ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಉಪಸಭಾಪತಿ ಪ್ರಾಣೇಶ್ ಅವರಿಗೆ ಪತ್ರವನ್ನು ರವಾನಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಸದನದಲ್ಲಿ ನಡೆದ ಬೆಳವಣಿಗೆಯಿಂದ ನನ್ನ ಮನಸ್ಸಿಗೆ ಬೇಸರವಾಗಿದೆ. ಸದನದಲ್ಲಿ ಇಂದಿನ ರಾಜಕಾರಣಿಗಳನ್ನು ನಿಭಾಯಿಸಲು ಸಾಧ್ಯವಿಲ್ಲ. ಹಾಗಾಗಿ ನಾನು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಈ ಹಿಂದೆ ಹೊರಟ್ಟಿ ತಿಳಿಸಿದ್ದರು.
ಇದನ್ನು ಓದಿದ್ದೀರಾ? ಯು ಟಿ ಖಾದರ್, ಬಸವರಾಜ ಹೊರಟ್ಟಿ ಯೂರೋಪ್, ಆಫ್ರಿಕಾ ಪ್ರವಾಸ
“ಸದನದಲ್ಲಿ ಚರ್ಚೆಗಳೇ ಇಲ್ಲದೆ ಮಸೂದೆಗಳು ಪಾಸ್ ಆಗುತ್ತಿದೆ. ಮುಸ್ಲಿಂ ಮೀಸಲಾತಿ ಬಗ್ಗೆ ಕೊಂಚ ಚರ್ಚೆ ನಡೆದಿದೆ ಬಿಟ್ಟರೆ, ಬೇರೆ ಯಾವ ಮಸೂದೆ ಬಗ್ಗೆಯೂ ಚರ್ಚೆಯಾಗಿಲ್ಲ. ಇನ್ನೂ ಸದನದಲ್ಲಿದ್ದು ಪ್ರಯೋಜನವೇನಿದೆ? ಯಾವ ಹುದ್ದೆಗೆ ಘಟನೆ ಗೌರವ ಇರುವುದಿಲ್ಲವೋ ಅಲ್ಲಿ ನಾವು ಇರಬಾರದು ಎಂದು ತೀರ್ಮಾನಿಸಿದ್ದೇನೆ” ಎಂದು ಹೇಳಿದ್ದರು.
ಇದೀಗ “ವೈಯಕ್ತಿಕ ಕಾರಣಗಳಿಂದಾಗಿ ನಾನು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಮಾರ್ಚ್ 31ರ ಒಳಗಾಗಿ ಸ್ವೀಕರಿಸಬೇಕು. ಏಪ್ರಿಲ್ 1ರಿಂದ ಅನ್ವಯವಾಗುವಂತೆ ನನ್ನನ್ನು ಹುದ್ದೆಯಿಂದ ಮುಕ್ತಿಗೊಳಿಸಬೇಕು” ಎಂದು ಕೋರಿ ಹೊರಟ್ಟಿ ಬರೆದಿರುವ ರಾಜೀನಾಮೆ ಪತ್ರ ಸದ್ಯ ವೈರಲ್ ಆಗುತ್ತಿದೆ, ಈ ಬಗ್ಗೆ ಹೊರಟ್ಟಿ ಸ್ಪಷ್ಟಣೆ ನೀಡಿಲ್ಲ.
