ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್‌ಗೆ ಪ್ರಧಾನಿ ನರೇಂದ್ರ ಮೋದಿ ಅಭ್ಯರ್ಥಿಯಾಗಬಹುದು ಎಂಬ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಹೇಳಿಕೆಯನ್ನು ಉಲ್ಲೇಖಿಸಿ ಮೋದಿ ಅವರನ್ನು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್ ಅವರು, “ಜೈವಿಕವಲ್ಲದ ಪ್ರಧಾನಿ ಬಾಹ್ಯಾಕಾಶಕ್ಕೆ ಹೋಗುವ ಮುನ್ನ ಮಣಿಪುರಕ್ಕೆ ಹೋಗಬೇಕು” ಎಂದು ಹೇಳಿದ್ದಾರೆ. ಹಾಗೆಯೇ 2025ರಲ್ಲಿ ಉಡಾವಣೆಯಾಗಲಿರುವ ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್ ‘ಗಗನಯಾನ’ಕ್ಕೆ ಪ್ರಧಾನಿ ಮೋದಿ ಅಭ್ಯರ್ಥಿಯಾಗಬಹುದು ಎಂಬ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆಂಬ ಮಾಧ್ಯಮ ವರದಿ ಉಲ್ಲೇಖಿಸಿದ್ದಾರೆ.
Before He goes into space, the non-biological Pradhan Mantri should go to Manipurhttps://t.co/ILVyolIVk2
— Jairam Ramesh (@Jairam_Ramesh) July 4, 2024
“ಅವರು (ಪಿಎಂ ಮೋದಿ) ನಿಸ್ಸಂಶಯವಾಗಿ ಅನೇಕ ಇತರ, ಹೆಚ್ಚು ನಿರ್ಣಾಯಕ ಜವಾಬ್ದಾರಿಗಳನ್ನು ಹೊಂದಿದ್ದಾರೆ. ಮಾನವಸಹಿತ ಬಾಹ್ಯಾಕಾಶ ಮಿಷನ್‌ಗೆ ಗಗನ ನೌಕೆಯನ್ನು ಗಗನಯಾನ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಕೊಡುಗೆ ನೀಡಲು ವಿನ್ಯಾಸಗೊಳಿಸಲಾಗಿದೆ. ದೇಶದ ಮುಖ್ಯಸ್ಥರನ್ನು ವಿಶ್ವಾಸದಿಂದ ಬಾಹ್ಯಾಕಾಶಕ್ಕೆ ಕಳುಹಿಸುವ ಸಾಮರ್ಥ್ಯ ನಮ್ಮಲ್ಲಿದ್ದರೆ ನಮಗೆಲ್ಲರಿಗೂ ತುಂಬಾ ಹೆಮ್ಮೆಯಾಗುತ್ತದೆ” ಎಂದು ಎಸ್ ಸೋಮನಾಥ್ ಹೇಳಿದ್ದರು.
ಇದನ್ನು ಓದಿದ್ದೀರಾ? ‘ನಾನು ಜೈವಿಕವಾಗಿ ಜನಿಸಿಲ್ಲ, ಪರಮಾತ್ಮನೇ ನನ್ನನ್ನು ಕಳುಹಿಸಿದ್ದು’ ಎಂದ ಪ್ರಧಾನಿ ಮೋದಿ!
ಗಗನಯಾನ ಯೋಜನೆಯು ಮತ್ತೊಂದು ಪ್ರಮುಖ ಭಾರತೀಯ ಮಿಷನ್ ಆಗಿದ್ದು, ಇದು ಮೂರು ಸದಸ್ಯರ ಸಿಬ್ಬಂದಿಯನ್ನು 400 ಕಿಮೀ ಕಕ್ಷೆಗೆ 3 ದಿನಗಳ ಕಾರ್ಯಾಚರಣೆಗಾಗಿ ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯಾಗಿದೆ. ನೀರಿನಲ್ಲಿ ಲ್ಯಾಂಡ್ ಆಗುವ ಮೂಲಕ ಸುರಕ್ಷಿತವಾಗಿ ಭೂಮಿಗೆ ಹಿಂದಿರುಗುವ ಯೋಜನೆ ರೂಪಿಸಲಾಗಿದೆ.
ಇನ್ನು 2023ರ ಮೇ ತಿಂಗಳಿನಿಂದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಈವರೆಗೂ ಕೂಡಾ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡದಿರುವುದು, ಮಾತನಾಡದಿರುವುದನ್ನು ವಿಪಕ್ಷಗಳು ನಿರಂತರವಾಗಿ ಟೀಕಿಸುತ್ತಾ ಬಂದಿದೆ.
ಒಂದು ವರ್ಷಗಳ ಬಳಿಕ ಪ್ರಧಾನಿ ಮೋದಿ ಬುಧವಾರ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕೇಂದ್ರ ಮಣಿಪುರದಲ್ಲಿ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.
“ಮಣಿಪುರದಲ್ಲಿ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. 11,000ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು 500ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಮಣಿಪುರದಲ್ಲಿ ಹಿಂಸಾಚಾರದ ಘಟನೆಗಳು ನಿರಂತರವಾಗಿ ಕಡಿಮೆಯಾಗುತ್ತಿವೆ” ಎಂದು ಪ್ರಧಾನಿ ಮೋದಿ ತಿಳಿಸಿದರು.