ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ಮುಂದಿನ ತಿಂಗಳು ನಡೆಯಲಿರುವ ‘ಬೆಹತರ್ ಭಾರತ್ ಬುನಿಯಾದಿ’ ರಾಷ್ಟ್ರೀಯ ಕಾರ್ಯಕ್ರಮ ಉದ್ಘಾಟಿಸುವಂತೆ ಯುವ ಕಾಂಗ್ರೆಸ್ ನಿಯೋಗ ಮುಖ್ಯಮಂತ್ರಿ ಸಿದ್ದರಾಮುಯ್ಯ ಅವರಿಗೆ ಆಹ್ವಾನ ನೀಡಿದೆ.
ಎಐಸಿಸಿ ಜಂಟಿ ಕಾರ್ಯದರ್ಶಿ ಯುವ ಕಾಂಗ್ರೆಸ್‌ನ ಉಸ್ತುವಾರಿ ಕೃಷ್ಣ ಅಳವಾರು, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಸದಸ್ಯ ಎಂ ಎಸ್ ರಕ್ಷಾ ರಾಮಯ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು.
‘ಬೆಹತರ್ ಭಾರತ್ ಬುನಿಯಾದಿ’ ಸಮಾವೇಶವನ್ನು ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆಸುತ್ತಿದ್ದು, ಯುವ ಸಮೂಹದ ಮೂಲಕ ದೇಶದಲ್ಲಿ ಯುವ ಶಕ್ತಿಯನ್ನು ಸೂಕ್ತ ದಿಕ್ಕಿನತ್ತ ಕೊಂಡೊಯ್ಯುವ ಉದ್ದೇಶ ಹೊಂದಲಾಗಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅತಿ ದೊಡ್ಡ ಯುವ ಸಮಾವೇಶ ಇದಾಗಿದ್ದು, ಮೂರು ದಿನಗಳ ಕಾಲ ಪಕ್ಷದ ಹಿರಿಯ ಮುಖಂಡರು, ತಜ್ಞರು ನಾನಾ ವಿಷಯಗಳ ಬಗ್ಗೆ ಯುವ ಸಮೂಹಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ರಕ್ಷಾ ರಾಮಯ್ಯ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿಯ ಬೃಹಸ್ಪತಿಗಳು ಈಗ ದ್ರಾಕ್ಷಿ ಸಿಗದ ನರಿಯಂತೆ ಆಗಿದ್ದಾರೆ: ಕಾಂಗ್ರೆಸ್ ಟೀಕೆ