ಬೆಳೆಯುತ್ತಿರುವ ಬೆಂಗಳೂರನ್ನು ಉತ್ತಮವಾಗಿ ನಿರ್ವಹಿಸಲು 7 ಪಾಲಿಕೆಗಳಾಗಿ ವಿಂಗಡಿಸುವುದು ಉತ್ತಮ. ಆದರೆ, ಅದಕ್ಕೆ ತಕ್ಕಂತೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಉತ್ತಮ ಯೋಜನೆ ಬೆಂಗಳೂರಿಗೆ ಬೇಕಿದೆ. ಆಗ ಮಾತ್ರವೇ 'ಗ್ರೇಟರ್ ಬೆಂಗಳೂರು' ಅಕ್ಷರಶಃ ಗ್ರೇಟ್ ಆಗಲು ಸಾಧ್ಯ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಹುತೇಕ ಯುಗಾಂತ್ಯವಾಗಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯು ಮೇ 15ರಿಂದ ಜಾರಿಗೊಂಡಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ವಹಿಸಿಕೊಳ್ಳುವವರೆಗೂ ಮಾತ್ರ ಬಿಬಿಎಂಪಿ ಹೆಸರು ಚಾಲ್ತಿಯಲ್ಲಿರಲಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಯಾದ ಮೇಲೆ ಮುಖ್ಯಮಂತ್ರಿಯವರ ನೇತೃತ್ವದ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ‘ (ಜಿಬಿಎ) 120 ದಿನಗಳಲ್ಲಿ ರಚನೆಯಾಗಲಿದೆ. ಜೊತೆಗೆ ಆಡಳಿತಾಧಿಕಾರಿಯ ನೇಮಕ ಸಹ ಆಗಲಿದೆ. ನಂತರ ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ) ಗಡಿಗುರುತು ನಡೆಯಲಿದ್ದು, ಕ್ರಮೇಣ ಬಿಬಿಎಂಪಿಯ ಅಸ್ತಿತ್ವ ಬೆಂಗಳೂರಿನ ಜನಮಾನಸದಿಂದ ದೂರವಾಗಲಿದೆ.
ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ದೂರದೃಷ್ಟಿಯುಳ್ಳ ರಾಜಕೀಯ ನಾಯಕ ಎಂದು ಕರೆಯಲಾಗುತ್ತದೆ. ಅವರ ಕನಸಿನ ಕೂಸೇ ಈ ‘ಗ್ರೇಟರ್ ಬೆಂಗಳೂರು’. ಬೆಂಗಳೂರಿನ ನಿವಾಸಿಗಳಿಗೆ ಉತ್ಕೃಷ್ಟ ದರ್ಜೆಯ ಸೌಲಭ್ಯ ಮತ್ತು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಪರಿಕಲ್ಪನೆಯನ್ನು ಹಠಹಿಡಿದು ಜಾರಿಗೆ ತಂದಿದ್ದಾರೆ.
1999ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಬೆಂಗಳೂರನ್ನು ಸಿಂಗಾಪೂರ ಮಾಡುತ್ತೇನೆ ಎಂದಿದ್ದರು. ಅವರ ಗರಡಿಯಲ್ಲಿ ಬೆಳೆದ ಡಿ.ಕೆ ಶಿವಕುಮಾರ್ ಈಗ ‘ಗ್ರೇಟರ್ ಬೆಂಗಳೂರು’ ಎನ್ನುತ್ತಿದ್ದಾರೆ. ಬೆಂಗಳೂರಿಗೆ ಸ್ಕೈ-ಡೆಕ್ ಬೇಕು, ಎರಡನೇ ವಿಮಾನ ನಿಲ್ದಾಣವಾಗಬೇಕು, ಬೆಂಗಳೂರು ನಗರ ಜಿಲ್ಲೆ ಮಾತ್ರವಲ್ಲ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ಕೆಲವು ಪ್ರದೇಶಗಳು ಬೆಂಗಳೂರಿಗೆ ಒಳಪಡಬೇಕು, ಆಗ ಬೆಂಗಳೂರಿನ ಹೊರ ಭಾಗದ ಭೂಮಿಗೂ ಚಿನ್ನದ ಬೆಲೆ ಬರಲಿದೆ ಎಂದು ಡಿ.ಕೆ ಶಿವಕುಮಾರ್ ಸದಾ ಹೇಳುತ್ತಾರೆ. ಸಿಲಿಕಾನ್ ಸಿಟಿಯನ್ನು ವಿಶ್ವಮಟ್ಟಕ್ಕೆ ಏರಿಸಿ ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎನ್ನುವ ಶಪಥ ಮಾಡಿದ್ದಾರೆ.
‘ಗ್ರೇಟರ್ ಬೆಂಗಳೂರು’ ಈಗ ಅಸ್ತಿತ್ವಕ್ಕೂ ಬಂದಿದೆ. ಇದರಿಂದ ಬೆಂಗಳೂರಿನ ವ್ಯಾಪ್ತಿ ಕೂಡ ಹಿರಿದಾಗಲಿದೆ. ನಗರದ ಕೈಗಾರಿಕಾ ಪ್ರದೇಶ ಎಲೆಕ್ಟ್ರಾನಿಕ್ ಸಿಟಿ, ಜಿಗಣಿ, ಅತ್ತಿಬೆಲೆ, ಬಾಗಲೂರು, ಬೊಮ್ಮಸಂದ್ರ, ಹೆಸರಘಟ್ಟ, ಹಾರೋಹಳ್ಳಿ, ದಾನಸಪುರ, ಕುಂಬಳಗೋಡು ಸೇರಿದಂತೆ ಹಲವು ಪ್ರದೇಶಗಳನ್ನು ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಗೆ ಸೇರಿಸಿಕೊಳ್ಳಲಿದೆ. ಗ್ರೇಟರ್ ಬೆಂಗಳೂರಿನಲ್ಲಿ ಹಲವು ಬದಲಾವಣೆ ಸಾಧ್ಯತೆ ಇದ್ದು, ಕಟ್ಟಡಗಳ ಗಾತ್ರ, ಎತ್ತರ ನಿಯಮಗಳಲ್ಲೂ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವದಿಂದ ಬೆಂಗಳೂರಿಗೆ ಹೊಸ ದಿಕ್ಕುದೆಸೆ ತೋರಲಿದೆ ಎಂದು ನಿರೀಕ್ಷಿಸಲಾಗಿದೆ. ಹಲವು ಪಾಲಿಕೆಗಳು ರಚನೆಯಾಗಿ ಅಧಿಕಾರ ವಿಕೇಂದ್ರೀಕರಣವಾಗಿ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ ಎಂದೇ ಭಾವಿಸಲಾಗಿದೆ. ನಗರದ ಕೈಗಾರಿಕಾ ಪ್ರದೇಶಗಳಲ್ಲದೆ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶ, ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ‘ಗ್ರೇಟರ್ ಬೆಂಗಳೂರು ಪ್ರದೇಶ’ಕ್ಕೆ ಸೇರಿಸಿಕೊಂಡು ಕನಿಷ್ಠ ಮೂರು ಪಾಲಿಕೆ ರಚನೆಯಾಗುವ ಸಾಧ್ಯತೆ ಇದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು-ತುಮಕೂರು ಮೆಟ್ರೊ ಯೋಜನೆ ಯಾರಿಗಾಗಿ?
ಗ್ರೇಟರ್ ಬೆಂಗಳೂರು ಸಾಗಿ ಬಂದ ಹಾದಿ
2007ರಲ್ಲಿ ಬಿಬಿಎಂಪಿ ರಚನೆಯಾಗಿದ್ದು, ಎಗ್ಗಿಲ್ಲದೆ ಬೆಳೆಯುತ್ತಿರುವ ನಗರದ ನಿರ್ವಹಣೆ ಬಿಬಿಎಂಪಿಗೆ ಸವಾಲಾಗಿತ್ತು. ಪಾಲಿಕೆ ವ್ಯಾಪ್ತಿ 709 ಚ.ಕಿಮೀಗೆ ಹಿಗ್ಗಿದ್ದು, ಬೆಂಗಳೂರು ನಗರದಲ್ಲಿ ಸುಮಾರು 1.50 ಕೋಟಿ ಜನರು ವಾಸಿಸುತ್ತಿದ್ದಾರೆ. ಈ ಬೃಹತ್ ಗಾತ್ರದ ನಗರವನ್ನು ನಿರ್ವಹಿಸುತ್ತಿದ್ದ ಬಿಬಿಎಂಪಿಗೆ ಮೆಚ್ಚುಗೆಗಿಂತ ಟೀಕೆಗಳೇ ಸಾಕಷ್ಟು ಕೇಳಿಬಂದಿವೆ.
ವಿವಿಧ ಇಲಾಖೆಗಳ ನಡುವೆ ಸಮನ್ವಯ ಕೊರತೆಯಿಂದ ಮೂಲ ಸೌಕರ್ಯಗಳನ್ನು ಒದಗಿಸಲು ಬಿಬಿಎಂಪಿಗೆ ಸಾಧ್ಯವಾಗುತ್ತಿರಲಿಲ್ಲ. ಸಂಚಾರ ದಟ್ಟಣೆ, ಪ್ರವಾಹ, ಗುಂಡಿ ಬಿದ್ದ ರಸ್ತೆಗಳು, ಕಸ ಸಂಗ್ರಹ, ನೀರಿನ ಕೊರತೆಯ ಸಮಸ್ಯೆಗಳಿಗೆ ಪರಿಹಾರವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಂಆರ್‌ಸಿಎಲ್, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರಣಕ್ಕೆ ಬಿಬಿಎಂಪಿಯಲ್ಲಿ ಸಮಸ್ಯೆಗಳ ಸರಮಾಲೆಯೇ ಇತ್ತು.
ಈ ಹಿನ್ನೆಲೆಯಲ್ಲಿ ದೇಶದ ಐಟಿಬಿಟಿ ರಾಜಧಾನಿಯಾಗಿರುವ ಬೆಂಗಳೂರು ನಗರವನ್ನು ಮತ್ತಷ್ಟು ಸಮರ್ಥವಾಗಿ ಮೇಲ್ವಿಚಾರಣೆ ಮತ್ತು ನಿರ್ವಹಣೆ ಮಾಡಲು ‘ಜಿಬಿಎ’ ರಚಿಸಲಾಗಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ -2024ರ ಅಡಿಯಲ್ಲಿ ಜಿಬಿಎ ರಚನೆಯಾಗಿದೆ. ಬಿಬಿಎಂಪಿಗೆ ಬದಲಾಗಿ ಜಿಬಿಎ ನಗರದ ಆಡಳಿತ, ಯೋಜನೆ, ನಿರ್ವಹಣೆ, ವಿವಿಧ ವಿಭಾಗಗಳ ಮೇಲ್ವಿಚಾರಣೆ ಮಾಡುವುದರ ಜತೆಗೆ ಒಂದಕ್ಕಿಂತ ಹೆಚ್ಚು ಪಾಲಿಕೆಗಳನ್ನು ರಚಿಸಲಿದೆ. ಇದರಡಿ ಬರುವ ಬೆಂಗಳೂರು ಪುನರ್ ರಚನಾ ಸಮಿತಿಯನ್ನು ಇನ್ನುಮುಂದೆ ಬ್ರ್ಯಾಂಡ್ ಬೆಂಗಳೂರು ಸಮಿತಿ ಎಂದು ಕರೆಯಲಾಗುತ್ತದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಮುಖ್ಯಮಂತ್ರಿಗಳು ಜಿಬಿಎ ಅಧ್ಯಕ್ಷರಾಗಿರುತ್ತಾರೆ. ಬೆಂಗಳೂರು ಉಸ್ತುವಾರಿ ಸಚಿವರು ಅಥವಾ ಉಪ ಮುಖ್ಯಮಂತ್ರಿಗಳು ಉಪಾಧ್ಯಕ್ಷರಾಗಿರುತ್ತಾರೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಶಾಸಕರು-ಸಚಿವರು, ನಗರಾಭಿವೃದ್ಧಿ ಸಚಿವರು, ಪಾಲಿಕೆಗಳ ಮೇಯರ್‌ಗಳು, ಬಿಡಿಎ ಆಯುಕ್ತ, ಬೆಂಗಳೂರು ಜಲಮಂಡಳಿ ಅಧ್ಯಕ್ಷ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಕಂದಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಪೊಲೀಸ್ ಕಮಿಷನರ್, ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿರ್ದೇಶಕ, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಹಾನಗರ ಆಯುಕ್ತ ಸದಸ್ಯರಾಗಲಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯ ಪ್ರಕಾರ ಮೂರು ಇಲ್ಲವೇ ಐದು ಪಾಲಿಕೆಯನ್ನಾಗಿ ಮಾಡಿ ಗ್ರೇಟರ್ ಬೆಂಗಳೂರು ಕೇಂದ್ರ, ಗ್ರೇಟರ್ ಬೆಂಗಳೂರು ಉತ್ತರ, ಗ್ರೇಟರ್ ಬೆಂಗಳೂರು ದಕ್ಷಿಣ ಹೀಗೆ ನಾಮಕರಣ ಮಾಡುವ ಸಾಧ್ಯತೆ ಇದೆ. ಪ್ರತಿ ಪಾಲಿಕೆಯೂ ತನ್ನ ವ್ಯಾಪ್ತಿಯಲ್ಲಿ ಸ್ಥಳೀಯ ಆಡಳಿತ ನಿರ್ವಹಣೆ ಮಾಡಲಿದೆ. ಚರಂಡಿ, ರಸ್ತೆ, ತ್ಯಾಜ್ಯ ನಿರ್ವಹಣೆ ಮತ್ತು ಸಾರ್ವಜನಿಕ ಆರೋಗ್ಯದ ಜವಾಬ್ದಾರಿ ಹೊರಲಿದೆ. ತಲಾ 125 ವಾರ್ಡ್‌ಗಳಿಗೆ ಒಂದು ಪಾಲಿಕೆ. ಪ್ರತಿ ಪಾಲಿಕೆಗೂ ಗ್ರೇಟರ್ ಬೆಂಗಳೂರು ಪ್ರದೇಶದ ಗಡಿ ನಿಗದಿ ಮಾಡಲಾಗುತ್ತಿದೆ.
ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ರಚಿಸಲಾಗುವ ಪ್ರತಿ ನಗರ ಪಾಲಿಕೆಯಲ್ಲಿ ಕನಿಷ್ಠ 10 ಲಕ್ಷ ಜನಸಂಖ್ಯೆ ಇರಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಒಂದು ಚದರ ಕಿ.ಮೀ.ನಲ್ಲಿ ಐದು ಸಾವಿರ ನಿವಾಸಿಗಳಿರಬೇಕು. ಪ್ರತಿ ನಗರ ಪಾಲಿಕೆಯ ವಾರ್ಷಿಕ ಆದಾಯವು 300 ಕೋಟಿ ರೂ.ಗಿಂತ ಕಡಿಮೆ ಇರಬಾರದು. ಕೃಷಿಯೇತರ ಚಟುವಟಿಕೆಯಲ್ಲಿರುವ ಉದ್ಯೋಗಗಳ ಪ್ರಮಾಣ ಒಟ್ಟು ಉದ್ಯೋಗಗಳಲ್ಲಿ ಶೇ. 50ಕ್ಕಿಂತ ಕಡಿಮೆಯಾಗಿರಬೇಕು ಎಂಬ ನಿಯಮವಿದೆ.
ಹೊಸ ನಗರ ಪಾಲಿಕೆಗಳನ್ನು ರಚಿಸಿದ ನಂತರ ಬಿಬಿಎಂಪಿ ಮತ್ತು ಗ್ರಾಮ ಪಂಚಾಯಿತಿಗಳು ಇರುವುದಿಲ್ಲ. ನಗರ ಪಾಲಿಕೆಗಳ ಗಡಿಯನ್ನು ಗುರುತಿಸಿ ಸರಕಾರವು ಕರಡು ಅಧಿಸೂಚನೆಯನ್ನು ಹೊರಡಿಸಲಿದೆ. ನಂತರ 30 ದಿನಗಳ ಕಾಲ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಅಂತಿಮ ಅಧಿಸೂಚನೆ ಹೊರಡಿಸಿದ ಕೂಡಲೇ ಹೊಸ ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬರುತ್ತವೆ. ಅಲ್ಲಿಯವರೆಗೆ ಸರಕಾರವೇ ಎಲ್ಲ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.
ಹೊಸ ಪಾಲಿಕೆಗಳಿಗೆ ಜಿಬಿಎಗೆ ಮಾರ್ಗದರ್ಶನ ಮಾಡಲಿದೆ. ಲಂಡನ್, ನ್ಯೂಯಾರ್ಕ್ ಮೊದಲಾದ ನಗರಗಳಲ್ಲಿರುವಂತೆ ಕೇಂದ್ರ ಪ್ರಾಧಿಕಾರದ ಅಡಿಯಲ್ಲಿ ಉಳಿದ ಪಾಲಿಕೆಗಳು ಕರ್ತವ್ಯ ನಿರ್ವಹಿಸುವ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ. ಆಡಳಿತವನ್ನು ಜನಸ್ನೇಹಿ, ಜವಾಬ್ದಾರಿ ಮತ್ತು ಹೊಸ ಕಾಯಕಲ್ಪ ನೀಡುವುದು ಜಿಬಿಎ ಉದ್ದೇಶ.
ಮಸೂದೆ ವಾಪಸ್ ಮಾಡಿದ್ದ ರಾಜ್ಯಪಾಲರು
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ರ ಪರಿಶೀಲನೆ ಮತ್ತು ವರದಿಗೆ ಸಂಬಂಧಿಸಿದಂತೆ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ನಗರದಲ್ಲಿ ಎಲ್ಲ ಎಂಟು ವಲಯಗಳನ್ನು ಒಳಗೊಂಡಂತೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳಿಂದ ಸಲಹೆಗಳನ್ನು ಸ್ವೀಕರಿಸಿ ವರದಿಯೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತು. ನಂತರ ‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2024’ ವಿಧಾನ ಮಂಡಲದಲ್ಲಿ ಮಾರ್ಚ್ 13ರಂದು ಅಂಗೀಕಾರಗೊಂಡಿತ್ತು.
ಆದರೆ ಒಂದು ಬಾರಿ ರಾಜ್ಯಪಾಲರು ಈ ಮಸೂದೆ ವಾಪಸ್ ಮಾಡಿದ್ದರು. ನಂತರ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದ್ದರಿಂದ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024ಕ್ಕೆ ಏಪ್ರೀಲ್ 23ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಒಪ್ಪಿಗೆ ನೀಡಿದರು. ಏಪ್ರಿಲ್ 24ರಂದು ರಾಜ್ಯಪತ್ರದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2024 ಅಧಿಸೂಚನೆ ಪ್ರಕಟವಾಗಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024ರ 1ನೇ ಕಲಂ (3)ನೇ ಉಪ ಕಲಂನಲ್ಲಿ ಪದತ್ತವಾದ ಅಧಿಕಾರ ಚಲಾಯಿಸಿ ಅಧಿಸೂಚನೆ ಹೊರಡಿಸಲಾಗಿದೆ.
ತೆರಿಗೆ ಪಾವತಿ: ಬದಲಾವಣೆ ಇಲ್ಲ
ಗ್ರೇಟರ್ ಬೆಂಗಳೂರು ಆಡಳಿತದಲ್ಲಿ ತೆರಿಗೆ ಪಾವತಿ, ವ್ಯಾಪ್ತಿ, ಅಧಿಕಾರಿಗಳ ಕರ್ತವ್ಯಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜಿಬಿಎ ಜಾರಿಯಾದ ಮೇಲೆ ಹಂತಹಂತವಾಗಿ ಅಧಿಸೂಚನೆ ಹೊರಡಿಸಿ ಒಂದೊಂದೇ ಯೋಜನೆಗಳು ‘ಜಿಬಿಎ’ಯೊಂದಿಗೆ ಜೋಡಣೆಯಾಗಲಿವೆ.
ಗ್ರೇಟರ್ ಬೆಂಗಳೂರು ಅಡಿಯಲ್ಲಿ ವಾರ್ಡ್ ಸಮಿತಿಗಳಿಗೆ ಆದ್ಯತೆ ನೀಡುವುದರಿಂದ ಜನರ ಸಹಭಾಗಿತ್ವಕ್ಕೆ ಮರುಚಾಲನೆ ದೊರೆಯುತ್ತದೆ. ಪ್ರಸ್ತುತ, ವಾರ್ಡ್ ಕಮಿಟಿ ಎಂಬುದು ಇದೆ ಎಂಬುದನ್ನೇ ಜನರು ಮರೆತಿದ್ದಾರೆ. ವಾರ್ಡ್ ಕಮಿಟಿಗಳು ‘ಗ್ರೇಟರ್ ಬೆಂಗಳೂರು’ ಯೋಜನೆಯ ಭಾಗವಾಗಿದ್ದು, ಆಡಳಿತ ನಿರ್ವಹಣೆಯಲ್ಲಿ ಜನರು ಭಾಗಿಯಾಗುವುದು ಮತ್ತು ಚರ್ಚಿಸುವುದು ಯಶಸ್ಸಿಗೆ ಕಾರಣವಾಗಲಿದೆ ಎನ್ನುವ ವಿಶ್ಲೇಷಣೆ ಕೂಡ ವ್ಯಕ್ತವಾಗಿದೆ.
ಬಿಡದಿ ಸ್ಮಾರ್ಟ್ ಸಿಟಿ ಯೋಜನೆಗೆ ಭೂಸ್ವಾಧೀನ ಪಡಿಸಿಕೊಳ್ಳಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಮುಂದಾಗಿದೆ. ಹಾಗೆ ನೋಡಿದರೆ 2006ರಲ್ಲೇ ಬಿಡದಿ ಸ್ಮಾರ್ಟ್‌ಸಿಟಿ ಯೋಜನೆ ರೂಪಿಸಲಾಗಿತ್ತು. ಬಿಡದಿ ಹೋಬಳಿಯ 29 ಗ್ರಾಮಗಳ 10 ಸಾವಿರ ಎಕರೆಯನ್ನು ಯೋಜನೆಯ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದು, ಸ್ಮಾರ್ಟ್‌ಸಿಟಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಕಾರಣಾಂತರಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಇದೀಗ 19 ವರ್ಷಗಳ ಬಳಿಕ ಹೊಸ ಹೆಸರಿನ ರೂಪದಲ್ಲಿ ಯೋಜನೆಗೆ ಮರು ಚಾಲನೆ ಸಿಕ್ಕಿದೆ.
ಬಿಬಿಎಂಪಿ ಚುನಾವಣೆ ವಿಳಂಬ
2007ರಲ್ಲಿ ಬಿಬಿಎಂಪಿ ರಚನೆಯಾಗಿ, 2010ರಲ್ಲಿ ಮೊದಲ ಬಾರಿಗೆ ಸ್ಥಳೀಯ ಚುನಾವಣೆಗಳು ನಡೆದಿತ್ತು. ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿಗೆ ಚುನಾವಣೆ ನಡೆದಿಲ್ಲ. ಇಂತಹ ಸಮಯದಲ್ಲಿ ಗ್ರೇಟರ್ ಬೆಂಗಳೂರಿನ ಆಡಳಿತದ ಬಗ್ಗೆ ಸಹಜವಾಗಿಯೇ ಕುತೂಹಲ, ಪ್ರಶ್ನೆಗಳು ಮುಂದಿದ್ದು, ಚುನಾವಣೆ ಮತ್ತಷ್ಟು ವಿಳಂಬವಾಗುವ ನಿರೀಕ್ಷೆಯಿದೆ.
ಮಹಾನಗರದ ಚುನಾವಣೆಗೆ ಸಾಕಷ್ಟು ತಯಾರಿಗಳಾಗಬೇಕಿದೆ. ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿ, ಗಡಿ ಗುರುತಿಸುವಿಕೆ, ಪಾಲಿಕೆಗಳ ರಚನೆ, ವಾರ್ಡ್‌ಗಳ ವಿಂಗಡಣೆ, ಮತದಾರರ ಪಟ್ಟಿ ತಯಾರಿ, ಮೀಸಲಾತಿ ಪ್ರಕಟ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಿದೆ. ಇದು ಸುದೀರ್ಘ ಪ್ರಕ್ರಿಯೆಯಾಗಿದ್ದು, ಸಾಕಷ್ಟು ಕಾಲಾವಕಾಶ ಬೇಕಾಗಲಿದೆ. ಹೀಗಾಗಿ ಈ ವರ್ಷವೂ ಬಿಬಿಎಂಪಿ ಹೊಸ ರೂಪ ‘ಜಿಬಿಎ’ಗೂ ಚುನಾವಣೆಯ ಅನಿಶ್ಚಿತತೆ ಮುಂದುವರಿಯಲಿದೆ.
2020ರಲ್ಲಿ ಕೌನ್ಸಿಲ್ ಅವಧಿ ಮುಗಿದಾಗಿನಿಂದ, ಬಿಬಿಎಂಪಿ ಚುನಾವಣೆ ನಡೆಸುವ ವಿಷಯ ವಿವಿಧ ನ್ಯಾಯಾಲಯಗಳಲ್ಲಿದೆ. ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದರೂ ಹಿಂದಿನ ಬಿಜೆಪಿ ಸರ್ಕಾರವು ವಾರ್ಡ್‌ಗಳ ಸಂಖ್ಯೆಯನ್ನು 198 ವಾರ್ಡ್‌ಗಳಿಂದ 243 ಕ್ಕೆ ಹೆಚ್ಚಿಸಲು ಸಮಯ ತೆಗೆದುಕೊಂಡಿತ್ತು. ಆದರೆ ಪ್ರಸ್ತುತ ಸರ್ಕಾರವು ಅದನ್ನು 225 ವಾರ್ಡ್‌ಗಳಿಗೆ ಹೆಚ್ಚಿಸಿದ್ದರಿಂದ ಚುನಾವಣೆ ಮತ್ತಷ್ಟು ವಿಳಂಬವಾಗಿತ್ತು.
ಜಿಬಿಎ ರಚನೆಗೆ ಸ್ವಾಗತ ಮತ್ತು ಟೀಕೆಗಳ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಾಗತಿಕ ನಗರ ಬೆಂಗಳೂರಿಗೆ ಕಾಯಕಲ್ಪ ನೀಡಲು ಜಿಬಿಎ ಅವಶ್ಯಕತೆ ಇತ್ತು ಎಂದು ಪ್ರತಿಪಾದಿಸಿದರೆ ಅಧಿಕಾರಿಗಳೇ ಮೇಲುಗೈ ಆಗಲಿದ್ದಾರೆ. ತೆರಿಗೆ ಹೆಚ್ಚಳವಾಗುತ್ತದೆ. ಅಧಿಕಾರ ಕೇಂದ್ರೀಕೃತವಾಗುತ್ತದೆ. ಜನಪ್ರತಿನಿಧಿಗಳಿಗೆ ಅಧಿಕಾರವೇ ಇರುವುದಿಲ್ಲ ಎನ್ನುವ ಟೀಕೆಯೂ ಇದೆ.
ಸದ್ಯ, ಬೆಳೆಯುತ್ತಿರುವ ಬೆಂಗಳೂರನ್ನು ಉತ್ತಮವಾಗಿ ನಿರ್ವಹಿಸಲು ಬೆಂಗಳೂರಿನ ಆಡಳಿತವನ್ನು 7 ಪಾಲಿಕೆಗಳಾಗಿ ವಿಂಗಡಿಸುವುದು ಉತ್ತಮ. ಆದರೆ, ಅದಕ್ಕೆ ತಕ್ಕಂತೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಉತ್ತಮ ಯೋಜನೆ ಬೆಂಗಳೂರಿಗೆ ಬೇಕಿದೆ. ಆಗ ಮಾತ್ರವೇ ‘ಗ್ರೇಟರ್ ಬೆಂಗಳೂರು’ ಅಕ್ಷರಶಃ ಗ್ರೇಟ್ ಆಗಲು ಸಾಧ್ಯ. ಆದರೆ, ಕೇವಲ ಅಧಿಕಾರ ಮತ್ತು ಹಣದ ಹಪಾಹಪಿಯ ಯೋಜನೆಯಾಗಿ, ರಿಯಲ್ ಎಸ್ಟೇಟ್ ಉದ್ಯಮದ ವಿಸ್ತರಣೆಗಾಗಿ ಜಾರಿಯಾದರೆ ಇದು ಕೇವಲ ಹಣದ ಹೊಳೆ ಹರಿಸುವ ಯೋಜನೆಯಾಗಲಿದೆ. ಇದರಿಂದ ಮೂಲ ಆಶಯವೇ ವಿಫಲಗೊಳ್ಳುತ್ತದೆ. ಸರ್ಕಾರ ಈ ಎಚ್ಚರಿಕೆಯನ್ನು ಮುಂದಿಟ್ಟುಕೊಂಡೇ ಗ್ರೇಟರ್ ಬೆಂಗಳೂರು ಕಟ್ಟಬೇಕಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.