- ಗ್ಯಾರಂಟಿ ಯೋಜನೆ ಜಾರಿ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಶೋಭಾ ವಾಗ್ದಾಳಿ
- ‘ಚುನಾವಣೆ ವೇಳೆ ಸುಳ್ಳು ಆಶ್ವಾಸನೆ ನೀಡಿ, ಈಗ ಈಡೇರಿಸಲು ಹೆಣಗುತ್ತಿದ್ದಾರೆ’
ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ಕೂಡಿರುವ ಸರ್ಕಾರ. ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಸುಳ್ಳು ಆಶ್ವಾಸನೆ ನೀಡಿ, ಈಗ ಐದು ಗ್ಯಾರಂಟಿ ಈಡೇರಿಸಲು ಹೆಣಗುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, “ಮಹಿಳೆಯರು ಖುಷಿಯಿಂದ ಪ್ರಯಾಣಿಸುತ್ತಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸಲು ಪಾಸ್ ಕೇಳುತ್ತಿರುವ ಕ್ರಮ ಸರಿಯಲ್ಲ. ನಾನು ಮಹಿಳೆ ಎನ್ನುವುದಕ್ಕೆ ನನಗೆ ಸರ್ಟಿಫಿಕೇಟ್ ಬೇಕಿಲ್ಲ” ಎಂದರು.
“ಒಬ್ಬ ಮರ್ಯಾದೆ ಇಲ್ಲದ, ಬೇಜವಾಬ್ದಾರಿ ಮುಖ್ಯಮಂತ್ರಿಗಳಂತೆ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಕಿ ಕೊಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಕೇಂದ್ರದಲ್ಲಿ ಬಫರ್ ಸ್ಟಾಕ್ ಇರುವುದು ದೇಶಕ್ಕೆ ಆಪತ್ತು ಬಂದಾಗ ಉಪಯೋಗಿಸಲು” ಎಂದರು.
“ಆಡಳಿತ ನೀಡಲು ಯೋಗ್ಯತೆಯಿಲ್ಲದೇ ಪ್ರತಿ ವಿಚಾರಕ್ಕೂ ಮೋದಿ, ಕೇಂದ್ರದ ಕಡೆ ಬೊಟ್ಟು ತೋರಿಸಬೇಡಿ. ಕೇಂದ್ರ ಕೊಡುತ್ತಿರುವ ಐದು ಕೆಜಿ ಸೇರಿಸಿ ಹತ್ತು ಕೆಜಿ ಹೇಳಬೇಡಿ, ನಿಮ್ಮದಷ್ಟೇ ಹತ್ತು ಕೆಜಿ ಹೇಳಿ. ರಾಜ್ಯದಲ್ಲಿ ವಿದ್ಯುತ್ ಬಿಲ್ ಹೆಚ್ಚಾಗಿದೆ. ಅರಾಜಕತೆ ತುಂಬಿದೆ. ಈ ಬಗ್ಗೆ ಮಾತನಾಡಿ” ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ; ಕೇಂದ್ರ ಸಚಿವರನ್ನು ಭೇಟಿಯಾದ ರಾಜ್ಯದ ಜವಳಿ ಖಾತೆ ಸಚಿವ
“ಗ್ಯಾರಂಟಿ ಯೋಜನೆ ಘೋಷಣೆ ಮಾಡಿದಾಗಲೇ ನಾವು ಅವತ್ತೇ ನಿಮ್ಮನ್ನು ಕೇಳಿದ್ವಿ. ಇವುಗಳಿಗೆಲ್ಲ ಹಣ ಎಲ್ಲಿಂದ ತರುತ್ತೀರಿ ಎಂದು. ಆದರೆ, ಇವತ್ತು ಅಕ್ಕಿ, ದುಡ್ಡು, ವಿದ್ಯುತ್ ಎಲ್ಲದಕ್ಕೂ ಮೋದಿ ಕಡೆ ಬೆರಳು ಮಾಡಿ ತೋರಿಸುತ್ತಿದ್ದೀರಿ. ಯಾರಿಗೆ ಮೋಸ ಮಾಡಲು, ಯಾರ ಮೂಗಿಗೆ ತುಪ್ಪ ಸವರಲು ಯೋಜನೆಗಳನ್ನು ಘೋಷಣೆ ಮಾಡಿದ್ದೀರಾ?” ಎಂದು ಕುಟುಕಿದರು.
ಸುಮ್ಮನೇ ಹುಚ್ಚರ ರೀತಿ ಮಾತನಾಡಬೇಡಿ: ಪ್ರಲ್ಹಾದ್ ಜೋಶಿ
ಗೃಹಜ್ಯೋತಿ ಅರ್ಜಿ ಸಲ್ಲಿಕೆಯ ವೇಳೆ ಸರ್ವರ್ ಹ್ಯಾಂಗ್ ಆಗುತ್ತಿರುವುದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, “ಸುಮ್ಮನೇ ಹುಚ್ಚರ ರೀತಿ ಮಾತನಾಡಬೇಡಿ” ಎಂದಿದ್ದಾರೆ.
ಪಾಸ್ ಕೇಳುವುದು ಮಹಿಳೆ ಎನ್ನುವ ಸರ್ಟಿಫಿಕೇಟ್ ಅಲ್ಲ ಶೋಭಕ್ಕಾ…..
ಆ ಮಹಿಳೆ ನಮ್ಮ ರಾಜ್ಯದವರೇ ಎಂಬ ಗುರ್ತಿಗಾಗಿ….