ಸದ್ಯ ರಾಜದಲ್ಲಿ ಉಪಚುನಾವಣೆ ಸಮರ ಆರಂಭವಾಗಿದೆ. ಈ ನಡುವೆ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. 2010ರಲ್ಲಿ ರಾಜ್ಯದಲ್ಲಿ ನಡೆದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿದಂತೆ ಎಲ್ಲ 7 ಜನರನ್ನು ಅಪರಾಧಿಗಳು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ. ಏಳು ಮಂದಿಯನ್ನೂ ಬಂಧಿಸಲಾಗಿದೆ. ಅಪರಾಧಿಗಳಿಗೆ 7 ವರ್ಷ ಶಿಕ್ಷೆ, ಒಟ್ಟು 9.60 ಕೋಟಿ ರೂ. ದಂಡ ವಿಧಿಸಲಾಗಿದೆ. 2 ವರ್ಷಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾರಣ ಸತೀಶ್ ಸೈಲ್ ಅವರ ಶಾಸಕತ್ವ ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
2010ರಲ್ಲಿ ಅದಿರು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಪ್ರಕರಣಗಳು ದಾಖಲಾಗಿದ್ದವು. ಈ ಆರು ಪ್ರಕರಣಗಳ ತನಿಖೆಯನ್ನು ಸಿಬಿಐ ನಡೆಸಿತ್ತು. ಸಿಬಿಐ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಮತ್ತು ಸಾಕ್ಷ್ಯಗಳನ್ನು ನೀಡಿತ್ತು. ಸುದೀರ್ಘ ವಿಚಾರಣೆಯಲ್ಲಿ ಬೇಲೆಕೇರಿ ಬಂದರಿನಲ್ಲಿ ಜಪ್ತಿ ಮಾಡಿ ಸಂಗ್ರಹಿಸಿ ಇಟ್ಟಿದ್ದ 11,312 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೆ ಸಾಗಾಟ ಮಾಡಿದ ಆರೋಪ ಸಾಬೀತಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಳು ಮಂದಿ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿದೆ.
ಅಪರಾಧ ಸಾಬೀತಾದ ಹಿನ್ನೆಲೆ, ಅಪರಾಧಿಗಳನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿತ್ತು. ಸಿಬಿಐ ಅಧಿಕಾರಿಗಳ ತಂಡವು ಶಾಸಕ ಸತೀಶ್ ಸೈಲ್, ಬಂದರು ಸಂರಕ್ಷಣಾಧಿಕಾರಿ ಮಹೇಶ್ ಬಿಳೆಯಿ, ಸತೀಶ್ ಸೈಲ್ ಆಪ್ತ ಚೇತನ್ ಸಾಹ, ಲಾಲ್ ಮಹಲ್ ಕಂಪನಿಯ ಮುಖ್ಯಸ್ಥ ಪ್ರೇಮ್ ಚಂದ್ ಗರ್ಗ್, ಶ್ರೀಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ ಕಾರದಪುಡಿ ಮಹೇಶ್, ಸ್ವಸ್ತಿಕ್ ಕಂಪನಿ ಮಾಲೀಕ ಸ್ವಸ್ತಿಕ್ ನಾಗರಾಜ್ – ಏಳು ಮಂದಿ ಅಪರಾಧಿಗಳನ್ನು ಬಂಧಿಸಿದೆ.
ಅಪರಾಧಿಗಳಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಸತೀಶ್ ಸೈಲ್, “ನ್ಯಾಯಾಲಯದ ತೀರ್ಪಿಗೆ ನಾನು ಬದ್ದನಿದ್ದೇನೆ. ಈ ಘಟನೆ ಆಗಿ 15 ವರ್ಷ ಆಯ್ತು, ಯಾವತ್ತೋ ಒಂದು ನಿರ್ಣಯ ಬರಬೇಕಿತ್ತು. ಈಗ ಬಂದಿದೆ ಅಷ್ಟೇ, ನ್ಯಾಯಾಲಯದ ತೀರ್ಪನ್ನು ಗೌರವಿಸ್ತೀನಿ” ಎಂದಿದ್ದಾರೆ.
2009ರಿಂದ 2010ರ ಮೇ ತಿಂಗಳ ನಡುವೆ ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ, ಅಕ್ರಮ ಅದಿರು ಸಾಗಣೆ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸಿಬಿಐಗೆ ಆದೇಶಿಸಿತ್ತು. ಸಿಬಿಐ 2013ರ ಸೆಪ್ಟೆಂಬರ್‌ನಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿತ್ತು. ಬೇಲೆಕೇರಿ ಬಂದರಿನ ಮೂಲಕ 88.06 ಲಕ್ಷ ಮೆಟ್ರಿಕ್ ಟನ್ ಅದಿರನ್ನು 73 ರಫ್ತು ಕಂಪನಿಗಳು ವಿದೇಶಕ್ಕೆ ರವಾನೆ ಮಾಡುತ್ತಿವೆ ಎಂಬುದನ್ನು ಕೇಂದ್ರೀಯ ಸಮಿತಿ ಪ್ರಾಧಿಕಾರ (ಸಿಇಸಿ) ವರದಿ ಕೂಡ ಉಲ್ಲೇಖಿಸಿತ್ತು.
ಈ ಪೈಕಿ, ಶಾಸಕ ಸತೀಶ್ ಸೈಲ್ ಅವರಿಗೆ ಸೇರಿದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ 7.23 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಬೇಲೆಕೇರಿ ಬಂದರು ಮೂಲಕ ರಫ್ತು ಮಾಡಿರುವುದು ದೃಢಪಟ್ಟಿತ್ತು. ಅಲ್ಲದೆ, ಈ ಬೇಲೆಕೇರಿ ಬಂದರಿನಲ್ಲಿದ್ದ ಅದಿರು ನಾಪತ್ತೆ ಪ್ರಕರಣದಲ್ಲಿಯೂ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯೇ ಕೇಂದ್ರ ಬಿಂದುವಾಗಿದೆ.
ಈ ಸುದ್ದಿ ಓದಿದ್ದೀರಾ? ಅಯೋಧ್ಯೆ ವಿವಾದ | ಮೂಲದಾವೆಯಲ್ಲಿ ದೇವರೇ ಕಕ್ಷಿದಾರ; ದೇವರನ್ನೇ ಪರಿಹಾರ ಕೇಳಿದ ಸಿಜೆಐ
ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಬಂದರಿನಿಂದ ಜನವರಿ 1, 2009 ಮತ್ತು ಮೇ 31, 2010 ರ ನಡುವೆ ಸತೀಶ್ ಸೈಲ್ ಕಂಪನಿಯು ಐಎಲ್ಸಿ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಡ್ರೀಮ್ ಲಾಜಿಸ್ಟಿಕ್ಸ್ ಮತ್ತು ಎಸ್ ಬಿ ಲಾಜಿಸ್ಟಿಕ್ಸ್ ಜೊತೆಗೂಡಿ 80 ಲಕ್ಷ ಟನ್ ಅಕ್ರಮ ಅದಿರನ್ನು ರಫ್ತು ಮಾಡಿದೆ ಎಂದು ಸಿಇಸಿ ಪತ್ತೆ ಮಾಡಿತ್ತು.
ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಿರುದ್ಧ 2013ರ ಸೆ.13 ರಂದು ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಈ ಸಮಯದಲ್ಲೇ ಸಿಬಿಐ ದಾಖಲಿಸಿದ್ದ ಆರು ಪ್ರತ್ಯೇಕ ಎಫ್ಐಆರ್‌ಗಳ ಪೈಕಿ ಶಾಸಕ ಸತೀಶ್ ಸೈಲ್ ಮಾಲೀಕತ್ವ ಹೊಂದಿರುವ ‘ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ.’ ಪ್ರಮುಖ ಸ್ಥಾನ ಪಡೆದುಕೊಂಡಿತ್ತು.
ಆರ್‌ಸಿ 16 ‘ಎ’ ಹೆಸರಿನಲ್ಲಿ ಸಿಬಿಐ ದಾಖಲಿಸಿದ್ದ ಎಫ್ಐಆರ್, “ಎಂಟು ತಿಂಗಳ ಅವಧಿಯಲ್ಲಿ ಸೈಲ್ ಮಾಲೀಕತ್ವದ ಕಂಪನಿ ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ” ಎಂದು ತಿಳಿಸಿತ್ತು.
ಬೇಲೇಕೇರಿ ಬಂದರಿನ ಮೂಲಕ ಕೋಟ್ಯಾಂತರ ರೂಪಾಯಿ ಮೌಲ್ಯದ ಅದಿರು ಅಕ್ರಮವಾಗಿ ವಿದೇಶಗಳಿಗೆ ರಫ್ತು ಮಾಡಿದ್ದ ವಿಚಾರ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೇತೃತ್ವದ ತಂಡ ವರದಿಯನ್ನು ಸರ್ಕಾರಕ್ಕೆ ನೀಡಿತ್ತು. 2009ರಿಂದ 2010ರ ಮೇ ತಿಂಗಳವರೆಗೆ ಬೇಲೆಕೇರಿ ಬಂದರಿನ ಮೂಲಕ ಸುಮಾರು 88.06 ಲಕ್ಷ ಮೆಟ್ರಿಕ್ ಟನ್ ಅದಿರು, 73 ರಫ್ತು ಕಂಪನಿಗಳ ಮೂಲಕ ವಿದೇಶಕ್ಕೆ ಹೋಗಿತ್ತು ಎಂಬುದನ್ನು ಸಿಇಸಿ ವರದಿಯಲ್ಲಿ ಪಟ್ಟಿ ಮಾಡಲಾಗಿತ್ತು.
ಇಷ್ಟು ಪ್ರಮಾಣ ಅದಿರುವು ರಫ್ತಾಗಿದ್ದರೂ, ಕೇವಲ 38.22 ಲಕ್ಷ ಮೆಟ್ರಿಕ್ ಟನ್‌ನಷ್ಟು ಅದಿರು ರಫ್ತು ಮಾಡಲು ಪರವಾನಗಿ (ಎಂಡಿಪಿ)ಯನ್ನು ಪಡೆಯಲಾಗಿತ್ತು. ಆದರೆ, ಒಟ್ಟಾರೆ ಸುಮಾರು 50 ಲಕ್ಷ ಮೆಟ್ರಿಕ್ ಟನ್‌ನಷ್ಟು ಅದಿರು ಅಕ್ರಮವಾಗಿ ವಿದೇಶಗಳಿಗೆ ಹೋಗಿತ್ತು ಎಂಬುದನ್ನು ತನಿಖೆ ವೇಳೆ ಕಂಡುಕೊಳ್ಳಲಾಗಿತ್ತು.
ಹೀಗೆ ರಫ್ತಾಗಿರುವ ಅದಿರಿನಲ್ಲಿ 7.23 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಕಳುಹಿಸಿರುವುದು ಸತೀಶ್ ಸೈಲ್ ಒಡೆತನದ ಕಂಪನಿ. ಸೈಲ್ ಅವರ ಕಂಪನಿಯು ಜುಂಜುನ್ ಬೈಲ್ ಸ್ಟಾಕ್ ಯಾರ್ಡ್ ಸೇರಿದಂತೆ ಇತರೆ ಅದಿರು ಸಾಗಣೆದಾರರ ಜತೆ ನಿಕಟ ವ್ಯವಹಾರ ನಡೆಸಿದೆ. ಈ ಕಂಪನಿಗಳು 2010ರಲ್ಲಿ 39,700 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ಚೀನಾಕ್ಕೆ ರಫ್ತು ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿವೆ ಎಂದೂ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ವಿವರಿಸಿತ್ತು.
ಬಳಿಕ, 2012ರ ಸೆಪ್ಟೆಂಬರ್ 16 ರಂದು ಸತೀಶ್ ಅವರ ಮನೆಗೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳ ತಂಡ ಅಲ್ಲಿದ್ದ ದಾಖಲೆಗಳನ್ನು ವಶಪಡಿಸಿಕೊಂಡು 2013ರ ಸೆಪ್ಟೆಂಬರ್ 20 ರಂದು ಸತೀಶ್ ಸೈಲ್ ಅವರನ್ನ ಬಂಧಿಸಿತ್ತು. 1 ವರ್ಷಕ್ಕೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದ ಸೈಲ್, 2014ರ ಡಿಸೆಂಬರ್ 16 ರಂದು ಜಾಮೀನು ಪಡೆದು ಹೊರಬಂದಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಾರವಾರದಲ್ಲಿ ಚುನಾವಣೆಗೆ ನಿಂತು ಬಿಜೆಪಿಯ ರೂಪಾಲಿ ನಾಯ್ಕ ವಿರುದ್ಧ ಸೋಲು ಅನುಭವಿಸಿದ್ದರು. ಆದರೆ 2023ರ ಚುನಾವಣೆಯಲ್ಲಿ ಗೆಲುವು ಕಂಡು ಶಾಸಕರಾಗಿದ್ದರು.
ಈಗ ಅವರಿಗೆ ನಾಲ್ಕು ಪ್ರಕರಣಗಳಲ್ಲಿ ಒಟ್ಟು 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಹೀಗಾಗಿ, ಜನಪ್ರತಿನಿಧಿಗಳ ನಿಯಮದಡಿ ಯಾವುದೇ ಜನಪ್ರತಿನಿಧಿಯು 2 ವರ್ಷದಿಂದ ಹೆಚ್ಚು ಜೈಲು ಶಿಕ್ಷೆಗೆ ಗುರಿಯಾದರೆ, ಅವರ ಪ್ರತಿನಿಧಿತ್ವ ರದ್ದಾಗುತ್ತದೆ. ಈಗ, ಸೈಲ್ ಅವರು 7 ವರ್ಷ ಸೆರೆವಾಸ ಅನುಭವಿಸಬೇಕಿದ್ದು, ಅವರ ಶಾಸಕತ್ವ ರದ್ದಾಗಲಿದೆ ಎಂದು ತಿಳಿದುಬಂದಿದೆ.