಬ್ಯಾನರ್ ಹಾಕಲಾಗಿತ್ತು. ಆದರೆ, ಬ್ಯಾನರ್ ಅಳವಡಿಕೆಗೆ ಬಿಬಿಎಂಪಿಯ ಅನುಮತಿ ಪಡೆದಿರಲಿಲ್ಲ ಎಂದು ತಿಳಿದುಬಂದಿದೆ.
ಅನಧಿಕೃತವಾಗಿ ಹಾಕಲಾಗಿದ್ದ ಬ್ಯಾನರ್‌ಅನ್ನು ತೆರವುಗೊಳಿಸಲಾಗಿದ್ದು, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಿಗೆ 50,000 ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತವನ್ನು ಬಿಬಿಎಂಪಿ ಆಯುಕ್ತರ ಖಾತೆಗೆ ಪಾವತಿ ಮಾಡುವಂತೆ ಸೂಚಿಸಲಾಗಿದೆ.